ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಭಾರತ್ ಶೃಂಗಸಭೆ 2026ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ( Rahul Gandhi), ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಮುಂಬರುವ ದಿನಗಳಲ್ಲಿ ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರನ್ನು ಸೋಲಿಸಿ ಅಧಿಕಾರದಿಂದ ಕೆಳಗಿಳಿಸಲಿವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವ್ಯವಸ್ಥೆಗಳು ಕುಸಿಯಲು ಆರಂಭಿಸಿದಾಗ ಫ್ಯಾಸಿಸ್ಟ್ ಶಕ್ತಿಗಳು ಹೆಚ್ಚು ಸದ್ದು ಮಾಡುತ್ತವೆ ಎಂದು ಹೇಳಿದರು. ವ್ಯಾಪಾರ, ಶಿಕ್ಷಣ ಮತ್ತು ರಾಜಕೀಯದ ಆಯಕಟ್ಟಿನ ಜಾಗಗಳಲ್ಲಿ ಇಂತಹವರು ಕಾಣಿಸಿಕೊಳ್ಳುತ್ತಾರೆ. ರಾಜಕೀಯದಲ್ಲಿ ನಾವು ಇವರನ್ನು ಫ್ಯಾಸಿಸ್ಟ್ಗಳು ಎಂದು ಕರೆಯುತ್ತೇವೆ. ಅವರು ಬೇರೆಯವರ ಮಾತನ್ನು ಕೇಳಿಸಿಕೊಳ್ಳುವುದಿಲ್ಲ, ಕೇವಲ ಕೂಗಾಡುತ್ತಾರೆ ಮತ್ತು ಕಿರುಚಾಡುತ್ತಾರೆ. ಕಳೆದ ಒಂದು ದಶಕದಿಂದ ದೇಶದಲ್ಲಿ ಇಂತಹ ಶಕ್ತಿಗಳು ಅತ್ಯಂತ ಸಕ್ರಿಯವಾಗಿವೆ ಎಂದು ರಾಹುಲ್ ಟೀಕಿಸಿದರು.
2014ರ ಲೋಕಸಭಾ ಚುನಾವಣೆಯನ್ನು ಭಾರತದ ರಾಜಕಾರಣದ ಕರಾಳ ತಿರುವು ಎಂದು ಕರೆದ ರಾಹುಲ್ ಗಾಂಧಿ, ಆ ಚುನಾವಣೆಯಲ್ಲಿ ಹಿಂದೆಂದೂ ಕಾಣದಷ್ಟು ಅಪಾರ ಪ್ರಮಾಣದ ಹಣವನ್ನು ರಾಜಕೀಯ ವ್ಯವಸ್ಥೆಯೊಳಗೆ ಹರಿಸಲಾಯಿತು ಎಂದು ಆರೋಪಿಸಿದರು. ಆರಂಭದಲ್ಲಿ ಈ ಬದಲಾವಣೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಲಿಲ್ಲ, ನಾವು ಆಘಾತದಲ್ಲಿದ್ದೆವು. ಆದರೆ ಈಗ ಸತ್ಯವನ್ನು ಪತ್ತೆಹಚ್ಚಿದ್ದೇವೆ. 2014ರಲ್ಲೇ ದೇಶದ ಪ್ರಜಾಪ್ರಭುತ್ವ ನಾಶವಾಗಿದೆ ಎಂಬುದನ್ನು ನಾವು ಯಾವುದೇ ಸಂಶಯವಿಲ್ಲದೆ ಸಾಬೀತುಪಡಿಸಿದ್ದೇವೆ ಎಂದರು.
ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ 14 ಕೋಟಿ (140 ಮಿಲಿಯನ್) ಜನರನ್ನು ಕೆಲವೇ ತಿಂಗಳುಗಳ ಹಿಂದೆ ಅಸ್ತಿತ್ವದಲ್ಲಿಲ್ಲದ ಮತದಾರರು ಎಂದು ಘೋಷಿಸಲಾಗಿತ್ತು ಎಂದು ದೂರಿದರು. ಇದಕ್ಕೆ ಮಹಾರಾಷ್ಟ್ರ ಚುನಾವಣೆಯನ್ನು ಉದಾಹರಣೆಯಾಗಿ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟ ಗೆದ್ದಿತ್ತು. ಆದರೆ ಕೇವಲ ಮೂರು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಅದೇ ಪ್ರಮಾಣದ ಮತಗಳು ಬಂದಿದ್ದರೂ, ಮಧ್ಯಂತರ ಅವಧಿಯಲ್ಲಿ 70 ಲಕ್ಷ ಹೊಸ ಮತದಾರರನ್ನು ಸೇರಿಸಲಾಯಿತು ಮತ್ತು ಆ ಎಲ್ಲಾ 70 ಲಕ್ಷ ಮತಗಳು ಬಿಜೆಪಿಗೆ ಬಿದ್ದವು ಎಂದು ಚುನಾವಣಾ ಪಾರದರ್ಶಕತೆಯನ್ನು ಪ್ರಶ್ನಿಸಿದರು.
ಪ್ರಧಾನಿ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ರಾಹುಲ್, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 600ನೇ ಸ್ಥಾನದಲ್ಲಿದ್ದ ಅದಾನಿ, ನಂತರ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಬೆಳೆದರು. ರಾಜಕೀಯ ಮತ್ತು ವ್ಯಾಪಾರದ ವಿಲೀನದಿಂದ ಇದು ಸಾಧ್ಯವಾಯಿತು. ಇಂದು ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಗೆರೆ ಅಳಿಸಿಹೋಗಿದೆ. ಇದಷ್ಟೆ ಅಲ್ಲದೆ, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯ ಆಸ್ತಿ ಹನ್ನೊಂದು ಪಟ್ಟು ಹೆಚ್ಚಾಗಿದೆ ಎಂದು ಅವರು ದೂರಿದರು.
ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಸಾಂಸ್ಥಿಕ ಬೆಂಬಲವನ್ನು ವಿರೋಧ ಪಕ್ಷಗಳಿಂದ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ರಾಹುಲ್, ಸಾಮಾನ್ಯ ಜನರೊಂದಿಗಿನ ನೇರ ಸಂಪರ್ಕವೇ ತಮ್ಮ ಅತಿದೊಡ್ಡ ಅಸ್ತ್ರ ಎಂದು ಪ್ರತಿಪಾದಿಸಿದರು. ಭಾಷಣದ ಕೊನೆಯಲ್ಲಿ, ನಾವು ಪ್ರಧಾನಿ ಮೋದಿ ಅವರನ್ನು ಖಂಡಿತವಾಗಿ ಸೋಲಿಸುತ್ತೇವೆ ಮತ್ತು ಅಧಿಕಾರದಿಂದ ಕೆಳಗಿಳಿಸುತ್ತೇವೆ. ದೆಹಲಿಯಲ್ಲಿ ಮತ್ತು ದೇಶದ ಬೀದಿಗಳಲ್ಲಿ ಈ ಬದಲಾವಣೆಯ ಗಾಳಿ ಕಾಣಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಲ್ಲಿರುವ ಭಯವನ್ನು ನೀವು ಸ್ಪಷ್ಟವಾಗಿ ನೋಡಬಹುದು. ಇದು ಈಗಾಗಲೇ ನಿರ್ಧಾರವಾಗಿರುವ ವಿಷಯ ಎಂದು ರಾಹುಲ್ ಗಾಂಧಿ ತಿಳಿಸಿದರು.
ಮತ್ತೊಂದೆಡೆ, ಹೈದರಾಬಾದ್ನಲ್ಲಿ ನಡೆಯುತ್ತಿರುವ ಈ ಭಾರತ್ ಶೃಂಗಸಭೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ತೆಲಂಗಾಣ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕರ ಹಣವನ್ನು ಬಳಸಿಕೊಂಡು ರಾಹುಲ್ ಗಾಂಧಿ ಅವರ ರಾಜಕೀಯ ಮರುಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಅಲ್ಲದೆ, ಭಾರತ ವಿರೋಧಿ ನಿಲುವು ಹೊಂದಿರುವ ಅಂತಾರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳನ್ನು ಶೃಂಗಸಭೆಗೆ ಆಹ್ವಾನಿಸಲಾಗಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ(ಏಜೆನ್ಸೀಸ್).