ಸಂವಿಧಾನದ 241ನೇ ವಿಧಿಯಡಿ ಚಂಡೀಗಢ ಸೇರಿಸಲು ಕೇಂದ್ರ ಪ್ರಯತ್ನ: ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿ ವಿಪಕ್ಷಗಳು ಆಕ್ರೋಶ | CM Bhagwant Mann

ಪಂಜಾಬ್ ಸಿಎಂ ಭಗವಂತ್ ಮಾನ್
ಪಂಜಾಬ್ ಸಿಎಂ ಭಗವಂತ್ ಮಾನ್
Published on

ಪ್ರಮುಖ ಮುಖ್ಯಾಂಶಗಳು

  • ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯ ವ್ಯಾಪ್ತಿಗೆ ತರಲು ಕೇಂದ್ರ ಯತ್ನ
  • ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ 131ನೇ ತಿದ್ದುಪಡಿ ಮಸೂದೆ ಮಂಡನೆ
  • ಚಂಡೀಗಢವನ್ನು ನೇರ ರಾಷ್ಟ್ರಪತಿ ಆಡಳಿತಕ್ಕೆ ತರಲು ಮಸೂದೆ ಮಂಡನೆ
ಚಂಡೀಗಢ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುಗಳಂತಹ ಇತರ ಕೇಂದ್ರಾಡಳಿತ ಪ್ರದೇಶಗಳಂತೆ, ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಯ ವ್ಯಾಪ್ತಿಗೆ ತರಲು ನಡೆಸಿರುವ ಕೇಂದ್ರ ಸರ್ಕಾರದ ಪ್ರಯತ್ನ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ (CM Bhagwant Mann) ಸೇರಿ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಪಂಜಾಬ್​ನ ಆಡಳಿತರೂಢ ಎಎಪಿಯಿಂದ ಹಿಡಿದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಪಂಜಾಬ್ ವಿರೋಧಿ ನಿಲುವು ಎಂದು ಕರೆದಿವೆ.
ಸಂಸತ್ತಿನ ಮಾಹಿತಿ ಪ್ರಕಾರ, ಡಿ. 01 ರಿಂದ ಪ್ರಾರಂಭವಾಗುವ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ 2025 ಅನ್ನು ಪರಿಚಯಿಸಲು ಮುಂದಾಗಿದ್ದುಮ, ಇದರಲ್ಲಿ ಸಂವಿಧಾನದ 240ನೇ ವಿಧಿಯ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ತರಲು ಪ್ರಯತ್ನಿಸುತ್ತಿದೆ.
ಈ ವಿಧಿ ನೇರವಾಗಿ ರಾಷ್ಟ್ರಪತಿಗಳಿಗೆ ಕೇಂದ್ರಾಡಳಿತ ಪ್ರದೇಶದ ನಿಯಮಗಳನ್ನು ರೂಪಿಸುವ ಅಧಿಕಾರ ನೀಡುತ್ತದೆ. ಪ್ರಸ್ತುತ ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿರುವ ಚಂಡೀಗಢಕ್ಕೆ ಪಂಜಾಬ್ ರಾಜ್ಯಪಾಲರು ಆಡಳಿತಾಧಿಕಾರಿಯಾಗಿದ್ದಾರೆ.
ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಪಂಜಾಬ್ ಸಿಎಂ ಭಗವಂತ್ ಮಾನ್, ಈ ತಿದ್ದುಪಡಿ ಪಂಜಾಬ್‌ನ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ ಮತ್ತು ಕೇಂದ್ರ ಸರ್ಕಾರವು ಪಂಜಾಬ್ ವಿರುದ್ಧ ಹೂಡಿರುವ ಈ ಪಿತೂರಿ ಯಶಸ್ವಿಯಾಗಲು ಬಿಡುವುದಿಲ್ಲ. ನಮ್ಮ ಪಂಜಾಬ್‌ನ ಹಳ್ಳಿಗಳನ್ನು ನಾಶಮಾಡಿ ನಿರ್ಮಿಸಲಾದ ಚಂಡೀಗಢದ ಮೇಲೆ ಪಂಜಾಬ್‌ಗೆ ಮಾತ್ರ ಹಕ್ಕಿದೆ. ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿ ಅಗತ್ಯವಿರುವ ಯಾವುದೇ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಪ್ರತಿಕ್ರಿಯಿಸಿದ್ದು, ಈ ಕ್ರಮ ಸಂಪೂರ್ಣ ಅನಗತ್ಯ, ಚಂಡೀಗಢ ಪಂಜಾಬ್‌ಗೆ ಸೇರಿದ್ದು, ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಕಿಡಿಕಾರಿದ್ದಾರೆ.
1966ರಲ್ಲಿ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಯಿತು. ಅಂದಿನಿಂದ ಪಂಜಾಬ್ ಅಥವಾ ಹರಿಯಾಣದ ಬದಲಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಆಡಳಿತ ನಡೆಸಲ್ಪಡುತ್ತಿದೆ. ಆದರೂ ಇದು ಎರಡು ರಾಜ್ಯಗಳ ಜಂಟಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ. 1984 ರಿಂದ ಪಂಜಾಬ್ ರಾಜ್ಯಪಾಲರು ಚಂಡೀಗಢ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net