

ಲಖನೌ: ಉತ್ತರ ಪ್ರದೇಶದ ಮೌ ( Mau ) ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ( PM Modi ) ಅವರ ಫೋಟೋವನ್ನು ಬಳಸಿ ವಾಮಾಚಾರ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೌ ಜಿಲ್ಲೆಯ ದೋಹರಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ತಿದಾಮ್ ಸ್ಮಶಾನದ ಬಳಿ ಪ್ರಧಾನಿ ಮೋದಿ ಅವರ ಫೋಟೋ ಇಟ್ಟು, ಅದರ ಸುತ್ತಲೂ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳನ್ನು ಇರಿಸಲಾಗಿತ್ತು. ಈ ದೃಶ್ಯಗಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಯಾಚರಣೆಗಿಳಿದ ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಧಾನ ಮಂತ್ರಿಗಳ ಫೋಟೋ ಬಳಸಿ ನಡೆಸಿರುವ ಈ ವಿಚಿತ್ರ ಹಾಗೂ ಅಸಂವಿಧಾನಿಕ ಕೃತ್ಯಕ್ಕೆ ಭಾರತೀಯ ಜನತಾ ಪಾರ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಮಾಶ್ರಯ್ ಮೌರ್ಯ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ದೇಶದ ಪ್ರಧಾನಿಗೆ ಅಪಮಾನ ಎಸಗಿರುವ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿರುವ ದುಷ್ಟ ಶಕ್ತಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಹಾಗೂ ಪೊಲೀಸರನ್ನು ಆಗ್ರಹಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಮೌ ಜಿಲ್ಲಾ ಪೊಲೀಸ್ ಆಡಳಿತವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ದೋಹರಿಘಾಟ್ ಠಾಣಾಧಿಕಾರಿ ರಾಮಾಯಣ್ ಸಿಂಗ್ ಮತ್ತು ಘೋಷಿ ಸರ್ಕಲ್ ಆಫೀಸರ್ ಸತ್ಯೇಂದ್ರ ಭೂಷಣ್ ತಿವಾರಿ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಥವಾ ಐಪಿಸಿ ಸೆಕ್ಷನ್ 353(2) ರ ಅಡಿಯಲ್ಲಿ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸ್ಥಳೀಯ ಪೊಲೀಸರು ಹಾಗೂ ಸೈಬರ್ ಸೆಲ್ ತಜ್ಞರ ಜಂಟಿ ತಂಡವು ಈ ಕೃತ್ಯದ ಹಿಂದಿರುವ ಸೂತ್ರಧಾರಿಗಳಿಗಾಗಿ ಶೋಧ ನಡೆಸುತ್ತಿದೆ.
ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ತನಿಖೆಯ ಭಾಗವಾಗಿ ಪೊಲೀಸರು ಈಗಾಗಲೇ ನಾಲ್ಕು ಜನ ಶಂಕಿತರನ್ನು ಬಂಧಿಸಿದ್ದು, ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕೃತ್ಯದ ಹಿಂದಿನ ನೈಜ ಉದ್ದೇಶವೇನು, ಇದು ಕೇವಲ ಮೂಢನಂಬಿಕೆಯಿಂದ ಮಾಡಿದ ಕೃತ್ಯವೇ ಅಥವಾ ಸಮಾಜದಲ್ಲಿ ಕೋಲಾಹಲ ಸೃಷ್ಟಿಸಲು ನಡೆಸಿದ ಸಂಚೇ ಎಂಬುದರ ಕುರಿತು ಸತ್ಯಾಸತ್ಯತೆಯನ್ನು ಹೊರತರಲು ಪೊಲೀಸರು ಶ್ರಮಿಸುತ್ತಿದ್ದಾರೆ.
ಮೌ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಅವರು ಈ ಪ್ರಕರಣದ ಪ್ರತಿಯೊಂದು ಮಜಲನ್ನು ಅತ್ಯಂತ ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸ್ಮಶಾನದಂತಹ ಸೂಕ್ಷ್ಮ ಪ್ರದೇಶದಲ್ಲಿ ದೇಶದ ಪ್ರಧಾನಿಯ ಫೋಟೋ ಇಟ್ಟು ಇಂತಹ ಮೂಢನಂಬಿಕೆಯ ಕೃತ್ಯವೆಸಗಿದ ಪ್ರತಿಯೊಬ್ಬ ಆರೋಪಿಯನ್ನು ಶೀಘ್ರದಲ್ಲೇ ಮಾಧ್ಯಮಗಳ ಮುಂದೆ ಹಾಜರುಪಡಿಸಲಾಗುವುದು ಮತ್ತು ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).