ಯೋಧರೊಂದಿಗೆ ದೀಪಾವಳಿ ಆಚರಿಸಲು ಆ ಕರಾಳ ಪ್ರದೇಶಕ್ಕೆ ಎಂಟ್ರಿ! ಪ್ರಧಾನಿ ಮೋದಿಯವರ ಈ ಭೇಟಿ ಹಿಂದಿರುವ ಸಂದೇಶ ಏನು ಗೊತ್ತಾ? | PM Modi Bastar Visit

ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published on: 

PM Modi Bastar Visit: ಹದಿಮೂರು ದೀಪಾವಳಿಗಳು, ಹದಿಮೂರು ಗಡಿಭಾಗಗಳು ಹಾಗೂ ಸೈನಿಕರೊಂದಿಗೆ ಒಂದೇ ತರನಾದ ಬದ್ಧತೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿ ಛತ್ತೀಸ್‌ಗಢದ ಬಸ್ತಾರ್‌ಗೆ ತಲುಪಿದಾಗ, ಅದು ಯೋಧರೊಂದಿಗೆ ಅವರು ಆಚರಿಸುತ್ತಿರುವ ಮೊದಲ ಹಬ್ಬವಲ್ಲ, ಬದಲಿಗೆ ದೆಹಲಿಯ ಅಧಿಕೃತ ನಿವಾಸದ ಆಚರಣೆಗಿಂತ ಗಡಿ ಹಾಗೂ ಯೋಧರಿಗೇ ಮೊದಲ ಆದ್ಯತೆ ನೀಡಿ ಆಚರಿಸುತ್ತಿರುವ 13ನೇ ದೀಪಾವಳಿ ಎಂದರು ತಪ್ಪಾಗದು.

ಒಂದು ಕಾಲದಲ್ಲಿ ನಕ್ಸಲೈಟ್​ಗಳ ಅಟ್ಟಹಾಸಕ್ಕೆ ಹೆಸರಾಗಿದ್ದ ಬಸ್ತಾರ್ ಪ್ರದೇಶದಲ್ಲಿ ಈ ಬಾರಿ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸುವುದಾಗಿ ಪ್ರಧಾನಿ ಮೋದಿ ಸ್ವತಃ ತಮ್ಮ ಎಕ್ಸ್ ಖಾತೆಯ ಮೂಲಕ ಘೋಷಿಸಿದ್ದಾರೆ. ಒಂದು ಕಾಲದಲ್ಲಿ ನಕ್ಸಲಿಸಂ ಪ್ರಭಾವ ಹೊಂದಿದ್ದ ಈ ಪ್ರದೇಶದಲ್ಲಿ ಇಂದು ಅಭಿವೃದ್ಧಿ ಚಿಗುರುತ್ತಿದೆ. ನಮ್ಮ ವೀರ ಭದ್ರತಾ ಸಿಬ್ಬಂದಿಯ ತ್ಯಾಗ, ನಿಸ್ವಾರ್ಥ ಸೇವೆ ಹಾಗೂ ರಾಷ್ಟ್ರದ ಮೇಲಿನ ಅಚಲ ಭಕ್ತಿಗೆ ನಮಿಸಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಪ್ರಧಾನಿ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

2014ರಲ್ಲಿ ದೇಶದ ಚುಕ್ಕಾಣಿ ಹಿಡಿದಾಗಿನಿಂದಲೂ, ಹಿಂದಿನ ಪ್ರಧಾನಿಗಳಂತೆ ದೆಹಲಿಯ ಅಧಿಕೃತ ನಿವಾಸದಲ್ಲಿ ದೀಪಾವಳಿ ಆಚರಿಸಿಲ್ಲ. ಬದಲಿಗೆ ಸಿಯಾಚಿನ್‌ನ ಮಂಜಿನಿಂದ ಹಿಡಿದು ಕಾರ್ಗಿಲ್‌ನ ಎತ್ತರದ ಶಿಖರಗಳವರೆಗೆ, ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯ ಮೇಲಿಂದ ಹಿಡಿದು ಪ್ರಸ್ತುತ ಬಸ್ತಾರ್‌ನವರೆಗೆ ಭಾರತದ ಅತ್ಯಂತ ಅಪಾಯಕಾರಿ ಗಡಿಗಳನ್ನು ಕಾಯುವ ವೀರರೊಂದಿಗೆ ಅವರು ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಬಸ್ತಾರ್‌ನಲ್ಲಿ ಅವರು ಭದ್ರತಾ ಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಸಿಹಿ ಹಂಚಿ ಅವರನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ.

Also Read
ಪ್ರತಿವರ್ಷದ ಆ ಸಂಪ್ರದಾಯ ಈ ಬಾರಿಯೂ ಕಂಟಿನ್ಯೂ! ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ... Narendra Modi
ಪ್ರಧಾನಿ ಮೋದಿ

ಬಸ್ತಾರ್ ಮರಳಿ ಶಾಂತಿಯತ್ತ ಬಂದಿದ್ದು ಹೇಗೆ?

ಬಸ್ತಾರ್ ಒಂದು ಕಾಲದಲ್ಲಿ ಸರ್ಕಾರದ ಆಡಳಿತ ಯಂತ್ರವೂ ಪ್ರವೇಶಿಸಲು ಪತರುಗುಡುತ್ತಿದ್ದ ಪ್ರದೇಶವಾಗಿತ್ತು. ದಶಕಗಳ ಕಾಲ ನಕ್ಸಲೈಟರು ಇಲ್ಲಿನ ದಟ್ಟ ಕಾಡುಗಳನ್ನು ನಿಯಂತ್ರಿಸುತ್ತಾ, ರಸ್ತೆಗಳು, ಶಾಲೆಗಳು ಮತ್ತು ಪೊಲೀಸ್ ಠಾಣೆಗಳನ್ನು ಸ್ಫೋಟಿಸಿ, ನಿರಪರಾಧಿ ಬುಡಕಟ್ಟು ಜನರನ್ನು ಕೊಲ್ಲುವ ಮೂಲಕ ಇಡೀ ಪ್ರದೇಶವನ್ನು ಭಯದ ನೆರಳಿನಲ್ಲಿಟ್ಟಿದ್ದರು. ಭದ್ರತಾ ಪಡೆಗಳು ಇಲ್ಲಿ ಬಂದೂಕುಗಳಿಂದ ಮಾತ್ರವಲ್ಲದೆ, ತುಂಬಾ ತಾಳ್ಮೆಯಿಂದ ಸುದೀರ್ಘ ಸಮರವನ್ನು ನಡೆಸಿದವು.

ಸತತ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು, ದಟ್ಟ ಕಾಡಿನೊಳಗೆ ಭದ್ರತಾ ಶಿಬಿರಗಳ ಸ್ಥಾಪನೆ ಮತ್ತು ಮಾವೋವಾದಿಗಳ ಪೂರೈಕೆ ಮಾರ್ಗಗಳನ್ನು ಬಂದ್ ಮಾಡುವ ಮೂಲಕ ಪಡೆಗಳು ಅವರನ್ನು ಹಿಂದೆ ಸರಿಯುವಂತೆ ಮಾಡಿದವು. ನೂರಾರು ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದರು ಮತ್ತು ಸಾವಿರಾರು ಬುಡಕಟ್ಟು ಜನರು ಪಡೆಗಳೊಂದಿಗೆ ನಿಂತರು. ಇಂದು 40 ವರ್ಷಗಳಿಂದ ಸಂಪರ್ಕ ಕಡಿತಗೊಂಡಿದ್ದ ಹಳ್ಳಿಗಳಿಗೆ ರಸ್ತೆಗಳು ತಲುಪಿವೆ, ಶಾಲೆ-ಆಸ್ಪತ್ರೆಗಳು ಮರುಪ್ರಾರಂಭಗೊಂಡಿವೆ ಮತ್ತು ಒಮ್ಮೆ ಮತದಾನದಲ್ಲಿ ಸೊನ್ನೆ ಸುತ್ತಿದ್ದ ಬೂತ್‌ಗಳಲ್ಲಿ ಈಗ ಉದ್ದನೆಯ ಸಾಲುಗಳು ಕಾಣಿಸುತ್ತಿವೆ.

Also Read
ಸಿಂಧ್‌ನಿಂದ ದೆಹಲಿವರೆಗೆ, ರಥಯಾತ್ರೆಯಿಂದ ರಾಮಮಂದಿರದವರೆಗೆ: ಅಡ್ವಾಣಿ 100ನೇ ಜನ್ಮದಿನಕ್ಕೆ ಪ್ರಧಾನಿ ಪ್ರಣಾಮ! | LK Advani Birthday
ಪ್ರಧಾನಿ ಮೋದಿ

ಈ ಭೇಟಿಯ ಪ್ರಾಮುಖ್ಯತೆ ಏನು?

ಈ ಭೇಟಿಯು ಕೇವಲ ಹಬ್ಬದ ಆಚರಣೆಗಳನ್ನು ಮೀರಿ ದೊಡ್ಡ ಸಂದೇಶವನ್ನು ಹೊತ್ತು ತಂದಿದೆ. ನಕ್ಸಲರ ವಿರುದ್ಧ ಹೋರಾಡುತ್ತಿರುವ ಭದ್ರತಾ ಸಿಬ್ಬಂದಿಗೆ, ನೀವು ಏಕಾಂಗಿ ಎಂದು ಭಾವಿಸಬೇಡಿ, ದೇಶದ ಅತ್ಯುನ್ನತ ಕಚೇರಿ ನಿಮ್ಮನ್ನು ದೆಹಲಿಯಿಂದ ನೋಡುವುದಿಲ್ಲ, ಬದಲಿಗೆ ಸಂಘರ್ಷ ವಲಯದಲ್ಲೇ ನಿಮ್ಮೊಂದಿಗೆ ನಿಲ್ಲುತ್ತದೆ ಎಂಬ ಭರವಸೆ ನೀಡುತ್ತದೆ.

ನಕ್ಸಲೈಟ್ ಭಯೋತ್ಪಾದನೆಯ ಕಷ್ಟಗಳನ್ನು ಎದುರಿಸಿದ ಬಸ್ತಾರ್ ಜನರಿಗೆ, ದೇಶವು ಅವರ ತ್ಯಾಗವನ್ನು ಮರೆತಿಲ್ಲ ಮತ್ತು ಅವರ ನೋವು ದೇಶದ ನೋವು, ಅವರ ದೀಪಾವಳಿ ದೇಶದ ದೀಪಾವಳಿ ಎಂಬ ಆಶ್ವಾಸನೆ ನೀಡುತ್ತದೆ. ಗಡಿಯಲ್ಲಿ ಕಾವಲು ಕಾಯುವ ಯೋಧರಿಂದ ಹಿಡಿದು ಒಳನಾಡಿನಲ್ಲಿ ಉಗ್ರವಾದವನ್ನು ಮೆಟ್ಟಿನಿಲ್ಲುವ ಪಡೆಗಳವರೆಗೆ, ಕತ್ತಲೆಯಲ್ಲಿ ಯಾರೋ ಒಬ್ಬರು ಕಾವಲು ಕಾಯುತ್ತಿರುವುದರಿಂದಲೇ ನಮ್ಮ ಮನೆಗಳಲ್ಲಿ ಇಂದು ದೀಪಗಳು ಬೆಳಗುತ್ತಿವೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನಿಗೂ ಇದು ನೆನಪಿಸುತ್ತದೆ.

2014 ರಿಂದ 2026ರವರೆಗೆ ಮೋದಿ ಅವರು ಆಚರಿಸಿದ 13 ದೀಪಾವಳಿಗಳಲ್ಲಿ 5 ದೀಪಾವಳಿಗಳನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಯೋಧರೊಂದಿಗೆ ಆಚರಿಸಿದ್ದಾರೆ. 2014ರಲ್ಲಿ ಸಿಯಾಚಿನ್ ಬೇಸ್ ಕ್ಯಾಂಪ್‌ನಿಂದ ಪ್ರಾರಂಭವಾದ ಈ ಪಯಣ, 2017ರಲ್ಲಿ ಗುರೆಜ್ ಕಣಿವೆ, 2019ರಲ್ಲಿ ರಾಜೌರಿ, 2021ರಲ್ಲಿ ನೌಶೇರಾ, 2022ರಲ್ಲಿ ಕಾರ್ಗಿಲ್ ಹಾಗೂ ಇದೀಗ 2026ರಲ್ಲಿ ಬಸ್ತಾರ್‌ನಲ್ಲಿ ಯೋಧರೊಂದಿಗೆ ಆಚರಿಸುವ ಮೂಲಕ ಮುಂದುವರಿದಿದೆ(ಏಜೆನ್ಸೀಸ್​).