LK Advani Birthday: ಭಾರತದ ಮಾಜಿ ಉಪಪ್ರಧಾನಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರು ಭಾನುವಾರ (ನವೆಂಬರ್ 8) ತಮ್ಮ ಜೀವನದ 100ನೇ ವರ್ಷವನ್ನು ಪ್ರವೇಶಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಲೇಖನದ ಮೂಲಕ ಆಡ್ವಾಣಿ ಅವರ ರಾಜಕೀಯ ಪಯಣ, ದೀರ್ಘ ಸಾರ್ವಜನಿಕ ಸೇವೆ ಹಾಗೂ ದೇಶ ಕಟ್ಟುವಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಲೇಖನವನ್ನು ಹಂಚಿಕೊಂಡಿದ್ದು, ದೇಶದ ಪ್ರಮುಖ ದಿನಪತ್ರಿಕೆಗಳಲ್ಲೂ ಇದು ಪ್ರಕಟವಾಗಿದೆ. 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್ ಪ್ರಾಂತ್ಯದಲ್ಲಿದ್ದ ತಮ್ಮ ಹುಟ್ಟೂರನ್ನು ತೊರೆದುಬಂದ ಆಡ್ವಾಣಿ ಅವರು, ಆ ನೋವನ್ನು ಅನುಭವಿಸಿದರೂ ಮನಸ್ಸಿನಲ್ಲಿ ಯಾವುದೇ ಕಹಿ ಭಾವನೆ ಇಟ್ಟುಕೊಳ್ಳದೆ ಹೊಸ ಜೀವನವನ್ನು ನಿರ್ಮಿಸಿಕೊಂಡರು ಎಂದು ಮೋದಿ ಸ್ಮರಿಸಿದ್ದಾರೆ.
ಜನಸಂಘವನ್ನು ಬಲಪಡಿಸಲು ಮತ್ತು ಬಿಜೆಪಿ ಪಕ್ಷವನ್ನು ಶೂನ್ಯದಿಂದ ಕಟ್ಟುಲು ಆಡ್ವಾಣಿ ಅವರಲ್ಲಿದ್ದ ಅಪಾರ ತಾಳ್ಮೆ ಹಾಗೂ ಸದಾ ದೇಶಕ್ಕೆ ಮೊದಲ ಆದ್ಯತೆ ನೀಡುವ ತತ್ವವೇ ಪ್ರಮುಖ ಕಾರಣವಾಯಿತು ಎಂದು ಪ್ರಧಾನಿ ಬರೆದಿದ್ದಾರೆ. ಆಡ್ವಾಣಿ ಅವರು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಕಾಂಗ್ರೆಸ್ ಪಕ್ಷದ ಲೋಕಸಭಾ ಸಂಖ್ಯಾಬಲವು 400 ರಿಂದ 200 ಕ್ಕಿಂತ ಕೆಳಕ್ಕೆ ಕುಸಿಯಿತು ಹಾಗೂ 1996ರಲ್ಲಿ ಬಿಜೆಪಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಲಕ್ಷಾಂತರ ಕಾರ್ಯಕರ್ತರನ್ನು ರೂಪಿಸಿ, ಪಕ್ಷಕ್ಕೆ ಸ್ಪಷ್ಟ ಸೈದ್ಧಾಂತಿಕ ತಡಿಪಾಯ ಹಾಕಿಕೊಟ್ಟವರು ಆಡ್ವಾಣಿ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
1967ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ನ ಅಧ್ಯಕ್ಷರಾಗಿ ಹಾಗೂ 1970ರಲ್ಲಿ ಸಂಸದರಾಗಿ ತಮ್ಮ ಪಾರ್ಲಿಮೆಂಟರಿ ಪಯಣವನ್ನು ಆರಂಭಿಸಿದ ಆಡ್ವಾಣಿ, ವಿರೋಧ ಪಕ್ಷದ ನಾಯಕರಾಗಿ ಮತ್ತು ಕೇಂದ್ರ ಸಚಿವರಾಗಿ ಅದ್ಭುತವಾಗಿ ಕಾರ್ಯನಿರ್ವಹಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಆಡ್ವಾಣಿ ಅವರ ನಡುವಿನ ಸುದೀರ್ಘ ಸ್ನೇಹವನ್ನು ಸ್ಮರಿಸಿದ ಪ್ರಧಾನಿ, ರಾಜಕೀಯದಲ್ಲಿ ಇಬ್ಬರು ಅತ್ಯುನ್ನತ ನಾಯಕರು ಯಾವುದೇ ಪೈಪೋಟಿ ಇಲ್ಲದೆ ದಶಕಗಳ ಕಾಲ ಜೊತೆಯಾಗಿ ಕೆಲಸ ಮಾಡುವುದು ವಿರಳ. ಅಟಲ್ ಜಿ ಮತ್ತು ಆಡ್ವಾಣಿ ಜಿ ಇದಕ್ಕೆ ಮಾದರಿಯಾಗಿ ನಿಂತು ದೇಶದ ರಾಜಕೀಯದ ದಿಕ್ಸೂಚಿಯನ್ನೇ ಬದಲಾಯಿಸಿದರು ಎಂದು ಬರೆದಿದ್ದಾರೆ.
1975ರ ತುರ್ತುಪರಿಸ್ಥಿತಿಯ ವಿರುದ್ಧ ಪ್ರಜಾಪ್ರಭುತ್ವದ ಉಳಿವಿಗಾಗಿ ಆಡ್ವಾಣಿ ಅವರು ಹೋರಾಡಿದ ದಿನಗಳನ್ನು ಮೋದಿ ನೆನಪಿಸಿಕೊಂಡಿದ್ದಾರೆ. ಆ ದಿನಗಳ ಅನುಭವಗಳನ್ನು ಆಡ್ವಾಣಿ ಅವರು ತಮ್ಮ ಎ ಪ್ರಿಸನರ್ಸ್ ಸ್ಕ್ರ್ಯಾಪ್-ಬುಕ್ ಗ್ರಂಥದಲ್ಲಿ ದಾಖಲಿಸಿದ್ದಾರೆ.
ಅದೇ ರೀತಿ, 1990ರ ಸೋಮನಾಥದಿಂದ ಅಯೋಧ್ಯೆಯವರೆಗೆ ಆಡ್ವಾಣಿ ಅವರು ನಡೆಸಿದ ಐತಿಹಾಸಿಕ ರಾಮ ರಥಯಾತ್ರೆ ದೇಶದ ಸಾಮಾಜಿಕ ಮತ್ತು ರಾಜಕೀಯ ಚಿತ್ರಣವನ್ನೇ ಬದಲಿಸಿತು. ಈ ರಥಯಾತ್ರೆಯ ಯೋಜನೆಯಿಂದ ಹಿಡಿದು ಅನುಷ್ಠಾನದವರೆಗೆ ಅವರೊಂದಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಸುದೀರ್ಘ ಪ್ರಯಾಣ ಮತ್ತು ದಣಿವರಿಯದ ಅವರ ತಾಳ್ಮೆ ಎಲ್ಲರಿಗೂ ಪ್ರೇರಣೆಯಾಗಿತ್ತು ಎಂದು ಮೋದಿ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಇಂದು ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಂಡಿರುವುದರ ಹಿಂದೆ ಆಡ್ವಾಣಿ ಅವರ ಬದ್ಧತೆ ಹಾಗೂ ಹೋರಾಟವೇ ಅಡಿಪಾಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಗೃಹ ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಆಡ್ವಾಣಿ ಕಠಿಣ ಕಾನೂನುಗಳನ್ನು ಜಾರಿಗೆ ತಂದರು. ಅಧಿಕಾರದಲ್ಲಿದ್ದರೂ ಅವರದ್ದು ಅತ್ಯಂತ ಸರಳ ಜೀವನ. ಸಾಹಿತ್ಯ, ಸಿನಿಮಾ, ರಂಗಭೂಮಿ ಮತ್ತು ಸಿಂಧಿ ಸಂಸ್ಕೃತಿಯ ಮೇಲೆ ಅವರಿಗೆ ಅಪಾರ ಪ್ರೀತಿಯಿತ್ತು. ಲೇಹ್ನಲ್ಲಿ ಸಿಂಧು ದರ್ಶನ ಪೂಜೆಯನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ಸಾರ್ವಜನಿಕ ಜೀವನದಲ್ಲಿ ಧರ್ಮಪತ್ನಿ ಕಮಲಾ ಆಡ್ವಾಣಿ ಅವರು ನಿರಂತರ ಶಕ್ತಿಯಾಗಿ ನಿಂತಿದ್ದರು ಎಂದು ಪ್ರಧಾನಿ ನೆನಪಿಸಿಕೊಂಡರು.
ಲಾಲ್ ಕೃಷ್ಣ ಆಡ್ವಾಣಿ ಅವರ 100ನೇ ವರ್ಷದ ಪ್ರವೇಶ ಹಾಗೂ ದೀಪಾವಳಿಯ ಪವಿತ್ರ ದಿನದ ಅಂಗವಾಗಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಆಡ್ವಾಣಿ ಅವರ ಪುತ್ರಿ ಪ್ರತಿಭಾ ಆಡ್ವಾಣಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಜೆಪಿಯ ಭೀಷ್ಮ ಪಿತಾಮಹರ ರಾಷ್ಟ್ರಸೇವೆ ಮತ್ತು ಸಾರ್ವಜನಿಕ ಜೀವನದ ಕೊಡುಗೆಗಳನ್ನು ಗೌರವಿಸಲಿದ್ದಾರೆ.
ಲಾಲ್ ಕೃಷ್ಣ ಆಡ್ವಾಣಿ ಅವರು 1927ರ ನವೆಂಬರ್ 8ರಂದು ಸಫಲ ನಗರ ಕರಾಚಿಯಲ್ಲಿ ಜನಿಸಿದರು. ತಮ್ಮ 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸೇರ್ಪಡೆಯಾಗುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. 1947ರ ದೇಶ ವಿಭಜನೆಯ ನಂತರ ಭಾರತಕ್ಕೆ ಆಗಮಿಸಿ, ರಾಷ್ಟ್ರ ನಿರ್ಮಾಣ ಮತ್ತು ಸಂಘಟನಾತ್ಮಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾದ ಆಡ್ವಾಣಿ ಅವರು ಪಕ್ಷದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005 ಹೀಗೆ ಮೂರು ಪ್ರತ್ಯೇಕ ಅವಧಿಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಮುನ್ನಡೆಸಿದರು. ಈ ಸಮಯದಲ್ಲಿ ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಸಂಘಟನಾ ಜಾಲವನ್ನು ವಿಸ್ತರಿಸಿ ಬಿಜೆಪಿಯನ್ನು ದೇಶದ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಆಡಳಿತದಲ್ಲಿ ಆಡ್ವಾಣಿ ಅವರು ಪ್ರಮುಖ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅವರು 1999 ರಿಂದ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಶ್ರಮಿಸಿದರು ಹಾಗೂ 2002 ರಿಂದ 2004 ರವರೆಗೆ ಭಾರತದ 7ನೇ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
ಆಡ್ವಾಣಿ ಅವರ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ದೇಶಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗೌರವಿಸಿ ಕೇಂದ್ರ ಸರ್ಕಾರವು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರಿಗೆ 2015ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಹಾಗೂ 2024ರಲ್ಲಿ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ(ಏಜೆನ್ಸೀಸ್).