ಬಿಜೆಪಿಯ ಭೀಷ್ಮ ಎಲ್ ಕೆ ಆಡ್ವಾಣಿಗೆ 100ರ ಸಂಭ್ರಮ: ದೀರ್ಘಾಯುಷ್ಯಕ್ಕಾಗಿ ಪಕ್ಷದ ಕಚೇರಿಯಲ್ಲಿ ಹೋಮ-ಹವನ! | LK Advani

ಬಿಜೆಪಿಯ ಭೀಷ್ಮ ಎಲ್ ಕೆ ಆಡ್ವಾಣಿಗೆ 100ರ ಸಂಭ್ರಮ: ದೀರ್ಘಾಯುಷ್ಯಕ್ಕಾಗಿ ಪಕ್ಷದ ಕಚೇರಿಯಲ್ಲಿ ಹೋಮ-ಹವನ! | LK Advani
Published on: 

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲಕೃಷ್ಣ ಆಡ್ವಾಣಿ ಅವರು ಇಂದು (ನವೆಂಬರ್ 8) ತಮ್ಮ 99ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಇದರೊಂದಿಗೆ ಅವರು ತಮ್ಮ ಜೀವನದ 100ನೇ ವರ್ಷಕ್ಕೆ (ಶತಮಾನಕ್ಕೆ) ಪದಾರ್ಪಣೆ ಮಾಡುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ನವದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ ಕೆ ಆಡ್ವಾಣಿ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡುವಂತೆ ಕೋರಿ ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ಭಾನುವಾರ ವಿಶೇಷ ಹವನ ಮತ್ತು ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್​, ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಆಡ್ವಾಣಿ ಅವರ ಪುತ್ರಿ ಪ್ರತಿಭಾ ಆಡ್ವಾಣಿ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪಕ್ಷದ ಮೂಲಗಳು ಇಂಡಿಯಾ ಟುಡೆಗೆ ತಿಳಿಸಿರುವುದಾಗಿ ವರದಿಯಾಗಿದೆ.

ಪೂಜೆ ಮತ್ತು ಹವನದ ಮುಕ್ತಾಯದ ಬಳಿಕ ಆಡ್ವಾಣಿ ಅವರ ಜೀವನ ಹಾಗೂ ರಾಜಕೀಯ ಪ್ರಯಾಣದ ಕುರಿತಾದ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು ಹಾಗೂ ಕಾರ್ಯಕರ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.

Also Read
ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬೌದ್ಧಿಕ ಪ್ರಖರತೆಯ ನಾಯಕ: ನೂರನೇ ವರ್ಷಕ್ಕೆ ಭಾರತರತ್ನ ಎಲ್.ಕೆ. ಆಡ್ವಾಣಿ
ಬಿಜೆಪಿಯ ಭೀಷ್ಮ ಎಲ್ ಕೆ ಆಡ್ವಾಣಿಗೆ 100ರ ಸಂಭ್ರಮ: ದೀರ್ಘಾಯುಷ್ಯಕ್ಕಾಗಿ ಪಕ್ಷದ ಕಚೇರಿಯಲ್ಲಿ ಹೋಮ-ಹವನ! | LK Advani

ಕಳೆದ ಕೆಲವು ತಿಂಗಳುಗಳಿಂದ ಎಲ್.ಕೆ. ಆಡ್ವಾಣಿ ಅವರ ಆರೋಗ್ಯದಲ್ಲಿ ಏರಿಳಿತಗಳು ಉಂಟಾಗಿದ್ದವು. ಎದೆಗೆ ಸಂಬಂಧಿಸಿದ ಸೋಂಕಿನ ಚಿಕಿತ್ಸೆಗಾಗಿ ನವದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಅಕ್ಟೋಬರ್ 19ರಂದು ಬಿಡುಗಡೆಗೊಂಡು ಮನೆಗೆ ಮರಳಿದ್ದರು. ಇದಕ್ಕೂ ಮುನ್ನ ಮೇ ತಿಂಗಳಿನಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಅಲ್ಲದೆ, 2024ರಲ್ಲೂ ಅವರು ಹಲವಾರು ಬಾರಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಹಾಗೂ ಅಪೊಲೊ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. 2024ರ ಡಿಸೆಂಬರ್‌ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು, ಡಿಸೆಂಬರ್ 25ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕಳೆದ ತಿಂಗಳು 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಡ್ವಾಣಿ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದರು. ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿತ್ತು. ಈ ವೇಳೆ ಪ್ರಧಾನಿ ಮೋದಿ ಅವರು, ಆಡ್ವಾಣಿ ಅವರ ದಶಕಗಳ ಸಾರ್ವಜನಿಕ ಸೇವೆಯು ರಾಷ್ಟ್ರೀಯ ಜೀವನದ ಮೇಲೆ ಅಳಿಸಲಾಗದ ಮುದ್ರೆಯನ್ನು ಒತ್ತಿದೆ ಎಂದು ಸ್ಮರಿಸಿದ್ದರು.

ಬಿಜೆಪಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ

ಕರಾವಳಿಯ ಕರಾಚಿಯಲ್ಲಿ ಜನಿಸಿದ ಎಲ್ ಕೆ ಆಡ್ವಾಣಿ ಅವರು 1947ರಲ್ಲಿ ದೇಶ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದರು. ನಂತರ ಜನಸಂಘ ಮತ್ತು ಬಿಜೆಪಿಯ ಬೆಳವಣಿಗೆಯಲ್ಲಿ ಕೇಂದ್ರ ಬಿಂದುವಾಗಿ ನಿಂತು ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ಮೂರು ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿ ಹಾಗೂ 2002ರಿಂದ 2004ರವರೆಗೆ ದೇಶದ ಉಪಪ್ರಧಾನಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿ ಅಪ್ರತಿಮ ಕೊಡುಗೆ ನೀಡಿರುವ ಇವರಿಗೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು 2024ರ ಮಾರ್ಚ್‌ನಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಡ್ವಾಣಿ ಅವರ ನಿವಾಸಕ್ಕೆ ತೆರಳಿ, ಪ್ರಧಾನಿ ಮೋದಿ ಹಾಗೂ ಇತರ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.

ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಎಲ್.ಕೆ. ಆಡ್ವಾಣಿ ಅವರು ಭಾರತೀಯ ರಾಜಕೀಯದ ದೃಢವಾದ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗದು(ಏಜೆನ್ಸೀಸ್​).