ಇನ್ಮುಂದೆ ವಜ್ರ ಮಾತ್ರವಲ್ಲ ಚಿನ್ನವು ಕೂಡ ಲ್ಯಾಬ್‌ನಲ್ಲೇ ತಯಾರಾಗಲಿದೆ! ವಿಜ್ಞಾನಿಗಳ ಸಂಶೋಧನೆ ಹಿಂದಿರೋ ಸತ್ಯವೇನು? Gold

ಇನ್ಮುಂದೆ ವಜ್ರ ಮಾತ್ರವಲ್ಲ ಚಿನ್ನವು ಕೂಡ ಲ್ಯಾಬ್‌ನಲ್ಲೇ ತಯಾರಾಗಲಿದೆ! ವಿಜ್ಞಾನಿಗಳ ಸಂಶೋಧನೆ ಹಿಂದಿರೋ ಸತ್ಯವೇನು? Gold
ಇನ್ಮುಂದೆ ವಜ್ರ ಮಾತ್ರವಲ್ಲ ಚಿನ್ನವು ಕೂಡ ಲ್ಯಾಬ್‌ನಲ್ಲೇ ತಯಾರಾಗಲಿದೆ! ವಿಜ್ಞಾನಿಗಳ ಸಂಶೋಧನೆ ಹಿಂದಿರೋ ಸತ್ಯವೇನು? Gold
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿರುವ ವಿಷಯಗಳೆಂದರೆ, ಪೆಟ್ರೋಲ್​, ಡೀಸೆಲ್​ ಹಾಗೂ ಚಿನ್ನ
  • ಅದರಲ್ಲೂ ವಿಶೇಷವಾಗಿ ಚಿನ್ನದ ಬೆಲೆ ಗಗನಕುಸುಮವಾಗಿದ್ದು, ಗ್ರಾಹಕರ ಕೈಗೆಟುಕದಂತಿದೆ
  • ಚಿನ್ನ ಎನ್ನುವುದು ಕೇವಲ ಲೋಹವಲ್ಲ ಅದು ಜಾಗತಿಕ ಶ್ರೀಮಂತಿಕೆಯ ಮಹೋನ್ನತ ಸಂಕೇತ
  • ವಿಜ್ಞಾನಿಗಳು ಪ್ರಯೋಗಾಲಯಗಳಲ್ಲೇ ಕೃತಕವಾಗಿ ಚಿನ್ನ ಉತ್ಪಾದಿಸಲು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ
Gold : ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿರುವ ವಿಷಯಗಳೆಂದರೆ, ಪೆಟ್ರೋಲ್​, ಡೀಸೆಲ್​ ಹಾಗೂ ಚಿನ್ನ. ಇವುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಅದರಲ್ಲೂ ಚಿನ್ನ ಮಾತ್ರ ಬಲು ದುಬಾರಿಯಾಗಿದೆ. ಚಿನ್ನ ಎನ್ನುವುದು ಕೇವಲ ಒಂದು ಲೋಹವಲ್ಲ, ಅದು ಜಾಗತಿಕ ಮಟ್ಟದಲ್ಲಿ ಅತ್ಯಂತ ಮೌಲ್ಯಯುತವಾದ ಐಶ್ವರ್ಯ ಮತ್ತು ಶ್ರೀಮಂತಿಕೆಯ ಮಹೋನ್ನತ ಸಂಕೇತವಾಗಿದೆ.
ಭೂಮಿಯ ಆಳದ ಗರ್ಭದಲ್ಲಿ ಹುದುಗಿರುವ ಈ ಹಳದಿ ಚಿನ್ನದ ನಿಕ್ಷೇಪಗಳು, ಸುದೀರ್ಘ ಗಣಿಗಾರಿಕೆ ಮತ್ತು ಅತ್ಯಂತ ಸಂಕೀರ್ಣವಾದ ಶುದ್ಧೀಕರಣ ಪ್ರಕ್ರಿಯೆಗಳನ್ನು ದಾಟಿ ನಮ್ಮ ಕೈಗಳನ್ನು ಆಭರಣದ ರೂಪದಲ್ಲಿ ತಲುಪುತ್ತವೆ. ಭಾರತದ ವಿವಿಧೆಡೆ ಸೇರಿದಂತೆ ಜಗತ್ತಿನಾದ್ಯಂತ ತನ್ನದೇ ಆದ ಆರ್ಥಿಕ ಮೌಲ್ಯ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ರಾಜಲೋಹದ ಬೆಲೆ ಮತ್ತು ಬೇಡಿಕೆ ಇಂದಿಗೂ ಜಗತ್ತನ್ನೇ ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ಅಂದಹಾಗೆ, ಜಗತ್ತಿನಾದ್ಯಂತ ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆ ಹೆಚ್ಚುತ್ತಿರುವುದರಿಂದ ಗಣಿಗಾರಿಕೆಯೂ ತೀವ್ರಗೊಳ್ಳುತ್ತಿದ್ದು, ಇದರಿಂದ ಭೂಮಿಯ ಗರ್ಭದಲ್ಲಿರುವ ನೈಸರ್ಗಿಕ ಚಿನ್ನದ ಪ್ರಮಾಣ ಭವಿಷ್ಯದಲ್ಲಿ ಖಾಲಿಯಾಗುವ ಆತಂಕ ಎದುರಾಗಿದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಗತ್ತಿನ ಹಲವು ವಿಜ್ಞಾನಿಗಳು ಪ್ರಯೋಗಾಲಯಗಳಲ್ಲೇ ಕೃತಕವಾಗಿ ಚಿನ್ನವನ್ನು ಉತ್ಪಾದಿಸಲು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲ್ಯಾಬ್‌ಗಳಲ್ಲಿ ತಯಾರಾಗುವ ಕೃತಕ ವಜ್ರಗಳು ಅತ್ಯಂತ ಸಾಮಾನ್ಯ ಹಾಗೂ ಯಶಸ್ವಿಯಾಗಿರುವ ಮಾದರಿಯಲ್ಲೇ, ವಿಜ್ಞಾನಿಗಳು ಇದೀಗ ಪ್ರಯೋಗಾಲಯದಲ್ಲೇ ಶುದ್ಧ ಚಿನ್ನವನ್ನು ಸೃಷ್ಟಿಸುವ ಸವಾಲಿನ ಪ್ರಯತ್ನದಲ್ಲಿ ತೊಡಗಿದ್ದಾರೆ.

ಚಿನ್ನ ತಯಾರಿಸುವುದು ಸುಲಭವೇ?

ವಜ್ರದಂತೆ (ಇದು ಇಂಗಾಲದ ಸ್ಫಟಿಕ ರೂಪ) ಚಿನ್ನವು ಒಂದು ಸಂಯುಕ್ತ ವಸ್ತುವಲ್ಲ, ಅದೊಂದು ಮೂಲವಸ್ತುವಾಗಿದೆ. ಈ ಕಾರಣದಿಂದಾಗಿಯೇ ಪ್ರಯೋಗಾಲಯಗಳಲ್ಲಿ ಕೃತಕವಾಗಿ ಚಿನ್ನವನ್ನು ಸೃಷ್ಟಿಸುವುದು ಅತ್ಯಂತ ವೆಚ್ಚದಾಯಕ ಮತ್ತು ಶ್ರಮದಾಯಕ ಪ್ರಕ್ರಿಯೆಯಾಗಿದೆ. ಕೃತಕ ಚಿನ್ನವನ್ನು ತಯಾರಿಸಲು ಪ್ರಮುಖವಾಗಿ ಎರಡು ಮಾರ್ಗಗಳಿವೆ. ಅದರಲ್ಲಿ ಮೊದಲನೆಯದು ಪರಮಾಣು ಮಟ್ಟದ ಸೃಷ್ಟಿ (Atomic-level creation) ಆಗಿದೆ. ಅಂದರೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಚಿನ್ನದ ಪರಮಾಣುಗಳನ್ನು ಪ್ರತ್ಯೇಕಿಸುವುದು ಅಥವಾ ಹೊಸದಾಗಿ ಸೃಷ್ಟಿಸುವುದನ್ನು ಈ ವಿಧಾನ ಒಳಗೊಂಡಿರುತ್ತದೆ. ಆದರೆ, ಇದು ವಿಪರೀತ ಖರ್ಚು ಬೇಡುವ ಕಠಿಣ ವಿಧಾನವಾಗಿರುವುದರಿಂದ, ಈ ಪ್ರಯೋಗಕ್ಕೆ ಪ್ರಸ್ತುತ ಜಗತ್ತಿನಲ್ಲಿ ಹಲವು ಮಿತಿ ಹಾಗೂ ಅಡೆತಡೆಗಳಿವೆ.

ಎರಡನೇ ವಿಧಾನ

ಕೃತಕ ಚಿನ್ನ ತಯಾರಿಕೆಯ ಎರಡನೆಯ ಪ್ರಮುಖ ಮಾರ್ಗವೆಂದರೆ ‘ಚಿನ್ನದ ಮರುಪಡೆಯುವಿಕೆ ಮತ್ತು ಶುದ್ಧೀಕರಣ’ (Gold recovery). ಈ ವಿಧಾನದಲ್ಲಿ ಬೇರೆ ಮೂಲಗಳಿಂದ ಚಿನ್ನವನ್ನು ಮರುಪಡೆದು, ಅತ್ಯುನ್ನತ ಮಟ್ಟದ ಶುದ್ಧತೆಗೆ ಪರಿವರ್ತಿಸಲಾಗುತ್ತದೆ. ಆದಾಗ್ಯೂ, ಈ ತಂತ್ರಜ್ಞಾನವಿನ್ನೂ ಮುಖ್ಯವಾಹಿನಿಗೆ ಬಂದಿಲ್ಲ ಹಾಗೂ ಪ್ರಸ್ತುತ ಲಭ್ಯವಿರುವ ಎರಡೂ ಕೃತಕ ವಿಧಾನಗಳು ನೈಸರ್ಗಿಕ ಗಣಿಗಾರಿಕೆಗಿಂತಲೂ ಅತ್ಯಂತ ದುಬಾರಿಯಾಗಿವೆ. ಜೊತೆಗೆ ಈ ಪ್ರಕ್ರಿಯೆಗಳ ಮೂಲಕ ಉತ್ಪತ್ತಿಯಾಗುವ ಚಿನ್ನದ ಪ್ರಮಾಣವೂ ತೀರಾ ಅತ್ಯಲ್ಪವಾಗಿದ್ದು, ಇಂದಿನ ತಂತ್ರಜ್ಞಾನದ ನೆರವಿನಿಂದ ಕೈಗಾರಿಕಾ ಮಟ್ಟದಲ್ಲಿ (ಗ್ರಾಂ ಅಥವಾ ಕಿಲೋಗ್ರಾಂ ಲೆಕ್ಕದಲ್ಲಿ) ಬೃಹತ್ ಪ್ರಮಾಣದಲ್ಲಿ ಚಿನ್ನವನ್ನು ಉತ್ಪಾದಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ.
ಜಾಗತಿಕ ಮಟ್ಟದಲ್ಲಿ ಅತ್ಯಂತ ಅಮೂಲ್ಯವಾದ ಲೋಹಗಳಲ್ಲಿ ಒಂದಾಗಿರುವ ಚಿನ್ನದ ಆಮದು ಮತ್ತು ರಫ್ತು ಪ್ರಸ್ತುತ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದನ್ನು ಕೇವಲ ಗಣಿಗಾರಿಕೆಯ ಮೂಲಕ ಮಾತ್ರವೇ ಪಡೆಯಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಚಿನ್ನದ ಲಭ್ಯತೆ ಮತ್ತು ಬಳಕೆ ಕ್ಷೀಣಿಸುತ್ತಿರುವ ಕಾರಣ, ಜನರು ಇದಕ್ಕೆ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿದ್ದಾರೆ. ಇದೇ ಕಾರಣಕ್ಕಾಗಿ ವಿಜ್ಞಾನಿಗಳು ಇದೀಗ ಪ್ರಯೋಗಾಲಯಗಳಲ್ಲೇ ಕೃತಕವಾಗಿ ಚಿನ್ನವನ್ನು ಉತ್ಪಾದಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಭವಿಷ್ಯದಲ್ಲಿ ಲ್ಯಾಬ್‌ಗಳಲ್ಲಿ ಚಿನ್ನವನ್ನು ಸೃಷ್ಟಿಸುವ ಈ ಪ್ರಯೋಗ ಯಶಸ್ವಿಯಾದರೆ, ಅದು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದೆ, ಆದರೆ ಪ್ರಯೋಗಾಲಯದಲ್ಲಿ ತಯಾರಾಗುವ ಕೃತಕ ಚಿನ್ನಕ್ಕೂ ಮತ್ತು ನೈಸರ್ಗಿಕವಾಗಿ ಗಣಿಗಾರಿಕೆಯಿಂದ ಸಿಗುವ ಶುದ್ಧ ಚಿನ್ನಕ್ಕೂ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸಗಳಿರುತ್ತವೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಲ್ಯಾಬ್‌ನಲ್ಲಿ ತಯಾರಿಸಿದ ಕೃತಕ ಚಿನ್ನವು ನೈಸರ್ಗಿಕ ಗಣಿಗಾರಿಕೆಯ ಚಿನ್ನಕ್ಕಿಂತ ಅಗ್ಗವಾಗಿರಲಿದೆಯೇ ಎಂಬ ಪ್ರಶ್ನೆ ಮತ್ತು ಕುತೂಹಲ ಸದ್ಯ ಹಲವರಲ್ಲಿದೆ. ಈ ಬಗ್ಗೆ ಅನೇಕರ ನಂಬಿಕೆಯೇನೆಂದರೆ, ಕೃತಕ ಚಿನ್ನವು ನೈಸರ್ಗಿಕ ಚಿನ್ನದಷ್ಟೇ ತೂಕ ಮತ್ತು ಶುದ್ಧತೆಯನ್ನು ಹೊಂದಿದ್ದರೆ, ಅದರ ಬೆಲೆಯೂ ಸಹ ಸಮಾನವಾಗಿಯೇ ಇರಲಿದೆ. ಆದಾಗ್ಯೂ, ಭವಿಷ್ಯದಲ್ಲಿ ತಂತ್ರಜ್ಞಾನ ಸುಧಾರಿಸಿ ಕೃತಕ ಚಿನ್ನದ ಉತ್ಪಾದನಾ ಪ್ರಕ್ರಿಯೆಯು ಇನ್ನಷ್ಟು ಸುಲಭ ಮತ್ತು ದಕ್ಷಗೊಂಡರೆ, ಅದು ಖಂಡಿತವಾಗಿಯೂ ಮಾರುಕಟ್ಟೆಯ ಬೆಲೆಗಳ ಮೇಲೆ ಪ್ರಭಾವ ಬೀರಬಹುದು. ಸದ್ಯದ ಪರಿಸ್ಥಿತಿಯಲ್ಲಿ ಲ್ಯಾಬ್‌ನಲ್ಲಿ ತಯಾರಾಗುವ ಚಿನ್ನದ ಮಾರಾಟ, ಖರೀದಿ ಮತ್ತು ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ನಿಯಮ ಅಥವಾ ನಿರ್ಧಾರಗಳು ಹೊರಬಿದ್ದಿಲ್ಲ ಹಾಗೂ ಭವಿಷ್ಯದಲ್ಲಿ ಈ ಕೃತಕ ಚಿನ್ನವು ನೈಸರ್ಗಿಕ ಚಿನ್ನದ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net