ವ್ಯವಸ್ಥೆ ವಿರುದ್ಧ ಯುವಜನತೆಯ ಡಿಜಿಟಲ್ ಆಕ್ರೋಶ: ಮಹಾ ಚಳವಳಿಯಾಗಿ ಬದಲಾದ ಕಾಕ್ರೋಚ್ ಜನತಾ ಪಾರ್ಟಿ! Cockroach Janata Party

ವ್ಯವಸ್ಥೆ ವಿರುದ್ಧ ಯುವಜನತೆಯ ಡಿಜಿಟಲ್ ಆಕ್ರೋಶ: ಮಹಾ ಚಳವಳಿಯಾಗಿ ಬದಲಾದ ಕಾಕ್ರೋಚ್ ಜನತಾ ಪಾರ್ಟಿ! Cockroach Janata Party
ವ್ಯವಸ್ಥೆ ವಿರುದ್ಧ ಯುವಜನತೆಯ ಡಿಜಿಟಲ್ ಆಕ್ರೋಶ: ಮಹಾ ಚಳವಳಿಯಾಗಿ ಬದಲಾದ ಕಾಕ್ರೋಚ್ ಜನತಾ ಪಾರ್ಟಿ! Cockroach Janata Party
Published on

ಪ್ರಮುಖ ಮುಖ್ಯಾಂಶಗಳು

  • ಕೇವಲ ನಾಲ್ಕು ದಿನಗಳ ಹಿಂದೆ ಆರಂಭವಾಗಿ ಜಾಲತಾಣದಲ್ಲಿ ಸುನಾಮಿ ಸೃಷ್ಟಿಸಿದ ‘ಕಾಕ್ರೋಚ್ ಜನತಾ ಪಾರ್ಟಿ’
  • ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನೇ ಮೀರಿಸಿ ಮುನ್ನುಗ್ಗುತ್ತಿರುವ ಸಿಜೆಪಿ
  • ಮಾಜಿ ‘ಆಪ್’ ಸೋಷಿಯಲ್ ಮೀಡಿಯಾ ಕಾರ್ಯಕರ್ತ ಅಭಿಜೀತ್ ದಿಪ್ಕೆ ಅವರಿಂದ ಸಿಜೆಪಿ ಸ್ಥಾಪನೆ
  • ಈ ಕಾಲ್ಪನಿಕ ಪಕ್ಷಕ್ಕೆ ಸೇರಲು ಅಧಿಕೃತ ವೆಬ್‌ಸೈಟ್ ಹಾಗೂ ಗೂಗಲ್​ ಫಾರ್ಮಗಳ ಮೂಲಕ ಮುಗಿಬೀಳುತ್ತಿರುವ ಯುವಕರು
Cockroach Janata Party : ಕೇವಲ ನಾಲ್ಕು ದಿನಗಳ ಹಿಂದೆ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ರಾಜಕೀಯ ವ್ಯಂಗ್ಯದ ಡಿಜಿಟಲ್ ವೇದಿಕೆಯು ಸಾಮಾಜಿಕ ಜಾಲತಾಣದಲ್ಲಿ ಹೊಸ ಸುನಾಮಿಯನ್ನೇ ಸೃಷ್ಟಿ ಮಾಡಿದೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನೇ ಮೀರಿಸಿದೆ. ಇಂದು (ಮೇ 21) ಬೆಳಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯು 8.7 ಮಿಲಿಯನ್ (87 ಲಕ್ಷ) ಫಾಲೋವರ್ಸ್ ಹೊಂದಿದ್ದರೆ, ಈ ಡಿಜಿಟಲ್ ಪಾರ್ಟಿಯು ಬರೋಬ್ಬರಿ 10.2 ಮಿಲಿಯನ್ (1 ಕೋಟಿಗೂ ಹೆಚ್ಚು) ಫಾಲೋವರ್ಸ್ ದಾಟುವ ಮೂಲಕ ದಾಖಲೆ ಬರೆದಿದೆ. ಕಾಂಗ್ರೆಸ್ 13.2 ಮಿಲಿಯನ್ ಹಾಗೂ ಆಮ್ ಆದ್ಮಿ ಪಾರ್ಟಿ 1.9 ಮಿಲಿಯನ್ ಫಾಲೋವರ್ಸ್ ಹೊಂದಿವೆ.

ಬಿಜೆಪಿಗೆ ಟಾಂಗ್

ಕೇವಲ 56 ಪೋಸ್ಟ್‌ಗಳ ಮೂಲಕ ಇಷ್ಟೊಂದು ಕ್ರೇಜ್ ಸೃಷ್ಟಿಸಿರುವ ಈ ಪಕ್ಷವನ್ನು ಮಾಜಿ ‘ಆಪ್’ ಸೋಷಿಯಲ್ ಮೀಡಿಯಾ ಕಾರ್ಯಕರ್ತ ಅಭಿಜೀತ್ ದಿಪ್ಕೆ (Abhijeet Dipke) ಸ್ಥಾಪಿಸಿದ್ದು, "ವಿಶ್ವದ ಅತಿ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವವರನ್ನು ಕೇವಲ ನಾಲ್ಕೇ ದಿನದಲ್ಲಿ ಯುವಶಕ್ತಿ ಹಿಂದಿಕ್ಕಿದೆ" ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯ ವಿರುದ್ಧ ಪ್ರತಿಭಟನೆಯಾಗಿ ಹುಟ್ಟಿಕೊಂಡ ಈ ಕಾಲ್ಪನಿಕ ಪಕ್ಷಕ್ಕೆ ಸೇರಲು ಯುವಕರು ‘cockroachjantaparty.org’ ಎಂಬ ಅಧಿಕೃತ ವೆಬ್‌ಸೈಟ್ ಹಾಗೂ ಗೂಗಲ್ ಫಾರ್ಮ್‌ಗಳ ಮೂಲಕ ಮುಗಿಬೀಳುತ್ತಿದ್ದಾರೆ.

ಅಭಿಜೀತ್ ದಿಪ್ಕೆ ರೂವಾರಿ

ದೇಶಾದ್ಯಂತ ಯುವಕರನ್ನು ಸೆಳೆಯುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' ವೆಬ್‌ಸೈಟ್‌ನ ಹಿಂದಿರುವ ರೂವಾರಿ ಪುಣೆ ಮೂಲದ ರಾಜಕೀಯ ಸಂವಹನ ತಂತ್ರಜ್ಞ 30 ವರ್ಷದ ಅಭಿಜೀತ್ ದಿಪ್ಕೆ. ಪುಣೆಯಲ್ಲಿ ಪತ್ರಿಕೋದ್ಯಮ ಮುಗಿಸಿ ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (PR) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಇವರು, ಈ ಕಾಲ್ಪನಿಕ ಪಕ್ಷದ "ಸಂಸ್ಥಾಪಕ ಅಧ್ಯಕ್ಷ" ಎಂದು ಕರೆದುಕೊಂಡಿದ್ದಾರೆ.
ಈ ಹಿಂದೆ 2020 ರಿಂದ 2023 ರವರೆಗೆ ಆಮ್ ಆದ್ಮಿ ಪಾರ್ಟಿಯ (AAP) ಸೋಶಿಯಲ್ ಮೀಡಿಯಾ ತಂಡದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದ ಅಭಿಜೀತ್, 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಪರವಾಗಿ ಮೀಮ್ಸ್ ಆಧಾರಿತ ಡಿಜಿಟಲ್ ಕ್ಯಾಂಪೇನ್ ನಡೆಸಿ ಯುವಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರ ರಾಜಕೀಯ ಅಭಿಪ್ರಾಯಗಳನ್ನು ಹೇಗೆ ಪ್ರಭಾವಿಸಬೇಕೆಂಬುದರಲ್ಲಿ ಪರಿಣಿತರಾಗಿರುವ ಇವರು ಮೇ 16 ರಂದು 'X' (ಟ್ವಿಟರ್) ನಲ್ಲಿ ಗೂಗಲ್ ಫಾರ್ಮ್ ಹಂಚಿಕೊಳ್ಳುವ ಮೂಲಕ ಈ ನೂತನ ವ್ಯಂಗ್ಯಭರಿತ ರಾಜಕೀಯ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

ಚಳುವಳಿಯಾಗಿ ಬದಲಾದ ಆರಂಭದ ಪ್ರತಿಭಟನೆ

ಈ ವಿಲಕ್ಷಣ ಪಕ್ಷದ ಜನನದ ಹಿಂದೆ ಒಂದು ಬಲವಾದ ರಾಜಕೀಯ ಮತ್ತು ಸಾಮಾಜಿಕ ಕಾರಣವಿದೆ. ಮೇ 15 ರಂದು ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು, "ಕೆಲವು ನಿರುದ್ಯೋಗಿ ಯುವಕರು ಪತ್ರಕರ್ತರು, ಆರ್‌ಟಿಐ ಕಾರ್ಯಕರ್ತರು ಅಥವಾ ಸೋಶಿಯಲ್ ಮೀಡಿಯಾ ಬಳಕೆದಾರರಾಗಿ ಎಲ್ಲರ ಮೇಲೂ ಆರೋಪಗಳ ದಾಳಿ ಮಾಡುತ್ತಿದ್ದಾರೆ" ಎಂಬ ವರದಿಗಳನ್ನು ಉಲ್ಲೇಖಿಸಿ ಯುವಕರನ್ನು "ಜಿರಳೆಗಳು" ಮತ್ತು ಪರಾವಲಂಬಿಗಳಿಗೆ ಹೋಲಿಸಿದ್ದರು ಎನ್ನಲಾದ ಹೇಳಿಕೆ ಆನ್‌ಲೈನ್‌ನಲ್ಲಿ ಯುವಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು. ತದನಂತರ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದರೂ, ವಾಕ್ ಸ್ವಾತಂತ್ರ್ಯ ಮತ್ತು ಸಂವಿಧಾನದ ರಕ್ಷಕರಾಗಬೇಕಾದವರೇ ಯುವಕರನ್ನು ಹೀಗೆ ಅವಮಾನಿಸಿದ್ದು ಪ್ರಜಾಪ್ರಭುತ್ವಕ್ಕೆ ಒಪ್ಪುವಂಥದ್ದಲ್ಲ ಎಂದು ಪ್ರತಿಭಟಿಸಲು ಅಭಿಜೀತ್ ದಿಪ್ಕೆ ಈ 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ಹುಟ್ಟುಹಾಕಿದರು.
ಇಂಟರ್ನೆಟ್‌ನಲ್ಲಿ ಕೇವಲ ಒಂದು ಜೋಕ್ ಆಗಿ ಆರಂಭವಾದ ಇದು, ಗೂಗಲ್ ಫಾರ್ಮ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 5,000 ಕ್ಕೂ ಹೆಚ್ಚು ನೋಂದಣಿಗಳನ್ನು ಪಡೆದು, ಕೇವಲ ಎರಡೇ ದಿನಗಳಲ್ಲಿ 40,000 ಕ್ಕೂ ಅಧಿಕ ಯುವಕರು ಸೇರ್ಪಡೆಗೊಳ್ಳುವ ಮೂಲಕ ವ್ಯವಸ್ಥೆಯ ವಿರುದ್ಧದ ಯುವ ಜನಾಂಗದ ಅಸಮಾಧಾನದ ವೇದಿಕೆಯಾಗಿ ಹಾಗೂ ಒಂದು ಅನೌಪಚಾರಿಕ ಸಂಘಟನೆಯಾಗಿ ರೂಪಾಂತರಗೊಂಡಿದೆ.
ಈ ಪಕ್ಷದ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಟ್ಯಾಗ್‌ಲೈನ್ ಮತ್ತು ಬೇಡಿಕೆಗಳು ಯಾರನ್ನಾದರೂ ನಗಿಸುವಂತಿದ್ದರೂ, ಅದೇ ಸಮಯದಲ್ಲಿ ಯುವಜನತೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. “Voice of Lazy and Unemployed” (ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ) ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಂದಿರುವ ಈ ಪಾರ್ಟಿ, "ವ್ಯವಸ್ಥೆಯು ಯಾರನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲು ಮರೆತಿದೆಯೋ ಅಂತಹ ಜನರನ್ನು" ನಾವು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡಿದೆ.

ಪ್ರಶ್ನಿಸಲು ನಾವು ಇಲ್ಲಿದ್ದೇವೆ

ಯಾವುದೇ ಪ್ರಾಯೋಜಕರಿಲ್ಲದ ಈ ಪಕ್ಷವು ತನ್ನನ್ನು ‘ದೊಡ್ಡದಾದ ಹಾಗೂ ನಿರಂತರವಾಗಿ ಕಾಡುವ ಜಿರಳೆಗಳ ಹಿಂಡು’ ಎಂದು ಘೋಷಿಸಿಕೊಂಡಿದ್ದು, "ನಾವು ಇಲ್ಲಿ ಮತ್ತೊಂದು ಪಿಎಂ ಕೇರ್ಸ್ (PM CARES) ನಿಧಿಯನ್ನು ಸ್ಥಾಪಿಸಲು ಬಂದಿಲ್ಲ, ತೆರಿಗೆದಾರರ ಹಣದಲ್ಲಿ ದಾವೋಸ್‌ಗೆ ಪ್ರವಾಸ ಹೋಗಿ ರಜೆ ಕಳೆಯಲು ಬಂದಿಲ್ಲ, ಅಥವಾ ಭ್ರಷ್ಟಾಚಾರಕ್ಕೆ ‘ಸ್ಟ್ರಾಟೆಜಿಕ್ ಸ್ಪೆಂಡಿಂಗ್’ ಎಂದು ಹೊಸ ಹೆಸರಿಡಲು ಬಂದಿಲ್ಲ, ಬದಲಿಗೆ ಜನರ ಹಣ ಏನಾಯಿತು ಎಂದು ಲಿಖಿತವಾಗಿ, ಗಟ್ಟಿಯಾಗಿ ಮತ್ತು ಪದೇಪದೇ ಪ್ರಶ್ನಿಸಲು ನಾವು ಇಲ್ಲಿದ್ದೇವೆ" ಎಂದು ವ್ಯವಸ್ಥೆಯ ವಿರುದ್ಧ ಅತ್ಯಂತ ಪ್ರಬಲವಾಗಿ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಅಚ್ಚರಿಯ ಪ್ರಣಾಳಿಕೆ

ಈ ಪಕ್ಷವು ಬಿಡುಗಡೆ ಮಾಡಿರುವ 5 ಅಂಶಗಳ ಪ್ರಣಾಳಿಕೆಯು ದೇಶದ ರಾಜಕೀಯ ವ್ಯವಸ್ಥೆಯನ್ನು ನೇರವಾಗಿ ಪ್ರಶ್ನಿಸುವಂತಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ, ಪಕ್ಷಾಂತರ ಮಾಡುವ ಶಾಸಕ-ಸಂಸದರ ಮೇಲೆ 20 ವರ್ಷಗಳ ನಿಷೇಧ, 'ಗೋದಿ ಮೀಡಿಯಾ' ಆ್ಯಂಕರ್‌ಗಳ ಬ್ಯಾಂಕ್ ಖಾತೆಗಳ ತನಿಖೆ, ಅರ್ಹ ಮತದಾರರ ಹೆಸರು ಕೈಬಿಟ್ಟರೆ ಚುನಾವಣಾ ಆಯುಕ್ತರ ಮೇಲೆ ಯುಎಪಿಎ (UAPA) ಕಾಯ್ದೆಯಡಿ ಕ್ರಮ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ರಾಜ್ಯಸಭಾ ಹುದ್ದೆ ನೀಡುವುದನ್ನು ತಡೆಯುವುದಾಗಿ ಘೋಷಿಸಿದೆ. ಇದರೊಂದಿಗೆ, ಸಿಬಿಎಸ್‌ಇ (CBSE) ಮರುಮೌಲ್ಯಮಾಪನ ಶುಲ್ಕ ರದ್ದುಪಡಿಸುವುದು ಮತ್ತು ಇತ್ತೀಚಿನ ನೀಟ್ (NEET) ಪರೀಕ್ಷಾ ಹಗರಣದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದರ ಜೊತೆಗೆ ಶೀಘ್ರದಲ್ಲೇ ವರ್ಚುವಲ್ 'Gen-Z' ಸಮಾವೇಶ ನಡೆಸುವುದಾಗಿ ತಿಳಿಸಿರುವ ಈ ಪಕ್ಷಕ್ಕೆ ಸೇರಲು "ನಿರುದ್ಯೋಗಿ, ಸೋಮಾರಿ, ಸದಾ ಇಂಟರ್ನೆಟ್‌ನಲ್ಲೇ ಇರುವ ಮತ್ತು ಸುದೀರ್ಘವಾಗಿ ವಾದಿಸುವ/ದೂರುವ ಕಲೆ ಹೊಂದಿರುವವರು" ಅರ್ಹರಾಗಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಲಾಗಿದೆ.
ಪ್ರಸ್ತುತ ಈ 'ಸಿಜೆಪಿ' (CJP) ಕ್ರೇಜ್ ಸಾಮಾನ್ಯ ಯುವಕರಿಗಷ್ಟೇ ಸೀಮಿತವಾಗಿರದೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರಂತಹ ಪ್ರಮುಖ ರಾಜಕಾರಣಿಗಳ ಬೆಂಬಲವನ್ನೂ ಗಿಟ್ಟಿಸಿಕೊಂಡಿದ್ದು, "ನಾನೂ ಸೇರಲು ಏನು ಅರ್ಹತೆ ಬೇಕು?" ಎಂದು ಕೇಳಿದ ಟಿಎಂಸಿ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ, ಪಕ್ಷವು "1983 ರ ವಿಶ್ವಕಪ್ ಗೆದ್ದಿರುವುದು ನಮ್ಮ ಪಕ್ಷ ಸೇರಲು ಅತ್ಯುತ್ತಮ ಅರ್ಹತೆ" ಎಂದು ಮಾರ್ಮಿಕವಾಗಿ ಉತ್ತರಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net