ತಲೆಗೆ AI ಡಿವೈಸ್​ ಕಟ್ಟಿಕೊಂಡು ತರಕಾರಿ ಮಾರಾಟ: ಗಂಟೆಗೆ 350 ರೂ. ಗಳಿಕೆ, ಈತನ ಐಡಿಯಾಗೆ ನೆಟ್ಟಿಗರು ಫಿದಾ! AI Device

ತಲೆಗೆ AI ಡಿವೈಸ್​ ಕಟ್ಟಿಕೊಂಡು ತರಕಾರಿ ಮಾರಾಟ: ಗಂಟೆಗೆ 350 ರೂ. ಗಳಿಕೆ, ಈತನ ಐಡಿಯಾಗೆ ನೆಟ್ಟಿಗರು ಫಿದಾ! AI Device
ತಲೆಗೆ AI ಡಿವೈಸ್​ ಕಟ್ಟಿಕೊಂಡು ತರಕಾರಿ ಮಾರಾಟ: ಗಂಟೆಗೆ 350 ರೂ. ಗಳಿಕೆ, ಈತನ ಐಡಿಯಾಗೆ ನೆಟ್ಟಿಗರು ಫಿದಾ! AI Device
Published on

ಪ್ರಮುಖ ಮುಖ್ಯಾಂಶಗಳು

  • ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಯಶಸ್ಸು ಸಾಧಿಸಬಹುದು ಅನ್ನೋದಕ್ಕೆ ಈ ಯುವಕ ಮಾದರಿ
  • ತರಕಾರಿ ಮಾರುವ ಸಮಯದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಗಂಟೆಗೆ 350 ರೂ. ಗಳಿಕೆ
  • ತಲೆಯ ಮೇಲೆ ‘AI ಡೇಟಾ ಕಲೆಕ್ಷನ್ ಹೆಡ್‌ಗೇರ್’ ಧರಿಸಿ ವಿಭಿನ್ನವಾಗಿ ತರಕಾರಿ ಮಾರುತ್ತಿರುವ ಯುವಕ
  • ಸಾಂಪ್ರದಾಯಿಕ ವ್ಯಾಪಾರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಯುವಕನ ಐಡಿಯಾಗೆ ನೆಟ್ಟಿಗರು ಫಿದಾ
AI Device : ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಹೈಟೆಕ್ ಕ್ರಾಂತಿಯೊಂದು ನಡೆದಿದೆ. ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಯಶಸ್ಸು ಸಾಧಿಸಬಹುದು ಅನ್ನೋದಕ್ಕೆ ಯುವಕನೊಬ್ಬ ಮಾದರಿಯಾಗಿದ್ದಾನೆ. ತರಕಾರಿ ಮಾರುವ ಸಮಯದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಯುವಕನೊಬ್ಬ ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಸಂಪಾದಿಸುತ್ತಿರುವ ರೋಚಕ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ!
ಹೌದು, ತಲೆಯ ಮೇಲೆ ‘AI ಡೇಟಾ ಕಲೆಕ್ಷನ್ ಹೆಡ್‌ಗೇರ್’ (ವಿಶೇಷ ಎಐ ಡಿವೈಸ್) ಧರಿಸಿ ಅತ್ಯಂತ ವಿಭಿನ್ನವಾಗಿ ತರಕಾರಿ ಮಾರುತ್ತಿರುವ ಈ ಡಿಜಿಟಲ್ ವ್ಯಾಪಾರಿಯ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದೆ. ಸಾಂಪ್ರದಾಯಿಕ ವ್ಯಾಪಾರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈತನ ಸ್ಮಾರ್ಟ್ ಐಡಿಯಾಗೆ ಇಂಟರ್ನೆಟ್ ಲೋಕ ಫಿದಾ ಆಗಿದೆ.
ಈ ಯುವಕ ತಲೆಗೆ ವಿಶೇಷ ಸಾಧನವನ್ನು (ಡಿವೈಸ್) ಧರಿಸಿಯೇ ಗ್ರಾಹಕರೊಂದಿಗೆ ವ್ಯಾಪಾರ ಮಾಡುತ್ತಾ ಸಂವಹನ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೃತಕ ಬುದ್ಧಿಮತ್ತೆ (AI) ಮಾದರಿಗಳ ತರಬೇತಿಗಾಗಿ ಮಾರುಕಟ್ಟೆಯ ನೈಜ ಡೇಟಾವನ್ನು (Real data) ಸಂಗ್ರಹಿಸಲು ಆತ ಈ ಗೇರ್ ಬಳಸುತ್ತಿದ್ದಾನೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳಿಗೆ ವೈವಿಧ್ಯಮಯ ಮತ್ತು ತಳಮಟ್ಟದ ದೊಡ್ಡ ಪ್ರಮಾಣದ ಡೇಟಾದ ಅಗತ್ಯವಿರುತ್ತದೆ. ಅದಕ್ಕಾಗಿ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಒಳಗೊಂಡಿರುವ ಇಂತಹ ಹೆಡ್-ಮೌಂಟೆಡ್ ಸಾಧನಗಳ ಮೂಲಕ ಜನರು ನಗರಗಳಲ್ಲಿ ಸಂಚರಿಸುವಾಗ ವಿಡಿಯೋ, ಆಡಿಯೋ ಹಾಗೂ ಪ್ರಾದೇಶಿಕ ಮಾಹಿತಿಯನ್ನು ಸೆರೆಹಿಡಿಯಲಾಗುತ್ತದೆ. ಈ ತರಕಾರಿ ವ್ಯಾಪಾರಿಯೂ ಸಹ ತನ್ನ ದೈನಂದಿನ ಕೆಲಸವನ್ನು ಮಾಡುತ್ತಲೇ ಈ ಸಾಧನದ ಮೂಲಕ ಆ ಪ್ರಕ್ರಿಯೆಯಲ್ಲಿ ತೊಡಗಿದ್ದಾನೆ. ತನ್ನ ಸಾಮಾನ್ಯ ಕೆಲಸದ ಸಮಯವನ್ನೇ ಒಂದು ಮೌಲ್ಯಯುತ ಡೇಟಾ ಸಂಗ್ರಹಣೆಯ ಶಿಫ್ಟ್ ಆಗಿ ಮಾರ್ಪಾಡು ಮಾಡಿಕೊಂಡಿರುವುದು ನಿಜಕ್ಕೂ ವಿಶೇಷವಾಗಿದೆ.
ಅಂದಹಾಗೆ, ವೈಭವ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಭಾರೀ ಗಮನ ಸೆಳೆಯುತ್ತಿದೆ. ಇದರಲ್ಲಿರುವ ತರಕಾರಿ ವ್ಯಾಪಾರಿ ಗಂಟೆಗೆ ಸುಮಾರು 350 ರೂಪಾಯಿ ಗಳಿಸುತ್ತಾನೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ, ಈ ಆದಾಯದ ಅಧಿಕೃತತೆ ಬಗ್ಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ.
ನನ್ನ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಈ ದೃಶ್ಯವನ್ನು ಕಂಡು ನಾನು ದಿಢೀರನೆ ಬ್ರೇಕ್ ಹಾಕಬೇಕಾಯಿತು. ಸ್ಥಳೀಯ ತರಕಾರಿ ವ್ಯಾಪಾರಿಯೊಬ್ಬ ಐಫೋನ್ ಮತ್ತು ಮೆಮೊರಿ ಕಾರ್ಡ್ ಅಳವಡಿಸಲಾದ ವಿಚಿತ್ರ ಹೆಡ್‌ಬ್ಯಾಂಡ್ ಧರಿಸಿರುವುದನ್ನು ನೋಡಿ, ನಾನು ಗಾಡಿ ನಿಲ್ಲಿಸಿ ವಿಚಾರಿಸಲೇಬೇಕಾಯಿತು ಎಂದು ಈ ವಿಡಿಯೋ ಪೋಸ್ಟ್ ಮಾಡಿದ ವೈಭವ್​ ಬರೆದುಕೊಂಡಿದ್ದಾರೆ. ವಿಚಾರಿಸಿದಾಗ ಸಿಕ್ಕ ಉತ್ತರವೇ ಅತ್ಯಂತ ರೋಚಕವಾಗಿದ್ದು, ಆತ ಎಐ (AI) ತರಬೇತಿಗಾಗಿ ನೈಜ ಜಗತ್ತಿನ ಡೇಟಾ ಸಂಗ್ರಹಿಸುತ್ತಿರುವುದು ಮತ್ತು ಅದಕ್ಕಾಗಿ ಆತನಿಗೆ ಗಂಟೆಗೆ 350 ರೂಪಾಯಿ ಸಿಗುತ್ತಿರುವುದು ಬೆಳಕಿಗೆ ಬಂದಿದೆ.
ಲೆಕ್ಕಾಚಾರ ಹಾಕಿದರೆ, ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ 3,500 ರೂಪಾಯಿ ಹಾಗೂ ತಿಂಗಳಿಗೆ ಬರೋಬ್ಬರಿ 1,05,000 ರೂಪಾಯಿಗಳಿಗಿಂತ ಹೆಚ್ಚು ಆದಾಯ ಸಿಗುತ್ತದೆ. ರಸ್ತೆ ಬದಿಯ ತರಕಾರಿ ವ್ಯಾಪಾರಿಯೊಬ್ಬ ತನ್ನ ತಲೆಯ ಮೇಲೆ ಸ್ಮಾರ್ಟ್‌ಫೋನ್ ಕಟ್ಟಿಕೊಂಡು ಓಡಾಡುತ್ತಾ, ಇವತ್ತಿನ ಕಾರ್ಪೊರೇಟ್ ಇಂಡಿಯಾದ ಅರ್ಧದಷ್ಟು ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾನೆ ಎಂಬ ಸತ್ಯವನ್ನು ನನಗಿನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಭವಿಷ್ಯವು ಅತ್ಯಂತ ರೋಮಾಂಚನಕಾರಿಯಾಗಿದೆ ಎಂದು ವೈಭವ್​ ಬರೆದುಕೊಂಡಿದ್ದಾರೆ.
ಈ ವಿಡಿಯೋದ ಕಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಒಬ್ಬ ಬಳಕೆದಾರ "ನಾನು ಆತನ ಪರಿಶ್ರಮವನ್ನು ಗೌರವಿಸುತ್ತೇನೆ ಆದರೆ ಬ್ಯಾಕ್‌ಗ್ರೌಂಡ್‌ನಲ್ಲಿ ಬರುವ ಅತಿಯಾದ ಶಬ್ದದಿಂದಾಗಿ ಆ ಡೇಟಾದ ಔಟ್‌ಪುಟ್ ಹಾಳಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಇದೇ ರೀತಿಯ ಸೆಟ್-ಅಪ್ ಹೊತ್ತು ನಮ್ಮ ಕಾಲೋನಿಗೆ ಬಂದಿದ್ದ ಕಂಪನಿಯವರು, ಅಲ್ಲಿನ ಎಲ್ಲಾ ಗೃಹಿಣಿಯರಿಗೆ ಈ ಸಾಧನವನ್ನು ನೀಡಿ ಡೇಟಾ ಸಂಗ್ರಹಕ್ಕಾಗಿ ಭಾರಿ ಹಣ ಪಾವತಿಸಿದ್ದರು. ಇದರಿಂದಾಗಿ ದಿಢೀರನೆ ಎಲ್ಲಾ ಮನೆಗಳು ಸದಾ ಕ್ಲೀನ್ ಆಗಿರಲಾರಂಭಿಸಿದವು, ಇದು ಒಂದೆರಡು ತಿಂಗಳು ಮುಂದುವರಿದು ಈಗ ಸದ್ಯಕ್ಕೆ ನಿಂತಿದೆ ಎಂದು ತಿಳಿಸಿದ್ದಾರೆ.
ಇನ್ನು ಯುವಕನ ತಿಂಗಳ ಆದಾಯದ ಲೆಕ್ಕಾಚಾರದ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಮಗದೊಬ್ಬ ಬಳಕೆದಾರ, ಜನರು ಹೀಗೆ ತರಾತುರಿಯಲ್ಲಿ ಆದಾಯದ ಲೆಕ್ಕ ಹಾಕುವುದನ್ನು ನಾನು ದ್ವೇಷಿಸುತ್ತೇನೆ, ಆತನಿಗೆ ಗಂಟೆಗೆ 350 ರೂಪಾಯಿ ಸಿಗುತ್ತಿರಬಹುದು ನಿಜ, ಆದರೆ ಇಡೀ ಪ್ರಾಜೆಕ್ಟ್‌ನಲ್ಲಿ ಆತನಿಗೆ ಕೇವಲ 10 ರಿಂದ 20 ಗಂಟೆಗಳಷ್ಟೇ ಕೆಲಸ ಸಿಗುತ್ತದೆಯೇ ಹೊರತು, ತಿಂಗಳಿಗೆ 300 ಗಂಟೆಗಳ ಪೂರ್ಣ ಪ್ರಮಾಣದ ಕೆಲಸ ಸಿಗಲು ಸಾಧ್ಯವಿಲ್ಲ ಎಂದು ವಾಸ್ತವವನ್ನು ವಿವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net