ಸ್ವತಂತ್ರ ಭಾರತದ ಮೊದಲ ಮತಕಳ್ಳತನ ಮಾಡಿದ್ದೇ ನೆಹರೂ: ಕಾಂಗ್ರೆಸ್ ವಿರುದ್ಧ ಸಂಬಿತ್ ಪಾತ್ರಾ ಸ್ಫೋಟಕ ಆರೋಪ! | Sambit Patra

ಬಿಜೆಪಿ ಸಂಸದ ಸಂಬಿತ್ ಪಾತ್ರಾ
ಬಿಜೆಪಿ ಸಂಸದ ಸಂಬಿತ್ ಪಾತ್ರಾ
Published on: 

ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರವು ಜೋರಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇಂಡಿಯಾ ಒಕ್ಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಾರ್ವಜನಿಕ ಮಹಾಭಿಯೋಗದ ಸಾಂಕೇತಿಕ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಬಿಜೆಪಿ ಸಂಸದ ಸಂಬಿತ್ ಪಾತ್ರಾ (Sambit Patra), ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಕಡೆಗಣಿಸುವ ಮೂಲಕ ಜವಾಹರಲಾಲ್ ನೆಹರೂ ಅವರು ದೇಶದ ಮೊದಲ ಪ್ರಧಾನಿಯಾದರು ಎಂದು ಪಾತ್ರ ವಾಗ್ದಾಳಿ ನಡೆಸಿದ್ದಾರೆ.

ಸರ್ದಾರ್ ವಲ್ಲಭಭಾಯ್ ಪಟೇಲ್​ ಅವರ ಜನ್ಮದಿನವಾದ ಅಕ್ಟೋಬರ್ 31 ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಬಿತ್ ಪಾತ್ರಾ, ಸ್ವತಂತ್ರ ಭಾರತದಲ್ಲಿ ನಡೆದ ಮೊಟ್ಟಮೊದಲ ಮತ ಕಳ್ಳತನ ಮಾಡಿದ್ದು ಬೇರೆ ಯಾರೂ ಅಲ್ಲ, ಸ್ವತಃ ಜವಾಹರಲಾಲ್ ನೆಹರೂ ಅವರೇ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

Also Read
6 ವರ್ಷಗಳ ದಾಂಪತ್ಯಕ್ಕೆ 12 ಮಕ್ಕಳು, ತಂದೆ-ಮಗನಿಗೆ 5 ವರ್ಷ ಅಂತರ!...ಎಸ್​​ಐಆರ್​​ನ ವಿಚಿತ್ರ ಸಂಗತಿ ಹೊರಹಾಕಿದ ಬಿಜೆಪಿ! | SIR
ಬಿಜೆಪಿ ಸಂಸದ ಸಂಬಿತ್ ಪಾತ್ರಾ

ನೆಹರೂ ವಿರುದ್ಧ ಬಿಜೆಪಿಯಿಂದ ಗಂಭೀರ ಆರೋಪ

ಕಾಂಗ್ರೆಸ್ ಪಕ್ಷವು ಪ್ರಸ್ತುತ ಮತ ಕಳ್ಳತನದ ವಿರುದ್ಧ ಕುರಿತು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದೆ. ಆದರೆ ಇತಿಹಾಸವನ್ನು ತಿರುಗಿ ನೋಡಿದರೆ ಅಸಲಿ ವೋಟ್​ ಚೋರಿ ನಡೆದಿದ್ದೇ ಕಾಂಗ್ರೆಸ್ ಒಳಗೆ ಎಂದು ಪಾತ್ರಾ ಕಿಡಿಕಾರಿದರು. ದೇಶದ ಪ್ರಥಮ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಬೆಂಬಲಿಸಿದ್ದರು. ಆ ನಾಯಕರು ತಮ್ಮ ಮತಗಳನ್ನು ಬ್ಯಾಲೆಟ್ ಬಾಕ್ಸ್‌ನಲ್ಲಿ ಹಾಕಿ ಪಟೇಲ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಬೆಂಬಲ ಸೂಚಿಸಿದ್ದರು. ಆದರೆ, ಆ ಮತಗಳನ್ನು ಕಳವು ಮಾಡುವ ಮೂಲಕ ನೆಹರೂ ಅವರು ದೇಶದ ಪ್ರಧಾನಿಯಾದರು ಎಂದು ಪಾತ್ರಾ ಆರೋಪಿಸಿದ್ದಾರೆ. ಗಾಂಧಿ ಕುಟುಂಬದ ಮೊದಲ ಸದಸ್ಯರಾದ ನೆಹರೂ ಅವರು ಅಂದು ಆಯ್ದ ನಾಯಕರ ಮತಗಳನ್ನು ಕಸಿದುಕೊಂಡು ಚುನಾಯಿತರಲ್ಲದ ಪ್ರಧಾನಿಯಾದರು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮಹಾಭಿಯೋಗ ನಾಟಕ ಎಂದ ಬಿಜೆಪಿ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ನಡೆಸಿದ ಮಾಕ್ ಪಾರ್ಲಿಮೆಂಟ್ ಅಥವಾ ಸಾರ್ವಜನಿಕ ಮಹಾಭಿಯೋಗ ಪ್ರಕ್ರಿಯೆಯನ್ನು ಸಂಬಿತ್ ಪಾತ್ರಾ ತೀವ್ರವಾಗಿ ಖಂಡಿಸಿದ್ದು, ಇದು ಕೇವಲ ರಾಜಕೀಯ ನಾಟಕ ಮತ್ತು ಸಂಸತ್ತಿನ ಘನತೆಗೆ ಮಾಡುವ ಅಪಮಾನ ಎಂದು ಟೀಕಿಸಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಅಪಹಾಸ್ಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸಂಬಿತ್ ಪಾತ್ರಾ, ಪಟ್ಟಿಯಿಂದ ಮತದಾರರನ್ನು ಅನ್ಯಾಯವಾಗಿ ಕೈಬಿಡಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿದರು. ವಿವಿಧ ರಾಜ್ಯಗಳಲ್ಲಿ ಅಂತಿಮ ಮತದಾರರ ಪಟ್ಟಿಗೆ ಇನ್ನೂ 13 ಕೋಟಿ ಜನರ ಹೆಸರು ಸೇರ್ಪಡೆಯಾಗದಿರಲು ಕಾರಣವೇನು ಎಂಬುದನ್ನು ವಿವರಿಸಿದ ಅವರು, ಇದರಲ್ಲಿ ಗೈರುಹಾಜರು, ಸ್ಥಳಾಂತರಗೊಂಡವರು, ಮೃತರಾದವರು ಮತ್ತು ನಕಲಿ ಎಂಬ ನಾಲ್ಕು ವಿಭಾಗಗಳಡಿ (ASDD) ಪರಿಷ್ಕರಣೆ ಮಾಡಲಾಗಿದೆ ಎಂದರು.

Also Read
ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ವಿಚಾರಣೆ ನಡೆಯಲಿ: 6 ಪ್ರಮುಖ ಆರೋಪ ಪಟ್ಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ! | Mallikarjun Kharge
ಬಿಜೆಪಿ ಸಂಸದ ಸಂಬಿತ್ ಪಾತ್ರಾ

ಬೂತ್ ಮಟ್ಟದ ಅಧಿಕಾರಿಗಳು ಮೂರು ಬಾರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಎಲ್ಲಾ ಭೇಟಿಗಳ ವೇಳೆಯೂ ಮತದಾರರು ಸಿಗದಿದ್ದರೆ ಅವರನ್ನು ಗೈರುಹಾಜರು ಎಂದು ಗುರುತಿಸಿ ಪಟ್ಟಿಯಿಂದ ಕೈಬಿಡಲಾಗುತ್ತದೆ. ಅಂತಹವರು ಫಾರ್ಮ್ 6 (Form 6) ಭರ್ತಿ ಮಾಡುವ ಮೂಲಕ ಮರುನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟು 12 ಕೋಟಿ ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಗುರುತಿಸಲಾಗಿದ್ದು, ಆ ಪೈಕಿ 6 ಕೋಟಿ ಜನರು ಈಗಾಗಲೇ ಮರುನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ 6 ಕೋಟಿ ಜನರಿಗೆ ನೋಟೀಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಮೃತರಾದ ಸುಮಾರು 2.8 ಕೋಟಿ ಜನರ ಹೆಸರುಗಳನ್ನು ಹಾಗೂ ಅಂದಾಜು 1 ಕೋಟಿ ನಕಲಿ ನಮೂದುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೃತರ ಹೆಸರಿನಲ್ಲಿ ನಕಲಿ ಮತದಾನ ನಡೆಯುತ್ತಿರುವುದನ್ನು ಎಸ್‌ಐಆರ್ ಪ್ರಕ್ರಿಯೆಯು ತಡೆಗಟ್ಟಿದೆ ಎಂದು ಪಾತ್ರಾ ಮಾಹಿತಿ ನೀಡಿದರು(ಏಜೆನ್ಸೀಸ್​).