

ನವದೆಹಲಿ: ಚುನಾವಣಾ ಆಯೋಗದ ನಿರ್ಧಾರಗಳನ್ನು ಖಂಡಿಸಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸದಲ್ಲಿ ಶನಿವಾರ ಸಾಂಕೇತಿಕವಾಗಿ ಸಾರ್ವಜನಿಕ ಮಹಾಭಿಯೋಗ ಕಾರ್ಯಕ್ರಮವನ್ನು ನಡೆಸಲಾಯಿತು.
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಕಾರ್ಯಕ್ರಮದ ಸ್ಥಳದಲ್ಲಿ ಅಡಚಣೆಯಾಗಿದ್ದರಿಂದ, ಹಿರಿಯ ನಾಯಕರಿಗೆ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ಈ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದರು.
ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಈ ವಿಶೇಷ ಸಾಂಕೇತಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಿ, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ, ಅವರನ್ನು ದೇಶದ್ರೋಹದ ವಿಚಾರಣೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಸ್ವಾಯತ್ತತೆಯನ್ನು ಕಳೆದುಕೊಂಡಿದೆ ಎಂದು ದೂರಿದ ಖರ್ಗೆ, ಪ್ರಮುಖ ಸಂಸ್ಥೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಈ ಮಹಾಭಿಯೋಗದ ಹೋರಾಟ ಅನಿವಾರ್ಯವಾಗಿದೆ ಎಂದರು.
ಸುಮಾರು ಏಳು ತಿಂಗಳ ಹಿಂದೆಯೇ ಸಂಸತ್ತಿನ ಉಭಯ ಸದನಗಳಲ್ಲಿ ಸಿಇಸಿ ಅವರನ್ನು ವಜಾಗೊಳಿಸುವಂತೆ ಕೋರಿ 193 ವಿರೋಧ ಪಕ್ಷದ ಸಂಸದರು ನೋಟೀಸ್ ನೀಡಿದ್ದರು. ಆದರೆ, ಆ ನೋಟೀಸ್ಗಳನ್ನು ಯಾವುದೇ ಪರಿಗಣನೆಗೆ ತೆಗೆದುಕೊಳ್ಳದೆ ತಿರಸ್ಕರಿಸಲಾಯಿತು ಎಂದು ಖರ್ಗೆ ದೂರಿದರು.
ಚುನಾವಣಾ ಆಯುಕ್ತರ ವಿರುದ್ಧದ ಈ ಅಭಿಯಾನವು ಯಾವುದೇ ವೈಯಕ್ತಿಕ ದ್ವೇಷದಿಂದ ಕೂಡಿಲ್ಲ ಎಂದು ಸ್ಪಷ್ಟಪಡಿಸಿದ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನದ ಆಶಯಗಳಿಯನ್ವಯ ಚುನಾವಣಾ ಆಯೋಗವು ಸಂಪೂರ್ಣ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಏಕೈಕ ಉದ್ದೇಶ ಎಂದರು. ದೆಹಲಿಯಲ್ಲಿ ಕುಳಿತುಕೊಂಡು ಯಾರೋ ಒಬ್ಬರು ಕಂಪ್ಯೂಟರ್ ಮೂಲಕ ದುರ್ಬಲ ವರ್ಗದವರು, ಮಹಿಳೆಯರು ಹಾಗೂ ಯುವಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದನ್ನು ಮತ್ತು ರಹಸ್ಯವಾಗಿ ಹೆಸರುಗಳನ್ನು ಅಳಿಸುವುದನ್ನು ತಡೆಯಬೇಕಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಸಾಮಾನ್ಯ ಜನರಿಗೆ ಚುನಾವಣಾ ಆಯೋಗದ ಮೇಲಿರುವ ನಂಬಿಕೆ ಅಚಲವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮತ್ತೊಂದಡೆ, ನಾಳೆ (ನವೆಂಬರ್ 1) ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಇಂಡಿಯಾ ಒಕ್ಕೂಟದ ಬೃಹತ್ ರ್ಯಾಲಿ ಹಾಗೂ ದೆಹಲಿ ಚಲೋ ಮೆರವಣಿಗೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕನ್ನಾಟ್ ಪ್ಲೇಸ್ ಸಮೀಪವಿರುವ ಮಿಂಟೋ ರೋಡ್ ಜಂಕ್ಷನ್ನಿಂದ ಆರಂಭವಾಗುವ ಈ ಮೆರವಣಿಗೆಯು ಅಜ್ಮೇರಿ ಗೇಟ್ ಮೂಲಕ ರಾಮಲೀಲಾ ಮೈದಾನವನ್ನು ತಲುಪಲಿದೆ ಎಂದು ಅವರು ತಿಳಿಸಿದರು.
ಇತ್ತ, ಕನ್ನಾಟ್ ಪ್ಲೇಸ್ನಿಂದ ರಾಮಲೀಲಾ ಮೈದಾನದವರೆಗೆ ಮೆರವಣಿಗೆ ನಡೆಸಲು ಯಾವುದೇ ಅಧಿಕೃತ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ರಾಮಲೀಲಾ ಮೈದಾನದ ಒಳಗೆ ಸಭೆ ನಡೆಸಲು ಮಾತ್ರ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ವಿಪಕ್ಷಗಳ ಈ ನಿರಂತರ ಹೋರಾಟವು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ(ಏಜೆನ್ಸೀಸ್).