ಖರ್ಗೆ ನಿವಾಸದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ಮಹಾಭಿಯೋಗ!....ಗೆಲ್ಲಲಾಗದೆ ಸ್ವಂತ ಸಂಸತ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು | Public Impeachment Motion

ಖರ್ಗೆ ನಿವಾಸದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ಮಹಾಭಿಯೋಗ!....ಗೆಲ್ಲಲಾಗದೆ ಸ್ವಂತ ಸಂಸತ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು | Public Impeachment Motion
Published on: 

Public Impeachment Motion: ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಾರ್ವಜನಿಕ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿರುವ ವಿಪಕ್ಷಗಳು, ನಕಲಿ ಅಥವಾ ಮಾದರಿ ಸಂಸತ್ತಿನ ಮಾದರಿಯಲ್ಲಿ ಈ ವಿನೂತ ಪ್ರತಿಭಟನೆಯನ್ನು ನಡೆಸಿವೆ.

ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನ ಮಾದರಿಯಲ್ಲಿಯೇ ವೇದಿಕೆ ಸಿದ್ಧಪಡಿಸಲಾಗಿದ್ದು, ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಈ ಸಾಂಕೇತಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗದ ನಿರ್ಣಯವನ್ನು ಮಂಡಿಸಿದರು. ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು.

ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳು

ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸ್ಪೀಕರ್ ಮೀರಾ ಕುಮಾರ್, ಜನರ ಮತಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಮತ್ತು ಪ್ರಶ್ನೆ ಮಾಡಿದರೆ ಯಾವುದೇ ಪಾರದರ್ಶಕ ಉತ್ತರ ಸಿಗುತ್ತಿಲ್ಲ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಮಾದರಿಯನ್ನು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಂತಹ ರಾಷ್ಟ್ರಗಳು ಅನುಸರಿಸುತ್ತವೆ. ಆದರೆ ಈಗ ಎದುರಾಗಿರುವ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ ಎಂದರು. ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡ ನಾಗರಿಕರು, ಸಿವಿಲ್ ಸೊಸೈಟಿ ಪ್ರತಿನಿಧಿಗಳು ಮತ್ತು ಸಂಸತ್ ಸದಸ್ಯರು ಈ ಅಧಿವೇಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮಹಾಭಿಯೋಗದ ನಿರ್ಣಯ ಮಂಡಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಮೂಲಭೂತವಾದದ್ದು ಮತ್ತು ಇಂದು ಅದು ಗಂಭೀರ ಅಪಾಯದಲ್ಲಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ನೇರ ನಿರ್ದೇಶನದ ಮೇರೆಗೆ ಮುಖ್ಯ ಚುನಾವಣಾ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

Also Read
ರಾಹುಲ್​ ಗಾಂಧಿಯನ್ನ ನಂಬಿದ್ರೆ ಕೆಲಸ ಆಗಲ್ಲ!...ರ‍್ಯಾಲಿ ಮುಂದೂಡುವಂತೆ ಅಖಿಲೇಶ್​​, ಉದ್ಧವ್, ದೀದಿ ಮೊರೆ ಹೋದ ದೆಹಲಿ ವ್ಯಾಪಾರಸ್ಥರು! | India Bloc Rally
ಖರ್ಗೆ ನಿವಾಸದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ಮಹಾಭಿಯೋಗ!....ಗೆಲ್ಲಲಾಗದೆ ಸ್ವಂತ ಸಂಸತ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು | Public Impeachment Motion

ಇಂಡಿಯಾ ಒಕ್ಕೂಟದ 6 ಪ್ರಮುಖ ಆರೋಪಗಳು

  1. ಚುನಾವಣೆಗಳನ್ನು ಮತಕಳ್ಳತನದ ಮೂಲಕ ಗೆಲ್ಲಲು ಸಂಚು ಹೂಡಿರುವುದು.

  2. ಮತದಾರರ ಪಟ್ಟಿಯಿಂದ ಬರೋಬ್ಬರಿ 13.2 ಕೋಟಿ ಮತದಾರರ ಹೆಸರುಗಳನ್ನು ಅಳಿಸಿಹಾಕಿರುವುದು.

  3. ಸಂಸತ್ತಿನ ಅನುಮೋದನೆಯಿಲ್ಲದೆ ಫಾರ್ಮ್ 6 (ಮತದಾರರ ನೋಂದಣಿ) ಅನ್ನು ತಿದ್ದುಪಡಿ ಮಾಡಿರುವುದು.

  4. ಇಸಿಐ ನೆಟ್ (ECINET) ಆನ್‌ಲೈನ್ ವ್ಯವಸ್ಥೆಯ ಮೂಲಕ ಮತದಾರರ ಪಟ್ಟಿಯ ಮೇಲೆ ಹಿಡಿತ ಸಾಧಿಸಿರುವುದು.

  5. ಇತರ ಇಬ್ಬರು ಚುನಾವಣಾ ಆಯುಕ್ತರನ್ನು ನಿರ್ಲಕ್ಷಿಸಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು.

  6. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಆದೇಶದಂತೆ ಮುಖ್ಯ ಚುನಾವಣಾ ಆಯುಕ್ತರು ನಡೆದುಕೊಂಡಿರುವುದು.

ಬಿಜೆಪಿ ಮತ್ತು ಅಮಿತ್ ಷಾ ತಿರುಗೇಟು

ಮಹಾಭಿಯೋಗದ ಈ ಪ್ರಕ್ರಿಯೆಗೆ ತಿರುಗೇಟು ನೀಡಿರುವ ಬಿಜೆಪಿ, ವಾಸ್ತವದಲ್ಲಿ ಚುನಾವಣೆಗಳಲ್ಲಿ ಗೆಲ್ಲಲು ಅಸಾಧ್ಯವಾಗಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈಗ ತಮ್ಮದೇ ಆದ ಸ್ವಯಂಘೋಷಿತ ಸಂಸತ್ತಿನಲ್ಲಿ ಕುಳಿತುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದೆ.

ಮತ್ತೊಂದೆಡೆ, ಗುರುವಾರ ಉತ್ತರ ಪ್ರದೇಶದ ಬಿಜೆಪಿ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಸವಾಲು ಹಾಕಿದ್ದರು. ಬಿಜೆಪಿಗೆ ಮುಚ್ಚಿಡಲು ಏನೂ ಇಲ್ಲ, ಆದರೆ ವಿಪಕ್ಷಗಳಿಗೆ ಸಂಸತ್ತಿನಲ್ಲಿ ಚರ್ಚೆ ಮಾಡುವ ಯಾವುದೇ ಉದ್ದೇಶ ಇಲ್ಲ, ಕೇವಲ ಗದ್ದಲ ಸೃಷ್ಟಿಸುವುದು ಮಾತ್ರ ಅವರ ಉದ್ದೇಶ ಎಂದು ಅಮಿತ್ ಷಾ ವಾಗ್ದಾಳಿ ನಡೆಸಿದ್ದರು.

ಎಸ್‌ಐಆರ್ ವಿವಾದದ ಹಿನ್ನೆಲೆ

ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಸುಮಾರು 13 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಇದು ಸಂಸತ್ತಿನ ಉಭಯ ಸದನಗಳಲ್ಲೂ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. 2025ರ ಮುಂಗಾರು ಮತ್ತು ಚಳಿಗಾಲದ ಅಧಿವೇಶನಗಳಲ್ಲೂ ಈ ವಿಷಯದ ಕುರಿತು ತೀವ್ರ ಚರ್ಚೆಗಳು ನಡೆದು ಕಲಾಪಗಳು ಅಸ್ತವ್ಯಸ್ತಗೊಂಡಿದ್ದವು.

ಕಾಂಗ್ರೆಸ್ ಮೂಲತಃ ಇದನ್ನು ಮಾಕ್ ಪಾರ್ಲಿಮೆಂಟ್ (Mock Parliament) ಎಂದು ನಡೆಸಲು ಯೋಜಿಸಿತ್ತಾದರೂ, ನಂತರ ಅದನ್ನು ಸಾರ್ವಜನಿಕ ಮಹಾಭಿಯೋಗ ಎಂದು ಮರುನಾಮಕರಣ ಮಾಡಿತು. ವಾಸ್ತವದಲ್ಲಿ ಮಹಾಭಿಯೋಗ ಮಂಡಿಸಲು ವಿಪಕ್ಷಗಳಿಗೆ ಅಗತ್ಯ ಸಂಖ್ಯಾಬಲವಿಲ್ಲದಿರುವುದು ಮತ್ತು ಈ ಹಿಂದೆ ನೀಡಿದ್ದ ನೋಟೀಸ್‌ಗಳನ್ನು ಸ್ಪೀಕರ್ ಹಾಗೂ ಸಭಾಪತಿಗಳು ತಿರಸ್ಕರಿಸಿದ್ದರಿಂದ, ವಿಪಕ್ಷಗಳು ಈ ಸಾಂಕೇತಿಕ ಹೋರಾಟದ ಹಾದಿ ಹಿಡಿದಿವೆ. ದೆಹಲಿಯಲ್ಲಿ ಸುರಿದ ಮಳೆಯಿಂದಾಗಿ ಶುಕ್ರವಾರ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಶನಿವಾರಕ್ಕೆ ಮುಂದೂಡಲಾಗಿತ್ತು(ಏಜೆನ್ಸೀಸ್).