6 ವರ್ಷಗಳ ದಾಂಪತ್ಯಕ್ಕೆ 12 ಮಕ್ಕಳು, ತಂದೆ-ಮಗನಿಗೆ 5 ವರ್ಷ ಅಂತರ!...ಎಸ್​​ಐಆರ್​​ನ ವಿಚಿತ್ರ ಸಂಗತಿ ಹೊರಹಾಕಿದ ಬಿಜೆಪಿ! | SIR

ಎಸ್​​ಐಆರ್​​ನ ವಿಚಿತ್ರ ಸಂಗತಿ ಹೊರಹಾಕಿದ ಬಿಜೆಪಿ!
ಎಸ್​​ಐಆರ್​​ನ ವಿಚಿತ್ರ ಸಂಗತಿ ಹೊರಹಾಕಿದ ಬಿಜೆಪಿ!
Published on: 

ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಮತದಾರರ ದಾಖಲೆಗಳಲ್ಲಿ ಆಘಾತಕಾರಿ ಮತ್ತು ವಿಚಿತ್ರ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ ಗಂಭೀರವಾಗಿ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಪಾತ್ರ, ತಂದೆ ಮತ್ತು ಮಗನಿಗೆ ಕೇವಲ 5 ವರ್ಷ ವಯಸ್ಸಿನ ವ್ಯತ್ಯಾಸವಿರುವ ಹಾಗೂ ಕೇವಲ 6 ವರ್ಷಗಳ ದಾಂಪತ್ಯದಲ್ಲಿ 12 ಮಕ್ಕಳಿರುವುದನ್ನು ದಾಖಲೆಗಳಲ್ಲಿ ತೋರಿಸಲಾಗಿದೆ ಎಂದು ವಿಸ್ಮಯಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಮತದಾರರ ಪಟ್ಟಿಯ ಮ್ಯಾಪಿಂಗ್ ಮಾಡುವಾಗ ಇಂತಹ ದೋಷಪೂರಿತ ಪ್ರಕರಣಗಳು ಕಂಡುಬಂದಿದ್ದು, ಸಂಬಂಧಪಟ್ಟ ವ್ಯಕ್ತಿಗಳಿಗೆ ಸ್ಪಷ್ಟನೆ ಕೋರಿ ನೋಟೀಸ್ ಕಳುಹಿಸಲಾಗಿದೆ ಎಂದು ಸಂಬಿತ್ ಪಾತ್ರಾ ತಿಳಿಸಿದ್ದಾರೆ. ಆದರೆ ಈ ನೋಟೀಸ್‌ಗಳಿಗೆ ಯಾರೂ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಇವರೆಲ್ಲರೂ ಅಕ್ರಮ ವಲಸಿಗರು, ಅವರೆಲ್ಲಾ ನಮ್ಮ ದೇಶದಲ್ಲಿ ಮತದಾರರಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಅಕ್ರಮವಾಗಿ ನುಸುಳಿದವರು ರೇಷನ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಂಡಿದ್ದು, ಎಸ್‌ಐಆರ್ ಪ್ರಕ್ರಿಯೆಯಿಂದ ಈ ಎಲ್ಲಾ ಅಕ್ರಮಗಳು ಹೊರಬರುತ್ತಿವೆ ಎಂದರು.

Also Read
ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ವಿಚಾರಣೆ ನಡೆಯಲಿ: 6 ಪ್ರಮುಖ ಆರೋಪ ಪಟ್ಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ! | Mallikarjun Kharge
ಎಸ್​​ಐಆರ್​​ನ ವಿಚಿತ್ರ ಸಂಗತಿ ಹೊರಹಾಕಿದ ಬಿಜೆಪಿ!

ಕಾಂಗ್ರೆಸ್ ಆಡಳಿತಾವಧಿಯಲ್ಲಿ 10 ಬಾರಿ ಸೇರಿದಂತೆ ದೇಶದಲ್ಲಿ ಈವರೆಗೆ ಒಟ್ಟು 12 ಬಾರಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದ ಸಂಬಿತ್ ಪಾತ್ರಾ, ಈಗ ವಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದುೇಕೆ ಎಂದು ಪ್ರಶ್ನಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೈರುಹಾಜರು, ಸ್ಥಳಾಂತರಗೊಂಡವರು, ಮೃತರಾದವರು ಮತ್ತು ನಕಲಿ ಎಂಬ ನಾಲ್ಕು ವಿಭಾಗಗಳಡಿ (ASDD) ಪರಿಷ್ಕರಣೆ ಮಾಡಲಾಗಿದೆ ಎಂದರು.

ಬೂತ್ ಮಟ್ಟದ ಅಧಿಕಾರಿಗಳು ಮೂರು ಬಾರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಎಲ್ಲಾ ಭೇಟಿಗಳ ವೇಳೆಯೂ ಮತದಾರರು ಸಿಗದಿದ್ದರೆ ಅವರನ್ನು ಗೈರುಹಾಜರು ಎಂದು ಗುರುತಿಸಿ ಪಟ್ಟಿಯಿಂದ ಕೈಬಿಡಲಾಗುತ್ತದೆ. ಅಂತಹವರು ಫಾರ್ಮ್ 6 (Form 6) ಭರ್ತಿ ಮಾಡುವ ಮೂಲಕ ಮರುನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟು 12 ಕೋಟಿ ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಗುರುತಿಸಲಾಗಿದ್ದು, ಆ ಪೈಕಿ 6 ಕೋಟಿ ಜನರು ಈಗಾಗಲೇ ಮರುನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ 6 ಕೋಟಿ ಜನರಿಗೆ ನೋಟೀಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಮೃತರಾದ ಸುಮಾರು 2.8 ಕೋಟಿ ಜನರ ಹೆಸರುಗಳನ್ನು ಹಾಗೂ ಅಂದಾಜು 1 ಕೋಟಿ ನಕಲಿ ನಮೂದುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೃತರ ಹೆಸರಿನಲ್ಲಿ ನಕಲಿ ಮತದಾನ ನಡೆಯುತ್ತಿರುವುದನ್ನು ಎಸ್‌ಐಆರ್ ಪ್ರಕ್ರಿಯೆಯು ತಡೆಗಟ್ಟಿದೆ ಎಂದು ಪಾತ್ರಾ ಮಾಹಿತಿ ನೀಡಿದರು.

ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟಕ್ಕೆ ತಿರುಗೇಟು

ಸಂಸತ್ತಿನ ಅನುಮೋದನೆಯಿಲ್ಲದೆ ಫಾರ್ಮ್ 6 ಅನ್ನು ತಿದ್ದುಪಡಿ ಮಾಡಲಾಗಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪವನ್ನು ಸಂಬಿತ್ ಪಾತ್ರಾ ಸಂಪೂರ್ಣವಾಗಿ ತಳ್ಳಿಹಾಕಿದರು. ಸುಪ್ರೀಂ ಕೋರ್ಟ್‌ನ 2026 ಮೇ 27 ರ ತೀರ್ಪಿನ ಆಧಾರದ ಮೇಲೆ ಫಾರ್ಮ್ ಜೊತೆಗೆ ಕೇವಲ ಒಂದು ಹೆಚ್ಚುವರಿ ಘೋಷಣೆಯನ್ನು ಮಾತ್ರ ಸೇರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಆಯುಕ್ತರನ್ನು ಕಡೆಗಣಿಸಿದ್ದಾರೆಂಬ ಆರೋಪವೂ ಸುಳ್ಳು ಎಂದ ಅವರು, ಈ ಸಂಪೂರ್ಣ ಪ್ರಕ್ರಿಯೆಯನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ ಎಂದರು(ಏಜೆನ್ಸೀಸ್​).