ಕರ್ನಾಟಕ ಸರ್ಕಾರದ ವಿಶೇಷ ಕಾಯ್ದೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್​ ಆದೇಶ: 362 KAS ಅಧಿಕಾರಿಗಳ ಕೆಲಸಕ್ಕೆ ಕುತ್ತು! KPSC

KPSC
ಕರ್ನಾಟಕ ಸರ್ಕಾರದ ಕಾಯ್ದೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್​ ಆದೇಶ: 362 KAS ಅಧಿಕಾರಿಗಳ ಕೆಲಸಕ್ಕೆ ಕುತ್ತು!
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ( KPSC ) 2011ನೇ ಸಾಲಿನ ಕೆಎಎಸ್ (KAS) ನೇಮಕಾತಿ ವಿವಾದಕ್ಕೆ ಸರಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದ್ದು, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

ಬರೋಬ್ಬರಿ ಒಂದು ದಶಕದಿಂದ ಸಾಗುತ್ತಿದ್ದ ಸುದೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ಅಂತ್ಯ ಬಿದ್ದಿದ್ದು, ಅಕ್ರಮದ ಆರೋಪ ಹೊತ್ತಿದ್ದ 362 ಕೆಎಎಸ್ ಅಧಿಕಾರಿಗಳ ರಕ್ಷಣೆಗೆಂದು ರಾಜ್ಯ ಸರ್ಕಾರ ರೂಪಿಸಿದ್ದ ಪ್ರತ್ಯೇಕ ಕಾಯ್ದೆಯನ್ನು ಸರ್ವೋಚ್ಚ ನ್ಯಾಯಾಲಯವು ಮುಲಾಜಿಲ್ಲದೆ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್‌ನ ಈ ಕಟ್ಟುನಿಟ್ಟಿನ ನಿಲುವಿನಿಂದಾಗಿ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ತರಲಾಗಿದ್ದ ಕಾಯ್ದೆಗೆ ಕಾನೂನಾತ್ಮಕ ಸೋಲ ಉಂಟಾಗಿದ್ದು, ಹಾಲಿ ಕರ್ತವ್ಯದಲ್ಲಿರುವ ಅಧಿಕಾರಿಗಳ ಹುದ್ದೆಗೆ ಕಂಟಕ ಎದುರಾಗಿದೆ.

Also Read
15 ಗ್ರಾಂ ಲೇಸ್ ಚಿಪ್ಸ್ ಪ್ಯಾಕೆಟ್‌ನಲ್ಲಿ ಸಿಕ್ಕಿದ್ದು ಕೇವಲ 4 ಗ್ರಾಂ: 5 ರೂ. ಪ್ಯಾಕೆಟ್‌ಗೆ 8,000 ರೂ. ಪರಿಹಾರ ಗೆದ್ದ ಗ್ರಾಹಕ..! Lays Chips Compensation
KPSC

2011ರಲ್ಲಿ ಕೆಪಿಎಸ್‌ಸಿ ನಡೆಸಿದ್ದ ಕೆಎಎಸ್ ಅಧಿಕಾರಿಗಳ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಅಂಕಗಳ ಅಕ್ರಮ ಹಂಚಿಕೆ ನಡೆದಿದೆ ಎಂಬ ಗಂಭೀರ ದೂರುಗಳು ದಾಖಲಾಗಿದ್ದವು. ಈ ವ್ಯಾಪಕ ಅಕ್ರಮಗಳನ್ನು ಪುಷ್ಟೀಕರಿಸುವಂತಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದ ಹೈಕೋರ್ಟ್, ಹಿಂದೆ ಇಡೀ ಆಯ್ಕೆ ಪಟ್ಟಿಯನ್ನೇ ರದ್ದುಗೊಳಿಸಿ ತೀರ್ಪು ನೀಡಿತ್ತು.

ಆದಾಗ್ಯೂ, ಈ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳನ್ನು ಕೆಲಸದಿಂದ ವಜಾಗೊಳಿಸುವುದರಿಂದ ರಕ್ಷಿಸಲು ರಾಜ್ಯ ಸರ್ಕಾರವು 2022ರಲ್ಲಿ ವಿಶೇಷ ಶಾಸನವೊಂದನ್ನು ವಿಧಾನಸಭೆಯಲ್ಲಿ ಅಂಗೀಕರಿಸಿ, ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸಲು ಮುಂದಾಗಿತ್ತು. ಹೈಕೋರ್ಟ್ ಸಹ ಸರ್ಕಾರದ ಈ ನಡೆಗೆ ಸಮ್ಮತಿ ಸೂಚಿಸಿತ್ತು.

ಆದರೆ, ಸರ್ಕಾರದ ಈ ಕಾಯ್ದೆಯನ್ನು ಹಾಗೂ ಹೈಕೋರ್ಟ್ ನೀಡಿದ್ದ ಆದೇಶವನ್ನು ತೀವ್ರವಾಗಿ ವಿರೋಧಿಸಿ, ಅಭ್ಯರ್ಥಿ ಶ್ರೀನಿವಾಸ ಟಿ. ಹಾಗೂ ಇತರ ವಂಚಿತ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ಸಮಗ್ರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದೀವಾಲಾ ಹಾಗೂ ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ದ್ವಿಸದಸ್ಯ ಪೀಠವು, ಸರ್ಕಾರದ ಈ ವಿಶೇಷ ಕಾಯ್ದೆಯು ಸಂವಿಧಾನಬಾಹಿರ ಹಾಗೂ ನಿಯಮಬಾಹಿರ ಎಂದು ಖಡಕ್ ಆಗಿ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಸರ್ಕಾರದ ಕಾಯ್ದೆಗೆ ಇದ್ದ ಎಲ್ಲ ರೀತಿಯ ಕಾರ್ಯಾಚರಣೆಯ ಬಲವೂ ಸಂಪೂರ್ಣವಾಗಿ ಇಲ್ಲದಂತಾಗಿದೆ.

Also Read
ಮಾವನಿಗೆ ಕಾಟ ಕೊಟ್ಟ ಇಶಾ ಅಂಬಾನಿ ಪುತ್ರ! ಅನಂತ್ ಅಂಬಾನಿ ರಿಯಾಕ್ಷನ್‌ಗೆ ನೆಟ್ಟಿಗರು ಹೇಳಿದ್ದೇನು? ವಿಡಿಯೋ ವೈರಲ್​! Isha Ambani Son
KPSC

ಸದ್ಯ ರಾಜ್ಯ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳಲ್ಲಿ ಆಡಳಿತಾತ್ಮಕ ಹೊಣೆಗಾರಿಕೆ ವಹಿಸಿಕೊಂಡು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 362 ಅಧಿಕಾರಿಗಳ ಭವಿಷ್ಯ ಈಗ ಸಂಪೂರ್ಣ ಅತಂತ್ರ ಸ್ಥಿತಿಗೆ ತಲುಪಿದೆ. ಒಂದು ಕಡೆ ದಶಕಗಳ ಕಾಲ ನ್ಯಾಯಕ್ಕಾಗಿ ಕಾಯುತ್ತಿದ್ದ ಅರ್ಹ ಅಭ್ಯರ್ಥಿಗಳಿಗೆ ಸುಪ್ರೀಂ ಆದೇಶದಿಂದ ಆಶಾಭಾವನೆ ಮೂಡಿದ್ದರೆ, ಇನ್ನೊಂದೆಡೆ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿರುವ ಅಧಿಕಾರಿಗಳ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಈ ಮಹತ್ವದ ತೀರ್ಪಿನ ನಂತರ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಯಾವ ರೀತಿಯ ಕಾನೂನು ಕ್ರಮ ಅಥವಾ ಮರುಪರಿಶೀಲನಾ ಹೆಜ್ಜೆಗಳನ್ನು ಇಡಲಿದೆ ಎಂಬುದು ಇಡೀ ರಾಜ್ಯದ ಗಮನ ಸೆಳೆದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net