ಮಾವನಿಗೆ ಕಾಟ ಕೊಟ್ಟ ಇಶಾ ಅಂಬಾನಿ ಪುತ್ರ! ಅನಂತ್ ಅಂಬಾನಿ ರಿಯಾಕ್ಷನ್‌ಗೆ ನೆಟ್ಟಿಗರು ಹೇಳಿದ್ದೇನು? ವಿಡಿಯೋ ವೈರಲ್​! Isha Ambani Son

Anant Ambani playing with his nephew at a Jio event
ಜಿಯೋ ಕಾರ್ಯಕ್ರಮದಲ್ಲಿ ಸೋದರಳಿಯನ ಜೊತೆ ಆಟವಾಡುತ್ತಿರುವ ಅನಂತ್ ಅಂಬಾನಿ
Published on: 

ಮುಂಬೈ: ಮಕ್ಕಳ ತುಂಟಾಟ, ಅವರ ಮುಗ್ಧತೆ, ಕಿಲಕಿಲ ಎನ್ನುವ ಅವರ ನಗು ಎಂಥವರನ್ನು ಅವರತ್ತ ಸೆಳೆಯುತ್ತದೆ. ಎಷ್ಟೇ ಗಂಭೀರವಾಗಿ ಕುಳಿತಿರುವ ವ್ಯಕ್ತಿಯೇ ಆದರೂ, ಮಕ್ಕಳ ತುಂಟ ಕೆಲಸಗಳನ್ನು ನೋಡಿ ಮನಸಾರೆ ನಗಲೇಬೇಕು. ದೇಶದ ನಂಬರ್ ಒನ್ ಸಿರಿವಂತರೇ ಆಗಿರಲಿ, ಮಕ್ಕಳ ಮುಂದೆ ಮಾತ್ರ ಯಾರ ಆಟವೂ ನಡೆಯಲ್ಲ ಎನ್ನುವುದಕ್ಕೆ ಇತ್ತೀಚೆಗೆ ಅಂಬಾನಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ನಡೆದಿರುವ ಘಟನೆ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಕಾರ್ಯಕ್ರಮದ ನಡುವೆ ಮಾವನ ಜೊತೆ ಆಟ!

ವೈರಲ್ ಆಗಿರುವ ವಿಡಿಯೋದಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು 'ಜಿಯೋ' (Jio) ಸಂಸ್ಥೆಯ ಅದ್ಧೂರಿ ಕಾರ್ಯಕ್ರಮವೊಂದರಲ್ಲಿ ಗಂಭೀರವಾಗಿ ಕುಳಿತಿರುವುದನ್ನು ಕಾಣಬಹುದು. ಅವರ ಸುತ್ತಲೂ ದೇಶ-ವಿದೇಶಗಳ ಗಣ್ಯರು, ವಿವಿಐಪಿ ಅತಿಥಿಗಳು ತುಂಬಿದ್ದಾರೆ. ಇಡೀ ಸಭೆಯೇ ಅಷ್ಟೊಂದು ಶಿಸ್ತಿನಿಂದ ಕೂಡಿರುವಾಗ, ಇದ್ದಕ್ಕಿದ್ದಂತೆ ಅನಂತ್ ಅವರ ಮುದ್ದಾದ ಸೋದರಳಿಯ (ಇಶಾ ಅಂಬಾನಿ ಮಗ ಕೃಷ್ಣಾ ಪಿರಾಮಲ್​) ವೇದಿಕೆಯ ಹತ್ತಿರ ಓಡಿ ಬರುತ್ತಾನೆ.

ತನ್ನ ಮಾವನನ್ನು ನೋಡುತ್ತಿದ್ದಂತೆ ಆ ಪುಟ್ಟ ಕಂದ, ಅನಂತ್ ಅಂಬಾನಿ ಅವರ ಕೈ ಹಿಡಿದು ಎಳೆಯುವುದು, ಕೈಗಳನ್ನು ಹಿಚುಕುವುದು, ಮುದ್ದಾಗಿ ತಮಾಷೆ ಮಾಡುತ್ತಾ ಕೀಟಲೆ ಮಾಡುವುದನ್ನು ವಿಡಿಯೋನಲ್ಲಿ ನೋಡಬಹುದು. ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಯುತ್ತಿದ್ದರೂ ಅನಂತ್ ಅಂಬಾನಿ ಮಾತ್ರ ಕಿಂಚಿತ್ತೂ ಕೋಪಗೊಳ್ಳದೆ, ಆ ಮಗುವನ್ನು ಅಷ್ಟೇ ಪ್ರೀತಿಯಿಂದ ಸಂತೈಸುತ್ತಾ, ನಗುತ್ತಾ ಆಡಿಸುತ್ತಾರೆ. ಈ ಸುಂದರ ದೃಶ್ಯವನ್ನು ಕಾರ್ಯಕ್ರಮದಲ್ಲಿದ್ದ ಕೆಲವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಬೆಂಕಿಯಂತೆ ಹರಿದಾಡುತ್ತಿದೆ.

ಕೋಟಿ ಆಸ್ತಿ ಇರಬಹುದು, ಆದ್ರೆ ಮಕ್ಕಳ ಮನಸ್ಸು ಒಂದೇ!

ಸಾಮಾನ್ಯವಾಗಿ ದೊಡ್ಡ ದೊಡ್ಡ ಉದ್ಯಮಿಗಳ ಕಾರ್ಯಕ್ರಮಗಳು ಅಂದರೆ ಕೋಟು-ಸೂಟು, ಕಟ್ಟುನಿಟ್ಟಾದ ನಿಯಮಗಳು, ಗಂಭೀರ ಮುಖಗಳೇ ಹೆಚ್ಚು. ಆದರೆ ಮಕ್ಕಳಿಗೆ ಇಂಥ ಯಾವುದೇ ಹಮ್ಮು-ಬಿಮ್ಮುಗಳು ಅರ್ಥವಾಗುವುದಿಲ್ಲ. ತಮ್ಮ ಸುತ್ತ ಯಾರು ಕುಳಿತಿದ್ದಾರೆ, ವೇದಿಕೆ ಎಷ್ಟು ದೊಡ್ಡದು, ಕ್ಯಾಮೆರಾಗಳು ತಮ್ಮನ್ನೇ ನೋಡುತ್ತಿವೆಯೇ ಎಂಬ ಯಾವ ಗೊಡವೆಯೂ ಅವರಿಗೆ ಇರುವುದಿಲ್ಲ. ತಮಗೆ ಇಷ್ಟವಾದವರು ಎದುರಿಗೆ ಸಿಕ್ಕರೆ ಸಾಕು, ತಕ್ಷಣ ತಮ್ಮ ಆಟದ ಲೋಕಕ್ಕೆ ಜಾರಿಬಿಡುತ್ತಾರೆ.

Also Read
ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ! ಅರ್ನಬ್ ಚಂಡಮಾರುತ ಬೆನ್ನಲ್ಲೇ ಬೆಚ್ಚಿಬಿದ್ದ ಛತ್ತೀಸ್‌ಗಢದ ಜನ; ಅಸಲಿ ಕಾರಣವೇನು? Chhattisgarh Red Sky
Anant Ambani playing with his nephew at a Jio event

ಅಂಬಾನಿ ಕುಟುಂಬದ ಈ ದೃಶ್ಯವನ್ನು ನೋಡಿದ ಜನಸಾಮಾನ್ಯರು, "ನಾವು ಮಧ್ಯಮ ವರ್ಗದವರಾಗಿರಲಿ ಅಥವಾ ದೇಶದ ಅತ್ಯಂತ ಶ್ರೀಮಂತ ಕುಟುಂಬವೇ ಆಗಿರಲಿ, ಮಕ್ಕಳ ವಿಷಯಕ್ಕೆ ಬಂದರೆ ಎಲ್ಲಾ ಮನೆಗಳ ಕಥೆಯೂ ಒಂದೇ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಣ, ಅಧಿಕಾರ ಎಲ್ಲವೂ ದೊಡ್ಡವರ ಲೋಕಕ್ಕೆ ಮಾತ್ರ ಸೀಮಿತ; ಮಕ್ಕಳ ಪ್ರಪಂಚದಲ್ಲಿ ಕೇವಲ ಪ್ರೀತಿ ಮತ್ತು ತುಂಟಾಟ ಮಾತ್ರ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನಲಾಗುತ್ತಿದೆ.

ನೆಟ್ಟಿಗರ ಕಾಮೆಂಟ್ಸ್‌ಗಳ ಮಹಾಪೂರ!

ಈ ಕ್ಯೂಟ್ ವಿಡಿಯೋ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್​ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಜನರು ತರಹೇವಾರಿ ಕಾಮೆಂಟ್‌ಗಳನ್ನು ಹಾಕಿ ಖುಷಿಪಡುತ್ತಿದ್ದಾರೆ.

ಒಬ್ಬ ನೆಟ್ಟಿಗ, "ಭಾರತದ ನಂಬರ್ ಒನ್ ಶ್ರೀಮಂತರ ಮನೆಯಲ್ಲೂ ಮಕ್ಕಳ ತುಂಟಾಟ ನಮ್ಮ ಮನೆ ತರಾನೇ ಇರುತ್ತೆ ನೋಡಿ... ಕನಿಷ್ಠ ಈ ವಿಷಯದಲ್ಲಾದರೂ ನಾವೆಲ್ಲರೂ ಸರಿಸಮಾನರು!" ಎಂದು ಬರೆದಿದ್ದಾರೆ. ಇನ್ನೊಬ್ಬರು, "ಮಕ್ಕಳಿಗೆ ಸಿರಿತನ, ಬಡತನ ಯಾವುದೂ ಗೊತ್ತಿಲ್ಲ. ಅವರಿಗೆ ಬೇಕಾಗಿರುವುದು ಮಾವನ ಪ್ರೀತಿ ಮತ್ತು ಆಟ ಮಾತ್ರ" ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಅನಂತ್ ಅಂಬಾನಿ ಅವರು ಎಷ್ಟೇ ದೊಡ್ಡ ಉದ್ಯಮಿ ಆಗಿದ್ದರೂ ಮಗುವಿನ ಮುಂದೆ ಕೇವಲ ಒಬ್ಬ ಸಾಮಾನ್ಯ, ಪ್ರೀತಿಯ ಮಾವನಾಗಿ ಕಾಣುತ್ತಿದ್ದಾರೆ. ನಿಜಕ್ಕೂ ಅದ್ಭುತ ಕ್ಷಣ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net