

ಜೈಪುರ: ಕೇವಲ 5 ರೂಪಾಯಿಯ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ವಿಚಾರವಾಗಿ ನಡೆದ ಕಾನೂನು ಹೋರಾಟವೊಂದು ಇದೀಗ ಗ್ರಾಹಕರ ಹಕ್ಕಿನ ರಕ್ಷಣೆಗೆ ದೊಡ್ಡ ಉದಾಹರಣೆಯಾಗಿ ( Lays Chips Compensation ) ಹೊರಹೊಮ್ಮಿದೆ. ಜೈಪುರದ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು 'ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಗೆ ಭಾರಿ ದಂಡ ವಿಧಿಸಿದೆ. ಪ್ಯಾಕೆಟ್ ಮೇಲೆ ಮುದ್ರಿಸಲಾಗಿದ್ದ ತೂಕಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ಚಿಪ್ಸ್ ನೀಡಿದ್ದಕ್ಕಾಗಿ ಮತ್ತು ಗ್ರಾಹಕ ಸೇವಾ ಲೋಪವೆಸಗಿದ್ದಕ್ಕಾಗಿ ಈ ಮಹತ್ವದ ತೀರ್ಪು ಹೊರಬಿದ್ದಿದೆ.
ವರದಿಗಳ ಪ್ರಕಾರ, ಜೈಪುರದ ಜಲನ್ ಬಿಲ್ಡಿಂಗ್ ಅಂಡ್ ಹಾರ್ಡ್‌ವೇರ್ ಸ್ಟೋರ್‌ನ ಮಾಲೀಕರಾದ ಚಂದ್ರಮನ್ ಜಲನ್ ಎಂಬುವವರು ನವೆಂಬರ್ 10, 2020 ರಂದು ತಮ್ಮ ಮನೆಗೆ ಬಂದಿದ್ದ ಅತಿಥಿಗಳಿಗೆ ಸತ್ಕಾರ ಮಾಡಲು 'ಮೆಟ್ರೋ ಕ್ಯಾಶ್ & ಕ್ಯಾರಿ' ಮಳಿಗೆಯಿಂದ ಹಲವು ತಿನಿಸುಗಳನ್ನು ಖರೀದಿಸಿದ್ದರು. ಇದರಲ್ಲಿ 5 ರೂ. ಮೌಲ್ಯದ ಲೇಸ್ (Lay's) ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ಸಹ ಸೇರಿತ್ತು. ಅತಿಥಿಗಳಿಗೆ ಬಡಿಸುವಾಗ ಈ ಚಿಪ್ಸ್ ಪ್ಯಾಕೆಟ್ ಅತಿಯಾಗಿ ಹಗುರವೆನಿಸಿದ ಕಾರಣ, ಅನುಮಾನಗೊಂಡು ಅದರ ತೂಕವನ್ನು ಪರೀಕ್ಷಿಸಿದರು.
ಆಶ್ಚರ್ಯ ಎಂದರೆ, ಪ್ಯಾಕೆಟ್ ಹೊರಭಾಗದಲ್ಲಿ ನಿವ್ವಳ ತೂಕ 15 ಗ್ರಾಂ ಎಂದು ನಮೂದಿಸಲಾಗಿದ್ದರೂ, ಅದರಲ್ಲಿದ್ದದ್ದು ಕೇವಲ 4 ಗ್ರಾಂ ಚಿಪ್ಸ್ ಮಾತ್ರ! ಅಂದರೆ ಬರೋಬ್ಬರಿ 11 ಗ್ರಾಂ ನಷ್ಟು ಚಿಪ್ಸ್ ಕಡಿಮೆಯಿತ್ತು. ತಕ್ಷಣವೇ ಈ ಕುರಿತು ಮಾರಾಟಗಾರರನ್ನು ಸಂಪರ್ಕಿಸಿದರೂ ಅವರಿಂದ ಸೂಕ್ತ ಉತ್ತರ ಸಿಗದಿದ್ದಾಗ, ಇದರಿಂದ ಅಸಮಾಧಾನಗೊಂಡ ಚಂದ್ರಮನ್ ಜಲನ್ ಅವರು ಇದನ್ನು ಪ್ರಶ್ನಿಸಿ ಏಪ್ರಿಲ್ 6, 2022 ರಂದು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ಅಧ್ಯಕ್ಷ ಅಶೋಕ್ ಶರ್ಮಾ ಹಾಗೂ ಸದಸ್ಯರಾದ ಅಜಯ್ ಕುಮಾರ್ ಮತ್ತು ಸುಪ್ರಿಯಾ ಅಗರ್ವಾಲ್ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 17, 2026 ರಂದು ಈ ಪ್ರಕರಣದ ವಿಚಾರಣೆ ನಡೆಸಿ ಮಹತ್ವದ ಆದೇಶ ನೀಡಿದೆ. ವಿಚಾರಣೆ ವೇಳೆ ಮೆಟ್ರೋ ಕ್ಯಾಶ್ & ಕ್ಯಾರಿ ಸಂಸ್ಥೆಯು, ತೂಕದ ಕೊರತೆಯು ಉತ್ಪಾದನಾ ಹಂತದಲ್ಲೇ ಸಂಭವಿಸಿರುವುದರಿಂದ ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ವಾದಿಸಿತು. ಇನ್ನೊಂದೆಡೆ, ಪೆಪ್ಸಿಕೋ ಕಂಪನಿಗೆ ನೋಟಿಸ್ ಜಾರಿಯಾಗಿದ್ದರೂ ಆಯೋಗದ ಮುಂದೆ ಹಾಜರಾಗದ ಕಾರಣ, ಆಯೋಗವು ಏಕಪಕ್ಷೀಯವಾಗಿ ವಿಚಾರಣೆ ಮುಂದುವರಿಸಿತು.
ಖರೀದಿಯ ಇನ್‌ವಾಯ್ಸ್ ಮತ್ತು ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗವು, ಚಿಲ್ಲರೆ ಮಾರಾಟಗಾರರು (ಮೆಟ್ರೋ ಕ್ಯಾಶ್ & ಕ್ಯಾರಿ) ಕೇವಲ ಅಧಿಕೃತ ಬಿಲ್ ಮೂಲಕ ಉತ್ಪನ್ನವನ್ನು ಮಾರಾಟ ಮಾಡಿದ್ದಾರೆ ಅಷ್ಟೇ, ಹೀಗಾಗಿ ಪ್ಯಾಕ್ ಮಾಡಿದ ಉತ್ಪನ್ನದ ತೂಕದಲ್ಲಿನ ಲೋಪಕ್ಕೆ ಸಂಪೂರ್ಣವಾಗಿ ತಯಾರಕ ಕಂಪನಿಯೇ ಹೊಣೆ ಎಂದು ಸ್ಪಷ್ಟಪಡಿಸಿತು. ಈ ಮೂಲಕ ರಿಟೇಲರ್ ವಿರುದ್ಧದ ದೂರನ್ನು ವಜಾಗೊಳಿಸಿ, ಪೆಪ್ಸಿಕೋ ಸಂಸ್ಥೆಯನ್ನು ತಪ್ಪಿತಸ್ಥ ಎಂದು ಎತ್ತಿಹಿಡಿಯಿತು.
ಅಂತಿಮವಾಗಿ, ದೂರುದಾರರಿಗೆ ಲೇಸ್ ಪ್ಯಾಕೆಟ್‌ನ 5 ರೂ. ಖರೀದಿ ಬೆಲೆಯನ್ನು ಏಪ್ರಿಲ್ 6, 2022 ರಿಂದ ವಾರ್ಷಿಕ ಶೇ. 6 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸುವಂತೆ ಪೆಪ್ಸಿಕೋಗೆ ಆಯೋಗ ನಿರ್ದೇಶಿಸಿದೆ. ಇದರೊಂದಿಗೆ, ಮನೋವೇದನೆ ಉಂಟುಮಾಡಿದ್ದಕ್ಕಾಗಿ 5,000 ರೂ. ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 3,000 ರೂ. ಸೇರಿದಂತೆ ಒಟ್ಟು 8,000 ರೂ. ಪರಿಹಾರ ಪಾವತಿಸುವಂತೆ ಆದೇಶಿಸಿದೆ. ನಿಯಮಿತ ಅವಧಿಯಲ್ಲಿ ಹಣ ಪಾವತಿಸದಿದ್ದಲ್ಲಿ ವಾರ್ಷಿಕ 6% ಬಡ್ಡಿ ಅನ್ವಯವಾಗಲಿದೆ ಎಂದು ಪೀಠವು ಎಚ್ಚರಿಸಿದೆ, (ಏಜೆನ್ಸೀಸ್).