ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಸಮರ: ಅಕ್ಟೋಬರ್ 2 ರಿಂದ ಪ್ರಜಾಪ್ರಭುತ್ವ ಉಳಿಸಿ ಬೃಹತ್ ಅಭಿಯಾನ! | INDIA Bloc

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಪ್ರತಿಭಟನೆ ನಡೆಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ (INDIA) ಒಕ್ಕೂಟವು ಬುಧವಾರ (ಸೆಪ್ಟೆಂಬರ್ 30) ಸರಣಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಘೋಷಿಸಿದೆ.
ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಸಮರ
ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಸಮರ
Published on: 

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಪ್ರತಿಭಟನೆ ನಡೆಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ (INDIA) ಒಕ್ಕೂಟವು ಬುಧವಾರ (ಸೆಪ್ಟೆಂಬರ್ 30) ಸರಣಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಘೋಷಿಸಿದೆ.

ವಿರೋಧ ಪಕ್ಷಗಳು ಅಕ್ಟೋಬರ್ 2 ರಿಂದ ಅಕ್ಟೋಬರ್ 8 ರವರೆಗೆ 'ಪ್ರಜಾಪ್ರಭುತ್ವ ಉಳಿಸಿ' ಜಾಥಾ, ಅಕ್ಟೋಬರ್ 6 ರಂದು ವಿಪಕ್ಷ ಸಂಸದರಿಂದ ಚುನಾವಣಾ ಆಯೋಗಕ್ಕೆ ಜಾಥಾ ಮತ್ತು ನವೆಂಬರ್ 1 ರಂದು ದೆಹಲಿಯಲ್ಲಿ ಬೃಹತ್ ರ್‍ಯಾಲಿ ನಡೆಸಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಸಭೆಯಲ್ಲಿ ಸೋನಿಯಾ ಗಾಂಧಿ-ದಿಗ್ವಿಜಯ್ ಸಿಂಗ್ ಮಾತಿನ ಚಕಮಕಿ...? ನಾಯಕರ ಜಟಾಪಟಿಗೆ ಕಾರಣವಾಯ್ತು ನಿತೀಶ್​​ರ ಆ ವಿಚಾರ! | CWC Meeting

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ವರ್ಚುವಲ್ ಆಗಿ ಭಾಗವಹಿಸುವುದರೊಂದಿಗೆ ಸಭೆಯಲ್ಲಿ 20 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಖರ್ಗೆ ಹೇಳಿದರು. ಈ ಹೋರಾಟವನ್ನು ಒಗ್ಗಟ್ಟಿನಿಂದ ಎದುರಿಸಲು ನಾಯಕರು ಒಮ್ಮತಕ್ಕೆ ಬಂದಿದ್ದಾರೆ ಎಂದಿರುವ ಖರ್ಗೆ, ಚರ್ಚೆಯು ಕನಿಷ್ಠ ಮೂರರಿಂದ ಮೂರೂವರೆ ಗಂಟೆಗಳ ಕಾಲ ನಡೆಯಿತು, ಎಲ್ಲರೂ ಭಾಗವಹಿಸಿದ್ದರು ಎಂದು ಎಐಸಿಸಿ ಅಧ್ಯಕ್ಷರು ತಿಳಿಸಿದರು.

ಅಕ್ಟೋಬರ್ 2-8 ರವರೆಗೆ ಪ್ರಜಾಪ್ರಭುತ್ವ ಉಳಿಸಿ ಜಾಥಾ!...

ವಿರೋಧ ಪಕ್ಷಗಳ ಅಕ್ಟೋಬರ್ 2 ರಿಂದ 8 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿಗಳ ಹೊರಗೆ ಜಿಲ್ಲಾಮಟ್ಟದಲ್ಲಿ ಪ್ರಜಾಪ್ರಭುತ್ವ ಉಳಿಸಿ ಜಾಥಾ ಮತ್ತು ಧರಣಿಗಳನ್ನು ಆಯೋಜಿಸಲಾಗುವುದು, ಅಕ್ಟೋಬರ್ 6 ರಂದು ಎಲ್ಲಾ ವಿರೋಧ ಪಕ್ಷದ ಸಂಸದರು ಚುನಾವಣಾ ಆಯೋಗದ ಕಚೇರಿಗೆ ಮಾರ್ಚ್ ನಡೆಸಲಿದ್ದಾರೆ ಎಂದರು.

ಈ ಕಾರ್ಯಕ್ರಮಗಳನ್ನು ಇಂದಿನಿಂದಲೇ ಜಾರಿಗೆ ತರಲು ಯೋಜಿಸಲಾಗಿತ್ತು. ಆದರೆ, ಸಂಸದರನ್ನು ಒಂದೆಡೆ ಸೇರಿಸಿ ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಸಂಘಟಿಸುವ ಉದ್ದೇಶದಿಂದ ಅಕ್ಟೋಬರ್ 6 ರ ದಿನಾಂಕವನ್ನು ನಿಗದಿಪಡಿಸಲಾಯಿತು. ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸುವ, ಯಾವುದೇ ಪಕ್ಷಕ್ಕೆ ಸೇರಿದ ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲಾ ಸಂಸದರನ್ನು ಒಟ್ಟುಗೂಡಿಸಿ ಈ ಮಾರ್ಚ್ ನಡೆಸಲಾಗುವುದು. ಅಷ್ಟೇ ಅಲ್ಲದೆ, ತಮ್ಮ ಮನವಿಯನ್ನು ಸಲ್ಲಿಸಲು ವಿರೋಧ ಪಕ್ಷಗಳ ನಾಯಕರು ಅಕ್ಟೋಬರ್ ಎರಡನೇ ವಾರದಲ್ಲಿ ರಾಷ್ಟ್ರಪತಿಗಳ ಭೇಟಿಗೆ ಸಮಯ ಕೇಳಲಿದ್ದಾರೆ ಎಂದು ಖರ್ಗೆ ತಿಳಿಸಿದರು.

Also Read
INDIA ಕೂಟದ ಸಭೆಯಿಂದ ದೂರ ಉಳಿದು ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಅಖಿಲೇಶ್..! ಎಸ್‌ಪಿ ನಾಯಕನ ಗೈರಿನ ಹಿಂದಿರುವ ಕಾರಣ ಇದೇನಾ...?
ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಸಮರ

ಮುಂದುವರೆದು ಮಾತನಾಡಿದ ರಾಜ್ಯಸಭೆಯ ವಿಪಕ್ಷ ನಾಯಕರೂ ಆದ ಖರ್ಗೆ ಅವರು, ಮೈತ್ರಿಕೂಟ ಪ್ರಮುಖ ರ್‍ಯಾಲಿಗಳನ್ನು ನಡೆಸಲಿದ್ದು, ದಿನಾಂಕಗಳು ಮತ್ತು ಸ್ಥಳಗಳನ್ನು ಇಷ್ಟರಲ್ಲೇ ಅಂತಿಮಗೊಳಿಸುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಎಲ್ಲರಿಗೂ ತಿಳಿಸುತ್ತೇವೆ. ಪ್ರಸ್ತುತ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದೇಶದ ಜನರಿಗೆ ಒಗ್ಗೂಡಿಸಲು ಮತ್ತು ತಲುಪಿಸಲು ನಾವು ಈ ಐದು ಪ್ರಮುಖ ರ್‍ಯಾಲಿಗಳನ್ನು ಆಯೋಜಿಸುತ್ತಿದ್ದೇವೆ. ಮತ ಕಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಎತ್ತುತ್ತಿರುವ ವಿವಿಧ ಕಳವಳಕಾರಿ ವಿಷಯಗಳನ್ನು ಹೈಲೈಟ್ ಮಾಡಲು ನವೆಂಬರ್ 1 ರಂದು ದೆಹಲಿಯಲ್ಲಿ ಇಲ್ಲಿಂದ ಪ್ರಾರಂಭಿಸಿ ಬೃಹತ್ ರ್‍ಯಾಲಿ ನಡೆಯಲಿದೆ. ಆರಂಭದಲ್ಲಿ ಜನರು ಈ ಕಳವಳಗಳನ್ನು ತಳ್ಳಿಹಾಕಿರಬಹುದು, ಆದರೆ ಈಗ ಅದರ ಬಗ್ಗೆ ತಿಳಿದುಕೊಳ್ಳಲು ಕಾಲ ಕೂಡಿಬಂದಿದೆ ಎಂದು ಖರ್ಗೆ ಹೇಳಿದರು.

ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಯುವಕರು, ಇಂಡಿಯಾ ಒಕ್ಕೂಟದ ಪಕ್ಷಗಳು, ಎನ್‌ಜಿಒಗಳು ಮತ್ತು ಏಕತೆ ಮತ್ತು ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುವ ಸಂಘಟನೆಗಳು ಭಾಗವಹಿಸಲಿವೆ ಎಂದು ಖರ್ಗೆ ಹೇಳಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net