INDIA ಕೂಟದ ಸಭೆಯಿಂದ ದೂರ ಉಳಿದು ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಅಖಿಲೇಶ್..! ಎಸ್‌ಪಿ ನಾಯಕನ ಗೈರಿನ ಹಿಂದಿರುವ ಕಾರಣ ಇದೇನಾ...?

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಹೋರಾಟದ ತಂತ್ರ ರೂಪಿಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಲು ಬುಧವಾರ ದೆಹಲಿಯಲ್ಲಿ ಇಂಡಿಯಾ (INDIA) ಒಕ್ಕೂಟದ ಸಭೆ ನಡೆಯುತ್ತಿದ್ದು,
INDIA ಕೂಟದ ಸಭೆಯಿಂದ ದೂರ ಉಳಿದು ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಅಖಿಲೇಶ್..!
INDIA ಕೂಟದ ಸಭೆಯಿಂದ ದೂರ ಉಳಿದು ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಅಖಿಲೇಶ್..!
Published on: 

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಹೋರಾಟದ ತಂತ್ರ ರೂಪಿಸಲು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಲು ಬುಧವಾರ ದೆಹಲಿಯಲ್ಲಿ ಇಂಡಿಯಾ (INDIA) ಒಕ್ಕೂಟದ ಸಭೆ ನಡೆಯುತ್ತಿದ್ದು, ಈ ಪ್ರಮುಖ ಸಭೆಯಿಂದ ಎಸ್‌ಐಆರ್ ಪರಿಷ್ಕರಣೆಯ ವಿರುದ್ಧ ವಿರೋಧ ಪಕ್ಷಗಳ ಹೋರಾಟದ ಮುಂಚೂಣಿಯಲ್ಲಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗೈರಾಗಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ, ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟವು ಒಂದಾಗಿ ಬಲವಾದ ಪ್ರತಿಭಟನೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ಅಖಿಲೇಶ್ ಅವರ ಈ ಗೈರುಹಾಜರಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದು ಸ್ಪಷ್ಟ ಸಂದೇಶವಾ...?

ಕಾಂಗ್ರೆಸ್ ಕರೆದಿರುವ ಈ ಸಭೆಗೆ ಅಖಿಲೇಶ್ ಖುದ್ದಾಗಿ ಗೈರಾಗುವುದು ಮಾತ್ರವಲ್ಲದೆ, ತಮ್ಮ ಪಕ್ಷದ ಎರಡನೇ ಹಂತದ ಉನ್ನತ ನಾಯಕರನ್ನಾಗಲಿ ಅಥವಾ ಯಾವುದೇ ಪ್ರಮುಖ ನಾಯಕರನ್ನಾಗಲಿ ಕಳುಹಿಸದಿರಲು ನಿರ್ಧರಿಸಿದ್ದಾರೆ. ಬದಲಾಗಿ, ಪಕ್ಷದ ಪ್ರತಿನಿಧಿಗಳಾಗಿ ಮೊಹಿಬುಲ್ಲಾ ನದ್ವಿ ಮತ್ತು ಹರೇಂದ್ರ ಮಲಿಕ್ ಅವರನ್ನು ಈ ಪ್ರತಿಪಕ್ಷಗಳ ಸಭೆಗೆ ನಿಯೋಜಿಸಿದ್ದಾರೆ. ಹೀಗಾಗಿ, ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆಯೇ ಮತ್ತು ಒಕ್ಕೂಟಕ್ಕೆ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆ, ಮೈತ್ರಿ ಮತ್ತು ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಅಖಿಲೇಶ್ ತೀವ್ರ ಅಸಮಾಧಾನಗೊಂಡಿದ್ದು, ಈ ಹಿನ್ನೆಲೆಯಲ್ಲಿಯೇ ಸಭೆಯಿಂದ ದೂರ ಉಳಿಯುವ ಹಾದಿ ತುಳಿದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಮತ್ತು ಕಾಂಗ್ರೆಸ್‌ನ ಉತ್ತರ ಪ್ರದೇಶ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರ ಹೇಳಿಕೆಗಳಿಂದ ಎಸ್‌ಪಿ ಮುಖ್ಯಸ್ಥರು ವಿಶೇಷವಾಗಿ ಅಸಮಾಧಾನಗೊಂಡಿದ್ದಾರೆ ಎಂದು ಎಸ್‌ಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕನಿಷ್ಠ 150 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಎಲ್ಲಾ 403 ಕ್ಷೇತ್ರಗಳಿಗೂ ಸಿದ್ಧತೆ ನಡೆಸುತ್ತಿದೆ ಎಂದು ಗೌತಮ್ ಹೇಳಿದ್ದರು. ಆದರೆ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ ಕೇವಲ 80 ರಿಂದ 90 ಸೀಟುಗಳನ್ನು ನೀಡಲು ಮಾತ್ರ ಸಿದ್ಧವಿದೆ. ಜೊತೆಗೆ ರಾಯ್‌ಬರೇಲಿ ಮತ್ತು ಅಮೇಥಿಯಂತಹ ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಸಿದ್ಧವಿಲ್ಲ. ನಮಗೆ ಸಮಾನ ಸೀಟುಗಳು, ಸಮಾನ ಹಕ್ಕುಗಳು ಮತ್ತು ಸಮಾನ ಗೌರವ ಬೇಕು ಎಂದು ಹೇಳಿದ್ದ ಗೌತಮ್, ಮೈತ್ರಿ ಮತ್ತು ಸೀಟು ಹಂಚಿಕೆ ಕುರಿತು ಶೀಘ್ರದಲ್ಲೇ ಮಾತುಕತೆ ಆರಂಭವಾಗಲಿದೆ ಎಂದಿದ್ದರು.

ಎಸ್‌ಪಿ ಅಧ್ಯಕ್ಷರು ದೊಡ್ಡ ಮನಸ್ಸು ಮಾಡಬೇಕಾಗಿದೆ ಕಾಂಗ್ರೆಸ್​ ಸಂಸದ

ಇನ್ನೊಂದೆಡೆ, ಅಖಿಲೇಶ್ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿದ್ದ ಇಮ್ರಾನ್ ಮಸೂದ್, ಮೈತ್ರಿಯಿಂದ ದೂರ ಉಳಿಯುವುದು ಅವರದೇ ನಷ್ಟ ಹಾಗೂ ಮೈತ್ರಿಕೂಟವನ್ನು ಮುನ್ನಡೆಸಲು ಎಸ್‌ಪಿ ಅಧ್ಯಕ್ಷರು ದೊಡ್ಡ ಮನಸ್ಸು ಮಾಡಬೇಕಾಗಿದೆ ಎಂದು ಹೇಳಿದ್ದರು.

ಈ ಶೀತಲ ಸಮರವನ್ನು ಹಗುರವಾಗಿ ಬಿಂಬಿಸಲು ಸಮಾಜವಾದಿ ಪಕ್ಷ ಪ್ರಯತ್ನಿಸಿದೆಯಾದರೂ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ತಮ್ಮ ಮೇಲೆ ಒತ್ತಡ ಹೇರುವ ತಂತ್ರ ಎಂದು ಅಖಿಲೇಶ್ ಭಾವಿಸಿದ್ದು, ಈ ಹೇಳಿಕೆಗಳಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರು ಬುಧವಾರದ ಇಂಡಿಯಾ ಒಕ್ಕೂಟದ ಪ್ರಮುಖ ಸಭೆಯಿಂದ ದೂರ ಉಳಿದಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇರುವ ಕಾರಣ ತಮ್ಮಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ. ಆದರೆ, ಪಕ್ಷದ ಮೂಲಗಳ ಪ್ರಕಾರ, ಇಂಡಿಯಾ ಒಕ್ಕೂಟದ ಸಭೆ ನಡೆಯುವ ಅದೇ ಬುಧವಾರದಂದೇ ರಾಮ್ ಗೋಪಾಲ್ ಯಾದವ್ ಅವರ ನಾಮಪತ್ರ ಸಲ್ಲಿಕೆಯನ್ನು ಅಖಿಲೇಶ್ ಉದ್ದೇಶಪೂರ್ವಕವಾಗಿಯೇ ನಿಗದಿಪಡಿಸಿದ್ದು, ಇದರಿಂದಾಗಿ ಪ್ರತಿಪಕ್ಷಗಳ ಸಭೆಗೆ ತೆರಳುವುದನ್ನು ತಪ್ಪಿಸಿದ್ದಾರೆ.

ವಿಶೇಷವೆಂದರೆ, ಅಖಿಲೇಶ್ ಪರವಾಗಿ ಸಭೆಯಲ್ಲಿ ಭಾಗವಹಿಸಲು ರಾಮ್ ಗೋಪಾಲ್ ಯಾದವ್, ಧರ್ಮೇಂದ್ರ ಯಾದವ್ ಅಥವಾ ಡಿಂಪಲ್ ಯಾದವ್ ಅವರಂತಹ ಯಾವುದೇ ಹಿರಿಯ ನಾಯಕರನ್ನು ಕಳುಹಿಸಲಾಗಿಲ್ಲ. ಬದಲಾಗಿ, ಎಸ್‌ಪಿ ಎಂಪಿಗಳಾದ ಮೊಹಿಬುಲ್ಲಾ ನದ್ವಿ ಮತ್ತು ಹರೇಂದ್ರ ಮಲಿಕ್ ಅವರನ್ನು ನಿಯೋಜಿಸಲಾಗಿದೆ.

ಬೆಳಿಗ್ಗೆ ರಾಮ್ ಗೋಪಾಲ್ ಯಾದವ್ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರೆ, ಅಖಿಲೇಶ್ ಯಾದವ್ ಅವರು ದಿನದ ನಂತರದ ಅವಧಿಯಲ್ಲಿ ಉಳಿದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುವವರಿದ್ದರು. ಅಖಿಲೇಶ್ ಅವರಿಗೆ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಭಾಗವಹಿಸುವ ಮನಸ್ಸಿದ್ದರೆ, ಅವರು ಮೂವರೂ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಒಟ್ಟಿಗೇ ಪೂರ್ಣಗೊಳಿಸಬಹುದಿತ್ತು ಅಥವಾ ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದ ಪರವಾಗಿ ಪ್ರತಿನಿಧಿಸಲು ಕಳುಹಿಸಬಹುದಿತ್ತು. ಬದಲಾಗಿ, ಈ ಪ್ರಮುಖ ಸಭೆಯ ದಿನದಂದು ಎಸ್‌ಪಿ ಮುಖ್ಯಸ್ಥರು ತಮ್ಮನ್ನು ಮತ್ತು ಪಕ್ಷದ ಪ್ರಮುಖ ನಾಯಕರನ್ನು ಒಕ್ಕೂಟದ ಸಭೆಯಿಂದ ದೂರವಿಡಲು ನಿರ್ಧರಿಸಿದ್ದಾರೆ.

ಅಸಮಾಧಾನ ಶಮನಗೊಳಿಸಲು ಕೈ ಕಸರತ್ತು!...

ಮತ್ತೊಂದೆಡೆ, ಕಾಂಗ್ರೆಸ್ ಈ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಯತ್ನಿಸಿದೆ. ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ತಾವು ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ, ಎಐಸಿಸಿ ಅಧ್ಯಕ್ಷರು ಕೂಡ ಅವರೊಂದಿಗೆ ಮಾತನಾಡಿದ್ದಾರೆ. ಬುಧವಾರ ಉತ್ತರ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇರುವುದರಿಂದ ಅವರಿಗೆ ಖುದ್ದಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅವರ ಬದಲು ಪಕ್ಷದ ಇತರ ನಾಯಕರು ಉಪಸ್ಥಿತರಿರಲಿದ್ದಾರೆ ಎಂದು ವೇಣುಗೋಪಾಲ್ ಮಂಗಳವಾರ ತಿಳಿಸಿದ್ದರು.

ಆದಾಗ್ಯೂ, ನಾಮಪತ್ರ ಸಲ್ಲಿಕೆಯ ಸಮಯ ಮತ್ತು ಅಖಿಲೇಶ್ ಅವರ ಗೈರುಹಾಜರಿಯು ಮೈತ್ರಿಕೂಟದೊಳಗಿನ ಅಸಮಾಧಾನದ ಸಂಕೇತ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪರ್ಧಿಸಲು ಬಯಸುವ ಸೀಟುಗಳ ಸಂಖ್ಯೆಯ ಬಗ್ಗೆ ಕೈ ನಾಯಕರು ಬಹಿರಂಗವಾಗಿ ಮಾತನಾಡುತ್ತಿರುವುದರಿಂದ, ಸೀಟು ಹಂಚಿಕೆ ವಿಚಾರದಲ್ಲಿ ಅಖಿಲೇಶ್ ಒತ್ತಡದಲ್ಲಿದ್ದಾರೆ ಮತ್ತು ಈ ಹೇಳಿಕೆಗಳಿಂದ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಎಸ್‌ಐಆರ್ ವಿಷಯದಲ್ಲಿ ಸರ್ಕಾರದ ವಿರುದ್ಧ ಒಂದಾಗಿ ಹೋರಾಡಲು ವಿರೋಧ ಪಕ್ಷಗಳು ಯತ್ನಿಸುತ್ತಿರುವ ಸಂದರ್ಭದಲ್ಲೇ ಇಂಡಿಯಾ ಒಕ್ಕೂಟದ ಸಭೆಯಿಂದ ದೂರ ಉಳಿಯುವ ಅಖಿಲೇಶ್ ಅವರ ನಿರ್ಧಾರ ಹೊರಬಿದ್ದಿದೆ. ಅಂದಹಾಗೆ, ಈ ಸಭೆಯಿಂದ ದೂರ ಉಳಿಯುತ್ತಿರುವುದು ಸಮಾಜವಾದಿ ಪಕ್ಷವಷ್ಟೆ ಅಲ್ಲದೇ, ಡಿಎಂಕೆ ಮತ್ತು ಆಮ್ ಆದ್ಮಿ ಪಾರ್ಟಿ ಕೂಡ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಈ ಎರಡೂ ಪಕ್ಷಗಳು ಕಾಂಗ್ರೆಸ್ ಜೊತೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಬಹಿರಂಗವಾಗಿಯೇ ವಾಕ್ಸಮರ ನಡೆಸಿದ್ದವು(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net