2024ರ ಚುನಾವಣೆಯೇ ಅಕ್ರಮ! ಬಿಜೆಪಿ ಅಧಿಕಾರಕ್ಕೆ ಬಂದಿದ್ದು ವಾಮಮಾರ್ಗದಿಂದ: ರಾಹುಲ್ ಗಾಂಧಿ ಗಂಭೀರ ಆರೋಪ | Rahul Gandhi

ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಡ್ಡದಾರಿಯಿಂದ: ರಾಹುಲ್ ಗಾಂಧಿ ಗಂಭೀರ ಆರೋಪ
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಡ್ಡದಾರಿಯಿಂದ: ರಾಹುಲ್ ಗಾಂಧಿ ಗಂಭೀರ ಆರೋಪ
Published on: 

ನವದೆಹಲಿ: ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಸಾರ್ವಜನಿಕ ಮಹಾಭಿಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್​, ಸಿಇಸಿ ಜ್ಞಾನೇಶ್ ಕುಮಾರ್ ಹುದ್ದೆಯಲ್ಲಿ ಮುಂದುವರಿಯದಂತೆ ತಡೆಯಲು ತಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಎಚ್ಚರಿಸಿದ್ದಾರೆ. ಬಿಜೆಪಿ ಸರ್ಕಾರವು ಚುನಾವಣಾ ಆಯೋಗವನ್ನು ಬಳಸಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ರಾಹುಲ್ ಗಾಂಧಿ ಮಾತು!

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿ ಉಳಿಯುವುದಿಲ್ಲ. ಈ ವ್ಯಕ್ತಿಯು ಅಧಿಕಾರದಲ್ಲಿ ಮುಂದುವರಿಯದಂತೆ ನೋಡಿಕೊಳ್ಳಲು ನಮ್ಮ ಬಳಿ ಈಗಾಗಲೇ ಸಾಕಷ್ಟು ಪುರಾವೆಗಳಿವೆ. ಆ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ ನಂತರವೂ ಅವರನ್ನು ಮುಂದುವರಿಸಲು ಹಠ ಹಿಡಿದರೆ, ಬಿಜೆಪಿ ಸರ್ಕಾರದ ಆಟವೇನು ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು.

Also Read
ಜ್ಞಾನೇಶ್ ಕುಮಾರ್ ವಿರುದ್ಧ ದೇಶದ್ರೋಹದ ವಿಚಾರಣೆ ನಡೆಯಲಿ: 6 ಪ್ರಮುಖ ಆರೋಪ ಪಟ್ಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ! | Mallikarjun Kharge
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಡ್ಡದಾರಿಯಿಂದ: ರಾಹುಲ್ ಗಾಂಧಿ ಗಂಭೀರ ಆರೋಪ

ಉಭಯ ಸದನಗಳ ಸಂಸತ್ ಸದಸ್ಯರು ಮತ್ತು ಸಾರ್ವಜನಿಕರು ಸೇರಿರುವ ಈ ಸಭೆಯು ಕೇವಲ ಒಂದು ರಾಜಕೀಯ ಸಭೆಯಲ್ಲ, ಅದೊಂದು ಪ್ರಬಲ ರಾಜಕೀಯ ಅಸ್ತ್ರ ಎಂದು ಕರೆದ ರಾಹುಲ್​, ಇದು ಜ್ಞಾನೇಶ್ ಕುಮಾರ್ ಅವರಿಗೆ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ದೇಶದ ಮತಗಳನ್ನು ಅಳಿಸಿಹಾಕಲು ಸಂಚು ಹೂಡಿದ ಪ್ರತಿಯೊಬ್ಬರಿಗೂ ನೇರವಾಗಿ ಗುರಿಯಿಟ್ಟಿರುವ ಅಸ್ತ್ರವಾಗಿದೆ ಎಂದರು. ಸಾಂವಿಧಾನಿಕ ಹುದ್ದೆಗಳಲ್ಲಿರುವವರು ತಾವು ನೇತೃತ್ವ ವಹಿಸುವ ಸಂಸ್ಥೆಗಳ ಹಿಂದೆ ಎಂದೆಂದಿಗೂ ಅಕ್ಕಪಕ್ಕದಲ್ಲಿ ಅಡಗಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

2024ರ ಚುನಾವಣೆಯ ಅಕ್ರಮದ ಬಗ್ಗೆ ಗಂಭೀರ ಪ್ರಶ್ನೆ!

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬರೋಬ್ಬರಿ 13.3 ಕೋಟಿ ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಇದು 2024ರ ಲೋಕಸಭಾ ಚುನಾವಣೆಯ ಅಕ್ರಮದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು. ಒಟ್ಟು ಮತದಾರರ ಪಟ್ಟಿಯಿಂದ ಶೇ. 15ರಷ್ಟು ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಮತ್ತು ಗೆಲುವು ಸಾಧಿಸಿರುವ ಅಭ್ಯರ್ಥಿಗಳ ನಡುವಿನ ಮತಗಳ ಅಂತರ ಕೇವಲ ಶೇ. 3 ರಷ್ಟಿತ್ತು. ಆದರೆ ಆಯೋಗವೇ ಈಗ ಶೇ. 15ರಷ್ಟು ಮತದಾರರು ಮತ ಚಲಾಯಿಸಬಾರದಿತ್ತು ಎಂದು ಹೇಳುತ್ತಿರುವುದು ಆಶ್ಚರ್ಯಕರವಾಗಿದೆ ಎಂದರು. ಅಂದರೆ ಚುನಾವಣಾ ಆಯೋಗವೇ 2024ರ ಲೋಕಸಭಾ ಚುನಾವಣೆಯನ್ನು ಅಕ್ರಮ ಎಂದು ಪರೋಕ್ಷವಾಗಿ ಹೇಳಿದಂತಾಗಿದ್ದು, ಬಿಜೆಪಿಯವರು ಅಕ್ರಮವಾಗಿ ಸಂಸತ್ ಪ್ರವೇಶಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Also Read
ಖರ್ಗೆ ನಿವಾಸದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ಮಹಾಭಿಯೋಗ!....ಗೆಲ್ಲಲಾಗದೆ ಸ್ವಂತ ಸಂಸತ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು | Public Impeachment Motion
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಡ್ಡದಾರಿಯಿಂದ: ರಾಹುಲ್ ಗಾಂಧಿ ಗಂಭೀರ ಆರೋಪ

ಚುನಾವಣಾ ಆಯೋಗದ ಅಧಿಕಾರಿಗಳೇ ಮೊದಲ ಗುರಿ!

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಉನ್ನತ ಸ್ಥಾನದಲ್ಲಿದ್ದಾರೆ, ಅವರನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಆದರೆ ಅವರ ಕೈಯಲ್ಲಿ ಕೊಂಡಿಯಂತೆ ವರ್ತಿಸುತ್ತಿರುವ ಅಧಿಕಾರಿಗಳೇ ನಮ್ಮ ಮೊದಲ ಗುರಿ. ಸಿಇಸಿ ಜ್ಞಾನೇಶ್ ಕುಮಾರ್ ಅಥವಾ ಅವರ ಅಡಿಯಲ್ಲಿರುವ ಇತರೆ ಅಧಿಕಾರಿಗಳು ತಮಗೆ ಸಿಗುವ ವಿನಾಯಿತಿಯಿಂದ ಬಚಾವಾಗಬಹುದು ಎಂದುಕೊಂಡರೆ ಅದು ತಪ್ಪು. ದೇಶದ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಎಂದು ರಾಹುಲ್​ ಎಚ್ಚರಿಕೆ ನೀಡಿದರು.

ದೇಶದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸೇರಿದಂತೆ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್​ ನಾಯಕ, ವಿಪಕ್ಷಗಳು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲಿವೆ ಎಂದರು. ಸಂವಿಧಾನದ ಪ್ರಕಾರ ಸಿಇಸಿ ವಜಾಗೆ ಕಠಿಣ ಪ್ರಕ್ರಿಯೆಗಳಿದ್ದರೂ, ಇಂಡಿಯಾ ಒಕ್ಕೂಟದ ಈ ಸಾಂಕೇತಿಕ ಮಹಾಭಿಯೋಗವು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​).