UPI ಬಳಕೆದಾರರಿಗೆ ಗುಡ್‌ನ್ಯೂಸ್: ಹಣ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ; ಕೇಂದ್ರ ಸರ್ಕಾರದ ಸ್ಪಷ್ಟನೆ! Central Govt on UPI Payments

ಯುಪಿಐ ಬಳಕೆದಾರರಿಗೆ ಗುಡ್‌ನ್ಯೂಸ್!
ಯುಪಿಐ ಬಳಕೆದಾರರಿಗೆ ಗುಡ್‌ನ್ಯೂಸ್!
Published on

ಪ್ರಮುಖ ಮುಖ್ಯಾಂಶಗಳು

  • ಯುಪಿಐ ಬಳಕೆದಾರರಿಗೆ ಗುಡ್‌ನ್ಯೂಸ್!
  • ದೈನಂದಿನ ಡಿಜಿಟಲ್ ಪಾವತಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ
  • ಕೇಂದ್ರ ಸರ್ಕಾರದಿಂದ ಸ್ಪಷ್ಟನೆ
ನವದೆಹಲಿ: ಇತ್ತೀಚೆಗೆ, ಲೋಕಸಭೆಯಲ್ಲಿ ಮಂಡನೆಯಾದ ಪಾವತಿ ಮತ್ತು ವಸಾಹತು ವ್ಯವಸ್ಥೆ ಕಾಯ್ದೆ (PSS Act) ತಿದ್ದುಪಡಿ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದ್ದು, ಇನ್ಮುಂದೆ ಯುಪಿಐ ಪಾವತಿಗಳಿ ಶುಲ್ಕ ಬೀಳಲಿದೆ ಎಂಬ ಆತಂಕ ಜನಸಾಮಾನ್ಯರಲ್ಲಿ ಮೂಡಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಸಾಮಾನ್ಯ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ

(Central Govt on UPI Payments)

ಎಂದು ಭರವಸೆ ನೀಡಿದೆ.

ಸಾಮಾನ್ಯ ಜನರಿಗೆ ಬಿಗ್ ರಿಲೀಫ್!

ಸಾಮಾನ್ಯ ನಾಗರಿಕರು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಯುಪಿಐ ಹಣ ವರ್ಗಾವಣೆಗಳು ಎಂದಿನಂತೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದೈನಂದಿನ ಸಣ್ಣಪುಟ್ಟ ಪಾವತಿಗಳಿಗೆ ಯಾವುದೇ ರೀತಿಯ ಶುಲ್ಕ ಅಥವಾ ತೆರಿಗೆಯನ್ನು ಗ್ರಾಹಕರು ಕಟ್ಟುವ ಅವಶ್ಯಕತೆಯಿಲ್ಲ ಎಂದು ತಿಳಿಸಿದೆ.

ಒಂದು ವೇಳೆ ಭವಿಷ್ಯದಲ್ಲಿ ಯಾವುದೇ ವ್ಯಾಪಾರಿ ರಿಯಾಯಿತಿ ದರ (MDR) ಜಾರಿಗೆ ಬಂದರೂ, ಅದು ಸಾಮಾನ್ಯ ಜನರಿಗೆ ಅನ್ವಯಿಸುವುದಿಲ್ಲ. ಕೇವಲ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮಟ್ಟದ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಇದು ಸೀಮಿತವಾಗಿರುತ್ತದೆ. ಅದೂ ಕೂಡ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಗೆ ಇರುವ ಶುಲ್ಕಕ್ಕಿಂತ ತೀರ ಕಡಿಮೆ ಇರಲಿದೆ ಎಂದು ಸರ್ಕಾರ ತಿಳಿಸಿದೆ.


MDR ಬಗ್ಗೆ ನಿರ್ಧಾರ ಕೈಗೊಳ್ಳಲಿರುವ NPCI ಸಮಿತಿ

ಸಂಸತ್ತಿನಲ್ಲಿ ಅಂಗೀಕಾರವಾಗಲಿರುವ ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ, 2026 ರ ಅಡಿಯಲ್ಲಿ ಈ ಹೊಸ ಚೌಕಟ್ಟು ಬರಲಿದೆ. ಪಿಎಸ್‌ಎಸ್ ಕಾಯ್ದೆಯ ಸೆಕ್ಷನ್ 10A ಗೆ ತಿದ್ದುಪಡಿ ತರಲಾಗುತ್ತಿದ್ದು, ಇದರ ನಂತರ ಎನ್‌ಪಿಸಿಐ (NPCI) ನೇತೃತ್ವದ UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು ಭವಿಷ್ಯದಲ್ಲಿ ಎಂಡಿಆರ್ ಜಾರಿಗೊಳಿಸಬೇಕೆ? ಬೇಡವೇ? ಎಂಬುದನ್ನು ನಿರ್ಧರಿಸಲಿದೆ. ಆದರೆ ಯಾವುದೇ ಕಾರಣಕ್ಕೂ ಎಲ್ಲಾ ಯುಪಿಐ ವಹಿವಾಟುಗಳಿಗೆ ಇದು ಅನ್ವಯಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ಕಾಯ್ದೆಗೆ ತಿದ್ದುಪಡಿ ತರಲು ಅಸಲಿ ಕಾರಣವೇನು?

ಭಾರತದಲ್ಲಿ ಡಿಜಿಟಲ್ ಪಾವತಿಗಳು ಹಿಂದೆಂದಿಗಿಂತಲೂ ಅತಿ ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಜುಲೈ 2026 ಒಂದೇ ತಿಂಗಳಲ್ಲಿ ಬರೋಬ್ಬರಿ 29.9 ಲಕ್ಷ ಕೋಟಿ ರೂ. ಮೌಲ್ಯದ 2,366 ಕೋಟಿ ವಹಿವಾಟುಗಳು ಯುಪಿಐ ಮೂಲಕ ನಡೆದಿವೆ.
ಇಷ್ಟು ದೊಡ್ಡ ಮಟ್ಟದ ನೆಟ್‌ವರ್ಕ್ ಅನ್ನು ಸರಾಗವಾಗಿ ನಡೆಸಲು ಸೈಬರ್ ಭದ್ರತೆ, ವಂಚನೆ ತಡೆಗಟ್ಟುವಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಸೌಕರ್ಯದ ಅಗತ್ಯವಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ದೀರ್ಘಕಾಲದವರೆಗೆ ಗಟ್ಟಿಯಾಗಿ ನಿಲ್ಲಬೇಕು ಮತ್ತು ಹೊಸ ಕಂಪನಿಗಳು ಈ ರಂಗದಲ್ಲಿ ಬೆಳೆಯಲು ಮಾರುಕಟ್ಟೆಯಲ್ಲಿ ಒಂದು ಸುಸ್ಥಿರ ಆದಾಯದ ಮಾದರಿ ಇರಬೇಕಾಗುತ್ತದೆ.

ಕೇವಲ ಸಬ್ಸಿಡಿ ಮೇಲೆ ಮಾತ್ರ ವ್ಯವಸ್ಥೆಯನ್ನು ದೀರ್ಘಕಾಲ ಮುಂದುವರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ತಿದ್ದುಪಡಿ ತರಲಾಗುತ್ತಿದೆ ಎಂದು ಸರ್ಕಾರ ವಿವರಿಸಿದೆ.

ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ!

ಕೆಲವು ಮಾಧ್ಯಮಗಳಲ್ಲಿ ಈ ನೀತಿ ಬದಲಾವಣೆ ಹಿಂದೆ ವಿದೇಶಿ ಅಥವಾ ಬಾಹ್ಯ ಒತ್ತಡಗಳಿವೆ ಎಂಬ ತಪ್ಪು ಸುದ್ದಿಗಳು ಹರಿದಾಡಿದ್ದವು. ಆದರೆ ಇದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಒಂದು ವೇಳೆ ಬಾಹ್ಯ ಒತ್ತಡವಿದ್ದಿದ್ದರೆ ನಾವು 2016ರಲ್ಲಿ ಯುಪಿಐ ಅನ್ನು ಪರಿಚಯಿಸುತ್ತಿರಲಿಲ್ಲ ಮತ್ತು ಇಲ್ಲಿಯವರೆಗೆ ಅದನ್ನು ಉಚಿತವಾಗಿ ನಡೆಸುತ್ತಿರಲಿಲ್ಲ ಎಂದು ಉತ್ತರಿಸಿದೆ.
ಭಾರತದ ಹೆಮ್ಮೆಯಾಗಿರುವ ಯುಪಿಐ ಅನ್ನು ಮುಂದಿನ ದಶಕಗಳ ಕಾಲ ಸುರಕ್ಷಿತವಾಗಿ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಇಡಲು ಸರ್ಕಾರ ಬದ್ಧವಾಗಿದೆ. ಸಾರ್ವಜನಿಕರು ಯಾವುದೇ ಪರಿಶೀಲಿಸದ ಸುಳ್ಳು ಸಂದೇಶಗಳನ್ನು ನಂಬಿ ಫಾರ್ವರ್ಡ್ ಮಾಡಬೇಡಿ. ಕೇಂದ್ರ ಹಣಕಾಸು ಸಚಿವಾಲಯ, ಆರ್‌ಬಿಐ (RBI) ಅಥವಾ ಎನ್‌ಪಿಸಿಐ (NPCI) ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ ಎಂದು ಸರ್ಕಾರ ಮನವಿ ಮಾಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net