ದೆಹಲಿ-ಮುಂಬೈ ಏರ್ಪೋರ್ಟ್ಗಳಲ್ಲಿ ಭರ್ಜರಿ ಬೇಟೆ: ಗೋಲ್ಡ್ ಸ್ಮಗ್ಲರ್ಸ್ ಹೆಡೆಮುರಿ ಕಟ್ಟಿದ ಕಸ್ಟಮ್ಸ್ ಅಧಿಕಾರಿಗಳು! Gold Smuggling
ಕಸ್ಟಮ್ಸ್ ಅಧಿಕಾರಿಗಳ ಚಿನ್ನದ ಬೇಟೆ
Published on:
Copied
Follow Us
ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಗೋಲ್ಡ್ ಸ್ಮಗ್ಲರ್ಸ್ (Gold Smuggling) ದಿನಕ್ಕೊಂದು ಹೊಸ ಐಡಿಯಾ ಹುಡುಕುತ್ತಿದ್ದಾರೆ. ಆದರೆ, ಇವರ ಕಿಲಾಡಿ ಬುದ್ಧಿಗಿಂತ ಅಧಿಕಾರಿಗಳ ಹದ್ದಿನ ಕಣ್ಣೇ ತೀಕ್ಷವಾಗಿರುತ್ತದೆ ಎಂದು ಮತ್ತೊಮ್ಮೆ ಸಾಭಿತಾಗಿದೆ.
ಇತ್ತೀಚೆಗೆ ದೆಹಲಿ ಮತ್ತು ಮುಂಬೈ ಏರ್ಪೋರ್ಟ್ಗಳಲ್ಲಿ ಸರಣಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ (ಜೂ.3) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 3.8 ಕೋಟಿ ರೂಪಾಯಿ ಮೌಲ್ಯದ 2,755 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಒಬ್ಬ ಪ್ರಯಾಣಿಕನನ್ನು ರೆಡ್ ಹ್ಯಾಂಡಾಗಿ ಅರೆಸ್ಟ್ ಮಾಡಿದ್ದಾರೆ.
ಜೂನ್ 1 ರಂದು ಶಾರ್ಜಾದಿಂದ ವಿಮಾನ ಸಂಖ್ಯೆ IX-136 ಮೂಲಕ ಈತ ದೆಹಲಿಗೆ ಬಂದಿಳಿದಿದ್ದ. ಕಸ್ಟಮ್ಸ್ ಅಧಿಕಾರಿಗಳಿಗೆ ಈತನ ಮೇಲೆ ಮೊದಲೇ ಡೌಟ್ ಇತ್ತು. ಹಾಗಾಗಿ ವಿಮಾನ ನಿಲ್ದಾಣದ ಬಸ್ ಗೇಟ್ನಲ್ಲೇ ಈತನನ್ನು ತಡೆದು ನಿಲ್ಲಿಸಲಾಯಿತು. ಕೇವಲ ಮನುಷ್ಯನನ್ನು ತಪಾಸಣೆ ಮಾಡಿದರೆ ಸಾಲದು ಎಂದು ಅಧಿಕಾರಿಗಳು ಇಡೀ ವಿಮಾನವನ್ನೇ ಜಾಲಾಡಿದ್ದಾರೆ.
ಆಗ ವಿಮಾನದ ಸೀಟ್ ನಂಬರ್ 23C ಯಲ್ಲಿ ಶಂಕಿತ ಪ್ರಯಾಣಿಕ ಕುಳಿತಿದ್ದ, ಮುಂದಿನ ಸೀಟ್ (22C) ಅಡಿಯಲ್ಲಿ ಎರಡು ಕಪ್ಪು ಬಣ್ಣದ ಬ್ಯಾಗ್ಗಳನ್ನು ಬಚ್ಚಿಡಲಾಗಿತ್ತು. ಈ ಬ್ಯಾಗ್ಗಳನ್ನು ಓಪನ್ ಮಾಡಿ ನೋಡಿದಾಗ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅದರೊಳಗೆ ಮೆತ್ತಗಿನ ಪೇಸ್ಟ್ (Paste) ರೂಪದಲ್ಲಿ ಚಿನ್ನವನ್ನು ಅಡಗಿಸಿಡಲಾಗಿತ್ತು.
ಸುಮಾರು 3,550 ಗ್ರಾಂ ತೂಕದ ಈ ಪೇಸ್ಟ್ನಿಂದ 2,755 ಗ್ರಾಂ ಅಪ್ಪಟ ಚಿನ್ನವನ್ನು ಬೇರ್ಪಡಿಸಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 3,80,48,523 ಎಂದು ಅಂದಾಜಿಸಲಾಗಿದೆ. ಸದ್ಯ ಚಿನ್ನವನ್ನು ಜಪ್ತಿ ಮಾಡಿ, ಕಸ್ಟಮ್ಸ್ ಕಾಯ್ದೆಯಡಿ ಕಿಲಾಡಿ ಪ್ರಯಾಣಿಕನನ್ನು ಜೈಲಿಗಟ್ಟಲಾಗಿದೆ.
ಇದೇ ದೆಹಲಿ ಏರ್ಪೋರ್ಟ್ನಲ್ಲಿ ಮೇ 13 ರಂದು ನಡೆದ ಇನ್ನೊಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಜೆಡ್ಡಾ ಮತ್ತು ದೋಹಾದಿಂದ ಬೇರೆ ಬೇರೆ ವಿಮಾನಗಳಲ್ಲಿ ಬಂದಿದ್ದ ಇಬ್ಬರು ಪ್ರಯಾಣಿಕರು ತಂದಿದ್ದ ನೀರಿನ ಬಾಟಲಿಗಳೇ ಕಸ್ಟಮ್ಸ್ ಅಧಿಕಾರಿಗಳಿಗೆ ಸಂಶಯ ತರಿಸಿದ್ದವು.
ಬಾಟಲಿಗಳನ್ನು ನಾರ್ಮಲ್ ಆಗಿ ನೋಡಿದರೆ ಏನೂ ಗೊತ್ತಾಗುತ್ತಿರಲಿಲ್ಲ. ಆದರೆ ಅದರ ಕೆಳಭಾಗವನ್ನು ಕಳ್ಳರು ವಿಶೇಷವಾಗಿ ನಕಲಿ ತಳವನ್ನಾಗಿ ಡಿಸೈನ್ ಮಾಡಿದ್ದರು. ಅದರೊಳಗೆ ಬೆಳ್ಳಿ ಬಣ್ಣ ಬಳಿದಿದ್ದ ಕಚ್ಚಾ ಚಿನ್ನದ ವೃತ್ತಾಕಾರದ ಕಾಯಿನ್ಗಳನ್ನು ಫಿಕ್ಸ್ ಮಾಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಅಧಿಕಾರಿಯೊಬ್ಬರು ನೀಲಿ ಬಣ್ಣದ ವಾಟರ್ ಬಾಟಲಿಯನ್ನು ನೆಲಕ್ಕೆ ಜೋರಾಗಿ ಕುಟ್ಟಿದಾಗ ಒಳಗಿದ್ದ ಚಿನ್ನದ ತಳಭಾಗ ಕಳಚಿ ಬಿದ್ದಿವೆ. ಇವರಿಂದ ಒಟ್ಟು 233.5 ಗ್ರಾಂ ಮತ್ತು 117 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇತ್ತ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಡಿಆರ್ಐ ಅಧಿಕಾರಿಗಳು ದೊಡ್ಡ ಚಿನ್ನದ ಜಾಲವನ್ನು ಭೇದಿಸಿದ್ದಾರೆ. ಇಲ್ಲಿ 4.8 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ವಿದೇಶಿ ಮೂಲದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಟ್ವಿಸ್ಟ್ ಏನೆಂದರೆ, ವಿಮಾನ ನಿಲ್ದಾಣದ ಒಳಗಿರುವ ಫುಡ್ ಸ್ಟಾಲ್ ನೌಕರನೇ ಈ ಕಳ್ಳಸಾಗಣೆಗೆ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಯಾಣಿಕರು ತರುವ ಚಿನ್ನವನ್ನು ಏರ್ಪೋರ್ಟ್ನಿಂದ ಹೊರಗೆ ಸಾಗಿಸಲು ಈತ ಸಹಾಯ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈತನನ್ನೂ ಸೇರಿಸಿ ಇಡೀ ಸಿಂಡಿಕೇಟ್ನ್ನು ಅಧಿಕಾರಿಗಳು ಕಟಕಟೆಗೆ ಎಳೆದಿದ್ದಾರೆ, (ಏಜನ್ಸೀಸ್).