ಚಿನ್ನದ ಬೆಲೆಯಲ್ಲಿ ಶೇ.24 ರಷ್ಟು ಕುಸಿತ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಪಾತಾಳಕ್ಕೆ ಇಳಿದ ಬಂಗಾರ: ಕಾರಣವೇನು..? Gold Price Crash

ಚಿನ್ನದ ಬೆಲೆಯಲ್ಲಿ ಶೇ.24 ರಷ್ಟು ಕುಸಿತ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಪಾತಾಳಕ್ಕೆ ಇಳಿದ ಬಂಗಾರ: ಕಾರಣವೇನು..?
ಚಿನ್ನದ ಬೆಲೆಯಲ್ಲಿ ಶೇ.24 ರಷ್ಟು ಕುಸಿತ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಪಾತಾಳಕ್ಕೆ ಇಳಿದ ಬಂಗಾರ: ಕಾರಣವೇನು..?
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ದರದಲ್ಲಿ 2016ರ ನಂತರದ ದೊಡ್ಡ ಕುಸಿತ: ಪ್ರತಿ ಔನ್ಸ್ ಚಿನ್ನದ ಬೆಲೆ 4,100 ಡಾಲರ್‌ಗಿಂತಲೂ ಕೆಳಕ್ಕೆ!
  • ಹೂಡಿಕೆದಾರರಿಗೆ ಬಿಗ್ ಶಾಕ್: ಸುರಕ್ಷಿತ ಆಶ್ರಯ ತಾಣದ ಮೌಲ್ಯ ಕಳೆದುಕೊಂಡ ಹಳದಿ ಲೋಹ; ಪಾತಾಳಕ್ಕೆ ಕುಸಿದ ದರ.
  • ಷೇರು ಮಾರುಕಟ್ಟೆ ಪೆಟ್ಟು, ಚಿನ್ನಕ್ಕೆ ನಷ್ಟ: ಟೆಕ್ ಷೇರುಗಳ ಪತನದಿಂದಾಗಿ ಚಿನ್ನ ಮಾರಿ ನಗದು ಮಾಡಿಕೊಳ್ಳುತ್ತಿರುವ ಹೂಡಿಕೆದಾರರು.
  • ಬಲಿಷ್ಠ ಡಾಲರ್ ಅಬ್ಬರ: ಅಮೆರಿಕ ಫೆಡ್ ಬಡ್ಡಿ ದರ ಏರಿಕೆಯ ಭೀತಿಯಿಂದಾಗಿ ಮಂಕಾದ ಬಂಗಾರದ ಕನ್ನಡಿ!
ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಪಾಲಿಗೆ ಅತ್ಯಂತ ಸುರಕ್ಷಿತ ಆಶ್ರಯ ತಾಣ ಎಂದೇ ಪರಿಗಣಿಸಲ್ಪಟ್ಟಿದ್ದ ಚಿನ್ನದ(Gold Price Crash) ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವಾದ ಪ್ರತಿ ಔನ್ಸ್‌ಗೆ 5,417 ಡಾಲರ್‌ ತಲುಪಿದ್ದ ಹಳದಿ ಲೋಹದ ಬೆಲೆ, ಅಲ್ಲಿಂದ ಬರೋಬ್ಬರಿ ಶೇ.24 ರಷ್ಟು ಕುಸಿತ ಕಂಡಿದೆ.
ಬುಧವಾರದ ವಾಣಿಜ್ಯ ವಹಿವಾಟಿನಲ್ಲಿ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ 4,100 ಡಾಲರ್‌ಗಿಂತಲೂ ಕೆಳಕ್ಕೆ ಕುಸಿದಿದ್ದು, ಜೂನ್ ತ್ರೈಮಾಸಿಕದಲ್ಲಿ ಶೇ. 12 ರಷ್ಟು ನಷ್ಟ ಅನುಭವಿಸಿದೆ. ಇದು 2016ರ ಡಿಸೆಂಬರ್ ನಂತರ ದಾಖಲಾದ ಅತ್ಯಂತ ಗರಿಷ್ಠ ತ್ರೈಮಾಸಿಕ ಕುಸಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಮೇಲೆ ಭಾರಿ ಹೂಡಿಕೆ ಮಾಡಿದ್ದ ಮಧ್ಯಮ ಮತ್ತು ದೊಡ್ಡ ಹೂಡಿಕೆದಾರರಲ್ಲಿ ಈ ದಿಢೀರ್ ಇಳಿಕೆ ಭಾರಿ ಆತಂಕ ಸೃಷ್ಟಿಸಿದೆ.

ಚಿನ್ನದ ಬೆಲೆ ದಿಢೀರ್ ಕುಸಿಯಲು ಕಾರಣಗಳೇನು?

ಷೇರು ಮಾರುಕಟ್ಟೆ ಹಾಗೂ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ತಲ್ಲಣಗಳು ಚಿನ್ನದ ಮೌಲ್ಯ ಕುಸಿಯುವಂತೆ ಮಾಡಿವೆ. ಪ್ರಮುಖ ಕಾರಣಗಳು ಇಲ್ಲಿವೆ.
ಟೆಕ್ ಷೇರುಗಳ ಪತನ ಮತ್ತು ನಗದು ಬಿಕ್ಕಟ್ಟು: ಜಾಗತಿಕವಾಗಿ AI ಆಧಾರಿತ ತಂತ್ರಜ್ಞಾನ ಕಂಪನಿಗಳ ಷೇರುಗಳು ಭಾರಿ ಕುಸಿತ ಕಂಡಿವೆ. ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲು ಮತ್ತು ಮಾರ್ಜಿನ್ ಮನಿ ಹೊಂದಿಸಲು ಹೂಡಿಕೆದಾರರು ತಮ್ಮಲ್ಲಿದ್ದ ಚಿನ್ನವನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಿ ನಗದನ್ನಾಗಿ ಪರಿವರ್ತಿಸುತ್ತಿದ್ದಾರೆ.
ಬಲಿಷ್ಠಗೊಂಡ ಅಮೆರಿಕನ್ ಡಾಲರ್: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ನ ಕಠಿಣ ಆರ್ಥಿಕ ನೀತಿಗಳಿಂದಾಗಿ ಡಾಲರ್ ಸೂಚ್ಯಂಕವು ಕಳೆದ ಒಂದು ವರ್ಷದ ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ಡಾಲರ್ ಬಲಿಷ್ಠಗೊಂಡಾಗ ಅಂತಾರಾಷ್ಟ್ರೀಯ ಖರೀದಿದಾರರಿಗೆ ಚಿನ್ನದ ಬೆಲೆ ದುಬಾರಿಯಾಗಲಿದ್ದು, ಬೇಡಿಕೆ ಕುಸಿಯುತ್ತದೆ.
ಬಡ್ಡಿ ದರ ಏರಿಕೆಯ ಭೀತಿ: ಅಮೆರಿಕದ ಹೊಸ ಫೆಡ್ ಮುಖ್ಯಸ್ಥ ಕೆವಿನ್ ವಾರ್ಶ್ ಹಣದುಬ್ಬರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ. ಈ ವರ್ಷ ಮೂರು ಬಾರಿ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಬಡ್ಡಿ ದರ ಹೆಚ್ಚಾದಾಗ ಹೂಡಿಕೆದಾರರು ಯಾವುದೇ ಬಡ್ಡಿ ಆದಾಯ ನೀಡದ ಚಿನ್ನದ ಮೇಲಿನ ಹೂಡಿಕೆಯನ್ನು ಹಿಂತೆಗೆದುಕೊಂಡು, ಹೆಚ್ಚಿನ ಲಾಭ ಕೊಡುವ ಇತರೆ ಬಾಂಡ್‌ಗಳತ್ತ ಮುಖ ಮಾಡುತ್ತಾರೆ.

ಬೆಳ್ಳಿಗೂ ತಟ್ಟಿದ ಪೆಟ್ಟು!

ಬಂಗಾರದ ದರ ಇಳಿಕೆಯ ಬೆನ್ನಲ್ಲೇ ಬೆಳ್ಳಿಯ ಮೌಲ್ಯದಲ್ಲೂ ಭಾರಿ ಕಸಿತವಾಗಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಬೆಳ್ಳಿ ಶೇ 17.6 ರಷ್ಟು ಕುಸಿದಿದ್ದು, ಇದು 2022ರ ನಂತರದ ಅತಿ ದೊಡ್ಡ ಪತನವಾಗಿದೆ. ಜನವರಿಯಲ್ಲಿ ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಪ್ರತಿ ಔನ್ಸ್‌ಗೆ 117 ಡಾಲರ್‌ಗೆ ಹೋಲಿಸಿದರೆ, ಬೆಳ್ಳಿ ಈಗ ಶೇ. 47 ರಷ್ಟು ಪಾತಾಳಕ್ಕೆ ಕುಸಿದಿದೆ. 2024 ಮತ್ತು 2025 ರ ಅವಧಿಯಲ್ಲಿ ಚಿನ್ನ ಶೇ. 65 ಕ್ಕೂ ಹೆಚ್ಚು ಹಾಗೂ ಬೆಳ್ಳಿ ಶೇ. 148 ರಷ್ಟು ಜಿಗಿತ ಕಂಡಿದ್ದವು. ಆದರೆ ಈಗ ಲಾಭದ ನಗದೀಕರಣದಿಂದಾಗಿ ಮಾರುಕಟ್ಟೆ ಸಂಪೂರ್ಣ ತಲೆಕೆಳಗಾಗಿದೆ.

ರಾಜತಾಂತ್ರಿಕತೆಗಿಂತ ಆರ್ಥಿಕ ನೀತಿಯೇ ಮೇಲುಗೈ

ಸಾಮಾನ್ಯವಾಗಿ ಜಾಗತಿಕ ರಾಜಕೀಯ ಉದ್ವಿಗ್ನತೆ ಇದ್ದಾಗ ಚಿನ್ನದ ಬೆಲೆ ಏರುತ್ತದೆ. ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಒಪ್ಪಂದದ ವಿಚಾರದಲ್ಲಿ ಗೊಂದಲ ಮುಂದುವರಿದಿದ್ದರೂ ಸಹ, ಚಿನ್ನದ ಬೆಲೆ ಏರಿಕೆಯಾಗಿಲ್ಲ. ಇರಾನ್ ಅನಿರ್ದಿಷ್ಟಾವಧಿ ಪರಮಾಣು ತಪಾಸಣೆಗೆ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಇರಾನ್ ನಿರಾಕರಿಸಿದೆ. ಆದರೂ, ಹೂಡಿಕೆದಾರರು ಸದ್ಯ ಜಾಗತಿಕ ಯುದ್ಧದ ಭೀತಿಗಿಂತ ಅಮೆರಿಕದ ಬಡ್ಡಿ ದರಗಳ ಮೇಲೆಯೇ ಹೆಚ್ಚು ಕಣ್ಣಿಟ್ಟಿರುವುದರಿಂದ ಚಿನ್ನದ ರಕ್ಷಣಾತ್ಮಕ ಮೌಲ್ಯ ಸದ್ಯಕ್ಕೆ ಮಂಕಾಗಿದೆ.
ಮುಂದಿನ ದಿನಗಳಲ್ಲಿ ಪ್ರಕಟವಾಗಲಿರುವ ಅಮೆರಿಕದ ವೈಯಕ್ತಿಕ ಬಳಕೆಯ ವೆಚ್ಚದ (PCE) ಹಣದುಬ್ಬರ ದತ್ತಾಂಶದ ಮೇಲೆ ಚಿನ್ನದ ಮುಂದಿನ ನಡೆ ನಿರ್ಧಾರವಾಗಲಿದೆ. ಮತ್ತೊಂದೆಡೆ ಕಡಲ ಆಚೆ ದುಬೈ ಕಮೋಡಿಟೀಸ್ ಎಕ್ಸ್‌ಚೇಂಜ್ ಒಂದೇ ದಿನದ ಸೆಟಲ್‌ಮೆಂಟ್ ಒಪ್ಪಂದ ತರುತ್ತಿರುವುದು ಮತ್ತು ಘಾನಾ ದೇಶವು ಅಂತಾರಾಷ್ಟ್ರೀಯ ಎಲ್‌ಬಿಎಂಎ (LBMA) ಮಾನದಂಡಗಳಿಗೆ ಒಗ್ಗಿಕೊಳ್ಳುತ್ತಿರುವುದು ಜಾಗತಿಕ ಬುಲಿಯನ್ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net