ಭಾರಿ ಕುಸಿತ ಕಂಡ ಚಿನ್ನ, ಬೆಳ್ಳಿ ದರ: ಅಮೆರಿಕ-ಇರಾನ್ ಉದ್ವಿಗ್ನತೆಯಿಂದ ಹೂಡಿಕೆದಾರರಿಗೆ ಶಾಕ್! Gold-Silver Price Drop

ಭಾರಿ ಕುಸಿತ ಕಂಡ ಚಿನ್ನ, ಬೆಳ್ಳಿ ದರ: ಅಮೆರಿಕ-ಇರಾನ್ ಉದ್ವಿಗ್ನತೆಯಿಂದ ಹೂಡಿಕೆದಾರರಿಗೆ ಶಾಕ್!
ಭಾರಿ ಕುಸಿತ ಕಂಡ ಚಿನ್ನ, ಬೆಳ್ಳಿ ದರ: ಅಮೆರಿಕ-ಇರಾನ್ ಉದ್ವಿಗ್ನತೆಯಿಂದ ಹೂಡಿಕೆದಾರರಿಗೆ ಶಾಕ್!
Published on
ನವದೆಹಲಿ: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಆರ್ಥಿಕ ಹಾಗೂ ಭೌಗೋಳಿಕ ರಾಜಕೀಯ ಏರುಪೇರುಗಳು ದೇಶೀಯ ಮಾರುಕಟ್ಟೆಯ ಮೇಲೂ ತೀವ್ರ ಪರಿಣಾಮ ಬೀರಿವೆ. ಅಖಿಲ ಭಾರತ ಸರಾಫಾ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ, ಬುಧವಾರ 99.9 ರಷ್ಟು ಶುದ್ಧತೆಯ ಚಿನ್ನದ(Gold-Silver Price Drop) ಬೆಲೆ ಶೇ,1.14 ರಷ್ಟು (1,850 ರೂ.) ಕುಸಿದು, ಪ್ರತಿ 10 ಗ್ರಾಂಗೆ 1,59,600 ರೂಪಾಯಿಗಳಿಗೆ ತಲುಪಿದೆ. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಚಿನ್ನದ ದರ ಪ್ರತಿ 10 ಗ್ರಾಂಗೆ 1,61,450 ರೂಪಾಯಿ ಇತ್ತು.
ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿಯ ಬೆಲೆಯೂ ಸಹ ಗಣನೀಯವಾಗಿ ಇಳಿಕೆ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ಬೆಳ್ಳಿ ದರ ಕೆಜಿಗೆ 1,500 ರೂಪಾಯಿ (ಶೇ. 0.55) ಕುಸಿದು, 2,69,500 ರೂಪಾಯಿಗಳಿಗೆ ಬಂದು ನಿಂತಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 2,71,000 ರೂಪಾಯಿ ದಾಖಲಾಗಿತ್ತು.

ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳೇನು..?

ಮಾರುಕಟ್ಟೆ ತಜ್ಞರ ಪ್ರಕಾರ, ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಜಾಗತಿಕ ರಾಜಕಾರಣ ಹಾಗೂ ಯುಎಸ್ ಹಣಕಾಸು ನೀತಿಗಳೇ ಮುಖ್ಯ ಕಾರಣಗಳಾಗಿವೆ.
ಅಮೆರಿಕ-ಇರಾನ್ ಉದ್ವಿಗ್ನತೆ: ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಡುವಲ್ಲಿ ಉಂಟಾಗಿರುವ ವಿಳಂಬ ಮತ್ತು ಗೊಂದಲಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ.
ಬಡ್ಡಿದರ ಹೆಚ್ಚಳದ ಭೀತಿ: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಹಣದುಬ್ಬರ ನಿಯಂತ್ರಿಸಲು ಬಡ್ಡಿದರಗಳನ್ನು ದೀರ್ಘಾವಧಿಯವರೆಗೆ ಹೆಚ್ಚಿನ ಮಟ್ಟದಲ್ಲೇ ಉಳಿಸಿಕೊಳ್ಳಬಹುದು ಎಂಬ ಭೀತಿ ಎದುರಾಗಿದೆ. ಇದು ಪ್ರಮುಖ ಲೋಹಗಳ ಮೇಲಿನ ಹೂಡಿಕೆಯ ಆಕರ್ಷಣೆಯನ್ನು ತಗ್ಗಿಸಿದೆ ಎಂದು ಲೆಮನ್ ಮಾರ್ಕೆಟ್ಸ್ ಡೆಸ್ಕ್‌ನ ಸಂಶೋಧನಾ ವಿಶ್ಲೇಷಕ ಗೌರವ್ ಗರ್ಗ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿ

ದೇಶೀಯ ಮಾರುಕಟ್ಟೆ ಮಾತ್ರವಲ್ಲದೆ ಜಾಗತಿಕವಾಗಿಯೂ ಬೆಲೆ ಇಳಿಕೆಯ ಟ್ರೆಂಡ್ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ದರ ಶೇ 0.54 ರಷ್ಟು ಕುಸಿದು ಪ್ರತಿ ಔನ್ಸ್‌ಗೆ 4,463.84 ಯುಎಸ್ ಡಾಲರ್‌ಗೆ ತಲುಪಿದೆ. ಹಾಗೆಯೇ, ಜಾಗತಿಕ ಬೆಳ್ಳಿ ದರವೂ ಸಹ ಶೇ,1 ರಷ್ಟು ಇಳಿಕೆಯಾಗುವ ಮೂಲಕ ಪ್ರತಿ ಔನ್ಸ್‌ಗೆ 74.43 ಯುಎಸ್ ಡಾಲರ್ ತಲುಪಿದೆ.
ಅಮೆರಿಕ ಹಾಗೂ ಇರಾನ್ ನಡುವಿನ ಬಿಕ್ಕಟ್ಟು ಶಮನಗೊಳ್ಳುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸದ ಕಾರಣ ಚಿನ್ನದ ಬೆಲೆಗಳ ಮೇಲೆ ನಿರಂತರ ಒತ್ತಡ ಮುಂದುವರಿದಿದೆ ಎಂದು ಮಿರೆ ಅಸೆಟ್ ಶೇರ್‌ಖಾನ್‌ನ ಕಮೋಡಿಟಿ ಮುಖ್ಯಸ್ಥ ಪ್ರವೀಣ್ ಸಿಂಗ್ ವಿಶ್ಲೇಷಿಸಿದ್ದಾರೆ. ಹಳದಿ ಲೋಹದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದ್ದ ಹೂಡಿಕೆದಾರರಿಗೆ, ಈ ಹಠಾತ್ ಇಳಿಕೆ ಸಣ್ಣ ಆಘಾತ ನೀಡಿದಂತಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net