Flydubai: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಮೇಲೆ ಹಲ್ಲೆ ಮಾಡಿದ ಸಹ-ಪೈಲಟ್ ಅನ್ನು ಧೈರ್ಯದಿಂದ ಹಿಡಿದು ಕಟ್ಟಿಹಾಕಿದ್ದ ಇಸ್ರೇಲಿ ಪ್ರಯಾಣಿಕರು ಗಂಭೀರ ಆರೋಪವೊಂದನ್ನು ಮಾಡಿದ್ದು, ವಿಮಾನದ ಕೆಲವು ಸಿಬ್ಬಂದಿ ಆ ದಾಳಿಕೋರನನ್ನು ಬಿಡುಗಡೆ ಮಾಡುವಂತೆ ತಮ್ಮ ಬಳಿ ಒತ್ತಾಯ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವ ಪ್ರಕಾರ, ಪ್ರಯಾಣಿಕರು ಸಿಬ್ಬಂದಿಯ ಮಾತಿಗೆ ಒಪ್ಪಲಿಲ್ಲ ಮತ್ತು ಅವರ ಮಾತನ್ನು ಕೇಳದೆ ಸಿಬ್ಬಂದಿಯನ್ನೇ ಕಾಕ್‌ಪಿಟ್ ಜಾಗದಿಂದ ದೂರ ಕರೆದುಕೊಂಡು ಹೋಗಿ ಕೂರಿಸಿದರು. ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಆ ವಿಮಾನದಲ್ಲಿ ನಡೆದ ಈ ಘಟನೆಯ ಬಗ್ಗೆ, ದಾಳಿಕೋರನನ್ನು ಮಟ್ಟಹಾಕಲು ಸಹಾಯ ಮಾಡಿದ್ದ ನಾಲ್ವರು ಇಸ್ರೇಲಿ ಪ್ರಯಾಣಿಕರ ಪೈಕಿ ತ್ವಿಕಾ ಮಾನೆಸ್ ಮತ್ತು ಡೇನಿಯಲ್ ಸ್ಕ್ಲಿಚ್ಟರ್ ಎಂಬಿಬ್ಬರು ಅಮೆರಿಕದ ಆ ಪತ್ರಿಕೆಗೆ ಈ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನ ಸಿಬ್ಬಂದಿ ಉಗ್ರನನ್ನು ಬಿಡುಗಡೆ ಮಾಡುವಂತೆ ನಮ್ಮನ್ನು ಕೇಳುತ್ತಿದ್ದರು, ನಮಗೆ ಯಾಕೆ ಎಂದು ಅಚ್ಚರಿಯಾಯಿತು ಎಂದು ಮಾನೆಸ್ ಹೇಳಿದ್ದಾರೆ. ಈ ಬೇಡಿಕೆಯು ಸಿಬ್ಬಂದಿಯ ಬಗ್ಗೆ ಇತರ ಪ್ರಯಾಣಿಕರಲ್ಲಿ ಅನುಮಾನ ಮೂಡಿಸಿತು ಎಂದು ಸ್ಕ್ಲಿಚ್ಟರ್ ಹೇಳಿದ್ದಾರೆ, ಆದರೂ ಯಾವುದೇ ಸಿಬ್ಬಂದಿ ಈ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿಲ್ಲ. ನಡೆಯುತ್ತಿರುವ ತನಿಖೆಯನ್ನು ಉಲ್ಲೇಖಿಸಿ ಫ್ಲೈದುಬೈ ಸಿಬ್ಬಂದಿಯ ನಡವಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಇದು ತನಿಖಾಧಿಕಾರಿಗಳನ್ನು ಬೆಂಬಲಿಸುತ್ತಿದೆ ಮತ್ತು ಅಧಿಕಾರಿಗಳು ಹಾಗೂ ನಿಯಂತ್ರಕರೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅದು ತಿಳಿಸಿದೆ.
ಒಮಾನ್ ದೇಶದವನೆಂದು ತಿಳಿದುಬಂದಿರುವ ಸಹ-ಪೈಲಟ್ ಹಮಾಮ್ ಅಲ್-ಹಮ್ಮಮಿ ಎಂಬಾತ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ನಂತರವೇ ಈ ಎಲ್ಲಾ ಗಲಾಟೆಗಳು ನಡೆದವು. ವಿಮಾನದಲ್ಲಿದ್ದ ಸಣ್ಣ ಕೊಡಲಿಯಿಂದ ಆತ ಹಲ್ಲೆ ನಡೆಸಿದ್ದರಿಂದ ಕ್ಯಾಪ್ಟನ್ ಮಚ್ಚಾರ್ಗೆ ಗಾಯಗಳಾಗಿದ್ದರೂ ಸಹ, ಹೇಗಾದರೂ ಮಾಡಿ ಕಾಕ್‌ಪಿಟ್ ಬಾಗಿಲನ್ನು ತೆಗೆದರು. ಆಗ ಮಾನೆಸ್, ಯಾನಿವ್ ಹಾಯೌನ್ ಮತ್ತು ಅಸಾಫ್ ರಾಜುನ್ ಎಂಬ ಪ್ರಯಾಣಿಕರು ಒಳಗೆ ನುಗ್ಗಿ ಆ ಸಹ-ಪೈಲಟ್ ಅನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ನಂತರ ಪ್ರಯಾಣಿಕರು ಆತನನ್ನು ಮುಖ ಕೆಳಗೆ ಬರುವಂತೆ ನೆಲದ ಮೇಲೆ ಒತ್ತಿಹಿಡಿದರು. ಬಳಿಕ ಸ್ಕ್ಲಿಚ್ಟರ್ ತಂದಿದ್ದ ಜಿಪ್ ಟೈಗಳು ಮತ್ತು ಹೆಡ್‌ಫೋನ್ ವೈರ್‌ಗಳನ್ನು ಬಳಸಿ ಆತನ ಕೈಗಳನ್ನು ಹಿಂದೆ ಕಟ್ಟಿಹಾಕಿದರು.
ಆರೋಪಿಯನ್ನು ಬಿಡುವಂತೆ ಸಿಬ್ಬಂದಿ ಒತ್ತಾಯಿಸಿದಾಗ, ನಾವು ಆತನನ್ನು ಕೊಲ್ಲಲು ಬಂದಿಲ್ಲ, ಬದಲಿಗೆ ಆತ ನಮ್ಮನ್ನು ಕೊಲ್ಲಬಾರದು ಎಂದಷ್ಟೇ ಬಯಸಿದ್ದೇವೆ ಎಂದು ಮಾನೆಸ್ ತಿರುಗೇಟು ನೀಡಿದರು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಆ ದಾಳಿಕೋರನು ಮುಂದೆ ತನಿಖೆಗೆ ಸಿಗಬೇಕು ಎಂಬ ಕಾರಣಕ್ಕೆ ಪ್ರಯಾಣಿಕರು ಆತನಿಗೆ ಆಕ್ಸಿಜನ್ ಮಾಸ್ಕ್ ಹಾಕಿದ್ದರು ಎಂದು ಸ್ಕ್ಲಿಚ್ಟರ್ ವಿವರಿಸಿದ್ದಾರೆ. ವಿಮಾನದಲ್ಲಿ ನಾವೇ ನಾಯಕರು ಎಂದು ಸಿಬ್ಬಂದಿ ವಾದ ಮಾಡಿ, ಕಾಕ್‌ಪಿಟ್ ಹತ್ತಿರವಿದ್ದ ಪ್ರಯಾಣಿಕರನ್ನು ಅಲ್ಲಿಂದಹೋಗುವಂತೆ ಒತ್ತಾಯಿಸಿದಾಗ ಈ ಗಲಾಟೆ ಮತ್ತಷ್ಟು ಹೆಚ್ಚಾಯಿತು ಎಂದು ಇಬ್ಬರೂ ತಿಳಿಸಿದ್ದಾರೆ.
ಪ್ರಯಾಣಿಕರು ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ವಿಮಾನದ ಐದನೇ ಅಥವಾ ಆರನೇ ಸಾಲಿನ ಸೀಟುಗಳಲ್ಲಿ ಕೂರಿಸಿದರು ಮತ್ತು ಮತ್ತೊಬ್ಬ ಪ್ರಯಾಣಿಕರು ಕಾಕ್‌ಪಿಟ್ ಬಾಗಿಲಿನ ಬಳಿ ಕಾವಲಾಗಿ ನಿಂತರು ಎಂದು ಸ್ಕ್ಲಿಚ್ಟರ್ ತಿಳಿಸಿದ್ದಾರೆ. ಅಷ್ಟರೊಳಗೆ, ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರೆ ಮೀಸಲು ಪೈಲಟ್‌ಗಳು ಕಾಕ್‌ಪಿಟ್ ಒಳಗೆ ಪ್ರವೇಶಿಸಿ ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡರು. ಬಳಿಕ ಅವರು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಫ್ಲೈಟ್‌ರಾಡಾರ್24 ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆ ನಡೆದ ಸಮಯದಲ್ಲಿ ಆ ವಿಮಾನವು ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯೊಳಗೆ ಬರೋಬ್ಬರಿ 14,000 ಅಡಿಗಳಿಗಿಂತಲೂ ಹೆಚ್ಚು ಕೆಳಗೆ ಇಳಿದಿತ್ತು.
ಸೌದಿ ಅಧಿಕಾರಿಗಳು ಭದ್ರತಾ ತಂಡಗಳ ಪ್ರಾಥಮಿಕ ತನಿಖೆಯ ನಂತರ ಸಹ-ಪೈಲಟ್ ಅನ್ನು ಯುಎಇಗೆ ಹಸ್ತಾಂತರಿಸಿದ್ದಾರೆ. ಯುಎಇ ಅಧಿಕಾರಿಗಳು ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಘೋಷಿಸಿದ್ದಾರೆ(ಏಜೆನ್ಸೀಸ್).