

ನವದೆಹಲಿ: ಭಾರತದಲ್ಲಿ ಪ್ರಕೃತಿಯು ಏಕಕಾಲಕ್ಕೆ ಎರಡು ವಿಭಿನ್ನ ಮುಖಗಳನ್ನು ತೋರಿಸುತ್ತಿರುವುದನ್ನು ಬಾಹ್ಯಾಕಾಶದಿಂದ ಸೆರೆಹಿಡಿಯಲಾದ ಅತ್ಯಂತ ಆಕರ್ಷಕ ಉಪಗ್ರಹ ( INSAT-3DS satellite ) ಚಿತ್ರವೊಂದು ಜಗತ್ತಿಗೆ ತೋರಿಸಿಕೊಟ್ಟಿದೆ. ದೇಶದ ಒಂದು ಭಾಗದಲ್ಲಿ ದಟ್ಟವಾದ ಕಾರ್ಮೋಡಗಳು ಕವಿದು ಭಾರೀ ಮಳೆಯ ಆರ್ಭಟವಿದ್ದರೆ, ಮತ್ತೊಂದು ಭಾಗದಲ್ಲಿ ಮೋಡಗಳೇ ಇಲ್ಲದೆ ಸ್ವಚ್ಛವಾದ ಬಿಸಿಲಿನ ವಾತಾವರಣ ನೆಲೆಸಿದೆ. ಈ ಅದ್ಭುತ ಮತ್ತು ನಾಟಕೀಯ ಹವಾಮಾನ ವೈಪರೀತ್ಯವು ಇಡೀ ದೇಶದ ಗಮನವನ್ನು ಸೆಳೆದಿದ್ದು, ಹವಾಮಾನ ತಜ್ಞರನ್ನು ಕೂಡ ಹುಬ್ಬೇರಿಸುವಂತೆ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅತ್ಯಾಧುನಿಕ 'ಇನ್ಸಾಟ್-3ಡಿಎಸ್' (INSAT-3DS) ಉಪಗ್ರಹವು ಸೆಪ್ಟೆಂಬರ್ 24ರಂದು ಥರ್ಮಲ್-ಇನ್‌ಫ್ರಾರೆಡ್ ಚಾನೆಲ್ ಮೂಲಕ (10.83 ಮೈಕ್ರೋಮೀಟರ್ ತರಂಗಾಂತರದಲ್ಲಿ) ಈ ಮೇಲಿನ ಅದ್ಭುತ ಚಿತ್ರವನ್ನು ಸೆರೆಹಿಡಿದಿದೆ. ಈ ಉಪಗ್ರಹ ಚಿತ್ರದಲ್ಲಿ ಭಾರತೀಯ ಉಪಖಂಡದ ಮೇಲೆ ದೈತ್ಯಾಕಾರದ ಮೋಡಗಳ ದಂಡೇ ಹಬ್ಬಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನೆರೆಯ ದೇಶಗಳವರೆಗೂ ಈ ಮೋಡಗಳ ವ್ಯಾಪ್ತಿ ವಿಸ್ತರಿಸಿದ್ದು, ಬಾಹ್ಯಾಕಾಶದಿಂದ ನೋಡಲು ಇದು ಒಂದು ವಿಶಿಷ್ಟ ದೃಶ್ಯಕಾವ್ಯದಂತಿದೆ.
ಈ ಉಪಗ್ರಹ ಚಿತ್ರದಲ್ಲಿ ಕಂಡುಬರುವ ಹವಾಮಾನದ ತೀವ್ರ ವ್ಯತ್ಯಾಸವು ಭಾರತದ ಭೂಭಾಗದಲ್ಲಿ ಅತ್ಯಂತ ಸ್ಪಷ್ಟವಾಗಿದೆ. ಮಧ್ಯ ಭಾರತದಿಂದ ಪೂರ್ವ ಹಾಗೂ ಈಶಾನ್ಯ ಭಾಗದವರೆಗೆ ವಿಶಾಲವಾದ ಪ್ರದೇಶದಲ್ಲಿ ಕಪ್ಪು ಮೋಡಗಳು ಕವಿದು ಮಳೆಯ ವಾತಾವರಣ ಸೃಷ್ಟಿಯಾಗಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ರಾಜಸ್ಥಾನ, ಗುಜರಾತ್ ಹಾಗೂ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಯಾವುದೇ ಮೋಡಗಳಿಲ್ಲದೆ ಆಕಾಶವು ಸಂಪೂರ್ಣವಾಗಿ ನಿರ್ಮಲವಾಗಿ ಮತ್ತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಈ ರೀತಿಯ ವಿಭಿನ್ನ ಹವಾಮಾನಕ್ಕೆ ಪ್ರಮುಖ ಕಾರಣ ಉತ್ತರ ಒಡಿಸ್ಸಾ ಮತ್ತು ಆಂಧ್ರಪ್ರದೇಶದ ಕರಾವಳಿಯ ಮೇಲೆ ಉಂಟಾಗಿರುವ 'ಆಳವಾದ ವಾಯುಭಾರ ಕುಸಿತ'. ಈ ವ್ಯವಸ್ಥೆಯು ಒಳನಾಡಿನ ಕಡೆಗೆ ಚಲಿಸುತ್ತಿದ್ದು, ಒಡಿಸ್ಸಾ, ಛತ್ತೀಸ್‌ಗಢ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ವ್ಯಾಪಕ ಮಳೆಯನ್ನು ಸುರಿಸುತ್ತಿದೆ. ಪೂರ್ವ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ.
ಈ ಹವಾಮಾನ ವ್ಯವಸ್ಥೆಯು ವಾಯುವ್ಯ ದಿಕ್ಕಿನತ್ತ ಚಲಿಸುತ್ತಾ ಕ್ರಮೇಣ ದುರ್ಬಲಗೊಳ್ಳುತ್ತಿದ್ದರೂ, ಅದರ ಸುತ್ತಲಿನ ವಾಯುಭಾರ ಪ್ರಭಾವದಿಂದ ಮಧ್ಯ ಭಾರತದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ. ವಿಶೇಷವಾಗಿ ಬಂಗಾಳಕೊಲ್ಲಿಯ ಮೇಲೂ ದಟ್ಟವಾದ ಮೋಡಗಳ ಸಾಲುಗಳು ಆವರಿಸಿದ್ದು, ಅಲ್ಲಿಂದ ತೇವಾಂಶಭರಿತ ಗಾಳಿಯು ನಿರಂತರವಾಗಿ ಭಾರತೀಯ ಭೂಭಾಗಕ್ಕೆ ಸಾಗುತ್ತಿರುವುದನ್ನು ಈ ಉಪಗ್ರಹ ಚಿತ್ರವು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಈ ಆಸಕ್ತಿದಾಯಕ ಹವಾಮಾನ ವಿಭಜನೆಯು ನೈಋತ್ಯ ಮಾನ್ಸೂನ್ ಮಳೆಯು ನಿರ್ಗಮಿಸುವ ಅಂತಿಮ ಹಂತದಲ್ಲಿ ಘಟಿಸುತ್ತಿರುವುದು ಗಮನಾರ್ಹ. ವಾಯುವ್ಯ ಭಾರತದಿಂದ ಮಾನ್ಸೂನ್ ಈಗಾಗಲೇ ಕಾಲ್ಕಿತ್ತಿದ್ದರೂ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುವ ಇಂತಹ ವಾತಾವರಣದ ಬದಲಾವಣೆಗಳು ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮಳೆಯನ್ನು ಮುಂದುವರಿಸಲು ಕಾರಣವಾಗುತ್ತವೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಈ ಮಳೆಯ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳಾಗುವ ನಿರೀಕ್ಷೆಯಿದೆ, (ಏಜೆನ್ಸೀಸ್).