ಖಾಲಿ ಸೈಟ್​ನಲ್ಲಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಜಿಬಿಎ ನೋಟಿಸ್​ನಿಂದಾಗಿ ಪತ್ನಿಯ ಕೊಂದ ಪತಿ ಲಾಕ್‌! Horror in Bengaluru

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಖಾಲಿ ಜಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಕಟ್ಟುನಿಟ್ಟಿನ ನೋಟಿಸ್ ನೀಡಿದ್ದೇ ತಡ, ಹಲವು ದಿನಗಳಿಂದ ಯಾರ ಕಣ್ಣಿಗೂ ಬೀಳದೆ ಮುಚ್ಚಿಹೋಗಿದ್ದ ಭೀಕರ ಕೊಲೆ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.
Horror in Bengaluru
ಸಾಗರ್ ಚಂದ್ರ ರಾವತ್ (32) ಹಾಗೂ ಅನುಸೂಯ (28)
Published on: 

ಬೆಂಗಳೂರು: ನಗರದಲ್ಲಿ ( Horror in Bengaluru ) ನಡೆದಿದ್ದ ಒಂದು ಕರಾಳ ಹತ್ಯೆಯ ರಹಸ್ಯವು ಪೊಲೀಸ್​ ತನಿಖೆಯಿಂದ ಬಯಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಖಾಲಿ ಜಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಕಟ್ಟುನಿಟ್ಟಿನ ನೋಟಿಸ್ ನೀಡಿದ್ದೇ ತಡ, ಹಲವು ದಿನಗಳಿಂದ ಯಾರ ಕಣ್ಣಿಗೂ ಬೀಳದೆ ಮುಚ್ಚಿಹೋಗಿದ್ದ ಭೀಕರ ಕೊಲೆ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ. ಸೈಟ್ ಮಾಲೀಕರು ಸ್ವಚ್ಛತಾ ಕಾರ್ಯಕ್ಕೆ ಮುಂದಾದಾಗ ಬಯಲಾದ ಈ ಆಘಾತಕಾರಿ ಕಥೆಯು ಇಡೀ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ.

ಈ ಘಟನೆಯು ಒಡಿಶಾ ಮೂಲದ ದಂಪತಿಗೆ ತಳಕುಹಾಕಿಕೊಂಡಿದೆ. ಪ್ರೀತಿಸಿ ಮದುವೆಯಾಗಿದ್ದ ಸಾಗರ್ ಚಂದ್ರ ರಾವತ್ (32) ಹಾಗೂ ಅನುಸೂಯ (28) ದಂಪತಿ ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ, ಇವರ ದಾಂಪತ್ಯ ಜೀವನದಲ್ಲಿ ಪ್ರೀತಿಗಿಂತ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿದ್ದವು. ಹಣಕಾಸಿನ ಮುಗ್ಗಟ್ಟು ಹಾಗೂ ಪತಿಯ ಸಂಪಾದನೆ ಹಾಗೂ ಸಂಬಳದ ವಿಚಾರವಾಗಿ ಇವರ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆದು, ಸಂಸಾರದಲ್ಲಿ ಬಿರುಕು ಮೂಡಿತ್ತು.

Also Read
ಬಾಗಿಲಿಗೆ ತಡೆಯಾಗಿ ಬಳಸುತ್ತಿದ್ದ ಕಲ್ಲು 10 ಕೋಟಿ ಬೆಲೆ ಬಾಳುತ್ತೆ ಅಂತ ಅಜ್ಜಿಗೂ ಗೊತ್ತಿರಲಿಲ್ಲ: ದಶಕಗಳ ಬಳಿಕ ದುಬಾರಿ ಸತ್ಯ ಬಯಲು! Stone
Horror in Bengaluru

ಕಳೆದ ಆಗಸ್ಟ್ 11ರಂದು ಇದೇ ಹಣಕಾಸಿನ ಸಣ್ಣಪುಟ್ಟ ವಿಚಾರಕ್ಕೆ ದಂಪತಿ ನಡುವೆ ಭುಗಿಲೆದ್ದ ಜಗಳ ತೀವ್ರ ವಿಕೋಪಕ್ಕೆ ತಿರುಗಿದೆ. ಕೆಲಸ ಮುಗಿಸಿ ಮನೆಗೆ ಮರಳಿದ ನಂತರವೂ ಮುಂದುವರಿದ ಈ ಜಗಳದಲ್ಲಿ ಆಕ್ರೋಶಗೊಂಡ ಸಾಗರ್, ತನ್ನ ಹೆಂಡತಿ ಅನುಸೂಯಳನ್ನು ಮನಬಂದಂತೆ ಥಳಿಸಿ ಕಡೆಗೆ ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ತಾನು ಮಾಡಿದ ದೊಡ್ಡ ಅಪರಾಧವನ್ನು ಮುಚ್ಚಿಹಾಕಲು ಹಂತಕ ಪತಿ ಹೂಡಿದ ತಂತ್ರವಂತೂ ಅಚ್ಚರಿ ಹುಟ್ಟಿಸುವಂತಿತ್ತು. ಹೆಂಡತಿಯ ಶವವನ್ನು ಮನೆಯಲ್ಲೇ ಮೂರು ದಿನಗಳ ಕಾಲ ಇಟ್ಟುಕೊಂಡಿದ್ದ ಈ ಕ್ರೂರಿ, ನಂತರ ಯಾರೂ ಇಲ್ಲದ ಸಮಯದಲ್ಲಿ ಆಕೆಯ ಮೃತದೇಹವನ್ನು ಹಾಸಿಗೆಯಲ್ಲಿ ಬಿಗಿಯಾಗಿ ಸುತ್ತಿದ್ದಾನೆ. ತದನಂತರ ಸಂಪಿಗೆಹಳ್ಳಿಯ ಎಂ.ಎಸ್. ನಗರದ ಅಗ್ರಹಾರ ಲೇಔಟ್‌ನಲ್ಲಿರುವ ನಿರ್ಜನವಾದ ಖಾಲಿ ಸೈಟೊಂದಕ್ಕೆ ಅದನ್ನು ಸಾಗಿಸಿ ಎಸೆದು ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೆ, ತಾನು ಮಾಡಿದ ಕೃತ್ಯ ಯಾರಿಗಾದರೂ ಗೊತ್ತಾಯಿತೇ ಎಂದು ಖಚಿತಪಡಿಸಿಕೊಳ್ಳಲು ಆತ ಪ್ರತಿದಿನ ಅದೇ ಸೈಟ್ ಸುತ್ತಮುತ್ತ ಕಾವಲುಗಾರನಂತೆ ಓಡಾಡುತ್ತಿದ್ದ ಎನ್ನಲಾಗಿದೆ.

ಆದರೆ, ಪಾಪ ಎಂದೆಂದಿಗೂ ಮುಚ್ಚಿಹೋಗುವುದಿಲ್ಲ ಎಂಬಂತೆ, ಸೈಟ್‌ನಲ್ಲಿದ್ದ ಮೃತದೇಹದ ಮೇಲೆ ನಾಯಿಗಳು ದಾಳಿ ನಡೆಸಿ ಎಳೆದಾಡಿದ್ದರಿಂದ ಶವದ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಈ ಹಂತದಲ್ಲೇ ಜಿಬಿಎ ಕಾವೇರಿದ ನೋಟಿಸ್‌ ಪರಿಣಾಮ ಸೈಟ್ ಮಾಲೀಕರು ಸ್ವಚ್ಛತೆಗೆ ಮುಂದಾಗಿದ್ದಾರೆ. ಕಾರ್ಮಿಕರು ಜಾಗ ಶುಚಿಗೊಳಿಸುವಾಗ ಹಾಸಿಗೆಯೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿ ಪೊಲೀಸರಿಗೆ ದೂರು ನೀಡಲಾಯಿತು. ಸಂಪಿಗೆಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿತು.

Also Read
ಅಣ್ಣನಿಗೆ ರಾಜಕೀಯದ ಗಂಧ-ಗಾಳಿಯೂ ಗೊತ್ತಿಲ್ಲ, ತಂಗಿ ಗೆದ್ದಿದ್ದು ಮುಸ್ಲಿಂ ಲೀಗ್​​ನಿಂದ...ಮಾಧ್ಯಮ ವರದಿ ಬಗ್ಗೆ ಮಹತ್ವದ ಪ್ರಶ್ನೆ ಎತ್ತಿದ ಕಮಲ ನಾಯಕ! | Sudhanshu Trivedi
Horror in Bengaluru

ಪೊಲೀಸರಿಗೆ ಆರಂಭದಲ್ಲಿ ಮೃತಳ ಗುರುತು ಸಿಗದೆ ಕೈಚೆಲ್ಲುವ ಪರಿಸ್ಥಿತಿ ಬಂದಿತ್ತು. ಆದರೆ, ಶವದ ಮೇಲಿದ್ದ ಬಟ್ಟೆಯೊಂದರ 'ವಿಶಾಲ್ ಮಾರ್ಟ್' ಟ್ಯಾಗ್ ಮತ್ತು ಬಿಲ್ ವಿವರಗಳು ತನಿಖೆಗೆ ಮಹತ್ವದ ದಿಕ್ಸೂಚಿಯಾದವು. ಅದರ ಜಾಡನ್ನು ಹಿಡಿದು ಹೊರಟ ಪೊಲೀಸರು ಅನುಸೂಯ ಕೆಲಸ ಮಾಡುತ್ತಿದ್ದ ಹೋಟೆಲ್ ತಲುಪಿ ಆಕೆಯ ಸಂಪರ್ಕ ಸಂಖ್ಯೆ ಪತ್ತೆ ಹಚ್ಚಿದರು. ಅಂತಿಮವಾಗಿ ದಂಪತಿಯ ಗಲಾಟೆಯ ಗುಟ್ಟನ್ನು ರಟ್ಟು ಮಾಡಿಕೊಂಡ ಪೊಲೀಸರು, ಶವ ಪತ್ತೆಯಾದ ಕೇವಲ ಒಂದು ವಾರದೊಳಗೆ ಆರೋಪಿ ಸಾಗರ್ ಚಂದ್ರ ರಾವತ್‌ನನ್ನು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net