

ಬುಖಾರೆಸ್ಟ್ : ಹಳ್ಳಿಯೊಂದರ ವೃದ್ಧೆಯೊಬ್ಬರು ತಮ್ಮ ಮನೆಯ ಬಾಗಿಲು ಗಾಳಿಗೆ ಮುಚ್ಚಿಕೊಳ್ಳದಂತೆ ತಡೆಯಲು ಬಳಸುತ್ತಿದ್ದ ಸಾಮಾನ್ಯ ಕಲ್ಲೊಂದು ( Stone ), ಇಡೀ ಜಗತ್ತನ್ನೇ ಬೆರಗುಗೊಳಿಸುವಷ್ಟು ಅಪರೂಪದ ಮತ್ತು ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿಧಿಯೆಂದು ತಿಳಿದುಬಂದಿದೆ. ರೊಮೇನಿಯಾದ ರಾಜಧಾನಿ ಬುಖಾರೆಸ್ಟ್‌ಗೆ 90 ಮೈಲುಗಳ ದೂರದಲ್ಲಿರುವ ಕೋಲ್ಟಿ ಎಂಬ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. 1991ರಲ್ಲಿ ನಿಧನರಾದ ವೃದ್ಧೆಯೊಬ್ಬರು, ತಮಗೆ ತಿಳಿಯದೆಯೇ ಅಮೂಲ್ಯವಾದ ವಸ್ತುವನ್ನು ದಶಕಗಳ ಕಾಲ ಕೇವಲ ಬಾಗಿಲು ತಡೆಯುವ ಸಾಧನವಾಗಿ ಬಳಸುತ್ತಾ ಬಂದಿದ್ದರು ಎಂಬುದು ಈಗ ವಿಸ್ಮಯ ಮೂಡಿಸಿದೆ.
ಈ ರೋಚಕ ಕತೆ ಬೆಳಕಿಗೆ ಬಂದದ್ದು ವೃದ್ಧೆಯ ಮರಣದ ಹಲವು ದಶಕಗಳ ನಂತರ, ಅವರ ಸಂಬಂಧಿಕರೊಬ್ಬರು ಅಜ್ಜಿ ಮನೆಯನ್ನು ಪರಿಶೀಲಿಸಿದಾಗ. ಆ ಪ್ರದೇಶದಲ್ಲಿ ಸ್ಥಳೀಯರು ಹಳ್ಳಿಯ ಹತ್ತಿರದ ತೊರೆಯಿಂದ 'ಅಂಬರ್' (Amber - ಜೇಡಿಮಣ್ಣು ಅಥವಾ ಮರದ ರಾಳದ ಜೀವಾಂಶ) ಎಂಬ ವಿಶೇಷ ರೀತಿಯ ಕಲ್ಲುಗಳನ್ನು ಸಂಗ್ರಹಿಸುವುದು ವಾಡಿಕೆ. ವೃದ್ಧೆ ಕೂಡ ದಶಕಗಳ ಹಿಂದೆ ಅದೇ ತೊರೆಯಿಂದ ಈ ಕಲ್ಲನ್ನು ಆಕಸ್ಮಿಕವಾಗಿ ಮನೆಗೆ ತಂದಿದ್ದರು. ತಾಮ್ರದ ಬಣ್ಣ ಹಾಗೂ ಸ್ವಲ್ಪ ಕಪ್ಪು ಮಿಶ್ರಿತವಾಗಿ ಸುಮಾರು ಮೂರೂವರೆ ಕೆಜಿ ತೂಕವಿದ್ದ ಈ ಕಲ್ಲು ನೋಡಲು ವಿಭಿನ್ನವಾಗಿದ್ದು, ಮನೆಯ ವಾರಸುದಾರರ ಕಣ್ಣಿಗೆ ವಿಶೇಷವಾಗಿ ಗೋಚರಿಸಿತು.
ಕುತೂಹಲಗೊಂಡ ಸಂಬಂಧಿಕರು ಆ ಕಲ್ಲನ್ನು ಪರಿಶೀಲನೆಗಾಗಿ ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಲು ನಿರ್ಧರಿಸಿದರು. ಈ ಅಪರೂಪದ ಕಲ್ಲಿನ ನೈಜತೆಯನ್ನು ಪರೀಕ್ಷಿಸಲು ಅಧಿಕಾರಿಗಳು ಅದನ್ನು ಪೋಲೆಂಡ್‌ನ ಕ್ರಾಕೋವ್‌ನಲ್ಲಿರುವ ಪ್ರತಿಷ್ಠಿತ ಇತಿಹಾಸ ಸಂಗ್ರಹಾಲಯಕ್ಕೆ ಕಳುಹಿಸಿದರು. ಅಲ್ಲಿ ನಡೆದ ವೈಜ್ಞಾನಿಕ ಪರೀಕ್ಷೆಗಳಲ್ಲಿ ಆ ಕಲ್ಲು ಯಾವುದೇ ಸಾಮಾನ್ಯ ವಸ್ತುವಲ್ಲ, ಬದಲಾಗಿ 'ರುಮಾನೈಟ್' ಎಂಬ ಅತ್ಯಂತ ವಿಶಿಷ್ಟವಾದ ಅಂಬರ್ ಜೀವಾಂಶ ಎಂದು ದೃಢಪಟ್ಟಿತು. ಇದು ಲಕ್ಷಾಂತರ ವರ್ಷಗಳ ಹಿಂದೆ ಮರಗಳಿಂದ ಹರಿದು ಗಟ್ಟಿಯಾದ ರಾಳದ ಜೀವಾಂಶ ರೂಪವಾಗಿದೆ.
ಈ ಕಲ್ಲಿನ ವಯಸ್ಸನ್ನು ಕಂಡು ವಿಜ್ಞಾನಿಗಳು ಮತ್ತು ಇತಿಹಾಸಕಾರರು ದಂಗಾಗಿಹೋದರು. ಪರೀಕ್ಷೆಯ ವರದಿ ಪ್ರಕಾರ, ಈ ಕಲ್ಲು ಸುಮಾರು 38 ರಿಂದ 70 ಮಿಲಿಯನ್ (3 ಕೋಟಿ 80 ಲಕ್ಷದಿಂದ 7 ಕೋಟಿ) ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿದೆ. ಇದರ ಅಪರೂಪದ ಗುಣಲಕ್ಷಣಗಳು ಮತ್ತು ಐತಿಹಾಸಿಕ ಮಹತ್ವವನ್ನು ಪರಿಗಣಿಸಿ, ರೊಮೇನಿಯಾ ಸರ್ಕಾರವು ಈ 'ರುಮಾನೈಟ್' ಕಲ್ಲನ್ನು ಅಧಿಕೃತವಾಗಿ 'ರಾಷ್ಟ್ರೀಯ ನಿಧಿ' ಎಂದು ಘೋಷಿಸಿತು. ನಂತರ 2022ರಲ್ಲಿ ಇದನ್ನು ಸಾರ್ವಜನಿಕರ ವೀಕ್ಷಣೆಗಾಗಿ ಬುಸೌ ಕೌಂಟ್ರಿ ಮ್ಯೂಸಿಯಂಗೆ ಸ್ಥಳಾಂತರಿಸಲಾಯಿತು.
ಈ ಅಮೂಲ್ಯವಾದ ಕಲ್ಲಿನ ನಿಖರವಾದ ಮೌಲ್ಯವನ್ನು ಇನ್ನೂ ಅಧಿಕೃತವಾಗಿ ಅಂತಿಮಗೊಳಿಸಲಾಗಿಲ್ಲವಾದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು ಕನಿಷ್ಠ 1 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಅಂದರೆ ಭಾರತೀಯ ಹಣಕಾಸು ಮೌಲ್ಯದಲ್ಲಿ ಸುಮಾರು 9.59 ಕೋಟಿ ರೂಪಾಯಿಗಳಿಗೂ ಅಧಿಕ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.
ವಿಶೇಷವೆಂದರೆ, ವೃದ್ಧೆಯ ನಿಧನದ ನಂತರ ಅವರ ಮನೆಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ಇತರ ಅನೇಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು. ಆದರೆ, ಅವರ ಕಣ್ಣಿಗೆ ಬಾಗಿಲು ಕಾಯುತ್ತಿದ್ದ ಈ ಕೋಟ್ಯಂತರ ರೂ. ಬೆಲೆಯ ವಿಸ್ಮಯ ಕಲ್ಲು ಮಾತ್ರ ಕಣ್ಣಿಗೆ ಬೀಳದಿರುವುದು ವಿಪರ್ಯಾಸವೇ ಸರಿ, (ಏಜೆನ್ಸೀಸ್).