

Used Cooking Oil : ಬಳಸಿದ ಅಡುಗೆ ಎಣ್ಣೆಯನ್ನು ಬಿಸಾಡುವ ಅಭ್ಯಾಸ ನಿಮ್ಮಲ್ಲಿದ್ದರೆ ತಕ್ಷಣವೇ ಅದನ್ನು ನಿಲ್ಲಿಸಿ! ಏಕೆಂದರೆ ನಿಮ್ಮ ಅಡುಗೆಮನೆಯಲ್ಲಿ ನಿರುಪಯುಕ್ತವೆಂದು ಭಾವಿಸಿ ಚರಂಡಿಗೆ ಚೆಲ್ಲುವ ಎಣ್ಣೆಗೆ ಈಗ ಮಾರುಕಟ್ಟೆಯಲ್ಲಿ 'ಚಿನ್ನದಂತಹ ಬೆಲೆ' ಸಿಗುತ್ತಿದೆ. ಆಹಾರ ಸುರಕ್ಷತಾ ಇಲಾಖೆಯು ಮರುಬಳಕೆಯ ಅಪಾಯಕಾರಿ ಎಣ್ಣೆಯಿಂದ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಜಾರಿಗೆ ತಂದಿರುವ 'ರೂಕೋ' (RUCO - Repurpose Used Cooking Oil) ಯೋಜನೆಯು ಈಗ ಹೊಟೇಲ್ ಮತ್ತು ಅಂಗಡಿಕಾರರಿಗೆ ದೊಡ್ಡ ಆದಾಯದ ಮೂಲವಾಗಿದೆ.
ಸಂಸ್ಥೆಗಳು ಸಂಗ್ರಹಿಸುವ ಈ ಹಳೆಯ ಎಣ್ಣೆಗೆ ಪ್ರಸ್ತುತ ಲೀಟರ್‌ಗೆ 55 ರಿಂದ 70 ರವರೆಗೆ ನಗದು ಹಣ ನೀಡಲಾಗುತ್ತಿದೆ. 2018 ರಲ್ಲಿ ಪ್ರಾರಂಭವಾದ ಈ ಯೋಜನೆಗೆ ಆರಂಭದಲ್ಲಿ ವ್ಯಾಪಾರಿಗಳಿಂದ ಅಷ್ಟಾಗಿ ಸ್ಪಂದನೆ ಸಿಗದಿದ್ದರೂ, ಪ್ರಸ್ತುತ ಕೇರಳದ ಕೊಲ್ಲಂ ಜಿಲ್ಲೆ ಸೇರಿದಂತೆ ವಿವಿಧೆಡೆ ಭಾರಿ ಜನಪ್ರಿಯತೆ ಗಳಿಸಿದೆ. ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲೇ ಬರೋಬ್ಬರಿ 4,844 ಲೀಟರ್ ಎಣ್ಣೆಯನ್ನು ಸಂಗ್ರಹಿಸಲಾಗಿದ್ದು, ಸಾರ್ವಜನಿಕರೂ ಸಹ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಯೋಜನೆ ಹಾಗೂ ಸಂಗ್ರಹಣೆಯ ಪ್ರಕ್ರಿಯೆಯು ಅತ್ಯಂತ ಸರಳ ಮತ್ತು ಪಾರದರ್ಶಕವಾಗಿದೆ. ಆಹಾರ ಸುರಕ್ಷತಾ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದ ನಾಲ್ಕು ಕಂಪನಿಗಳು ರಾಜ್ಯಾದ್ಯಂತ ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕಂಪನಿಗಳೇ ಉದ್ಯಮಿಗಳಿಗೆ ಅಥವಾ ಸಾರ್ವಜನಿಕರಿಗೆ ಎಣ್ಣೆ ಸಂಗ್ರಹಿಸಲು ವಿಶೇಷ ಕ್ಯಾನ್‌ಗಳನ್ನು ಒದಗಿಸುತ್ತವೆ. ವಾರಕ್ಕೊಮ್ಮೆ ಏಜೆಂಟ್‌ಗಳು ನೇರವಾಗಿ ಅಂಗಡಿಗಳು ಹಾಗೂ ಮನೆಗಳಿಗೆ ಭೇಟಿ ನೀಡಿ ಸಂಗ್ರಹವಾದ ಎಣ್ಣೆಯ ಪ್ರಮಾಣವನ್ನು ಅಳೆದು, ಅದಕ್ಕೆ ತಕ್ಕಂತೆ ಹಣವನ್ನು ತಕ್ಷಣವೇ ಪಾವತಿಸುತ್ತಾರೆ. ಕನಿಷ್ಠ 1 ಲೀಟರ್‌ನಿಂದ ಎಷ್ಟು ಬೇಕಾದರೂ ನೀಡಬಹುದಾದರೂ, ನಿಯಮಿತ ಸಂಗ್ರಹಣೆಗಾಗಿ ವಾರಕ್ಕೆ ಕನಿಷ್ಠ 4 ಲೀಟರ್ ಎಣ್ಣೆ ನೀಡಬೇಕೆಂಬ ಷರತ್ತನ್ನು ವಿಧಿಸಲಾಗಿದೆ. ಈ ಸರಳ ವ್ಯವಸ್ಥೆಯಿಂದಾಗಿ ಪರಿಸರ ಮಾಲಿನ್ಯ ತಪ್ಪುವುದರ ಜೊತೆಗೆ ವ್ಯಾಪಾರಿಗಳಿಗೆ ಆರ್ಥಿಕ ನೆರವೂ ಸಿಕ್ಕಂತಾಗಿದೆ.
ಹೀಗೆ ಸಂಗ್ರಹಿಸಲಾದ ಹಳೆಯ ಹಾಗೂ ಕಲುಷಿತ ಅಡುಗೆ ಎಣ್ಣೆಯನ್ನು ಜೈವಿಕ ಇಂಧನ (ಬಯೋಡೀಸಲ್) ಮತ್ತು ಸೌಂದರ್ಯವರ್ಧಕ ಸೋಪುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮರುಬಳಕೆಗೆ ಯೋಗ್ಯವಲ್ಲದ ಎಣ್ಣೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಪರಿಸರ ಸ್ನೇಹಿ ಇಂಧನವನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದೇ ವೇಳೆ, ಮಾರುಕಟ್ಟೆಯಲ್ಲಿ ಹಳೆಯ ಎಣ್ಣೆಯ ಅಕ್ರಮ ಮರುಬಳಕೆಯನ್ನು ತಡೆಯಲು ಆಹಾರ ಸುರಕ್ಷತಾ ಇಲಾಖೆಯು 'ಆಪರೇಷನ್ ತೆಲಿಮ' ಎಂಬ ವಿಶೇಷ ತನಿಖಾ ಅಭಿಯಾನವನ್ನು ತೀವ್ರಗೊಳಿಸಿದೆ. ಈ ಮೂಲಕ ಹೊಟೇಲ್‌ಗಳು ಮತ್ತು ಬೇಕರಿಗಳ ಮೇಲೆ ದಾಳಿ ನಡೆಸಿ, ಬಳಸಿದ ಎಣ್ಣೆಯನ್ನು ಮತ್ತೆಮತ್ತೆ ಕರಿಯಲು ಬಳಸದಂತೆ ಕಟ್ಟುನಿಟ್ಟಿನ ಜಾಗೃತಿ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಒಂದೇ ಎಣ್ಣೆಯನ್ನು ಪದೇಪದಎ ಕಾಯಿಸಿ ಅಡುಗೆ ಮಾಡುವುದು ಆರೋಗ್ಯಕ್ಕೆ ಅತ್ಯಂತ ಅಪಾಯವಾಗಿದೆ. ಎಣ್ಣೆಯನ್ನು ಮರುಕಾಯಿಸಿದಾಗ ಅದರಲ್ಲಿ 'ಟೋಟಲ್ ಪೋಲಾರ್ ಕಾಂಪೌಂಡ್ಸ್' (TPC) ಎಂಬ ವಿಷಕಾರಿ ಅಂಶಗಳ ಪ್ರಮಾಣ ಅಪಾಯಕಾರಿಯಾಗಿ ಹೆಚ್ಚಾಗುತ್ತದೆ. ಆಹಾರ ಇಲಾಖೆಯು ಡಿಜಿಟಲ್ ಟಿಪಿಎಂ (TPM) ಮೀಟರ್ ಬಳಸಿ ಎಣ್ಣೆಯ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಎಣ್ಣೆಯಲ್ಲಿ ಟಿಪಿಸಿ ಪ್ರಮಾಣ ಶೇ. 25 ಕ್ಕಿಂತ ಹೆಚ್ಚಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಅಡುಗೆಗೆ ಬಳಸಬಾರದು. ಇಂತಹ ಕಲುಷಿತ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ರಕ್ತದೊತ್ತಡ, ಯಕೃತ್ತಿನ ಕಾಯಿಲೆಗಳು, ಹೃದಯಾಘಾತ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆ.
ಆದ್ದರಿಂದ, ಆರೋಗ್ಯಕ್ಕೆ ಕಂಟಕವಾಗುವ ಹಾಗೂ ಪರಿಸರವನ್ನು ಹಾಳುಮಾಡುವ ಬಳಸಿದ ಅಡುಗೆ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಚರಂಡಿಗಾಗಲಿ ಅಥವಾ ಸಾರ್ವಜನಿಕ ಸ್ಥಳಗಳಿಗಾಗಲಿ ಚೆಲ್ಲಬೇಡಿ. ಇನ್ಮುಂದೆ ಅಡುಗೆಮನೆಯಲ್ಲಿ ಅಥವಾ ಉದ್ಯಮದಲ್ಲಿ ಉಳಿಯುವ ಎಣ್ಣೆಯನ್ನು ಪ್ರತ್ಯೇಕ ಕ್ಯಾನ್‌ನಲ್ಲಿ ಸಂಗ್ರಹಿಸಿಟ್ಟು 'ರೂಕೋ' ಯೋಜನೆಯ ಅಧಿಕೃತ ಸಂಗ್ರಹಕಾರರಿಗೆ ನೀಡಿ. ಇದರಿಂದ ನಿಮ್ಮ ಮನೆ ಹಾಗೂ ಸಮಾಜದ ಆರೋಗ್ಯ ಕಾಪಾಡುವುದರ ಜೊತೆಗೆ, ಪರಿಸರ ಸ್ನೇಹಿ ಜೈವಿಕ ಇಂಧನ ತಯಾರಿಕೆಗೆ ನೆರವಾಗಿ ನಿಮ್ಮ ಜೇಬಿಗೂ ಹೆಚ್ಚುವರಿ ಆದಾಯ ಪಡೆದುಕೊಳ್ಳಿ, (ಏಜೆನ್ಸೀಸ್).