

ಹಾವೇರಿ: ಕೇವಲ 15 ದಿನಗಳ ಅಂತರದಲ್ಲಿ ನಡೆದ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರಿ ಅಂಕಗಳ ವ್ಯತ್ಯಾಸ ಕಂಡು ಬಂದು ಅನುಮಾನಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾನ್ಸ್ಟೆಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದ ಶಂಕರ ಬನ್ನೂರು, ವಿಎಒ ಪರೀಕ್ಷೆಯಲ್ಲಿ 151.25 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದು ರಹಸ್ಯ ಬಯಲಾಗಿದೆ.
ಹಾನಗಲ್ಲ ಮೂಲದ ಶಂಕರ ಬನ್ನೂರು ಎಂಬ ಯುವಕ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಪ್ರಶ್ನೆಗಳಿಗೆ ಉತ್ತರ ಹುಡುಕಿದ್ದಾನೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಕ್ಟೋಬರ್ 4ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿಎಒ ಪರೀಕ್ಷೆಯಲ್ಲಿ ಶಂಕರ ಬನ್ನೂರು 151.25 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದ. ಆದರೆ ಇದಕ್ಕೂ ಸುಮಾರು 15 ದಿನಗಳ ಹಿಂದೆ ನಡೆದ ಕೆಎಸ್ಆರ್ಪಿ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಎನ್ನಲಾಗಿದೆ.
ಈ ಅಂಕಗಳಲ್ಲಿನ ಭಾರಿ ವ್ಯತ್ಯಾಸದ ಹಿನ್ನೆಲೆಯಲ್ಲಿ ಪ್ರಕರಣ ಅನುಮಾನಕ್ಕೆ ಕಾರಣವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಕೆಇಎ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಶಂಕರ ಬನ್ನೂರು ಶಿಗ್ಗಾಂವ ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆತ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯನ್ನು ಗೂಗಲ್ ಲೆನ್ಸ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ಉತ್ತರ ಹುಡುಕುತ್ತಿದ್ದ ದೃಶ್ಯ ಸೆರೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಾನಗಲ್ಲ ಪೊಲೀಸರು ಶಂಕರ ಬನ್ನೂರನ್ನು ವಶಕ್ಕೆ ಪಡೆದು, ಬಳಿಕ ತಡರಾತ್ರಿ ಶಿಗ್ಗಾಂವ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಲಾಗಿತ್ತು. ಮೊಬೈಲ್ ಸಮೇತ ಪರೀಕ್ಷಾ ಕೊಠಡಿಗೆ ತೆರಳಿ, ಕೊನೆಯ ಡೆಸ್ಕ್ನಲ್ಲಿ ಕುಳಿತು ಮೊಬೈಲ್ ಮೂಲಕ ಪ್ರಶ್ನೆಗಳಿಗೆ ಉತ್ತರ ಹುಡುಕಿ ಒಎಂಆರ್ನಲ್ಲಿ ಉತ್ತರಗಳನ್ನು ಭರ್ತಿ ಮಾಡಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತನಿಖೆಯಲ್ಲಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ಪರೀಕ್ಷಾ ಕೇಂದ್ರದ ಭದ್ರತಾ ವ್ಯವಸ್ಥೆ, ಮೇಲ್ವಿಚಾರಕರ ಕರ್ತವ್ಯಲೋಪ ಸೇರಿದಂತೆ ಹಲವು ಅಂಶಗಳ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ.