

ಅಹ್ಮದಾಬಾದ್: ವಿರೋಧ ಪಕ್ಷಗಳು ತಮ್ಮ ಸಾಂವಿಧಾನಿಕ ಪಾತ್ರವನ್ನು ಕೈಬಿಟ್ಟು, ಅಭಿವೃದ್ಧಿಗೆ ಅಡ್ಡಿಪಡಿಸುವ ಶಕ್ತಿಯಾಗಿ ಮಾರ್ಪಟ್ಟಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದು, ಬೌದ್ಧಿಕ ನಕ್ಸಲಿಸಂ ಎಚ್ಚರಿಕೆಯಿಂದ ಇರುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.
ಅಹ್ಮದಾಬಾದ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151 ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ವಿರೋಧ ಪಕ್ಷವೂ ಅವರೋಧ ಪಕ್ಷವಾಗಿ ಮಾರ್ಪಾಡಾಗಿದೆ. ಸರ್ಕಾರಿ ನೀತಿಗಳನ್ನು ಪ್ರಶ್ನಿಸುವುದು ಅದರ ಜವಾಬ್ದಾರಿಯಾಗಿದ್ರೂ, ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಸ್ಥಗಿತಗೊಳಿಸುವುದು ಮತ್ತು ವಿಭಜನೆಗಳನ್ನು ಸೃಷ್ಟಿಸುವುದನ್ನು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯವೆಂದು ಸಮರ್ಥಿಸಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ದೇಶದಲ್ಲಿ ವಿರೋಧ ಪಕ್ಷವು ತನ್ನ ಕರ್ತವ್ಯವನ್ನು ಮರೆತಿರುವುದು ನಮ್ಮ ದುರದೃಷ್ಟಕರ ಎಂದಿರುವ ಅವರು, ರಾಜಕೀಯ ಹತಾಶೆಯು ಅಡಚಣೆಯನ್ನು ಅದರ ರಾಜಕೀಯದ ಕೇಂದ್ರವನ್ನಾಗಿ ಮಾಡಿದೆ. ಹೆಸರಿಸದ ಶಕ್ತಿಗಳು ಸಂವಿಧಾನವನ್ನು ದುರ್ಬಲಗೊಳಿಸುತ್ತಿವೆ ಮತ್ತು ಸಮುದಾಯಗಳ ನಡುವೆ ಸಂಘರ್ಷಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದ ಇಮೇಜ್‌ಗೆ ಹಾನಿ ಮಾಡುವ ಪ್ರಯತ್ನಗಳ ವಿರುದ್ಧ ಜಾಗರೂಕರಾಗಿರಲು ಕರೆ ನೀಡಿರುವ ಅವರು, ದೇಶಾದ್ಯಂತ ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡಲಾಗಿದ್ದರೂ, ಸೈದ್ಧಾಂತಿಕ ನಕ್ಸಲ್‌ವಾದ ಒಂದು ಬೆದರಿಕೆಯಾಗಿಯೇ ಉಳಿದಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).