ನಾಯಿ ರೋಬೋಟ್ ವಿವಾದ: ಕೊನೆಗೂ ಕ್ಷಮೆಯಾಚಿಸಿದ ಗಾಲ್ಗೋಟಿಯಾಸ್ ವಿವಿ! Galgotias

ರೋಬೋಟಿಕ್​ ನಾಯಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಕ್ಷಮಾಪತ್ರ
ರೋಬೋಟಿಕ್​ ನಾಯಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಕ್ಷಮಾಪತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಡೆದ ಘಟನೆ ವೈರಲ್​
  • ಚೀನಾ ನಿರ್ಮಿತ ರೋಬೋಟಿಕ್​ ನಾಯಿಯನ್ನು ಸ್ಥಳೀಯ ನಿರ್ಮಿತ ಎಂದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ
  • ವಿವಾದದ ಬಳಿಕ ಕ್ಷಮೆ ಕೇಳಿದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಚೀನಾದ ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿದ ವಿವಾದದ ನಂತರ ಗಾಲ್ಗೋಟಿಯಾಸ್ (Galgotias) ವಿಶ್ವವಿದ್ಯಾಲಯ ಬುಧವಾರ (ಫೆ.18) ಕ್ಷಮೆಯಾಚಿಸಿದೆ.
ಕಾರ್ಯಕ್ರಮದ ಸಮಯದಲ್ಲಿ ಪ್ರತಿನಿಧಿಯೊಬ್ಬರು ತರಾತುರಿಯಲ್ಲಿ ತಪ್ಪು ಮಾಹಿತಿ ನೀಡಿದ್ದರಿಂದಾಗಿ ಈ ವಿವಾದವಾಗಿದೆ ಎಂದು ತಿಳಿಸಿದೆ. ಪೆವಿಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತಿನಿಧಿಗಳಲ್ಲಿ ಒಬ್ಬರು ಅನುಮತಿಯಿಲ್ಲದೆ ಮಾಧ್ಯಮಗಳೊಂದಿಗೆ ಮಾತನಾಡಿದ ನಂತರ ಗೊಂದಲ ಉಂಟಾಗಿದೆ ಎಂದು ವಿಶ್ವವಿದ್ಯಾಲಯವು ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಆ ವ್ಯಕ್ತಿಗೆ ರೋಬೋಟ್​ನ ಬಗ್ಗೆ ಮಾಹಿತಿಯೇ ಗೊತ್ತಿರಲಿಲ್ಲ, ಕ್ಯಾಮರಾ ನೋಡಿ ಉತ್ಸುಕರಾದ ಅವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿನ AI ಶೃಂಗಸಭೆಯಲ್ಲಿ ಸೃಷ್ಟಿಯಾದ ಗೊಂದಲಕ್ಕೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಕ್ಷಮೆಯಾಚಿಸುತ್ತದೆ. ಉತ್ಪನ್ನದ ತಾಂತ್ರಿಕ ಮೂಲದ ಬಗ್ಗೆ ಮಾಹಿತಿಯಿಲ್ಲದ ವ್ಯಕ್ತಿಯೊಬ್ಬರು, ಮಾಧ್ಯಮದವರೊಂದಿಗೆ ತಪ್ಪು ಮಾಹಿತಿಯನ್ನು ನೀಡಿರುವುದು ಈ ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಈ ಜಾಗತಿಕ ವೇದಿಕೆಯಲ್ಲಿ ತಂತ್ರಜ್ಞಾನವನ್ನು ತಪ್ಪಾಗಿ ಪ್ರತಿನಿಧಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ, ನಮ್ಮ ವಿಶ್ವ ವಿದ್ಯಾಲಯವು ಶೈಕ್ಷಣಿಕ ಸಮಗ್ರತೆ, ಪಾರದರ್ಶಕತೆ ಮತ್ತು ಕೆಲಸದ ಜವಾಬ್ದಾರಿಯುತ ಪ್ರಾತಿನಿಧ್ಯಕ್ಕೆ ಬದ್ಧವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ವಿವಾದವೇನು?

ಚೀನಾ ಮೂಲದ ಯುನಿಟ್ರೀ ಗೋ2 ರೋಬೋಟಿಕ್ ನಾಯಿಯನ್ನು, ತಾವೇ ನಿರ್ಮಿಸಿದ್ದೇವೆ ಮತ್ತು ಇದರ ಹೆಸರು ಓರಿಯನ್ ಎಂದು ಹೇಳಿಕೆ ನೀಡಿದ ಹಿನ್ನಲೆ ವಿವಾದ ಭುಗಿಲ್ಲೆದ್ದಿದೆ. ಪ್ರಾಧ್ಯಾಪಕರೊಬ್ಬರು ರೋಬೋಡಾಗ್​ನ್ನು ಓರಿಯನ್ ಎಂದು ಪರಿಚಯಿಸಿ ಅದನ್ನು ಸಂಸ್ಥೆಯ ಶ್ರೇಷ್ಠತಾ ಕೇಂದ್ರವು ಅಭಿವೃದ್ಧಿಪಡಿಸಿದೆ ಎಂದು ಹೇಳುವ ಕ್ಲಿಪ್ ವೈರಲ್ ಆಗಿತ್ತು.
ವಾಸ್ತವವಾಗಿ ಈ ಸಾಧನವು ಯುನಿಟ್ರೀ ಗೋ2 ಆಗಿದ್ದು, ಇದು ಚೀನಾ ಮೂಲದ ರೊಬೊಟಿಕ್ಸ್ ಕಂಪನಿ ಯುನಿಟ್ರೀ ತಯಾರಿಸಿದ AI-ಚಾಲಿತ ರೋಬೋಟಿಕ್ ನಾಯಿಯಾಗಿದ್ದು, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿಲ್ಲ ಎಂದು ಆರೋಪಿಸಲಾಗಿದೆ. ನಂತರ, ವಿಶ್ವವಿದ್ಯಾನಿಲಯವು ಈ ಸಾಧನವನ್ನು ನಿರ್ಮಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ ಮತ್ತು ಅದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಚೀನಾದ ತಯಾರಕರಿಂದ ಖರೀದಿಸಲಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿತು.
ಚೀನಾ ಮೂಲದ ಜಾಗತಿಕ ರೊಬೊಟಿಕ್ಸ್ ಕಂಪನಿಯಾದ ಯುನಿಟ್ರೀಯಿಂದ ಈ ರೋಬೋಟಿಕ್ ನಾಯಿಯನ್ನು ಖರೀದಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕಾ ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯವು ಹೇಳಿಕೆಯಲ್ಲಿ ತಿಳಿಸಿದೆ.
ಸ್ಪಷ್ಟವಾಗಿ ಹೇಳಬೇಕೆಂದರೆ, ಗ್ಯಾಲ್ಗೋಟಿಯಾಸ್ ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ, ಅಥವಾ ನಾವು ಹಾಗೆ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ. ನಾವು ನಿರ್ಮಿಸುತ್ತಿರುವುದು ಶೀಘ್ರದಲ್ಲೇ ಭಾರತದಲ್ಲಿ ಅಂತಹ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ, ಎಂಜಿನಿಯರ್ ಮಾಡುವ ಮತ್ತು ತಯಾರಿಸುವ ಮನಸ್ಸುಗಳನ್ನು ಎಂದು ವಿಶ್ವವಿದ್ಯಾನಿಲಯವು ತಿಳಿಸಿದೆ.
ಆದರೆ ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆ ಸ್ಥಳದಲ್ಲಿರುವ ವಿಶ್ವವಿದ್ಯಾಲಯಕ್ಕೆ ನೀಡಲಾಗಿದ್ದ ಸ್ಟಾಲ್​ನ್ನು ಖಾಲಿ ಮಾಡುವಂತೆ ಕೇಳಲಾಯಿತು. ನಂತರ ಸ್ವಾಲ್​ಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net