ಪಾನಿ ಪುರಿ ಪಾತ್ರೆಯಲ್ಲಿ ಈಜುತ್ತಿತ್ತು ಜೀವಂತ ಇಲಿ! ಈ ವಿಡಿಯೋ ನೋಡಿದ್ರೆ ವಾಕರಿಕೆ ಬರೋದು ಗ್ಯಾರಂಟಿ | Pani Puri

ಪಾನಿಪುರಿಯ ಮಸಾಲೆಯುಕ್ತ ನೀರಿನಲ್ಲಿರುವ ಇಲಿ
ಪಾನಿಪುರಿಯ ಮಸಾಲೆಯುಕ್ತ ನೀರಿನಲ್ಲಿರುವ ಇಲಿ
Published on

ಪ್ರಮುಖ ಮುಖ್ಯಾಂಶಗಳು

  • ಪಾನಿಪುರಿ ನೀರಿನಲ್ಲಿ ಈಜುತ್ತಿದ್ದ ಇಲಿ
  • ಪಾನಿಪುರಿ ಸವಿಯಲು ಹೋದ ಗ್ರಾಹಕನಿಗೆ ಕಾದಿತ್ತು ಶಾಕ್​
  • ನಿರಂತರವಾಗಿ ಮರುಕಳಿಸುತ್ತಿರುವ ಘಟನೆಗಳು
ಅಮೃತಸರ: ಭಾರತದಲ್ಲಿ ಬೀದಿ ಬದಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳ ನೈರ್ಮಲ್ಯದ ಬಗ್ಗೆ ಪದೇ ಪದೇ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಆದರೆ, ಈಗ ಅಮೃತಸರದ ಪಾನಿ ಪುರಿ (Pani Puri) ಅಂಗಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಅಲ್ಲಿನ ಮಸಾಲೆಯುಕ್ತ ನೀರಿನ ಪಾತ್ರೆಯೊಳಗೆ ಜೀವಂತ ಇಲಿಯೊಂದು ಪತ್ತೆಯಾಗಿದ್ದು, ಈಗ ಪಾನಿಪುರಿ ಪ್ರೀಯರನ್ನು ಬೆಚ್ಚಿಬೀಳಿಸಿದೆ.

ವಿಡಿಯೋನಲ್ಲೇನಿದೆ?

ವ್ಲಾಗ್‌ಗಾಗಿ ಹೊರಟಿದ್ದ ಕಂಟೆಂಟ್ ಕ್ರಿಯೇಟರ್​ ಮತ್ತು ಅವನ ಸ್ನೇಹಿತ ಸ್ನೇಹಿತ ಪಾನಿ ಪುರಿ ಸವಿಯಲು ಸ್ಟಾಲ್ ಹತ್ತಿರ ನಿಂತಿದ್ದರು. ಮಸಾಲೆಯುಕ್ತ ನೀರು ಮತ್ತು ಮಸಾಲಾ ತುಂಬಿದ್ದ ದೊಡ್ಡ ಪಾತ್ರೆಯಲ್ಲಿ ಏನೋ ಚಲಿಸುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ. ಹತ್ತಿರ ಹೋಗಿ ನೋಡಿದಾಗ ಮಸಾಲೆ ಭರಿತ ನೀರಿನಲ್ಲಿ ಜೀವಂತ ಇಲಿಯೊಂದು ಈಜುತ್ತಿರುವುದು ಕಂಡುಬಂದಿದೆ.
ತಕ್ಷಣವೇ ವಿಡಿಯೋ ರೆಕಾರ್ಡ್ ಮಾಡಿದ ಅವರು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಾಪಾರಿಯು ಪಾತ್ರೆಯಿಂದ ಇಲಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಕೊನೆಗೆ ಆ ಇಲಿ ಪಾತ್ರೆಯಿಂದ ಹೊರಗೆ ಹಾರಿ ಹತ್ತಿರದ ಚರಂಡಿಗೆ ಓಡಿಹೋಗಿದೆ. ಆಘಾತಕ್ಕೊಳಗಾದ ವ್ಲಾಗರ್, ಆ ಕಲುಷಿತ ಮಿಶ್ರಣವನ್ನು ಕೂಡಲೇ ಎಸೆಯುವಂತೆ ವ್ಯಾಪಾರಿಗೆ ತಾಕೀತು ಮಾಡಿದ್ದಾರೆ.

ನೆಟ್ಟಿಗರ ರಿಯಾಕ್ಷನ್ ಹೇಗಿದೆ?

ಕೇವಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ನೆಟ್ಟಿಗರು ಈ ದೃಶ್ಯ ಕಂಡು ವ್ಯಾಪಾರಿಯ ಮೇಲೆ ರೇಗಿದ್ದಾರೆ.
ಭಾರತೀಯ ಬೀದಿ ಬದಿಯ ಆಹಾರದ ನೈರ್ಮಲ್ಯಕ್ಕೆ ಇದೇ ಸಾಕ್ಷಿಎಂದು ಒಬ್ಬರು ಆಕ್ರೋಶ ಹೊರಹಾಕಿದರೆ, ಇನ್ನು ಕೆಲವರು, ಆ ಅಂಗಡಿ ತುಂಬಾ ಸ್ವಚ್ಛವಾಗಿ ಕಾಣುತ್ತಿತ್ತು, ಹಾಗಿದ್ದರೂ ಇಲಿ ಹೇಗೆ ಬಂತು? ಇದು AI ಸೃಷ್ಟಿಸಿದ ವಿಡಿಯೋ ಇರಬಹುದೇ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮರುಕಳಿಸುತ್ತಿರುವ ಘಟನೆಗಳು

ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಇಂತಹ ಘಟನೆಗಳು ನಿಲ್ಲುತ್ತಿಲ್ಲ. 2025ರ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ ವಿರಾರ್‌ನಲ್ಲಿ ಪಾನಿ ಪುರಿ ಸ್ಟಾಲ್‌ನಲ್ಲಿ ಹಸಿರು ಹಾವೊಂದು ಪತ್ತೆಯಾಗಿ ಭಯ ಹುಟ್ಟಿಸಿತ್ತು. ಅಹಮದಾಬಾದ್‌ನಲ್ಲಿ ಪಾನಿ ಪುರಿ ಒಳಗಡೆ ಕೀಟಗಳು ಹರಿದಾಡುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂಗಡಿಯೊಂದನ್ನು ಮುಚ್ಚಲಾಗಿತ್ತು.
ಈ ರೀತಿಯ ಘಟನೆಗಳು ಬೀದಿ ಬದಿಯ ವ್ಯಾಪಾರಿಗಳು FSSAI ನ ನೈರ್ಮಲ್ಯ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಈ ರೀತಿಯ ಘಟನೆಗೆ ಭಾರತ ಸರ್ಕಾರ ಸೂಕ್ತ ಕಾನೂನನನ್ನು ರೂಪಿಸಬೇಕೆನ್ನುವುದು ಬೀದಿ ಬದಿ ಆಹಾರ ಸವಿಯುವವರ ಆಗ್ರಹವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net