

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು (ನವೆಂಬರ್ 16) ಸಂಜೆಯ ವೇಳೆಗೆ ಚಂಡಮಾರುತವಾಗಿ ( Cyclone Akvan ) ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಈ ಚಂಡಮಾರುತಕ್ಕೆ ‘ಅಕ್ವಾನ್’ (Akvan) ಎಂದು ಹೆಸರಿಡಲಾಗಿದ್ದು, ನವೆಂಬರ್ 17ರ ಸಂಜೆಯ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಮಾರ್ಪಟ್ಟು, ನವೆಂಬರ್ 19ರ ರಾತ್ರಿಯ ಹೊತ್ತಿಗೆ ಅತಿ ತೀವ್ರ ಚಂಡಮಾರುತದ ಸ್ವರೂಪದಲ್ಲಿ ಆಂಧ್ರಪ್ರದೇಶದ ಕರಾವಳಿಯನ್ನು ಸಮೀಪಿಸಲಿದೆ. ಸದ್ಯ ಆಗ್ನೇಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 8 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಈ ಮಾರುತವು ಚೆನ್ನೈನಿಂದ 720 ಕಿ.ಮೀ ಹಾಗೂ ವಿಶಾಖಪಟ್ಟಣದಿಂದ 820 ಕಿ.ಮೀ ದೂರದಲ್ಲಿದೆ. ಸಮುದ್ರದಲ್ಲಿ ಗಂಟೆಗೆ 50 ರಿಂದ 61 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ನವೆಂಬರ್ 20ರವರೆಗೆ ಬಂಗಾಳಕೊಲ್ಲಿ, ಅಂಡಮಾನ್ ಸಮುದ್ರ ಹಾಗೂ ಕರಾವಳಿ ತೀರಗಳಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರಲಿದೆ.
ಚಂಡಮಾರುತದ ಪರಿಣಾಮವಾಗಿ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿ ಭಾಗಗಳಲ್ಲಿ ನವೆಂಬರ್ 19 ಮತ್ತು 20ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ನವೆಂಬರ್ 19ರಂದು ಆಂಧ್ರಪ್ರದೇಶಕ್ಕೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ನವೆಂಬರ್ 20ರ ಶುಕ್ರವಾರದಂದು ವಿಶಾಖಪಟ್ಟಣಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯ ಮುನ್ಸೂಚನೆಯೊಂದಿಗೆ ಆರೆಂಜ್ ಅಲರ್ಟ್ ನೀಡಿದೆ. ಅಲ್ಲದೆ, ನಂದ್ಯಾಲ ಮತ್ತು ತಿರುಪತಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ಆಂಧ್ರಪ್ರದೇಶ ಸರ್ಕಾರವು ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ತಮಿಳುನಾಡು ಮತ್ತು ಪುದುಚೇರಿಯಲ್ಲೂ ಚಂಡಮಾರುತದ ಪ್ರಭಾವ ಜೋರಾಗಿರಲಿದ್ದು, ನವೆಂಬರ್ 17ರಿಂದ 20ರವರೆಗೆ ವ್ಯಾಪಕ ಮಳೆಯಾಗಲಿದೆ. ನವೆಂಬರ್ 17ರ ಮಂಗಳವಾರ ಚೆನ್ನೈ, ತಿರುವಳ್ಳೂರು, ಚೆಂಗಲ್ಪಟ್ಟು, ರಾಮನಾಥಪುರಂ ಮತ್ತು ಮೈಲಾಡುತುರೈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಆದರೆ, ನವೆಂಬರ್ 18 ಮತ್ತು 19ರಂದು ಚೆನ್ನೈ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಸಂಭವವಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಎದುರಾಗಿದೆ. ಉಳಿದಂತೆ ಮಧುರೈ, ಕನ್ಯಾಕುಮಾರಿ, ತಂಜಾವೂರು, ನಾಗಪಟ್ಟಣಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮತ್ತೊಂದೆಡೆ, ಒಡಿಶಾ ಸರ್ಕಾರವು ಚಂಡಮಾರುತವನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 'ಶೂನ್ಯ ಸಾವು-ನೋವು' (Zero Casualties) ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 19ರಂದು ಗಂಜಾಂ, ಗಜಪತಿ ಮತ್ತು ಪುರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹಾಗೂ ನವೆಂಬರ್ 20ರಂದು ಅತಿ ಭಾರಿ ಮಳೆಯ ಮುನ್ಸೂಚನೆಯೊಂದಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಂಜಾಂ ಜಿಲ್ಲಾಧಿಕಾರಿ ವಿ. ಕೀರ್ತಿ ವಾಸನ್ ಅವರು ಅಧಿಕಾರಿಗಳ ವಾರಾಂತ್ಯದ ರಜೆಗಳನ್ನು ರದ್ದುಗೊಳಿಸಿದ್ದು, ಚಂಡಮಾರುತ ಪರಿಹಾರ ಕೇಂದ್ರಗಳಲ್ಲಿ ಕುಡಿಯುವ ನೀರು, ಆಹಾರ, ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಸೂಚಿಸಿದ್ದಾರೆ. ಅಲ್ಲದೆ, ಗರ್ಭಿಣಿಯರನ್ನು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಜಾನುವಾರುಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.
ರೈತರು ಮತ್ತು ಮೀನುಗಾರರಿಗೂ ಸರ್ಕಾರಗಳು ಮಹತ್ವದ ಸೂಚನೆಗಳನ್ನು ನೀಡಿವೆ. ನವೆಂಬರ್ 18 ಮತ್ತು 19ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಒಡಿಶಾ ಸರ್ಕಾರವು ರೈತರಿಗೆ ತಮ್ಮ ಬೆಳೆಗಳನ್ನು ಶೀಘ್ರವಾಗಿ ಕಟಾವು ಮಾಡಿಕೊಳ್ಳುವಂತೆ ಸಲಹೆ ನೀಡಿದೆ. ಅಲ್ಲದೆ, ಇಂದು (ನವೆಂಬರ್ 16) ಸಂಜೆಯೊಳಗೆ ಸಮುದ್ರಕ್ಕೆ ತೆರಳಿರುವ ಎಲ್ಲಾ ಮೀನುಗಾರರು ದಡಕ್ಕೆ ಮರಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಮುಂದಿನ ಆದೇಶದವರೆಗೆ ಯಾರೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕೆ ಇಲಾಖೆ ನಿಗಾ ವಹಿಸಿದೆ. ಪಂಚಾಯತ್ ಪ್ರತಿನಿಧಿಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಭರದಿಂದ ಸಾಗಿದೆ.
‘ಅಕ್ವಾನ್’ (Akvan) ಚಂಡಮಾರುತವು ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಯತ್ತ ಸಾಗುತ್ತಿರುವುದರಿಂದ, ಕರ್ನಾಟಕದ ಮೇಲೂ ಇದರ ಪರೋಕ್ಷ ಪ್ರಭಾವ ಬೀರಲಿದೆ. ವಿಶೇಷವಾಗಿ ನವೆಂಬರ್ 18ರಿಂದ 21ರವರೆಗೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೊಂದಿಕೊಂಡಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಂಪಾದ ಗಾಳಿಯೊಂದಿಗೆ ತುಂತುರು ಅಥವಾ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ. ಇದರಿಂದ ರಾಜ್ಯಾದ್ಯಂತ ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ರೈತರು ಕಟಾವಿಗೆ ಬಂದಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಮೇಲೂ ‘ಅಕ್ವಾನ್’ ಚಂಡಮಾರುತದ ಪ್ರಭಾವ ಬೀರಲಿದೆ. ನವೆಂಬರ್ 19ರಿಂದ 21ರವರೆಗೆ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ದಕ್ಷಿಣ 24 ಪರಗಣ ಮತ್ತು ಪೂರ್ವ ಮೇದಿನಿಪುರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 20 ಮತ್ತು 21ರಂದು ಹೌರಾ, ಪಶ್ಚಿಮ ಮೇದಿನಿಪುರ ಮತ್ತು ಜಾರ್‌ಗ್ರಾಮ್ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ರಾಜಧಾನಿ ಕೋಲ್ಕತ್ತಾ ಸೇರಿದಂತೆ ಗಂಗಾ ಬಯಲು ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ, (ಏಜೆನ್ಸೀಸ್).