ಮಾಜಿ ಸಿಎಂ ಆದ ನನಗೇ ಹೊರಬರಲು ಬಿಡುತ್ತಿಲ್ಲ!...ಟಿಎಂಸಿ ನಾಯಕರ ಮೇಲಿನ ಮೊಟ್ಟೆ ದಾಳಿ ವಿರುದ್ಧ ರೊಚ್ಚಿಗೆದ್ದ ದೀದಿ |Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯ ರಾಜಕೀಯ ಪರಿಣಾಮವು ಎಷ್ಟೊಂದು ತೀವ್ರವಾಗಿದೆ ಎಂದರೆ, ನನಗೆ ನನ್ನ ಮನೆಯಿಂದ ಹೊರಗೆ ಹೆಜ್ಜೆ ಇಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಬುಧವಾರದಂದು ಹೇಳಿಕೊಂಡಿದ್ದಾರೆ.
ಟಿಎಂಸಿ ನಾಯಕರ ಮೇಲಿನ ಮೊಟ್ಟೆ ದಾಳಿ ವಿರುದ್ಧ ರೊಚ್ಚಿಗೆದ್ದ ದೀದಿ
ಟಿಎಂಸಿ ನಾಯಕರ ಮೇಲಿನ ಮೊಟ್ಟೆ ದಾಳಿ ವಿರುದ್ಧ ರೊಚ್ಚಿಗೆದ್ದ ದೀದಿ
Published on: 

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯ ರಾಜಕೀಯ ಪರಿಣಾಮವು ಎಷ್ಟೊಂದು ತೀವ್ರವಾಗಿದೆ ಎಂದರೆ, ನನಗೆ ನನ್ನ ಮನೆಯಿಂದ ಹೊರಗೆ ಹೆಜ್ಜೆ ಇಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಬುಧವಾರದಂದು ಹೇಳಿಕೊಂಡಿದ್ದಾರೆ.

ಬಿಜೆಪಿಯು ತನ್ನ ದೊಡ್ಡ ಚುನಾವಣಾ ಗೆಲುವಿನ ಬಳಿಕ ಅರಾಜಕತೆ ಸೃಷ್ಟಿಸಿದ್ದು, ರಾಜ್ಯದಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, ಬಂಗಾಳದಲ್ಲಿ ರಾಜಕೀಯ ಉದ್ವಿಗ್ನತೆಯ ವಾತಾವರಣ ಮುಂದುವರಿದಿದ್ದು, ತೃಣಮೂಲ ನಾಯಕರ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಸಭೆಯಲ್ಲಿ ವಿರೋಧ ಪಕ್ಷಗಳು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಆಯೋಗದ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದವು.

ಇದನ್ನೂ ಓದಿ:ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಸಮರ: ಅಕ್ಟೋಬರ್ 2 ರಿಂದ ಪ್ರಜಾಪ್ರಭುತ್ವ ಉಳಿಸಿ ಬೃಹತ್ ಅಭಿಯಾನ! | INDIA Bloc

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಾತಾವರಣ ಕಾವೇರಿದ್ದು, ಹಲವು ತೃಣಮೂಲ ನಾಯಕರು ಪ್ರತಿಭಟನೆಗಳು ಮತ್ತು ಮೊಟ್ಟೆ ಎಸೆಯುವ ದಾಳಿಗಳನ್ನು ಎದುರಿಸುತ್ತಿದ್ದಾರೆ. ಈ ಘಟನೆಗಳನ್ನು ಬಿಜೆಪಿಯೇ ಯೋಜಿಸಿ ನಡೆಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಆದರೆ, ಬಿಜೆಪಿಯು ಈ ದಾಳಿಗಳನ್ನು ಟಿಎಂಸಿ ವಿರುದ್ಧ ಸಾರ್ವಜನಿಕರ ಆಕ್ರೋಶದ ಉದಾಹರಣೆ ಎಂದು ವ್ಯಾಖ್ಯಾನಿಸಿದೆ. ಕಳೆದ ವಾರ ಹುಗ್ಲಿಯಲ್ಲಿ ಶಾಸಕ ಕುನಾಲ್ ಘೋಷ್ ಅವರ ಕಾರನ್ನು ಗುಂಪೊಂದು ತಡೆದು ನಿಲ್ಲಿಸಿತ್ತು ಎನ್ನಲಾಗಿದೆ. ಅವರ ವಾಹನದ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ತೂರಲಾಗಿದ್ದು, ದಾಳಿಗೆ ಒಳಗಾದ ಟಿಎಂಸಿ ನಾಯಕರ ಸಾಲಿಗೆ ಘೋಷ್ ಇತ್ತೀಚಿನ ಸೇರ್ಪಡೆಯಾಗಿದ್ದಾರೆ.

ಇಂಡಿಯಾ ಒಕ್ಕೂಟದ ಸಭೆ!

ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ 20ಕ್ಕೂ ಹೆಚ್ಚು ವಿರೋಧ ಪಕ್ಷಗಳ ಪ್ರಮುಖ ಸಭೆಯಲ್ಲಿ, ಮಮತಾ ಬ್ಯಾನರ್ಜಿ ಅವರು ಎಸ್​​ಐಆರ್​ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ನಿರಂತರವಾಗಿ ತೆಗೆದುಹಾಕಲಾಗುತ್ತಿದೆ ಎಂದು ಆಯೋಗದ ವಿರುದ್ಧ ಗಂಭೀರ ಆರೋಪ ಹೊರಿಸಿದ ಅವರು, ಜ್ಞಾನೇಶ್‌ ಕುಮಾರ್‌ ಅವರನ್ನು ವ್ಯಾನಿಶ್ ಕುಮಾರ್ ಎಂದು ಲೇವಡಿ ಮಾಡಿದರು ಎಂದು ಮೂಲಗಳ ಉಲ್ಲೇಖ.

ಬಂಗಾಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣ ಅಸ್ತವ್ಯಸ್ತಗೊಂಡ ಅಭ್ಯಾಸ ಎಂದು ಕರೆದ ದೀದಿ, ಜ್ಞಾನೇಶ್‌ ಕುಮಾರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Also Read
INDIA ಕೂಟದ ಸಭೆಯಿಂದ ದೂರ ಉಳಿದು ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಅಖಿಲೇಶ್..! ಎಸ್‌ಪಿ ನಾಯಕನ ಗೈರಿನ ಹಿಂದಿರುವ ಕಾರಣ ಇದೇನಾ...?
ಟಿಎಂಸಿ ನಾಯಕರ ಮೇಲಿನ ಮೊಟ್ಟೆ ದಾಳಿ ವಿರುದ್ಧ ರೊಚ್ಚಿಗೆದ್ದ ದೀದಿ

ಎಸ್‌ಐಆರ್ ಪ್ರಕ್ರಿಯೆ ಮತ್ತು ಚುನಾವಣಾ ಮಂಡಳಿಯ ಕಾರ್ಯನಿರ್ವಹಣೆಯ ವಿರುದ್ಧ ಜಂಟಿ ಹೋರಾಟದ ತಂತ್ರ ರೂಪಿಸಲು ವಿರೋಧ ಪಕ್ಷಗಳು ಒಂದಾಗಿದ್ದ ವೇಳೆ ಈ ವಾಗ್ದಾಳಿ ನಡೆದಿದೆ. ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯೋಗದ ಆಂತರಿಕ ವಲಯದಲ್ಲೇ ಭಿನ್ನಾಭಿಪ್ರಾಯಗಳಿವೆಯೆಂಬ ವರದಿಗಳ ನಡುವೆ, ಜ್ಞಾನೇಶ್‌ ಕುಮಾರ್‌ ಅವರನ್ನು ಹುದ್ದೆಯಿಂದ ತಕ್ಷಣವೇ ತೆಗೆದುಹಾಕಬೇಕೆಂದು ಒಕ್ಕೂಟದ ನಾಯಕರು ಒತ್ತಾಯಿಸಿದರು. ಆದರೆ, ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಆಯುಕ್ತರ ನಡುವಿನ ಚರ್ಚೆಗಳು ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು ಸಾಮಾನ್ಯ ಸಾಂಸ್ಥಿಕ ಪ್ರಕ್ರಿಯೆಯ ಭಾಗವಾಗಿದ್ದು, ಎಲ್ಲಾ ಅಂತಿಮ ನಿರ್ಧಾರಗಳನ್ನು ನಿಯಮಾನುಸಾರವೇ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದೇ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತದಾರರ ಹಕ್ಕುಗಳನ್ನು ರಕ್ಷಿಸಲು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು. ಮುಂಬರುವ ಚುನಾವಣೆಗಳಿಗೆ ಎಸ್‌ಐಆರ್ ಪ್ರಕ್ರಿಯೆಗಿಂತ ಮುಂಚಿನ ಮತದಾರರ ಪಟ್ಟಿಯನ್ನೇ ಬಳಸಬೇಕು, ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಮುನ್ನ ಪರಿಣಾಮಕಾರಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಆಡಳಿತಾತ್ಮಕ ಲೋಪಗಳಿಂದಾಗಿ ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು. ಇದರೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಮುಂಬರುವ ಚುನಾವಣೆಗಳಲ್ಲಿ ಇವಿಎಮ್ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣಾ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net