

ವಿಜಯವಾಡ: ಪೋಲೀಸರಂತೆ ನಟಿಸಿ ಅಕೌಂಟೆಂಟ್ ಒಬ್ಬರನ್ನು ಬೆದರಿಸಿ ಬರೋಬ್ಬರಿ 15 ಲಕ್ಷ ರೂಪಾಯಿ ನಗದನ್ನು ( Bundles of money ) ದೋಚಿ, ಆ ಹಣವನ್ನು ಅತ್ಯಂತ ಜಾಣತನದಿಂದ ಆಲದ ಮರದ ತೊಗಟೆಯಲ್ಲಿ ಬಚ್ಚಿಟ್ಟಿದ್ದ ಖತರ್ನಾಕ್ ಕಳ್ಳರ ಜಾಲವೊಂದನ್ನು ಗುಂಟೂರು ಪೊಲೀಸರು ಕೇವಲ ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ.
ಸಿನಿಮಾ ಶೈಲಿಯಲ್ಲಿ ನಡೆದ ಈ ದರೋಡೆ ಪ್ರಕರಣದಲ್ಲಿ ಕಳ್ಳರು ಎಷ್ಟೇ ಚಾಲಾಕಿತನದಿಂದ ಹಣವನ್ನು ಬಚಿಟ್ಟಿದ್ದರೂ, ಪೊಲೀಸರ ಚುರುಕಾದ ಕಾರ್ಯಾಚರಣೆ ಮತ್ತು ಸೂಕ್ತ ತನಿಖೆಯಿಂದಾಗಿ ಕೊನೆಗೂ ಕಂಬಿ ಎಣಿಸುವಂತಾಗಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ರೋಚಕ ಘಟನೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಘಟನೆಯ ವಿವರಗಳ ಪ್ರಕಾರ, ಗುಂಟೂರು ನಗರದ ಪ್ರಮುಖ ಉಕ್ಕಿನ (ಸ್ಟೀಲ್) ಕಂಪನಿಯೊಂದರಲ್ಲಿ ರಫಿ ಎಂಬುವವರು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಸಾಯಂಕಾಲ ರಫಿ ಅವರು ತಮ್ಮ ಕಂಪನಿಗೆ ಸೇರಿದ ಬರೋಬ್ಬರಿ 15 ಲಕ್ಷ ರೂಪಾಯಿ ನಗದನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು, ಬೈಕ್‌ನಲ್ಲಿ ವಿಜಯವಾಡದತ್ತ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದ ಮೂವರು ಅಪರಿಚಿತ ವ್ಯಕ್ತಿಗಳು ಬೈಕ್ ತಡೆದು ನಿಲ್ಲಿಸಿದ್ದಾರೆ. ತಮ್ಮನ್ನು ತಾವು ಸಾದಾ ಉಡುಪಿನಲ್ಲಿರುವ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ರಫಿ ಅವರನ್ನು ತೀವ್ರವಾಗಿ ಬೆದರಿಸಲು ಪ್ರಾರಂಭಿಸಿದ್ದಾರೆ.
ಪೋಲೀಸರ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಆ ದುಷ್ಕರ್ಮಿಗಳು ಕಣ್ಣುಮಿಟುಕಿವಷ್ಟರಲ್ಲಿ ರಫಿ ಅವರ ಬಳಿಯಿದ್ದ 15 ಲಕ್ಷ ರೂಪಾಯಿ ನಗದು ಹಣದ ಬ್ಯಾಗ್ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಿಂದ ದಿಗ್ಭ್ರಾಂತರಾದ ರಫಿ ಅವರು ತಕ್ಷಣವೇ ಮಂಗಳಗಿರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ರಾಷ್ಟ್ರೀಯ ಹೆದ್ದಾರಿ ಹಾಗೂ ದರೋಡೆ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಶೇಖ್ ಜಾನಿ, ಶೇಖ್ ಸೂರಜ್ ಮತ್ತು ಶೇಖ್ ನಾಗೂರ್ ಎಂದು ಗುರುತಿಸಿದ್ದಾರೆ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ, ದೋಚಿದ್ದ ಹಣವನ್ನು ಎಲ್ಲಿದ್ದಾರೆ ಎಂಬ ಸತ್ಯವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಚಿನ್ನಕಾಕಾನಿ ರಾಜ ಕಮಲ್ ರಸ್ತೆಯ ಬದಿಯಲ್ಲಿದ್ದ ಹಳೆಯ ಆಲದ ಮರದ ದೊಡ್ಡ ತೊಗಟೆಯ ಒಳಗೆ 15 ಲಕ್ಷ ರೂಪಾಯಿ ನಗದನ್ನು ಸುರಕ್ಷಿತವಾಗಿ ಬಚಿಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ತಕ್ಷಣವೇ ಆ ಜಾಗಕ್ಕೆ ಧಾವಿಸಿದ ಪೊಲೀಸರು ಆಲದ ಮರದ ತೊಗಟೆಯೊಳಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣ ಭೇದಿಸಿ, ಕಳುವಾಗಿದ್ದ ಹಣವನ್ನು ಮರಳಿ ವಶಕ್ಕೆ ಪಡೆದ ಮಂಗಳಗಿರಿ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ, (ಏಜೆನ್ಸೀಸ್).