ಗಂಡನಿಗೆ ತಿಳಿಯದಂತೆ ಸರಣಿ ಕಳ್ಳತನ: ಇಂಟರ್ನೆಟ್ ನೋಡಿ ಕನ್ನ ಕೊರೆಯುತ್ತಿದ್ದ ಖತರ್ನಾಕ್​ ಬುರ್ಖಾ ಕಳ್ಳಿ ಬಂಧನ! Learns Theft Online

ಕಳ್ಳತನಕ್ಕೆ ತೆರಳುವಾಗ ಕಪ್ಪು ಬಣ್ಣದ ಉದ್ದನೆಯ ಬುರ್ಖಾ, ಕೈಗಳಿಗೆ ಕಪ್ಪು ಗ್ಲೌಸ್ ಹಾಗೂ ಬೆನ್ನಿಗೆ ಲೈಟ್ ಬ್ಲೂ ಬಣ್ಣದ ಬ್ಯಾಗ್ ಧರಿಸಿ ಜಾಣತನದಿಂದ ಕಾರ್ಯನಿರ್ವಹಿಸುತ್ತಿದ್ದಳು.
Learns Theft Online
ಇಂಟರ್ನೆಟ್ ನೋಡಿ ಕನ್ನ ಕೊರೆಯುತ್ತಿದ್ದ ಖತರ್ನಾಕ್​ ಬುರ್ಖಾ ಕಳ್ಳಿ ಬಂಧನ
Published on: 

ಹೈದರಾಬಾದ್​: ಆಡಂಬರದ ಜೀವನಶೈಲಿಯ ಹುಚ್ಚಿಗೆ ಬಿದ್ದು, ಕಳ್ಳತನ ಮಾಡುವುದು ಹೇಗೆಂದು ಯೂಟ್ಯೂಬ್ ಹಾಗೂ ಇಂಟರ್ನೆಟ್‌ನಲ್ಲಿ ಕಲಿತು ( Learns Theft Online ) ಸರಣಿ ಕಳ್ಳತನ ಮಾಡುತ್ತಿದ್ದ 25 ವರ್ಷದ ಯುವತಿಯೊಬ್ಬಳು ಕೊನೆಗೂ ಹೈದರಾಬಾದ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಬಂಧಿತಳನ್ನು ಪಾಗಾ ಜಯಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಗಂಡನಿಗೂ ತಿಳಿಯದಂತೆ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದಳು. ಸಿಸಿಟಿವಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಸಂಪೂರ್ಣವಾಗಿ ಬುರ್ಖಾ, ಮುಖವಾಡ ಹಾಗೂ ಗ್ಲೌಸ್ ಧರಿಸಿ ಕೃತ್ಯ ಎಸಗುತ್ತಿದ್ದ ಈಕೆಯಿಂದ ಬರೋಬ್ಬರಿ 70 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಹಾಗೂ ಐಫೋನ್ 17 ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Also Read
ಕೋಟಿ ಕೋಟಿ ಸಂಪತ್ತು ಬಾಚಿಕೊಳ್ಳುವ ವಿಶೇಷ ಸಂಖ್ಯೆಯವರು ಯಾರು ಗೊತ್ತಾ? ಸಂಖ್ಯಾಶಾಸ್ತ್ರದಲ್ಲಿದೆ ಇದಕ್ಕೆ ಉತ್ತರ! Numerology
Learns Theft Online

ಪೋಲೀಸ್ ತನಿಖೆಯಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಈಕೆ ಹೈದರಾಬಾದ್‌ನ ವಿವಿಧ ಪ್ರದೇಶಗಳಲ್ಲಿ ಒಟ್ಟು 5 ಪ್ರಮುಖ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು. ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಸಾಕ್ಷ್ಯಗಳು ಸಿಗದಂತೆ ಬೀಗ ಮುರಿಯುವ ತಂತ್ರಗಳನ್ನು ಈಕೆ ಇಂಟರ್ನೆಟ್‌ನಿಂದ ಕರಗತ ಮಾಡಿಕೊಂಡಿದ್ದಳು. ಕಳ್ಳತನಕ್ಕೆ ತೆರಳುವಾಗ ಕಪ್ಪು ಬಣ್ಣದ ಉದ್ದನೆಯ ಬುರ್ಖಾ, ಕೈಗಳಿಗೆ ಕಪ್ಪು ಗ್ಲೌಸ್ ಹಾಗೂ ಬೆನ್ನಿಗೆ ಲೈಟ್ ಬ್ಲೂ ಬಣ್ಣದ ಬ್ಯಾಗ್ ಧರಿಸಿ ಜಾಣತನದಿಂದ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ಇತ್ತೀಚೆಗೆ ಮನೆ ಒಂದರ ಬೀಗ ಮುರಿಯಲು ಯತ್ನಿಸಿ ವಿಫಲವಾಗಿ ಹಿಂತಿರುಗುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೇ ಸುಳಿವು ಹಿಡಿದು ಹೊರಟ ಪೊಲೀಸರು ಕೊನೆಗೂ ಈಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಹೈದರಾಬಾದ್‌ನಲ್ಲಿ ನಡೆದ ಮತ್ತೊಂದು ಭಿನ್ನ ಕಳ್ಳತನ ಪ್ರಕರಣದಲ್ಲಿ ಕೇವಲ 20 ದಿನಗಳಲ್ಲಿ ಬರೋಬ್ಬರಿ 10 ಮನೆಗಳಲ್ಲಿ ಕಳವು ಮಾಡಿದ್ದ ನವೀನ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ನವೀನ್‌ನಿಂದ ಸುಮಾರು 37 ತೊಲ (ಅಂದಾಜು 430 ಗ್ರಾಂ) ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸರಣಿ ಕಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಈ ಖತರ್ನಾಕ್ ಕಳ್ಳನ ಬಂಧನದಿಂದಾಗಿ ಹಲವು ದಿನಗಳಿಂದ ಬಾಕಿ ಉಳಿದಿದ್ದ ಕಳವು ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

Also Read
ನಿಮ್ಮ ಹೆಂಡತಿಯೊಂದಿಗೆ ಶಾಪಿಂಗ್‌ಗೆ ಹೋದಾಗ...ನಟ ಸೂರ್ಯ ಸಲಹೆ ಕೇಳಿ ರೊಚ್ಚಿಗೆದ್ದ ನೆಟ್ಟಿಗರು, ಭಾರೀ ಟೀಕೆ! Actor Suriya
Learns Theft Online

ಸದ್ಯ ಈ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಹೈದರಾಬಾದ್ ಪೊಲೀಸರು ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಯುವತಿ ಮತ್ತು ನವೀನ್ ನಗರದ ಇನ್ನಿತರ ಕಳ್ಳತನ ಅಥವಾ ಕನ್ನ ಕೊರೆಯುವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಹಾಗೂ ಇವರ ಹಿಂದೆ ಯಾವುದಾದರೂ ದೊಡ್ಡ ಜಾಲ ಕೆಲಸ ಮಾಡುತ್ತಿದೆಯೇ ಎಂಬುದರ ಕುರಿತು ಆಳವಾದ ತನಿಖೆ ಮುಂದುವರಿದಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನೆಟ್ವರ್ಕ್ ಬಳಸಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ, (ಏಜೆನ್ಸೀಸ್​).