ಭಾರತೀಯ ಉದ್ಯಮದ 25 ವರ್ಷಗಳ ಸುವರ್ಣಯಾನ: ಜಾಗತಿಕ ಕೈಗಾರಿಕಾ ಮಹಾಶಕ್ತಿಯಾಗಿ ಹೊರಹೊಮ್ಮಿದ ಭಾರತ! Indian Industry 25 Years

ಬಂಡವಾಳ ಸಂಬಂಧಿತ ಅಪಾಯಗಳನ್ನು ಎದುರಿಸಲು ಮತ್ತು ದೀರ್ಘಾವಧಿಗೆ ಬದ್ಧತೆ ತೋರಲು ಉದ್ಯಮಕ್ಕೆ ಆತ್ಮವಿಶ್ವಾಸದ ವಾತಾವರಣದ ಅಗತ್ಯವಿದೆ. ಮೋದಿ ಅವರು ಅದನ್ನು ಮೊದಲು ಗುಜರಾತ್​ನಲ್ಲಿ ಸೃಷ್ಟಿಸಿದರು.
Indian Industry 25 Years
ಉದಯ್​ ಕೋಟಕ್​, ಕೋಟಕ್ ಮಹೀಂದ್ರಾ ಬ್ಯಾಂಕ್​ನ ಸಂಸ್ಥಾಪಕರು ಮತ್ತು ನಿರ್ದೇಶಕರು
Published on: 

ಭಾರತವು ಉದ್ಯಮಶೀಲತೆಯ ದೇಶ. ನಾವು ದೊಡ್ಡ ವ್ಯಾಪಾರ ಮನೆತನಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಹಾಗೂ ವ್ಯಾಪಾರ ಸಮುದಾಯ ಹೊಂದಿದ್ದೇವೆ. ಕಳೆದ 25 ವರ್ಷಗಳಲ್ಲಿ ( Indian Industry 25 Years ), ಅದು ಗುಜರಾತ್ ಆಗಿರಲಿ ಅಥವಾ ಇಡೀ ಭಾರತವಾಗಿರಲಿ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತೀಯ ಉದ್ಯಮ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಹೊಂದಿ ಪ್ರವರ್ಧಮಾನಕ್ಕೆ ಬಂದಿದೆ.

ಬಂಡವಾಳ ಸಂಬಂಧಿತ ಅಪಾಯಗಳನ್ನು ಎದುರಿಸಲು ಮತ್ತು ದೀರ್ಘಾವಧಿಗೆ ಬದ್ಧತೆ ತೋರಲು ಉದ್ಯಮಕ್ಕೆ ಆತ್ಮವಿಶ್ವಾಸದ ವಾತಾವರಣದ ಅಗತ್ಯವಿದೆ. ಮೋದಿ ಅವರು ಅದನ್ನು ಮೊದಲು ಗುಜರಾತ್​ನಲ್ಲಿ ಸೃಷ್ಟಿಸಿದರು.

2003ರಲ್ಲಿ ಆರಂಭವಾದ 'ವೈಬ್ರೆಂಟ್ ಗುಜರಾತ್ ಶೃಂಗಸಭೆ'ಯು ಈ ದೃಷ್ಟಿಕೋನದ ಆರಂಭಿಕ ಅಭಿವ್ಯಕ್ತಿಯಾಗಿತ್ತು. ಇದು ಉದ್ಯಮವನ್ನು ಪ್ರೋತ್ಸಾಹಿಸಲು, ಉದ್ಯಮಗಳ ಕಳವಳಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಗಮ ವ್ಯಾಪಾರವನ್ನು ಸುಧಾರಿಸಲು ಒಂದು ವೇದಿಕೆಯಾಯಿತು. ರಾಜ್ಯಮಟ್ಟದ ಹೂಡಿಕೆ ಶೃಂಗಸಭೆಗಳ ಈ ಕಲ್ಪನೆಯನ್ನು ತರುವಾಯ ಭಾರತದಾದ್ಯಂತದ ಸರ್ಕಾರಗಳು ಅನುಕರಿಸಿದವು. ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಭಾರತೀಯ ಉದ್ಯಮದ ಮೇಲಿನ ಅವರ ಪ್ರಭಾವ ಗುಜರಾತಿನ ಆಚೆಗೂ ವಿಸ್ತರಿಸಿತ್ತು.

Also Read
ಭಾರತ-ಸ್ವಿಸ್ ದ್ವಿಪಕ್ಷೀಯ ಬೆಸುಗೆ: ಸ್ವಿಜರ್ಲೆಂಡ್ ಅಧ್ಯಕ್ಷ ಪರ್ಮೆಲಿನ್ ಗೌರವಾರ್ಥ ಔತಣಕೂಟ; ಪಿಎಂ ಮೋದಿ ಸತ್ಕಾರದಲ್ಲಿ ಡಾ. ಆನಂದ ಸಂಕೇಶ್ವರ ಭಾಗಿ! Dr Anand Sankeshwar
Indian Industry 25 Years

ಗುಜರಾತಿನ ವಿಧಾನವು ಎಲ್ಲೋ ಒಂದು ಕಾರ್ಖಾನೆ, ಇಲ್ಲಿ ಇನ್ನೊಂದು ಕಾರ್ಖಾನೆ ಸ್ಥಾಪಿಸುವುದರ ಬದಲಿಗೆ ಸಮಗ್ರ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವುದಾಗಿತ್ತು. ಬಂದರುಗಳು, ರಸ್ತೆಗಳು, ವಿದ್ಯುತ್, ಕೈಗಾರಿಕಾ ಪ್ರದೇಶಗಳು ಮತ್ತು ಕ್ಲಸ್ಟರ್ಗಳನ್ನು ಒಟ್ಟಿಗೆ ಅಭಿವೃದ್ಧಿಪಡಿಸಲಾಯಿತು. ದಹೇಜ್ ಪ್ರಮುಖ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕೇಂದ್ರವಾಯಿತು. ಸಾನಂದ್ ಆಟೋಮೊಬೈಲ್ ಮತ್ತು ಎಂಜಿನಿಯರಿಂಗ್ ಹಬ್ ಆಗಿ ಅಭಿವೃದ್ಧಿಗೊಂಡಿತು. ಕಚ್ಛ್ ಕೈಗಾರಿಕೆ ಮತ್ತು ನವೀಕರಿಸಬಹುದಾದ ಇಂಧನದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತು.

ಮೂಲಸೌಕರ್ಯ, ನೀತಿ ಮತ್ತು ಉದ್ಯಮಶೀಲತಾ ಶಕ್ತಿಯು ಒಂದೇ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಿದಾಗ ಉತ್ಪಾದನೆಯು ಪ್ರತಿಕ್ರಿಯಿಸುತ್ತದೆ ಎಂಬುದು ಗುಜರಾತಿನಿಂದ ಕಲಿಯಬಹುದಾದ ದೊಡ್ಡ ಪಾಠವಾಗಿದೆ. 2014ರಲ್ಲಿ ಮೋದಿ ಅವರು ಗಾಂಧಿನಗರದಿಂದ ನವದೆಹಲಿಗೆ ತೆರಳಿದಾಗ, ಉದ್ಯಮ ಮತ್ತು ಉತ್ಪಾದನೆಯ ಬಗ್ಗೆ ಅವರು ಹೊಂದಿದ್ದ ತಿಳಿವಳಿಕೆಗೆ ತಕ್ಕಂತೆ ಕೆಲಸ ಮಾಡಲು ದೊಡ್ಡ ವೇದಿಕೆ ದೊರೆತಂತಾಯಿತು.

ಮೋದಿಯವರು ಕೇವಲ ಅನಿವಾರ್ಯತೆಯಿಂದ ಅಲ್ಲದೆ, ಪೂರ್ವಭಾವಿಯಾಗಿ ಸುಧಾರಣೆಗಳನ್ನು ತರುವ ಇಚ್ಛಾಶಕ್ತಿಯನ್ನು ತೋರಿದ್ದಾರೆ. ಹಲವಾರು ಸುಧಾರಣೆಗಳು ಉದ್ಯಮದ ವಾತಾವರಣವನ್ನು ಸುಧಾರಿಸಿವೆ. ʻಜಿ.ಎಸ್.ಟಿʼ ಹೆಚ್ಚು ಸಮಗ್ರ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಿದೆ ಮತ್ತು ಬಹು ತೆರಿಗೆಗಳ ಜಾಲವನ್ನು ತೊಡೆದುಹಾಕಿದೆ. ದಿವಾಳಿತನ ಸಂಹಿತೆಯು ಒಂದು ಸಮಗ್ರ ಚೌಕಟ್ಟನ್ನು ಸೃಷ್ಟಿಸಿದ್ದು, ಅದರ ಮೂಲಕ ಬಂಡವಾಳ ಮತ್ತು ಉತ್ಪಾದಕ ಸ್ವತ್ತುಗಳನ್ನು ಮರುಹಂಚಿಕೆ ಮಾಡಬಹುದಾಗಿದೆ. ಡಿಜಿಟಲೀಕರಣ ಮತ್ತು ಔಪಚಾರಿಕರಣವು ಹೆಚ್ಚಿನ ಆರ್ಥಿಕ ಚಟುವಟಿಕೆಗಳನ್ನು ಔಪಚಾರಿಕ ವ್ಯವಸ್ಥೆಯಡಿ ತಂದಿದೆ. ನಾಲ್ಕು ಕಾರ್ಮಿಕ ಸಂಹಿತೆಗಳು ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಕ್ರೋಢೀಕರಿಸಿ ತರ್ಕಬದ್ಧಗೊಳಿಸಿವೆ. ಒಟ್ಟಾರೆಯಾಗಿ, ಈ ಬದಲಾವಣೆಗಳು ವ್ಯವಹಾರಗಳ ಕಾರ್ಯಾಚರಣೆ ಮತ್ತು ಬೆಳವಣಿಗೆಯನ್ನು ಸುಲಭಗೊಳಿಸಿವೆ.

ಸರಕುಗಳ ಸಾಗಣೆಯಲ್ಲಿ ಇದ್ದ ವೆಚ್ಚ ಮತ್ತು ವಿಳಂಬವು ಭಾರತೀಯ ಉದ್ಯಮದ ಹಳೆಯ ಅಡಚಣೆಗಳಲ್ಲಿ ಒಂದಾಗಿತ್ತು. ಆದರೆ, ಮೂಲಸೌಕರ್ಯಕ್ಕಾಗಿ ಮಾಡಲಾದ ವೆಚ್ಚವು ಈ ಸಮಸ್ಯೆಯನ್ನು ಪರಿಹರಿಸಿದೆ. ರಸ್ತೆಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಎಕ್ಸ್ಪ್ರೆಸ್ವೇಗಳು ಆರ್ಥಿಕತೆಯ ರಕ್ತನಾಳಗಳಾಗುತ್ತಿವೆ. ಪೂರ್ವ ಮತ್ತು ಪಶ್ಚಿಮ ವಿಶೇಷ ಸರಕು-ಸಾಗಣೆ ಕಾರಿಡಾರ್ಗಳು ಸರಕು ಸಾಗಣೆಗೆ ಹೊಸ ಬೆನ್ನೆಲುಬನ್ನು ಸೃಷ್ಟಿಸಿವೆ. ತಮ್ಮದೇ ಆದ ಸರಕು-ಸಾಗಣೆ ಜಾಲಗಳು ಮತ್ತು ವಾಹನ ಶ್ರೇಣಿಗಳನ್ನು ನಿರ್ಮಿಸಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ. ಉತ್ತಮ ಸಂಪರ್ಕವು ಅಂತಹ ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ ಮತ್ತು ಉತ್ಪಾದನಾ ಆರ್ಥಿಕತೆಯನ್ನು ಬದಲಾಯಿಸುತ್ತದೆ.

ಕ್ಷಿಪ್ರ ಆರ್ಥಿಕ ಬೆಳವಣಿಗೆಯಿಂದಾಗಿ ಆರ್ಥಿಕ ಅವಕಾಶಗಳ ವಿಸ್ತರಣೆಯು ಭಾರತೀಯ ಉದ್ಯಮಕ್ಕೆ ಲಭ್ಯವಿರುವ ಮಾರುಕಟ್ಟೆ ವ್ಯಾಪ್ತಿಯನ್ನೂ ಹಿಗ್ಗಿಸಿದೆ. ಈ ವರ್ಷಗಳಲ್ಲಿ, ಕೋಟ್ಯಂತರ ಭಾರತೀಯರು ಕೇವಲ ಬದುಕುಳಿಯುವ ಹಂತದಿಂದ ಹೆಚ್ಚಿನ ಮಟ್ಟದ ಬಳಕೆಯತ್ತ ಮತ್ತು ಔಪಚಾರಿಕ ಆರ್ಥಿಕತೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯತ್ತ ಸಾಗಿದ್ದಾರೆ.

ಇದೇ ವೇಳೆ, ಪ್ರಪಂಚದಾದ್ಯಂತದ ವಿವಿಧ ದೇಶಗಳು ಮತ್ತು ಪ್ರದೇಶಗಳೊಂದಿಗಿನ ವ್ಯಾಪಾರ ಒಪ್ಪಂದಗಳ ಮೂಲಕ ಭಾರತೀಯ ಉದ್ಯಮಕ್ಕೆ ಭಾರತದ ಆಚೆಗಿನ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರವೇಶವನ್ನು ನೀಡಲಾಗಿದೆ. ದೊಡ್ಡ ದೇಶೀಯ ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ವಿಸ್ತರಿಸುತ್ತಿರುವ ಪ್ರವೇಶದ ಸಂಯೋಜನೆಯು ಭಾರತೀಯ ಉತ್ಪಾದಕರಿಗೆ ಒಂದು ದಶಕದ ಹಿಂದೆ ಊಹಿಸಲು ಸಹ ಕಷ್ಟಕರವಾಗಿದ್ದ ಅವಕಾಶವನ್ನು ಒದಗಿಸುತ್ತಿದೆ.

ಉತ್ಪಾದನಾ ವಲಯದತ್ತ ಮೋದಿಯವರ ಒಲವು, ಜಗತ್ತು ತಾನು ಎಲ್ಲಿ ಉತ್ಪಾದಿಸುತ್ತದೆ ಮತ್ತು ಯಾರಿಂದ ಮೂಲಗಳನ್ನು ಪಡೆಯುತ್ತದೆ ಎಂಬುದನ್ನು ಮರುಮೌಲ್ಯಮಾಪನ ಮಾಡುತ್ತಿರುವ ಜಾಗತಿಕ ವಿದ್ಯಮಾನದೊಂದಿಗೆ ಕಾಕತಾಳೀಯವಾಗಿ ಒಗ್ಗೂಡಿದೆ. ಸಾಂಕ್ರಾಮಿಕ ರೋಗ, ಭೌಗೋಳಿಕ-ರಾಜಕೀಯ ಘರ್ಷಣೆಗಳು, ತಂತ್ರಜ್ಞಾನದ ನಿರ್ಬಂಧಗಳು ಹಾಗೂ ನಿರ್ಣಾಯಕ ಖನಿಜಗಳನ್ನು ಅಸ್ತ್ರಗಳಾಗಿ ಬಳಸುವ ಕಾರ್ಯತಂತ್ರಗಳು ವಿಶ್ವಾಸಾರ್ಹ ಉತ್ಪಾದನಾ ಪಾಲುದಾರರ ಪ್ರಾಮುಖ್ಯತೆಯನ್ನು ಬಲಪಡಿಸಿವೆ. ಸದೃಢ ಪೂರೈಕೆ ಸರಪಳಿಗಳ ಈ ಹುಡುಕಾಟದಿಂದ ಪ್ರಯೋಜನ ಪಡೆಯಲು ಭಾರತವು ಉತ್ತಮ ಸ್ಥಾನದಲ್ಲಿದೆ.

Also Read
ಭೌತವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್​ಗೆ ಒಲಿದ 2026ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ | Nobel Prize in Physics
Indian Industry 25 Years

ಉತ್ಪಾದನೆ ಆಧಾರಿತ ಪ್ರೋತ್ಸಾಹಧನʼ(ಪಿಎಲ್ಐ) ಕಾರ್ಯಕ್ರಮವು ಭಾರತದ ಕೈಗಾರಿಕಾ ಪಯಣದಲ್ಲಿ ಒಂದು ಪ್ರಮುಖ ಹಂತದ ಹೆಗ್ಗುರುತಾಗಿದೆ. 14 ವಲಯಗಳಲ್ಲಿ 2.4 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆಗಳ ಬದ್ಧತೆಯೊಂದಿಗೆ, ಭಾರತದ ಉತ್ಪಾದನಾ ಸಾಮರ್ಥ್ಯವನ್ನು ʻಪಿಎಲ್ಐʼ ವಿಸ್ತರಿಸುತ್ತಿದೆ. ಅದು ಹೂಡಿಕೆಯನ್ನು ಆಕರ್ಷಿಸುತ್ತಿದೆ, ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಮತ್ತು ವ್ಯಾಪಕ ಶ್ರೇಣಿಯ ಕೈಗಾರಿಕೆಗಳಾದ್ಯಂತ ರಫ್ತುಗಳನ್ನು ಹೆಚ್ಚಿಸುತ್ತಿದೆ.

ಕೈಗಾರಿಕಾ ತಳಹದಿಯು ಎಷ್ಟು ವೇಗವಾಗಿ ಬದಲಾಗಬಹುದು ಎಂಬುದಕ್ಕೆ ಎಲೆಕ್ಟ್ರಾನಿಕ್ಸ್ ವಲಯ ಸ್ಪಷ್ಟ ನಿದರ್ಶನ ಒದಗಿಸುತ್ತದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತು ಪ್ರಮಾಣಗಳು ಎರಡು ಮತ್ತು ಮೂರು ಅಂಕಿಗಳಲ್ಲಿ ಹೆಚ್ಚಾಗಿವೆ. ವಿಶ್ವದ ಕೆಲವು ಪ್ರಮುಖ ಸ್ಮಾರ್ಟ್ಫೋನ್ ಬ್ರ್ಯಾಂಡ್ ಗಳು ಈಗ ಭಾರತದಲ್ಲಿ ಫೋನ್ಗಳನ್ನು ತಯಾರಿಸುತ್ತಿವೆ, ಇವುಗಳನ್ನು ವಿಶ್ವಾದ್ಯಂತ ಗ್ರಾಹಕರು ಬಳಸುತ್ತಿದ್ದಾರೆ.

ಸೆಮಿಕಂಡಕ್ಟರ್​ಗಳು ಇನ್ನಷ್ಟು ಮಹತ್ವಾಕಾಂಕ್ಷೆಯ ಹೆಜ್ಜೆಯನ್ನು ಪ್ರತಿನಿಧಿಸುತ್ತವೆ. ಒಂದು ದಶಕದ ಹಿಂದೆ ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ವಸ್ತುತಃ ಇರಲೇ ಇಲ್ಲ. ಭಾರತವು ಈಗ ಚಿಪ್ಗಳನ್ನು ನಿರ್ಮಿಸುತ್ತಿದೆ. ಜೊತೆಗೆ ವಿನ್ಯಾಸ, ಫ್ಯಾಬ್ರಿಕೇಶನ್ನಿಂದ ಹಿಡಿದು ಪ್ಯಾಕೇಜಿಂಗ್, ಸಾಮಗ್ರಿಗಳು ಹಾಗೂ ಪ್ರತಿಭೆಯವರೆಗಿನ ಅವುಗಳ ಹಿಂದಿನ ಪರಿಸರ ವ್ಯವಸ್ಥೆಯನ್ನೂ ಭಾರತ ನಿರ್ಮಿಸುತ್ತಿದೆ. ಮೋದಿಯವರ ದೃಷ್ಟಿಕೋನವು ಕೇವಲ ಕಾರ್ಖಾನೆಗಳ ಆಚೆಗೂ ವಿಸ್ತರಿಸಿದ್ದು, ಎಲೆಕ್ಟ್ರಾನಿಕ್ಸ್, ಎಐ, ಎಲೆಕ್ಟ್ರಿಕ್ ವಾಹನ ಮತ್ತು ರಕ್ಷಣಾ ವಲಯಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವತ್ತ ಗಮನಹರಿಸಿದೆ.

ಉತ್ಪಾದನಾ ಸಾಮರ್ಥ್ಯವು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿಯೂ ಬದಲಾಗುತ್ತಿದೆ. ಮೋದಿಯವರು ರಕ್ಷಣಾ ಉತ್ಪಾದನೆಯನ್ನು ಇದೇ ದೃಷ್ಟಿಕೋನದಿಂದ ಹೆಚ್ಚಾಗಿ ನೋಡುತ್ತಿದ್ದಾರೆ. ದೇಶೀಯ ಉಪಕರಣಗಳು, ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಭಾರತವನ್ನು ರಕ್ಷಣಾ ತಂತ್ರಜ್ಞಾನದ ಜಾಗತಿಕ ಪೂರೈಕೆದಾರನನ್ನಾಗಿ ಮಾಡುವತ್ತ ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಳೆದ 12 ವರ್ಷಗಳಲ್ಲಿ ರಕ್ಷಣಾ ರಫ್ತು 56 ಪಟ್ಟು ಹೆಚ್ಚಾಗಿದೆ.

ಭಾರತೀಯ ಉದ್ಯಮದ ಮುಂದಿನ ಹಂತದಲ್ಲಿ, ಜಾಗತಿಕ ಉದ್ದಿಮೆಗಳಾಗಿ ಬೆಳೆಯಬಲ್ಲ ಇನ್ನೂ ಹಲವು ಮಧ್ಯಮ ಗಾತ್ರದ ಕಂಪನಿಗಳ ಅಗತ್ಯವಿದೆ. ಕಾಲಾನಂತರದಲ್ಲಿ ನಾವೀನ್ಯತೆಯನ್ನು ಬೆಂಬಲಿಸಲು ಮತ್ತು ಸಾಮರ್ಥ್ಯಗಳನ್ನು ನಿರ್ಮಿಸಲು ಸಿದ್ಧರಿರುವ ಹೂಡಿಕೆದಾರರು ಮತ್ತು ಸಂಸ್ಥೆಗಳ ಅಗತ್ಯ ಅವರಿಗಿರುತ್ತದೆ. ಇಲ್ಲಿಯೇ ನವೋದ್ಯಮಗಳು ಮತ್ತು ಸಂಶೋಧನೆಯಲ್ಲಿನ ಹೂಡಿಕೆ ಪ್ರಮುಖ ಪಾತ್ರ ವಹಿಸುತ್ತದೆ.

ರಕ್ಷಣೆ, ಬಾಹ್ಯಾಕಾಶ, ಡ್ರೋನ್ಗಳು ಮತ್ತು ಡೀಪ್-ಟೆಕ್ನಾಲಜಿಯಂತಹ ವಲಯಗಳಲ್ಲಿ, ಯುವ ಕಂಪನಿಗಳು ತಾವು ಈ ಮೊದಲು ಪ್ರವೇಶಿಸಲಾಗದಿದ್ದ ಅಥವಾ ಹೆಚ್ಚಿನ ಪ್ರವೇಶ ಅಡೆತಡೆಗಳಿದ್ದ ಕ್ಷೇತ್ರಗಳನ್ನು ಪ್ರವೇಶಿಸುತ್ತಿವೆ.

ಮೋದಿಯವರು ಯುವಜನರಿಗೆ ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುಂದುವರಿಸಲು ನಿರಂತರವಾಗಿ ಪ್ರೋತ್ಸಾಹಿಸಿದ್ದಾರೆ. 1 ಲಕ್ಷ ಕೋಟಿ ರೂ. ʻಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನಿಧಿʼಯು ಡೀಪ್-ಟೆಕ್ನಾಲಜಿ, ಕಾರ್ಯತಂತ್ರದ ತಂತ್ರಜ್ಞಾನಗಳು ಮತ್ತು ʻಸನ್ರೈಸ್ʼ ವಲಯಗಳಿಗೆ ಬಂಡವಾಳವನ್ನು ತರುವ ಉದ್ದೇಶ ಹೊಂದಿದೆ. ಇಂದಿನ ಸಂಶೋಧನೆಯಿಂದ ಸೃಷ್ಟಿಯಾಗಲಿರುವ ನಾಳಿನ ಕೈಗಾರಿಕಾ ಸಾಮರ್ಥ್ಯಗಳಿಗೆ ಇದು ಭದ್ರ ಅಡಿಪಾಯ ಹಾಕುತ್ತಿದೆ.

ದಶಕಗಳ ಕಾಲ, ಕೈಗಾರಿಕಾ ಅಭಿವೃದ್ಧಿಯಲ್ಲಿ ಮೋದಿಯವರ ಆಸಕ್ತಿ ಮತ್ತು ಕೈಗಾರಿಕಾ ಮುಖಂಡರೊಂದಿಗೆ ಬೆರೆಯುವ ಅವರ ಇಚ್ಛೆಯನ್ನು ವೈಯಕ್ತಿಕವಾಗಿ ನೋಡುವ ಅದೃಷ್ಟ ನನ್ನದಾಗಿದೆ. ಕಂಪನಿಗಳು ಏನನ್ನು ನಿರ್ಮಿಸುತ್ತಿವೆ ಮತ್ತು ಇತರ ದೇಶಗಳು ಏನು ಮಾಡುತ್ತಿವೆ ಎಂಬುದರ ಕುರಿತು ಅವರಿಗೆ ಕುತೂಹಲವಿದೆ. ಅವರು ವಿದೇಶ ಪ್ರವಾಸ ಕೈಗೊಂಡಾಗ ಯಾವುದಾದರೂ ಆಸಕ್ತಿದಾಯಕ ವಿಷಯ ಕಂಡುಬಂದರೆ, ಅದನ್ನು ಭಾರತೀಯ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸುತ್ತಾರೆ ಮತ್ತು ಸಾಂಪ್ರದಾಯಿಕ ಆಯಾಮಗಳನ್ನು ಮೀರಿ ಯೋಚಿಸಲು ಅವರನ್ನು ಪ್ರೋತ್ಸಾಹಿಸುತ್ತಾರೆ. ಉದ್ಯಮಿಗಳು ತಮ್ಮ ಕೆಲಸವನ್ನು ರಾಷ್ಟ್ರ ನಿರ್ಮಾಣದ ಭಾಗವಾಗಿ ನೋಡುವಂತೆ ಅವರು ಪ್ರೇರೇಪಿಸುತ್ತಾರೆ.

ಮೋದಿಯವರ ಈ 25 ವರ್ಷಗಳ ನಾಯಕತ್ವದಿಂದ ದೊಡ್ಡ ಚಿಂತನೆಯ ರೇಖೆ ಹೊರಹೊಮ್ಮುತ್ತಿದೆ. ಉದ್ಯಮವನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ನೋಡದೆ ರಾಷ್ಟ್ರೀಯ ಸಾಮರ್ಥ್ಯದ ಅಭಿವ್ಯಕ್ತಿಯಾಗಿ ನೋಡಲಾಗುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ, ಭಾರತೀಯ ಉದ್ಯಮವು ಹೆಚ್ಚು ದಿಟ್ಟವಾಗಿ ಯೋಚಿಸುವ ಸಮಯ ಇದಾಗಿದೆ. ಭಾರತೀಯ ಉದ್ಯಮವು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕಾಗಿದೆ. ಅದು ಅಲ್ಪಾವಧಿಯ ಆರ್ಥಿಕ ಲಾಭಗಳಿಗಿಂತ ದೀರ್ಘಾವಧಿಯ ಚಿಂತನೆಯನ್ನು ಪ್ರದರ್ಶಿಸಬೇಕಿದೆ.

'ವಿಕಸಿತ ಭಾರತ'ದ ಮೇಲಿನ ಮೋದಿಯವರ ಗಮನವು, ಭಾರತೀಯ ಉದ್ಯಮವು ಎಚ್ಚೆತ್ತು ಕೇವಲ ಭಾರತಕ್ಕಾಗಿ ಮಾತ್ರವಲ್ಲದೆ ಜಾಗತಿಕ ಆಟಗಾರರಾಗಿ ಬೆಳೆಯುವಂತೆ ಮಾಡಲು ಸ್ಪಷ್ಟ ಕರೆಯಾಗಿದೆ.

ಲೇಖಕರು

ಉದಯ್​ ಕೋಟಕ್​, ಕೋಟಕ್ ಮಹೀಂದ್ರಾ ಬ್ಯಾಂಕ್​ನ ಸಂಸ್ಥಾಪಕರು ಮತ್ತು ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net