ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಕೇಸರಿ ಪಾಳಯ ತಿರುಗೇಟು!...ನವೆಂಬರ್ 1 ರಂದೇ ಸಿಖ್ ಗಲಭೆ ಸಂತ್ರಸ್ತರ ಜೊತೆ ಬಿಜೆಪಿಯಿಂದ ಜಾಥಾ | BJP Counter Rally

ನವೆಂಬರ್ 1 ರಂದೇ ಸಿಖ್ ಗಲಭೆ ಸಂತ್ರಸ್ತರ ಜೊತೆ ಬಿಜೆಪಿಯಿಂದ ಪವರ್‌ಫುಲ್ ಜಾಥಾ
ನವೆಂಬರ್ 1 ರಂದೇ ಸಿಖ್ ಗಲಭೆ ಸಂತ್ರಸ್ತರ ಜೊತೆ ಬಿಜೆಪಿಯಿಂದ ಪವರ್‌ಫುಲ್ ಜಾಥಾ
Published on: 

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1 ರಂದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಹಮ್ಮಿಕೊಂಡಿರುವ ಬೃಹತ್ ರ‍್ಯಾಲಿಗೆ ತಿರುಗೇಟು ನೀಡಲು ಬಿಜೆಪಿಯೂ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜಧಾನಿಯಲ್ಲಿ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಬಿಜೆಪಿ ಸುಮಾರು 5,000 ಜನರನ್ನು ಒಳಗೊಂಡ ಬೃಹತ್ ಮೆರವಣಿಗೆಯನ್ನು ಆಯೋಜಿಸುತ್ತಿದೆ. ವಿಶೇಷವೆಂದರೆ, ಈ ಮೆರವಣಿಗೆಯಲ್ಲಿ 1984ರ ಸಿಖ್ ಗಲಭೆಯ ಸಂತ್ರಸ್ತರು ಹಾಗೂ ಅವರ ಕುಟುಂಬದ ಸದಸ್ಯರು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಈ ಪ್ರಸ್ತಾವಿತ ಮೆರವಣಿಗೆಯು ಭಾನುವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಹರಿ ನಗರ ಪ್ರದೇಶದಲ್ಲಿ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವಾರು ಪ್ರಮುಖ ನಾಯಕರು ಹಾಗೂ ಪಕ್ಷದ ಹಿರಿಯ ಸಿಖ್ ಮುಖಂಡರು ಕೂಡ ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.

1984ರ ಸಿಖ್ ಗಲಭೆ ಸಂತ್ರಸ್ತರಿಂದ ಭಾಗಿ

ಬಿಜೆಪಿ ಆಯೋಜಿಸುತ್ತಿರುವ ಈ ಮೆರವಣಿಗೆಯ ಪ್ರಮುಖ ವಿಶೇಷತೆಯೆಂದರೆ, 1984ರ ಸಿಖ್ ಗಲಭೆಯ ಸಂತ್ರಸ್ತರು ಮತ್ತು ಅವರ ಕುಟುಂಬ ವರ್ಗದವರ ಸಕ್ರಿಯ ಭಾಗಿತ್ವ. ಕಾಂಗ್ರೆಸ್‌ನ ರ‍್ಯಾಲಿಗೆ ಪ್ರತಿತಂತ್ರವಾಗಿ ಬಿಜೆಪಿ ಸಜ್ಜಾಗುತ್ತಿದಂತೆ, ಈ ಸಂತ್ರಸ್ತರ ಉಪಸ್ಥಿತಿಯು 1984ರ ದೌರ್ಜನ್ಯದ ಕರಾಳ ಇತಿಹಾಸವನ್ನು ಮತ್ತೊಮ್ಮೆ ರಾಜಕೀಯ ಮುನ್ನೆಲೆಗೆ ತರುವ ಸಾಧ್ಯತೆಯಿದೆ.

ಮತ್ತೊಂದೆಡೆ, ನವೆಂಬರ್ 1 ರಂದು ನಡೆಯಲಿರುವ ರ‍್ಯಾಲಿಯ ಸಿದ್ಧತೆಗಳ ಕುರಿತು ಚರ್ಚಿಸಲು ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದರು. ವಿರೋಧ ಪಕ್ಷಗಳ ಈ ಒಕ್ಕೂಟವು ದೆಹಲಿ ಚಲೋ ರಾಮಲೀಲಾ ಮಾರ್ಚ್ (Chalo Dilli Ramlila March) ಬ್ಯಾನರ್ ಅಡಿಯಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಚುನಾವಣಾ ಆಯೋಗದ ಮುಂದುವರಿದಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ವಿಪಕ್ಷಗಳು ಈ ವೇಳೆ ಆಗ್ರಹಿಸಲಿವೆ.

Also Read
ದೆಹಲಿಯ 20 ಲಕ್ಷ ವ್ಯಾಪಾರಿಗಳಿಗೆ ನಷ್ಟವಾಗತ್ತೆ!....ಇಂಡಿಯಾ ಮೈತ್ರಿಕೂಟದ ರ‍್ಯಾಲಿ ಮುಂದೂಡಲು ಸೋನಿಯಾ ಗಾಂಧಿಗೆ ಸಿಟಿಐ ಪತ್ರ! | INDIA Bloc Rally
ನವೆಂಬರ್ 1 ರಂದೇ ಸಿಖ್ ಗಲಭೆ ಸಂತ್ರಸ್ತರ ಜೊತೆ ಬಿಜೆಪಿಯಿಂದ ಪವರ್‌ಫುಲ್ ಜಾಥಾ

ದೇಶದ ವಿವಿಧ ಭಾಗಗಳಿಂದ ರಾಜಕೀಯ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಈ ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ರಾಜ್ಯಗಳ ಕೆಲವು ಪಕ್ಷಗಳು ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ. ಅಲ್ಲದೆ, ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಈ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಪಕ್ಷಗಳ ರ‍್ಯಾಲಿ ಸಮಯ ಪ್ರಶ್ನಿಸಿದ ಕೇಂದ್ರ ಸಚಿವ ಪಾಸ್ವಾನ್

ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟವು ಹಬ್ಬದ ಶಾಪಿಂಗ್ ಸೀಸನ್‌ನಲ್ಲಿ ಈ ರಾಲಿಯನ್ನು ಆಯೋಜಿಸಿರುವುದನ್ನು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತೀವ್ರವಾಗಿ ಟೀಕಿಸಿದ್ದಾರೆ. ಈ ಪ್ರತಿಭಟನೆಯು ರಾಷ್ಟ್ರರಾಜಧಾನಿಯ ವ್ಯಾಪಾರಿಗಳಿಗೆ ಮತ್ತು ಸಾಮಾನ್ಯ ಜನರಿಗೆ ತೀವ್ರ ತೊಂದರೆ ಉಂಟುಮಾಡಬಹುದು ಎಂದು ಅವರು ವಾದಿಸಿದ್ದಾರೆ. ಪಟನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಮುಕ್ತವಾಗಿ ಹೋಗಿ ರ‍್ಯಾಲಿಯನ್ನು ನಡೆಸಿ, ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಈ ಸಮಯವೇ ಅತ್ಯಂತ ಕಳವಳಕಾರಿಯಾಗಿದೆ ಎಂದಿದ್ದಾರೆ.

ಸರ್ಕಾರ ಮತ್ತು ಆಡಳಿತದಿಂದ ನೀವು ಅನುಮತಿ ಪಡೆದಿದ್ದೀರಿ, ಆದರೆ ಸಮಯವನ್ನು ಗಮನಿಸಿ. ಪ್ರಸ್ತುತ ನಾವು ಹಬ್ಬದ ಸೀಸನ್​​​​ಲ್ಲಿದ್ದೇವೆ. ವ್ಯಾಪಾರ ಸಮುದಾಯಕ್ಕೆ ಇದು ಇಡೀ ವರ್ಷಕ್ಕೆ ಆಗುವಷ್ಟು ಸಂಪಾದನೆ ಮಾಡಲು ಮತ್ತು ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ಅತ್ಯಂತ ಪ್ರಮುಖ ಸಮಯವಾಗಿದೆ. ದಸರಾ ಮತ್ತು ದೀಪಾವಳಿಯ ನಡುವಿನ ಈ ಬಿಡುವಿಲ್ಲದ ಸಮಯದಲ್ಲಿ, ಜನರು ದೊಡ್ಡ ಸಂಖ್ಯೆಯಲ್ಲಿ ಶಾಪಿಂಗ್ ಮಾಡಲು, ಉಡುಗೊರೆಗಳನ್ನು ಖರೀದಿಸಲು ಮತ್ತು ಹಬ್ಬದ ಸಿದ್ಧತೆಗಳಲ್ಲಿ ತೊಡಗಿರುವಾಗ ನೀವು ಈ ರ‍್ಯಾಲಿಯನ್ನು ಆಯೋಜಿಸಿದ್ದೀರಿ ಎಂದು ಪಾಸ್ವಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ದೆಹಲಿಯನ್ನು ಒತ್ತೆಯಾಳಾಗಿ ಇಟ್ಟಂತೆ ವರ್ತಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

Also Read
20 ಮಾರುಕಟ್ಟೆ, 20 ವ್ಯಾಪಾರಿಗಳು, 20 ನಿಮಿಷ: ರಾಹುಲ್​ಗೆ ದೆಹಲಿ ವ್ಯಾಪಾರಿಗಳ ವಿಶಿಷ್ಟ ಪ್ರಸ್ತಾವನೆ!...ಪ್ರೀತಿಯ ಅಂಗಡಿಯನ್ನು ಮುಚ್ಚಿಸಬೇಡಿ ಎಂದು ಭಾವುಕ ಮನವಿ | Congress Rally
ನವೆಂಬರ್ 1 ರಂದೇ ಸಿಖ್ ಗಲಭೆ ಸಂತ್ರಸ್ತರ ಜೊತೆ ಬಿಜೆಪಿಯಿಂದ ಪವರ್‌ಫುಲ್ ಜಾಥಾ

1984ರ ಸಿಖ್ ವಿರೋಧಿ ಗಲಭೆಯ ವಾರ್ಷಿಕೋತ್ಸವ ಪ್ರಸ್ತಾಪ

ನವೆಂಬರ್ 1 ರಂದು ರ‍್ಯಾಲಿಯನ್ನು ಆಯೋಜಿಸಿರುವ ಕಾಂಗ್ರೆಸ್ ನಿರ್ಧಾರವನ್ನು ಪ್ರಶ್ನಿಸುವ ಜೊತೆಗೆ ದೆಹಲಿಯಲ್ಲಿ ನಡೆದ 1984ರ ಸಿಖ್ ವಿರೋಧಿ ದೌರ್ಜನ್ಯದ ಕಾರಣದಿಂದ ಈ ದಿನಾಂಕವು ಸಿಖ್ ಸಮುದಾಯಕ್ಕೆ ಅತ್ಯಂತ ನೋವಿನ ಮತ್ತು ಕರಾಳ ನೆನಪನ್ನು ತರುತ್ತದೆ ಎಂದು ಪಾಸ್ವಾನ್​ ತಿಳಿಸಿದ್ದಾರೆ. ಇದು ಕಾಕತಾಳೀಯವೋ ಅಥವಾ ಬೇರೆ ಏನೋ ನನಗೆ ತಿಳಿದಿಲ್ಲ, ಆದರೆ ಈ ದಿನಾಂಕವು ವಿಭಿನ್ನ ಹಾಗೂ ಗಂಭೀರವಾದ ಮಹತ್ವವನ್ನು ಹೊಂದಿದೆ ಎಂಬುದನ್ನು ಅರಿಯುವಷ್ಟು ಕನಿಷ್ಠ ಸಂವೇದನೆಯೂ ಅವರಿಗೆ ಇರಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ(ಏಜೆನ್ಸೀಸ್​).