ದೆಹಲಿ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ನವೆಂಬರ್ 1 ರಂದು ರಾಮ್‌ಲೀಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ರ‍್ಯಾಲಿಯು (Congress Rally) ದೀಪಾವಳಿ ಹಬ್ಬದ ವ್ಯಾಪಾರ-ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ದೆಹಲಿಯ ವ್ಯಾಪಾರಿಗಳ ಸಂಘಟನೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ, ರ‍್ಯಾಲಿಯಿಂದ ವ್ಯಾಪಾರಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಸಾಬೀತುಪಡಿಸಿ, ಇಲ್ಲವೇ ವ್ಯಾಪಾರಕ್ಕೆ ನಷ್ಟವಾಗುತ್ತದೆ ಎಂದಾದಲ್ಲಿ ದೀಪಾವಳಿಯವರೆಗೆ ರ‍್ಯಾಲಿಯನ್ನು ಮುಂದೂಡಿ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ರಾಮ್‌ಲೀಲಾ ಮೈದಾನದ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪ್ರಮುಖ 20 ಮಾರುಕಟ್ಟೆಗಳ 20 ಪ್ರತಿನಿಧಿಗಳೊಂದಿಗೆ ಕೇವಲ 20 ನಿಮಿಷಗಳ ಕಾಲ ಸಭೆ ನಡೆಸುವಂತೆ ಕೋರಿದ್ದಾರೆ. ಹತ್ತು ಲಕ್ಷಕ್ಕೂ ಅಧಿಕ ಜನರು ಸೇರುವ ಈ ಬೃಹತ್ ಸಮಾವೇಶದಿಂದ ವ್ಯಾಪಾರ ಹೆಚ್ಚಾಗಲಿದೆ ಎಂಬುದನ್ನು ನೀವು ಮನವರಿಕೆ ಮಾಡಿಕೊಟ್ಟರೆ, ವ್ಯಾಪಾರಿಗಳ ಸಂಘಟನೆಯು ರ‍್ಯಾಲಿಯನ್ನು ಸ್ವಾಗತಿಸುತ್ತದೆ. ಒಂದು ವೇಳೆ ಇದರಿಂದ ವ್ಯಾಪಾರಕ್ಕೆ ಭಾರಿ ನಷ್ಟವಾಗಲಿದೆ ಎಂದು ವ್ಯಾಪಾರಿಗಳು ಮನವರಿಕೆ ಮಾಡಿಕೊಟ್ಟರೆ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸಮಾವೇಶವನ್ನು ದೀಪಾವಳಿಯವರೆಗೆ ಮುಂದೂಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಚಾಂದನಿ ಚೌಕ್, ಸದಾರ ಬಜಾರ್, ಖಾರಿ ಬೌಲಿ, ಕರೋಲ್ ಬಾಗ್, ಚಾವರಿ ಬಜಾರ್, ದರಿಯಾಗಂಜ್ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಮುಖ ಮಾರುಕಟ್ಟೆಗಳು ರಾಮ್‌ಲೀಲಾ ಮೈದಾನದ ಸುತ್ತಮುತ್ತ ಇವೆ. ಈ ಮಾರುಕಟ್ಟೆಗಳಲ್ಲಿ ಮಸಾಲೆ ಪದಾರ್ಥಗಳು, ಒಣದ್ರಾಕ್ಷಿ, ಬಟ್ಟೆ, ಆಭರಣಗಳು, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ವಹಿವಾಟು ಜೋರಾಗಿ ನಡೆಯುತ್ತದೆ. ಆದರೆ ರಾಲಿಯ ಕಾರಣದಿಂದ ಉಂಟಾಗುವ ಸಂಚಾರ ದಟ್ಟಣೆ ಹಾಗೂ ಬ್ಯಾರಿಕೇಡ್‌ಗಳಿಂದಾಗಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಲು ಕಷ್ಟವಾಗಲಿದ್ದು, ಇದರಿಂದ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಷ್ಟವಾಗಲಿದೆ ಎಂದು ವ್ಯಾಪಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರ ಜನಪ್ರಿಯ ಘೋಷಣೆಯಾದ ಮೊಹಬ್ಬತ್ ಕಿ ದೂಕಾನ್ ಅನ್ನು ಉಲ್ಲೇಖಿಸಿರುವ ವ್ಯಾಪಾರಿಗಳು, ರಾಹುಲ್ ಜೀ, ನೀವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತೀರಿ, ನಾವು ನಿಮ್ಮನ್ನು ಗೌರವಿಸುತ್ತೇವೆ. ಆದರೆ ದೀಪಾವಳಿಯ ಮಾರುಕಟ್ಟೆಯಲ್ಲಿ ದಯವಿಟ್ಟು ಪ್ರೀತಿಯ ಅಂಗಡಿಯನ್ನು ಮುಚ್ಚಿಸಬೇಡಿ ಎಂದು ಭಾವುಕವಾಗಿ ಮನವಿ ಮಾಡಿದ್ದಾರೆ. ನಾವು ಯಾವುದೇ ರಾಜಕೀಯ ಸಂಘರ್ಷ ಬಯಸುವುದಿಲ್ಲ, ಬದಲಾಗಿ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಲು ಬಯಸುತ್ತೇವೆ ಎಂದು ಸಿಟಿಐ ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತರ ವಜಾಗೂಳಿಸುವವರೆಗೆ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ತಿಳಿಸಿದ್ದು, ಈ ರಾಜಕೀಯ ತಿಕ್ಕಾಟದ ನಡುವೆ ದೆಹಲಿ ವ್ಯಾಪಾರಿಗಳ ಈ ಹೊಸ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕರು ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ(ಏಜೆನ್ಸೀಸ್).