ನವದೆಹಲಿ: ನವೆಂಬರ್ 1ರಂದು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟವು ಆಯೋಜಿಸಿರುವ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ( India Bloc Rally) ಹಬ್ಬದ ನಂತರದ ದಿನಗಳಿಗೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ವ್ಯಾಪಾರಿಗಳ ಪ್ರಮುಖ ಸಂಸ್ಥೆಯಾದ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಮತ್ತೆ ಮನವಿ ಮಾಡಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿನ್ನೆ ವ್ಯಾಪಾರಿಗಳ ಮನವಿಯನ್ನು ತಿರಸ್ಕರಿಸಿದ್ದರೂ, ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಮತ್ತೊಮ್ಮೆ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿವರವಾದ ಪತ್ರ ಬರೆಯುವ ಮೂಲಕ ಅವರ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸಲಿ ಎಂದಿದ್ದಾರೆ.
ದೀಪಾವಳಿಯು ವ್ಯಾಪಾರಿಗಳಿಗೆ ವರ್ಷದ ಅತ್ಯಂತ ಪ್ರಮುಖ ಹಾಗೂ ಗರಿಷ್ಠ ವ್ಯಾಪಾರ ನಡೆಯುವ ಸೀಸನ್ ಆಗಿದೆ. ಇಂತಹ ಸಂದರ್ಭದಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸುವುದರಿಂದ ದೆಹಲಿಯ ಪ್ರಮುಖ ಮಾರುಕಟ್ಟೆಗಳು ಹಾಗೂ ವ್ಯಾಪಾರ ವಹಿವಾಟಿಗೆ ತೀವ್ರ ಹೊಡೆತ ಬೀಳಲಿದೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ರಾಮಲೀಲಾ ಮೈದಾನದ ಸುತ್ತಮುತ್ತ ಚಾಂದನಿ ಚೌಕ್, ಭಗೀರಥ್ ಪ್ಲೇಸ್, ಖಾರಿ ಬೌಲಿ, ಸದರ್ ಬಜಾರ್, ಚಾವರಿ ಬಜಾರ್, ಕಾಶ್ಮೀರಿ ಗೇಟ್ ಮತ್ತು ಕರೋಲ್ ಬಾಗ್‌ನಂತಹ ದೆಹಲಿಯ ಅತ್ಯಂತ ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಿದ್ದು, ಇವು ದೆಹಲಿಯ ವಾಣಿಜ್ಯ ಜೀವನಾಡಿಗಳಾಗಿವೆ, ಇಲ್ಲಿಂದಲೇ ರಾಮಲೀಲಾ ಮೈದಾನಕ್ಕೆ ತೆರಳುವ ಪ್ರತಿಯೊಂದು ಮುಖ್ಯ ರಸ್ತೆಯೂ ಸಾಗುತ್ತದೆ.
ವಿಶೇಷವಾಗಿ ಚಾಂದನಿ ಚೌಕ್ ಮತ್ತು ಚಾವರಿ ಬಜಾರ್ ಪ್ರದೇಶಗಳು ದಿನನಿತ್ಯ ಲಕ್ಷಾಂತರ ಗಿರಾಕಿಗಳ ದಟ್ಟಣೆಯಿಂದ ಕೂಡಿರುತ್ತವೆ. ಇನ್ನು ಭಗೀರಥ್ ಪ್ಲೇಸ್ ಏಷ್ಯಾದಲ್ಲೇ ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಾಗಿದ್ದರೆ, ಖಾರಿ ಬೌಲಿ ಏಷ್ಯಾದ ಅತಿ ದೊಡ್ಡ ಮಸಾಲೆ ಪದಾರ್ಥಗಳ ಮಾರುಕಟ್ಟೆಯಾಗಿದೆ. ಜೊತೆಗೆ ಸದರ್ ಬಜಾರ್ ಸಗಟು ಸರಕುಗಳ ಮತ್ತು ಕಾಶ್ಮೀರಿ ಗೇಟ್ ಹಾಗೂ ಕರೋಲ್ ಬಾಗ್ ಆಟೋಮೊಬೈಲ್ಸ್ ಹಾಗೂ ಬಟ್ಟೆಗಳ ಪ್ರಮುಖ ಕೇಂದ್ರಗಳಾಗಿವೆ.
ಕೇವಲ 3,000 ರಿಂದ 4,000 ಜನರು ಭಾಗವಹಿಸಿದ್ದ ಹಿಂದಿನ ಪ್ರತಿಭಟನೆಯಿಂದಲೇ ಇಡೀ ಮಧ್ಯ ದೆಹಲಿ ಪ್ರದೇಶವು ಸೀಲ್ ಆಗಿ, ವ್ಯಾಪಾರಿಗಳಿಗೆ ಬಂಡವಾಳ ಮತ್ತು ವಹಿವಾಟಿನಲ್ಲಿ ಅಂದಾಜು 3,000 ಕೋಟಿ ರೂ. ನಷ್ಟವಾಗಿತ್ತು. ಈಗ 10 ಲಕ್ಷ ಜನರ ಬೃಹತ್ ರಾಲಿಯಿಂದ ಬರೋಬ್ಬರಿ 10,000 ಕೋಟಿ ರೂ.ಗೂ ಅಧಿಕ ನಷ್ಟವಾಗಬಹುದು ಎಂದು ಸಿಟಿಐ ಕಳವಳ ವ್ಯಕ್ತಪಡಿಸಿದ್ದು, ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆಗಳನ್ನು ಬಂದ್ ಮಾಡಿದರೆ ಗ್ರಾಹಕರು ಮಾರುಕಟ್ಟೆಗಳಿಗೆ ತಲುಪುವುದು ಹೇಗೆ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
ನಿನ್ನೆ (ಸೋಮವಾರ ಅ.26) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿದರೆ ಈ ಪ್ರತಿಭಟನೆಯನ್ನು ಕೇವಲ 30 ಸೆಕೆಂಡುಗಳಲ್ಲಿ ನಿಲ್ಲಿಸಬಹುದು ಎಂದು ತಿಳಿಸಿದ್ದರು. ಸರ್ಕಾರದ ನೀತಿಗಳು ಮತ್ತು ಮತಯಂತ್ರದ ವಿವಾದದ ವಿರುದ್ಧ ಈ ಹೋರಾಟವನ್ನು ಮುಂದುವರಿಸುವುದಾಗಿ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ರಾಹುಲ್ ಪೋಸ್ಟ್ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ಸಿಟಿಐ, ಪ್ರತಿಭಟನೆಯನ್ನು ರದ್ದುಪಡಿಸಲು ಅಥವಾ ಮುಂದೂಡಲು ಸಾಧ್ಯವಾಗದಿದ್ದರೆ, ಅದನ್ನು ರಾಮಲೀಲಾ ಮೈದಾನದಿಂದ ಬುರಾರಿ ಮೈದಾನ ಅಥವಾ ಜವಾಹರಲಾಲ್ ನೆಹರು ಕ್ರೀಡಾಂಗಣದಂತಹ ಜನದಟ್ಟಣೆ ಕಡಿಮೆ ಇರುವ ಬೃಹತ್ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದೆ. ಹಬ್ಬದ ಸೀಸನ್‌ನಲ್ಲಿ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಮರುಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ(ಏಜೆನ್ಸೀಸ್).