ಇದು ತೃತೀಯ ರಂಗವಲ್ಲ, ಮೊದಲ ರಂಗ ಎಂದ ಆಜಾದ್: ಆದ್ರೆ ಈ ಮೈತ್ರಿ ಲಾಭ ಮಾಡಿಕೊಡೋದು ಯಾರಿಗೆ ಅನ್ನೋದೇ ಅಸಲಿ ಕುತೂಹಲ! | UP Election

ಇದು ತೃತೀಯ ರಂಗವಲ್ಲ, ಮೊದಲ ರಂಗ ಎಂದ ಆಜಾದ್: ಆದ್ರೆ ಈ ಮೈತ್ರಿ ಲಾಭ ಮಾಡಿಕೊಡೋದು ಯಾರಿಗೆ ಅನ್ನೋದೇ ಅಸಲಿ ಕುತೂಹಲ! | UP Election
Published on: 

UP Election: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಮತ್ತು ಚಂದ್ರಶೇಖರ್ ಆಜಾದ್​ರ ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ನಡುವೆ ಮೈತ್ರಿ ಘೋಷಣೆಯಾಗಿದೆ.

ರಾಜ್ಯದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ತಮ್ಮ ಗುರಿ ಎಂದು ಉಭಯ ಪಕ್ಷಗಳು ಹೇಳಿಕೊಂಡಿವೆ. ಆದರೆ, ಈ ಮುಸ್ಲಿಂ-ದಲಿತ ಅಥವಾ ಭೀಮ್-ಮಿಮ್ (Bheem-MIM) ರಂಗವು ಬಿಜೆಪಿ ನೇತೃತ್ವದ ಎನ್‌ಡಿಎಗಿಂತ ಹೆಚ್ಚಾಗಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಹೊಡೆತ ನೀಡಬಹುದು ಎಂದು ರಾಜಕೀಯ ವಿಶ್ಲೇಷಕರು ಮತ್ತು ಚುನಾವಣಾ ಅಂಕಿಅಂಶಗಳು ಅಂದಾಜಿಸಿವೆ.

ಸಾಮಾಜಿಕ ಪರಿವರ್ತನ ಮೋರ್ಚಾ ಘೋಷಣೆ

ಗುರುವಾರ (ನವೆಂಬರ್ 12) ಲಖನೌದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ತಮ್ಮ ಹೊಸ ಮೈತ್ರಿಕೂಟಕ್ಕೆ ಸಾಮಾಜಿಕ ಪರಿವರ್ತನ ಮೋರ್ಚಾ ಎಂದು ನಾಮಕರಣ ಮಾಡಿದ್ದಾರೆ. ಅಲ್ಲದೆ, ನಗೀನಾ ಕ್ಷೇತ್ರದ ಲೋಕಸಭಾ ಸಂಸದರಾಗಿರುವ ಚಂದ್ರಶೇಖರ್ ಆಜಾದ್ ಅವರನ್ನು ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಈ ಹಿಂದೆ ಓವೈಸಿ, ಸಮಾಜವಾದಿ ಪಕ್ಷದ ನಾಯಕರಿಗೆ ಮೈತ್ರಿಯ ಆಫರ್​ ನೀಡಿದ್ದರು. ಆದರೆ ಇದಕ್ಕೆ ಅಖಿಲೇಶ್ ಸೊಪ್ಪು ಹಾಕಲಿಲ್ಲ. ಬಳಿಕ ಬಿಎಸ್‌ಪಿ ಜೊತೆಗೂ ಮಾತುಕತೆ ನಡೆಸಲು ಪ್ರಯತ್ನಿಸಿದ ಓವೈಸಿ, ಅಂತಿಮವಾಗಿ ಉತ್ತರ ಪ್ರದೇಶದಲ್ಲಿ ತಮ್ಮ ನೆಲೆ ವಿಸ್ತರಿಸಲು ನೋಡುತ್ತಿರುವ ಚಂದ್ರಶೇಖರ್ ಆಜಾದ್ ಅವರೊಂದಿಗೆ ಕೈಜೋಡಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಇದೊಂದು ಬಲಿಷ್ಠ ಪರ್ಯಾಯವಾಗಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ ಎಂದು ಓವೈಸಿ ಹೇಳಿದರೆ. ಇದಕ್ಕೆ ಧನಿಗೂಡಿಸಿದ ಆಜಾದ್, ಇದು ತೃತೀಯ ರಂಗವಲ್ಲ, ಬದಲಾಗಿ ಸಾಮಾಜಿಕ ಪರಿವರ್ತನ ಮೋರ್ಚಾ. ಇದರ ಆಳವನ್ನು ಅರ್ಥಮಾಡಿಕೊಂಡರೆ ಇದೇ ಮೊದಲ ರಂಗ ಎಂಬುದು ತಿಳಿಯುತ್ತದೆ ಎಂದಿದ್ದಾರೆ.

Also Read
ಅಬ್ದುಲ್ ಯಾರ ಮುಂದೆಯೂ ತಲೆಬಾಗಲ್ಲ! 2027ರ ಉತ್ತರ ಪ್ರದೇಶದ ಚುನಾವಣೆಗೆ ಅಮೆರಿಕಾದ ತಂತ್ರ ಹೆಣೆದ ಓವೈಸಿ | Asaduddin Owaisi
ಇದು ತೃತೀಯ ರಂಗವಲ್ಲ, ಮೊದಲ ರಂಗ ಎಂದ ಆಜಾದ್: ಆದ್ರೆ ಈ ಮೈತ್ರಿ ಲಾಭ ಮಾಡಿಕೊಡೋದು ಯಾರಿಗೆ ಅನ್ನೋದೇ ಅಸಲಿ ಕುತೂಹಲ! | UP Election

ಇಂಡಿಯಾ ಕೂಟಕ್ಕೆ ಆತಂಕ!

ಉತ್ತರ ಪ್ರದೇಶದ ಒಟ್ಟು ಮತದಾರರಲ್ಲಿ ಸುಮಾರು ಶೇಕಡಾ 40ರಷ್ಟಿರುವ ಮುಸ್ಲಿಂ ಮತ್ತು ಜಾಟವ್​​ ದಲಿತ ಸಮುದಾಯಗಳ ಮತಗಳ ಮೇಲೆ ಈ ಹೊಸ ಮೈತ್ರಿ ಕಣ್ಣಿಟ್ಟಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಸಮುದಾಯಗಳ ಬೆಂಬಲದಿಂದ ಅಖಿಲೇಶ್ ಯಾದವ್​ರ ಎಸ್‌ಪಿ ಮತ್ತು ಕಾಂಗ್ರೆಸ್ ಯಶಸ್ಸು ಗಳಿಸಿದ್ದವು. ಈಗ ಓವೈಸಿ-ಆಜಾದ್ ಮೈತ್ರಿಯು ಎಸ್‌ಪಿ ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಒಡೆಯುತ್ತಾ ಎನ್ನುವ ಆತಂಕ ಎದುರಾಗಿದೆ.

ಈ ಬೆಳವಣಿಗೆಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ವಿಜಯ್ ತೊಟ್ಟತ್ತಿಲ್, ಸಾಮಾಜಿಕ ಪರಿವರ್ತನ ಮೋರ್ಚಾವನ್ನು ತೃತೀಯ ರಂಗವಲ್ಲ, ಇದೊಂದು ವಿನಾಶಕಾರಿ ರಂಗ ಎಂದು ಟೀಕಿಸಿದ್ದಾರೆ. ಓವೈಸಿ ಯಾವಾಗಲೂ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವ ಬಿಜೆಪಿಯ ಬಿ ಟೀಮ್ ಆಗಿದ್ದು, ಈಗ ಆಜಾದ್​ರನ್ನೂ ಈ ವ್ಯವಸ್ಥೆಯೊಳಗೆ ಎಳೆಯಲಾಗಿದೆ. ಜಾತ್ಯತೀತ ಮತಗಳನ್ನು ವಿಭಜಿಸುವ ಮೂಲಕ ಇದು ಬಿಜೆಪಿ ಗೆಲುವಿಗೆ ಸಹಾಯ ಮಾಡಲಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

5% ಮತಗಳಿಕೆಯ ಲೆಕ್ಕಾಚಾರ: ವಿಶ್ಲೇಷಕರು ಏನಂತಾರೆ?

ವೋಟ್ ವೈಬ್ ಸಂಸ್ಥಾಪಕ ಹಾಗೂ ರಾಜಕೀಯ ವಿಶ್ಲೇಷಕ ಅಮಿತಾಭ್ ತಿವಾರಿ ಪ್ರಕಾರ, ಎಐಎಂಐಎಂ ಮತ್ತು ಆಜಾದ್ ಪಕ್ಷದ ಮೈತ್ರಿಯು ಎಸ್‌ಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಭವಿಷ್ಯಕ್ಕೆ ಹಾನಿ ಮಾಡುವುದರ ಜೊತೆಗೆ ಮಾಯಾವತಿಯವರ ವೋಟ್​​ಬ್ಯಾಂಕ್‌ಗೂ ಕನ್ನ ಹಾಕಲಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ 95 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ ಶೇ. 0.49ರಷ್ಟು ಮತಗಳನ್ನು ಮಾತ್ರ ಪಡೆದಿತ್ತು ಮತ್ತು ಆಜಾದ್ ಪಕ್ಷ ಶೇ. 0.13ರಷ್ಟು ಮತ ಗಳಿಸಿತ್ತು. ಎರಡೂ ಪಕ್ಷಗಳು ಖಾತೆ ತೆರೆದಿರಲಿಲ್ಲ. ಆದರೆ 2024ರ ಲೋಕಸಭಾ ಚುನಾವಣೆಯ ನಂತರ ಪರಿಸ್ಥಿತಿ ಬದಲಾಗಿದೆ.

ಜಾಟವ್​​ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣು..

2024ರ ಚುನಾವಣೆಯಲ್ಲಿ ಎಸ್‌ಪಿ ಶೇ. 33.59 (37 ಸ್ಥಾನ) ಮತ್ತು ಕಾಂಗ್ರೆಸ್ ಶೇ. 9.46 (6 ಸ್ಥಾನ) ಮತಗಳನ್ನು ಗಳಿಸಿತ್ತು. ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಯ ಪ್ರಕಾರ, ಶೇ. 92ರಷ್ಟು ಮುಸ್ಲಿಮರು ಮತ್ತು ಶೇ. 25ರಷ್ಟು ಜಾಟವ್ ದಲಿತರು ಇಂಡಿಯಾ ಕೂಟವನ್ನು ಬೆಂಬಲಿಸಿದ್ದರು. ಈಗ ಚಂದ್ರಶೇಖರ್ ಆಜಾದ್ ಅವರು ಬಿಎಸ್‌ಪಿಯ ಪ್ರಮುಖ ಶಕ್ತಿಯಾಗಿರುವ ಜಾಟವ್ ಸಮುದಾಯದಿಂದ ಸುಮಾರು ಶೇ. 2ರಷ್ಟು ಮತಗಳನ್ನು ಸೆಳೆಯಬಹುದು ಮತ್ತು ಓವೈಸಿ ಮುಸ್ಲಿಂ ಸಮುದಾಯದಿಂದ ಶೇ. 2ರಷ್ಟು ಮತಗಳನ್ನು ಪಡೆಯಬಹುದು ಎಂದು ತಿವಾರಿ ಅಂದಾಜಿಸಿದ್ದಾರೆ.

ಒಟ್ಟಾರೆಯಾಗಿ ಈ ಮೈತ್ರಿಕೂಟವು ರಾಜ್ಯವ್ಯಾಪಿ ಶೇ. 3 ರಿಂದ ಶೇ. 7ರಷ್ಟು (ಸರಾಸರಿ ಶೇ. 5) ಮತಗಳನ್ನು ಗಳಿಸುವ ಸಾಧ್ಯತೆಯಿದೆ. ಉತ್ತರ ಪ್ರದೇಶದ 40ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 20ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಮತದಾರರಿದ್ದರೆ, 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ. 20ಕ್ಕಿಂತ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಪಶ್ಚಿಮ ಉತ್ತರ ಪ್ರದೇಶ (ರೋಹಿಲ್‌ಖಂಡ್, ದೋವಾಬ್) ಮತ್ತು ಪೂರ್ವಾಂಚಲದ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಕೇವಲ ಶೇ. 5ರಷ್ಟು ಮತಗಳ ವಿಭಜನೆಯೂ ಫಲಿತಾಂಶವನ್ನು ತಲೆಕೆಳಗು ಮಾಡಬಲ್ಲದು.

ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು ಶೇ. 20ರಷ್ಟಿದ್ದರೂ, ಜಾತ್ಯತೀತ ಎನಿಸಿಕೊಂಡ ಪಕ್ಷಗಳು ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ ಎಂಬುದು ಓವೈಸಿ ಅವರ ಪ್ರಮುಖ ವಾದವಾಗಿದೆ. ಎಸ್‌ಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಜಮಖಾನ ಹಾಸಲು ಮಾತ್ರ ಬಳಕೆಯಾಗುತ್ತಿದ್ದ ಅಬ್ದುಲ್, ಈಗ ಉತ್ತರ ಪ್ರದೇಶದಲ್ಲಿ ಶಾಸಕನಾಗಲಿದ್ದಾನೆ ಎಂದು ಓವೈಸಿ ವಾಗ್ದಾಳಿ ನಡೆಸುತ್ತಿದ್ದಾರೆ.

2025ರ ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಶೇ. 18ರಷ್ಟಿರುವ ಮುಸ್ಲಿಮರನ್ನು ಕಡೆಗಣಿಸಿ, ಕೇವಲ ಶೇ. 2.7ರಷ್ಟಿರುವ ಮಲ್ಲಾ ಸಮುದಾಯದ ಮುಖೇಶ್ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದನ್ನು ತಿವಾರಿ ಇಲ್ಲಿ ಸ್ಮರಿಸಿದ್ದು, ಬಿಹಾರದಲ್ಲಿ ಎಐಎಂಐಎಂ 25 ಸ್ಥಾನಗಳಲ್ಲಿ ಸ್ಪರ್ಧಿಸಿ 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ಮಾದರಿಯಲ್ಲಿ ಯುಪಿಯಲ್ಲೂ ಯುವ ಮುಸ್ಲಿಂ ಮತದಾರರು ಓವೈಸಿ ಕಡೆಗೆ ಆಕರ್ಷಿತರಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಲೇಖಕ ರಣದೀಪ್ ಸಿಸೋಡಿಯಾ ಕೂಡ ಈ ಮೈತ್ರಿಯು ಅಖಿಲೇಶ್ ಯಾದವ್ ಅವರ ಮುಸ್ಲಿಂ ಮತಬ್ಯಾಂಕ್‌ಗೆ ಖಂಡಿತವಾಗಿಯೂ ದೊಡ್ಡ ಪೆಟ್ಟು ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Also Read
ಸುರಕ್ಷಿತ ಕ್ಷೇತ್ರಗಳನ್ನು ಬಿಟ್ಟು ಹೊರಬನ್ನಿ: ಅಖಿಲೇಶ್​-ಸಿಎಂ ಯೋಗಿಗೆ ಉಲ್ಟಾ-ಪಲ್ಟಾ ಆಫರ್ ನೀಡಿದ ಓವೈಸಿ! | Asaduddin Owaisi
ಇದು ತೃತೀಯ ರಂಗವಲ್ಲ, ಮೊದಲ ರಂಗ ಎಂದ ಆಜಾದ್: ಆದ್ರೆ ಈ ಮೈತ್ರಿ ಲಾಭ ಮಾಡಿಕೊಡೋದು ಯಾರಿಗೆ ಅನ್ನೋದೇ ಅಸಲಿ ಕುತೂಹಲ! | UP Election

ಅಖಿಲೇಶ್​​ಗೆ ರಾಮಮಂದಿರ ಭೇಟಿಯ ಇಕ್ಕಟ್ಟು

ಈ ರಾಜಕೀಯ ಬೆಳವಣಿಗೆಗಳ ನಡುವೆಯೇ, ಅಖಿಲೇಶ್ ಯಾದವ್ ಅವರ ಅಯೋಧ್ಯೆ ರಾಮಮಂದಿರ ಭೇಟಿಯು ಎಸ್‌ಪಿಗೆ ಮತ್ತೊಂದು ಇಕ್ಕಟ್ಟನ್ನು ತಂದೊಡ್ಡಿದೆ. ಡಿಸೆಂಬರ್ 12ರಂದು ಅಖಿಲೇಶ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಎಸ್‌ಪಿ ನಾಯಕ ಪವನ್ ಪಾಂಡೆ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 1990ರಲ್ಲಿ ಮುಲಾಯಂ ಸಿಂಗ್ ಯಾದವ್ ಆಡಳಿತಾವಧಿಯಲ್ಲಿ ಕರಸೇವಕರ ಮೇಲೆ ನಡೆದ ಗೋಲಿಬಾರ್‌ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ಅವರು ಡಿಸೆಂಬರ್ 6ರಂದೇ ಅಯೋಧ್ಯೆಗೆ ಭೇಟಿ ನೀಡುವಂತೆ ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲೇಶ್, ತಾವು ಅಯೋಧ್ಯೆ ಮತ್ತು ವೃಂದಾವನಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿದ್ದು, ತಮ್ಮ ಪಿಡಿಎ ಸೂತ್ರಕ್ಕೆ ಪಹಲೆ ದರ್ಶನ್, ಫಿರ್ ಆಶೀರ್ವಾದ್ (ಮೊದಲು ದರ್ಶನ, ನಂತರ ಆಶೀರ್ವಾದ) ಎಂಬ ಹೊಸ ವ್ಯಾಖ್ಯಾನ ನೀಡಿದ್ದಾರೆ. ಈ ನಡೆಯನ್ನು ಮೃದು ಹಿಂದುತ್ವದ ಪ್ರಯತ್ನವೆಂದು ವಿಶ್ಲೇಷಿಸಿರುವ ಅಮಿತಾಭ್ ತಿವಾರಿ, ಹಿಂದೂ ಮತದಾರರನ್ನು ಸೆಳೆಯುವ ಈ ಪ್ರಯತ್ನವು ಮುಸ್ಲಿಂ ಮತದಾರರನ್ನು ಎಸ್‌ಪಿಯಿಂದ ದೂರ ಸರಿಸಬಹುದು ಮತ್ತು ಇದು ಓವೈಸಿಗೆ ಮತ್ತಷ್ಟು ಬಲ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ, 2027ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಘೋಷಣೆಯೊಂದಿಗೆ ಹುಟ್ಟಿಕೊಂಡಿರುವ ಸಾಮಾಜಿಕ ಪರಿವರ್ತನ ಮೋರ್ಚಾ, ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದಕ್ಕಿಂತ ಹೆಚ್ಚಾಗಿ, ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುವ ಮೂಲಕ ಅಖಿಲೇಶ್ ಯಾದವ್ ಅವರ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವ ಸಾಧ್ಯತೆಯೇ ಹೆಚ್ಚಿದೆ(ಏಜೆನ್ಸೀಸ್​).