ಲಖನೌ: ಮುಂಬರುವ 2027ರ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶವನ್ನು ಪ್ರಸ್ತಾಪಿಸಿ ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಮಿಚಿಗನ್ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ಎಲ್-ಸಯೀದ್ ಜಯವನ್ನು ಉಲ್ಲೇಖಿಸಿರುವ ಓವೈಸಿ, ಉತ್ತರ ಪ್ರದೇಶದ ಮುಸ್ಲಿಮರು ತಮ್ಮ ಸ್ವಂತ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಓವೈಸಿ, ಅಮೆರಿಕದ ಮಿಚಿಗನ್‌ನಲ್ಲಿ ಅಬ್ದುಲ್ (ಅಬ್ದುಲ್ ಎಲ್-ಸಯೀದ್) ಎಂಬುವವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದೇ ರೀತಿ ಈಗ ಉತ್ತರ ಪ್ರದೇಶದಲ್ಲಿರುವ ಮುಸ್ಲಿಮರು ಕೂಡ ತಮ್ಮ ಸ್ವತಂತ್ರ ರಾಜಕೀಯ ಶಕ್ತಿಯನ್ನು ಬೆಳೆಸಿಕೊಳ್ಳಬೇಕಿದೆ. ವಿರೋಧಿಗಳು ಹಾಗೂ ಸಂಘ ಪರಿವಾರದವರು ಅಬ್ದುಲ್ ಎಂಬ ಹೆಸರನ್ನು ವ್ಯಂಗ್ಯ ಮಾಡಲು ಬಳಸುತ್ತಿದ್ದಾರೆ. ಆದರೆ ಮುಸ್ಲಿಮರು ಅಲ್ಲಾಹನನ್ನು ಹೊರತುಪಡಿಸಿ ಇನ್ನಾರ ಮುಂದೆಯೂ ತಲೆಬಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಸಮಯ ಬಂದಿದೆ. ಇನ್ಮುಂದೆ ನಾವು ಬೇರೆ ರಾಜಕೀಯ ಪಕ್ಷಗಳ ಏಳಿಗೆಗಾಗಿ ದುಡಿಯುವುದಿಲ್ಲ ಎಂದರು.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಓವೈಸಿ, ಅಮೆರಿಕದ ಚುನಾವಣಾ ಫಲಿತಾಂಶವನ್ನು ರಾಷ್ಟ್ರ ರಾಜಕೀಯದ ಸನ್ನಿವೇಶಕ್ಕೆ ಬೆಸೆದು ತಮ್ಮ ಪಕ್ಷದ ಪರ ನೆಲೆ ಕಂಡುಕೊಳ್ಳಲು ಯತ್ನಿಸಿದ್ದಾರೆ.
ಅಮೆರಿಕದ ಮಿಚಿಗನ್ ರಾಜ್ಯದಿಂದ ಯುಎಸ್ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಅಬ್ದುಲ್ ಎಲ್-ಸಯೀದ್ ಅವರು ಹೊಸ ಇತಿಹಾಸ ಬರೆದಿದ್ದಾರೆ. ಈ ಮೂಲಕ ಅವರು ಅಮೆರಿಕದ ಸೆನೆಟ್ ಪ್ರವೇಶಿಸಿದ ದೇಶದ ಪ್ರಥಮ ಮುಸ್ಲಿಂ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಎಲ್-ಸಯೀದ್ ಅವರು ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಮೈಕ್ ರೋಜರ್ಸ್ ವಿರುದ್ಧ 22.07 ಲಕ್ಷಕ್ಕೂ ಹೆಚ್ಚು (ಶೇ. 51.97) ಮತಗಳನ್ನು ಪಡೆದು ಅದ್ಭುತ ಜಯ ಸಾಧಿಸಿದ್ದಾರೆ.
42 ವರ್ಷ ಪ್ರಾಯದ ಅಬ್ದುಲ್ ಎಲ್-ಸಯೀದ್ ಅವರು ಈಜಿಪ್ಟ್ ಮೂಲದವರಾಗಿದ್ದು, ವೃತ್ತಿಯಿಂದ ಪ್ರಸಿದ್ಧ ಸಾರ್ವಜನಿಕ ಆರೋಗ್ಯ ತಜ್ಞರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಡೆಟ್ರಾಯಿಟ್ ಮತ್ತು ವೇನ್ ಕೌಂಟಿಯ ಆರೋಗ್ಯ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕ ಸೇವೆಯಲ್ಲಿ ಅಪಾರ ಅನುಭವ ಗಳಿಸಿದ್ದಾರೆ. ಶೈಕ್ಷಣಿಕವಾಗಿ ಅತ್ಯಂತ ಉನ್ನತ ಅರ್ಹತೆ ಹೊಂದಿರುವ ಇವರು ಮಿಚಿಗನ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಶಿಕ್ಷಣವನ್ನು ಪೂರೈಸಿದ್ದಾರೆ. ತದನಂತರ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರೋಡ್ಸ್ ಸ್ಕಾಲರ್ ಆಗಿ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದಾರೆ. ವೈಯಕ್ತಿಕ ಜೀವನಕ್ಕೆ ಬಂದರೆ, ಇವರ ಪತ್ನಿ ಸಾರಾ ಜಕಾಕು ಅವರ ಕುಟುಂಬವು ಭಾರತೀಯ ಮೂಲದ ಹಿನ್ನೆಲೆಯನ್ನು ಹೊಂದಿದೆ.
ಎಲ್-ಸಯೀದ್ ಅವರ ರಾಜಕೀಯ ಪ್ರಯಾಣ ಹೂವಿನ ಹಾಸಿಗೆಯಾಗಿರಲಿಲ್ಲ. ಸಾಲು ಸಾಲು ಸವಾಲುಗಳೆಂಬ ಮುಳ್ಳಿನ ಹಾದಿಯಲ್ಲಿ ನಡೆದ ಅವರು, 2018ರ ಮಿಚಿಗನ್ ಗವರ್ನರ್ ಸ್ಥಾನಕ್ಕಾಗಿ ನಡೆದ ಡೆಮಾಕ್ರಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಗ್ರೆಚನ್ ವಿಟ್ಮರ್ ವಿರುದ್ಧ ಸೋಲನುಭವಿಸಿದರು. ಇದರಿಂದ ಧೃತಿಗೆಡದೆ ಪಾಡ್‌ಕಾಸ್ಟ್, ಪುಸ್ತಕ ರಚನೆ ಮತ್ತು ಯೂಟ್ಯೂಬ್‌ಗಳ ಮೂಲಕ ನಿರಂತರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕವನ್ನು ಕಾಯ್ದುಕೊಂಡಿದ್ದರು. ನಂತರ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಪ್ರಚಾರ ತಂತ್ರಗಳಿಂದ ಪ್ರೇರಣೆ ಪಡೆದು, ಮತ್ತೊಮ್ಮೆ ರಾಜಕೀಯ ರಂಗಕ್ಕೆ ಧುಮುಕಿ ಯಶಸ್ಸಿನ ಸಿಹಿ ಉಂಡಿದ್ದಾರೆ.
ತಮ್ಮ ಪ್ರಚಾರ ಅಭಿಯಾನದಲ್ಲಿ ಅವರು ಪ್ರಗತಿಪರ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಮೆಡಿಕೇರ್ ಫಾರ್ ಆಲ್ ಯೋಜನೆ ಮೂಲಕ ಪ್ರತಿಯೊಬ್ಬರಿಗೂ ಉಚಿತ ಹಾಗೂ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವುದು, ಇಸ್ರೇಲ್‌ಗೆ ನೀಡಲಾಗುವ ಅಮೆರಿಕದ ಮಿಲಿಟರಿ ನೆರವನ್ನು ಸ್ಥಗಿತಗೊಳಿಸುವುದು ಮತ್ತು ಚುನಾವಣಾ ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕ ಸುಧಾರಣೆಗಳನ್ನು ತರುವುದು ಅವರ ಪ್ರಮುಖ ರಾಜಕೀಯ ಆದ್ಯತೆಗಳಾಗಿದ್ದವು.
ಮುಂದಿನ ವರ್ಷದ ಪ್ರಾರಂಭದಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನೀಡಿರುವ ಈ ಹೇಳಿಕೆಯು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಎಐಎಂಐಎಂ ಪಕ್ಷವನ್ನು ಮುಸ್ಲಿಂ ಸಮುದಾಯಕ್ಕೆ ದೊಡ್ಡ ರಾಜಕೀಯ ವೇದಿಕೆಯಾಗಿಸುವುದು ಓವೈಸಿ ತಂತ್ರಗಾರಿಕೆಯಾಗಿದೆ.
ಅಮೆರಿಕದ ಉದಾಹರಣೆಯನ್ನು ನೀಡುವ ಮೂಲಕ ಮುಸ್ಲಿಂ ಯುವಕರಲ್ಲಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸಲು ಹಾಗೂ ಯುಪಿಯಲ್ಲಿ ತಮ್ಮ ಪಕ್ಷದ ಮತಬ್ಯಾಂಕ್ ವಿಸ್ತರಿಸಲು ಓವೈಸಿ ಈ ಪ್ರಸಂಗವನ್ನು ದಾಳವಾಗಿ ಬಳಸಿಕೊಂಡಿದ್ದಾರೆ(ಏಜೆನ್ಸೀಸ್).