ಉತ್ತರ ಪ್ರದೇಶ ಚುನಾವಣೆಗೆ ಓವೈಸಿ ಹೊಸ ರಣತಂತ್ರ, ಕಾಂಗ್ರೆಸ್, ಎಸ್​ಪಿಗೆ ತಲೆನೋವು! ಏನಿದು ಅಬ್ದುಲ್ ಅಸ್ತ್ರ..? | Abdul Metaphor

ಉತ್ತರ ಪ್ರದೇಶ ಚುನಾವಣೆಗೆ ಓವೈಸಿ ಹೊಸ ರಣತಂತ್ರ, ಕಾಂಗ್ರೆಸ್, ಎಸ್​ಪಿಗೆ ತಲೆನೋವು! ಏನಿದು ಅಬ್ದುಲ್ ಅಸ್ತ್ರ..? | Abdul Metaphor
Published on: 

ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹೊತ್ತಿನಲ್ಲಿ ಅಬ್ದುಲ್ (Abdul Metaphor) ಎಂಬ ಕಾಲ್ಪನಿಕ ಪಾತ್ರವು ರಾಜ್ಯದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸಲು ಅಬ್ದುಲ್ ಪದವನ್ನು ಬಳಸಿಕೊಂಡು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ರಾಜ್ಯದ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಪ್ರಯತ್ನವಾಗಿ ಮೂಡಿಬಂದಿದೆ.

ಹಾಸಿಗೆ ಹಾಸುವವನು ಅಬ್ದುಲ್, ವೋಟ್ ಮಾಡುವವನು ಅಬ್ದುಲ್, ಆದರೆ ಅಧಿಕಾರದ ಲಾಭ ಮಾತ್ರ ಬೇರೆಯವರಿಗೆ ಎನ್ನುವುದು ಈ ಅಬ್ದುಲ್​ ಅಭಿಯಾನದ ತುಣುಕು. ಮುಸ್ಲಿಮರು ಬೇರೆ ಪಕ್ಷಗಳ ನಾಯಕರಿಗೆ ದುಡಿಯುವ ಕೆಲಸಗಾರರಂತೆ ಮತ್ತು ವೋಟ್‌ ಹಾಕುವ ಸಾಧನಗಳಂತೆ ಮಾತ್ರ ಬಳಕೆಯಾಗುತ್ತಿದ್ದಾರೆ. ಆದರೆ ಅಧಿಕಾರ ಮಾತ್ರ ಬೇರೆಯವರ ಪಾಲಾಗುತ್ತಿದೆ. ಇನ್ನುಮುಂದೆ ಮುಸ್ಲಿಮರು ಬೇರೆಯವರ ಹಿಂದೆ ಹೋಗುವುದನ್ನು ಬಿಟ್ಟು, ತಾವೇ ಸ್ವತಃ ಶಾಸಕರು ಮತ್ತು ಸಂಸದರಾಗಿ ನಾಯಕರಾಗಿ ಬೆಳೆಯಬೇಕು ಎಂಬುದು 2021ರಿಂದಲೂ ಓವೈಸಿ ಹೇಳಿಕೊಂಡು ಬರುತ್ತಿರುವ ವಾದ.

Also Read
ಸುರಕ್ಷಿತ ಕ್ಷೇತ್ರಗಳನ್ನು ಬಿಟ್ಟು ಹೊರಬನ್ನಿ: ಅಖಿಲೇಶ್​-ಸಿಎಂ ಯೋಗಿಗೆ ಉಲ್ಟಾ-ಪಲ್ಟಾ ಆಫರ್ ನೀಡಿದ ಓವೈಸಿ! | Asaduddin Owaisi
ಉತ್ತರ ಪ್ರದೇಶ ಚುನಾವಣೆಗೆ ಓವೈಸಿ ಹೊಸ ರಣತಂತ್ರ, ಕಾಂಗ್ರೆಸ್, ಎಸ್​ಪಿಗೆ ತಲೆನೋವು! ಏನಿದು ಅಬ್ದುಲ್ ಅಸ್ತ್ರ..? | Abdul Metaphor

2024ರ ಲೋಕಸಭೆ ಚುನಾವಣೆ ಹಾಗೂ ಬಿಹಾರದ 2025ರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದುಕೊಂಡಿರುವ ಓವೈಸಿ, ಇದೀಗ ಯುಪಿಯಲ್ಲೂ ಸ್ವತಂತ್ರ ಮುಸ್ಲಿಂ ನಾಯಕತ್ವವನ್ನು ಹುಟ್ಟುಹಾಕಲು ಮುಂದಾಗಿದ್ದಾರೆ. ರಾಮಪುರ, ಬಹ್ರೈಚ್ ಮತ್ತು ಕೈರಾನಾಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿರುವ ಅವರು, ಇನ್ನುಮುಂದೆ ಮುಸ್ಲಿಮರು ನೆಹರೂ-ಗಾಂಧಿ ಹಾಗೂ ಯಾದವ್​ ಕುಟುಂಬಗಳ ಗುಲಾಮರಾಗುವುದಿಲ್ಲ ಎಂದು ಘೋಷಿಸಿದ್ದಾರೆ.

ಎಸ್‌ಪಿ, ಕಾಂಗ್ರೆಸ್ ಮತ್ತು ಆರ್‌ಜೆಡಿಯಿಂದ ತೀವ್ರ ವಿರೋಧ!

ಓವೈಸಿ ಅವರ ಈ ಹೇಳಿಕೆಗಳು ಯುಪಿಯ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ತೀವ್ರ ಮುಜುಗರ ತಂದಿದೆ. ಎಸ್‌ಪಿ ವಕ್ತಾರ ಅಬ್ಬಾಸ್ ಹೈದರ್, ಓವೈಸಿ ಒಡೆದಾಳುವ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರೆ, ಕಾಂಗ್ರೆಸ್ ಮುಖಂಡ ಉದಿತ್ ರಾಜ್, ಓವೈಸಿ ಮುಸ್ಲಿಮರ ಗುತ್ತಿಗೆದಾರರಾಗಲು ಹೊರಟಿದ್ದಾರೆ ಎಂದಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಜೈಲಿನಲ್ಲಿರುವ ಹಿರಿಯ ಮುಸ್ಲಿಂ ನಾಯಕ ಅಜಮ್ ಖಾನ್ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವುದರ ಜೊತೆಗೆ, ಎಐಎಂಐಎಂ ನಾಯಕನನ್ನು ಬಿಜೆಪಿಯ ಬಿ-ಟೀಮ್ ಎಂದು ಜರಿದರು.

ಮತ್ತೊಂದೆಡೆ, ತೆಲಂಗಾಣದ ಕಾಂಗ್ರೆಸ್ ನಾಯಕರು ಓವೈಸಿ ವಿರುದ್ಧ ತಿರುಗಿಬೆದ್ದಿದ್ದಾರೆ. ತೆಲಂಗಾಣದಲ್ಲಿ ಎಐಎಂಐಎಂ ಪಕ್ಷವು ಮುಸ್ಲಿಂ ನಾಯಕತ್ವವನ್ನು ಏಕೆ ಬೆಳೆಸಿಲ್ಲ..? ಹೈದರಾಬಾದ್ ಲೋಕಸಭೆ ಸ್ಥಾನವು 1984ರಿಂದಲೂ ಒಂದೇ ಕುಟುಂಬದ ಕೈಯಲ್ಲೇ ಏಕೆ ಉಳಿದಿದೆ..? ಎಂದು ಕೈ ನಾಯಕರು ಪ್ರಶ್ನಿಸಿದ್ದಾರೆ.

ಯುಪಿಯಲ್ಲಿ ಓವೈಸಿ ಮುಂದಿರುವ ಸವಾಲುಗಳೇನು..?

2022ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ ಮತ್ತು ಕೇವಲ ಶೇ. 0.49ರಷ್ಟು ಮತಗಳನ್ನು ಗಳಿಸಿತ್ತು. 2027ರ ಚುನಾವಣೆಗೆ ಎಸ್‌ಪಿ ಜೊತೆ ಮೈತ್ರಿಗೆ ಓವೈಸಿ ಯತ್ನಿಸಿದ್ದರೂ, ಅಖಿಲೇಶ್ ಯಾದವ್ ಅದಕ್ಕೆ ಒಪ್ಪಿಲ್ಲ. ಹೀಗಾಗಿ ಪಶ್ಚಿಮ ಯುಪಿಯ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸ್ವತಂತ್ರವಾಗಿ ನೆಲೆ ಕಂಡುಕೊಳ್ಳಲು ಅಸಾದುದ್ದೀನ್​ ಹರಸಾಹಸ ಪಡುತ್ತಿದ್ದಾರೆ. ಮುಸ್ಲಿಂ ಮತದಾರರನ್ನು ಸೆಳೆಯಲು ಅವರು ಹೂಡಿರುವ ಅಬ್ದುಲ್ ಅಸ್ತ್ರವು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).