ಸುರಕ್ಷಿತ ಕ್ಷೇತ್ರಗಳನ್ನು ಬಿಟ್ಟು ಹೊರಬನ್ನಿ: ಅಖಿಲೇಶ್​-ಸಿಎಂ ಯೋಗಿಗೆ ಉಲ್ಟಾ-ಪಲ್ಟಾ ಆಫರ್ ನೀಡಿದ ಓವೈಸಿ! | Asaduddin Owaisi

ಲಖನೌ: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಅಯೋಧ್ಯೆಯಿಂದ ಸ್ಪರ್ಧಿಸುವ ಕುರಿತು ಸವಾಲು-ಪ್ರತಿ ಸವಾಲುಗಳು ಮುಂದುವರಿದಿವೆ. ಇದಕ್ಕೆ ಮಧ್ಯಪ್ರವೇಶಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi), ಇಬ್ಬರೂ ನಾಯಕರಿಗೆ ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಹೊಸ ರಾಜಕೀಯ ಸವಾಲು ಎಸೆದಿದ್ದಾರೆ.
ಅಖಿಲೇಶ್​-ಸಿಎಂ ಯೋಗಿಗೆ ಉಲ್ಟಾ-ಪಲ್ಟಾ ಆಫರ್ ನೀಡಿದ ಓವೈಸಿ!
ಅಖಿಲೇಶ್​-ಸಿಎಂ ಯೋಗಿಗೆ ಉಲ್ಟಾ-ಪಲ್ಟಾ ಆಫರ್ ನೀಡಿದ ಓವೈಸಿ!
Published on: 

ಲಖನೌ: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಅಯೋಧ್ಯೆಯಿಂದ ಸ್ಪರ್ಧಿಸುವ ಕುರಿತು ಸವಾಲು-ಪ್ರತಿ ಸವಾಲುಗಳು ಮುಂದುವರಿದಿವೆ. ಇದಕ್ಕೆ ಮಧ್ಯಪ್ರವೇಶಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi), ಇಬ್ಬರೂ ನಾಯಕರಿಗೆ ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಹೊಸ ರಾಜಕೀಯ ಸವಾಲು ಎಸೆದಿದ್ದಾರೆ.

ಈ ಹಿಂದೆ ಅಖಿಲೇಶ್ ಯಾದವ್ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಅಯೋಧ್ಯೆಯಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ಅಖಿಲೇಶ್ ಕೂಡ ಅಯೋಧ್ಯೆಯಿಂದಲೇ ಚುನಾವಣೆಗೆ ಸ್ಪರ್ಧಿಸಿ ಮುಖಾಮುಖಿ ಸ್ಪರ್ಧೆಯನ್ನು ಎದುರಿಸಲಿ ಎಂದು ತಿರುಗೇಟು ನೀಡಿದ್ದರು.

ಸದ್ಯ ಈ ಕುರಿತಾಗಿ ಮಾತನಾಡಿರುವ ಓವೈಸಿ, ಇಬ್ಬರೂ ನಾಯಕರು ತಮ್ಮ ಅನುಕೂಲಕರವಾದ ಕ್ಷೇತ್ರಗಳನ್ನು ಬಿಟ್ಟು ಹೊರಬರಬೇಕು ಎಂದು ಆಗ್ರಹಿಸಿದರು. ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಇಬ್ಬರೂ ಅಷ್ಟು ಜನಪ್ರಿಯರಾಗಿದ್ದರೆ, ಸಿಎಂ ಬಂದು ಸಂಭಲ್‌ನಿಂದ ಸ್ಪರ್ಧಿಸಲಿ ಮತ್ತು ಅಖಿಲೇಶ್ ಅವರು ಹೋಗಿ ಗೋಖರಪುರದಿಂದ ಸ್ಪರ್ಧಿಸಲಿ. ದೇವರು, ಜನತೆಯ ದಯೆಯಿಂದ ಎಐಎಂಐಎಂ ಪಕ್ಷವು ಅವರನ್ನು ಆ ಎರಡು ಸ್ಥಳಗಳಲ್ಲೂ ಸೋಲಿಸುತ್ತದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:ಜ್ಞಾನೇಶ್ ಕುಮಾರ್ ರಕ್ಷಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡ್ತಿದೆ: ನಮ್ಮ ಪ್ರತಿಭಟನೆಯಿಂದ ಸಿಇಸಿಗೆ ನಿದ್ದೆ ಬರ್ತಿಲ್ಲ ಎಂದ ರಾಹುಲ್​ ಗಾಂಧಿ! | Rahul Gandhi

ಬಿಜೆಪಿಯ 80-20 ಧ್ರುವೀಕರಣದ ರಾಜಕೀಯ ನಿರೂಪಣೆಯನ್ನು ತಳ್ಳಿಹಾಕಿದ ಓವೈಸಿ, ಮುಂಬರುವ ಚುನಾವಣೆಯಲ್ಲಿ ನಿಜವಾದ ರಾಜಕೀಯ ಯುದ್ಧವು 99 ಮತ್ತು 1 ರ ನಡುವೆ ಇರಲಿದೆ ಎಂದರು. 99% ಎಂದರೆ ಉತ್ತರ ಪ್ರದೇಶದ ಬಡ ನಾಗರಿಕರು, 1% ಎಂದರೆ ಭಾರತದ ಶೇಕಡಾ 40 ರಷ್ಟು ಸಂಪತ್ತನ್ನು ಕಬಳಿಸಿರುವ ಶ್ರೀಮಂತರು. ಹೀಗಾಗಿ 80-20 ರ ಲೆಕ್ಕಾಚಾರ ಇಲ್ಲಿ ನಡೆಯುವುದಿಲ್ಲ, ಬದಲಿಗೆ 99% ಮತ್ತು 1% ನಡುವಿನ ಹೋರಾಟವಾಗಲಿದೆ ಎಂದು ಅವರು ವಿವರಿಸಿದರು.

ತಮ್ಮ ಪಕ್ಷವು ಯುಪಿಯಲ್ಲಿ ಉತ್ತಮ ಸಾಧನೆ ಮಾಡಿಲ್ಲ ಎಂಬ ಟೀಕೆಗಳಿಗೆ ತಿರುಗೇಟು ನೀಡಿದ ಓವೈಸಿ, ಹಾಗಾದರೆ ಪ್ರಮುಖ ಪಕ್ಷಗಳಿಗ್ಯಾಕೆ ರಾತ್ರಿ ನಿದ್ದೆ ಬರ್ತಿಲ್ಲ..? ಅವರ ಹೊಟ್ಟೆ ಯಾಕೆ ನೋಯುತ್ತಿದೆ..? ಎಂದು ಪ್ರಶ್ನಿಸಿದರು. ತಾವು ಯಾವುದೇ ಮೈತ್ರಿ ಅಥವಾ ಸ್ವಂತ ತೀರ್ಮಾನಗಳ ಮೂಲಕ ಚುನಾವಣೆ ಎದುರಿಸುವುದಾಗಿ ಹೇಳಿದ ಓವೈಸಿ, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಈ ಹಿಂದೆ ಸಮಾಜವಾದಿ ಪಕ್ಷಕ್ಕೆ ಮೈತ್ರಿ ಪ್ರಸ್ತಾಪ ನೀಡಿದ್ದನ್ನು ಸ್ಮರಿಸಿದರು.

ತಾನು ವಿರೋಧ ಪಕ್ಷಗಳನ್ನು ಮಾತ್ರ ಟೀಕಿಸುತ್ತಿದ್ದು ಬಿಜೆಪಿಯನ್ನು ವಿರೋಧಿಸುತ್ತಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಒಂದು ವೇಳೆ ನಿಮಗೆ ಕಿವಿಯ ಸಮಸ್ಯೆ ಇದ್ದರೆ ನಾನು ವೈದ್ಯನೂ ಅಲ್ಲ, ಇಎನ್ ಟಿ (ENT) ತಜ್ಞನೂ ಅಲ್ಲ. ನಾವು ಮೊದಲು ಬಿಜೆಪಿಯ ಬಗ್ಗೆ ಮಾತನಾಡುತ್ತೇವೆ, ನಂತರ ನಮ್ಮ ಎದುರಾಳಿಗಳನ್ನು ಪ್ರಶ್ನಿಸುತ್ತೇವೆ, ನಮ್ಮ ಮಾತುಗಳಿಂದ ಅವರಿಗೆ ಲಾಭವಾಗಿಲ್ಲ ಎನ್ನುವುದಾದರೆ ನಮ್ಮ ಬಾಣಗಳು ಸರಿಯಾದ ಗುರಿಗೆ ತಗುಲಿವೆ ಎಂದರ್ಥ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net