ಆರಂಭದಲ್ಲಿ 1 ಸಾವಿರ ರೂ. ಸಂಬಳ ಆದ್ರೆ ಇಂದು ಈ ಸರ್ಕಾರಿ ಉದ್ಯೋಗಿಯ ಒಟ್ಟು ಆಸ್ತಿ ನೋಡಿ ಅಧಿಕಾರಿಗಳೇ ಶಾಕ್​! ABEO Jayadev Jena

ಒಡಿಶಾದ ಜಾಜ್‌ಪುರ ಜಿಲ್ಲೆಯ ಧರ್ಮಶಾಲಾ ಬ್ಲಾಕ್‌ನ ಸಹಾಯಕ ಬ್ಲಾಕ್ ಶಿಕ್ಷಣ ಅಧಿಕಾರಿಯಾಗಿ (ABEO) ಕಾರ್ಯನಿರ್ವಹಿಸುತ್ತಿರುವ ಜಯದೇವ್ ಜೆನಾ ಎಂಬುವವರೇ ಈ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕೇಂದ್ರಬಿಂದು. ಈತ ಆಗಸ್ಟ್ 25, 1987ರಂದು ಅನುಕಂಪದ (ಪುನರ್ವಸತಿ) ಯೋಜನೆಯಡಿ ಗಂಜಾಂ ಜಿಲ್ಲೆಯ ಛತ್ರಪುರದಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು.
ABEO Jayadev Jena
ಬ್ಲಾಕ್ ಶಿಕ್ಷಣ ಅಧಿಕಾರಿ ಜಯದೇವ್ ಜೆನಾ
Published on: 

ಭುವನೇಶ್ವರ್​: ಕೇವಲ 1000 ರೂಪಾಯಿ ತಿಂಗಳ ವೇತನದೊಂದಿಗೆ ಸರ್ಕಾರಿ ಸೇವೆಗೆ ಕಾಲಿಟ್ಟಿದ್ದ ಸಹಾಯಕ ಬ್ಲಾಕ್ ಶಿಕ್ಷಣ ಅಧಿಕಾರಿಯೊಬ್ಬರು ( ABEO Jayadev Jena ) ಇಂದು ಕೋಟ್ಯಂತರ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳಿಗೆ ಒಡೆಯರಾಗಿರುವುದು ಲಂಚಾವತಾರದ ಕರಾಳ ಮುಖವನ್ನು ತೆರೆದಿಟ್ಟಿದೆ. ಒಡಿಶಾದಲ್ಲಿ ನಡೆದಿರುವ ಈ ಹಠಾತ್​ ವಿಜಿಲೆನ್ಸ್ ದಾಳಿಯು ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಕೇವಲ ಸಣ್ಣ ಹುದ್ದೆಯಲ್ಲಿದ್ದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದನೆ ಮಾಡಿರುವ ಅಧಿಕಾರಿಯ ಅಸಲಿ ಬಣ್ಣ ಬಯಲಾಗಿದೆ.

ಒಡಿಶಾದ ಜಾಜ್‌ಪುರ ಜಿಲ್ಲೆಯ ಧರ್ಮಶಾಲಾ ಬ್ಲಾಕ್‌ನ ಸಹಾಯಕ ಬ್ಲಾಕ್ ಶಿಕ್ಷಣ ಅಧಿಕಾರಿಯಾಗಿ (ABEO) ಕಾರ್ಯನಿರ್ವಹಿಸುತ್ತಿರುವ ಜಯದೇವ್ ಜೆನಾ ಎಂಬುವವರೇ ಈ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕೇಂದ್ರಬಿಂದು. ಈತ ಆಗಸ್ಟ್ 25, 1987ರಂದು ಅನುಕಂಪದ (ಪುನರ್ವಸತಿ) ಯೋಜನೆಯಡಿ ಗಂಜಾಂ ಜಿಲ್ಲೆಯ ಛತ್ರಪುರದಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಆ ಕಾಲದಲ್ಲಿ ಇವರ ಆರಂಭಿಕ ಮಾಸಿಕ ವೇತನ ಕೇವಲ 1,000 ರೂ. ಮಾತ್ರವಾಗಿತ್ತು.

Also Read
ಮಂಗಳನ ಅಂಗಳದಲ್ಲಿ ಕೆಲವೇ ಕ್ಷಣದಲ್ಲಿ ನಾಪತ್ತೆಯಾಗುವ ಮೋಡದ ರಹಸ್ಯವೇನು? ಪತ್ತೆಹಚ್ಚಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲವೇ? Mars
ABEO Jayadev Jena

ದಶಕಗಳ ಕಾಲ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದ ಇವರು, ಮಾರ್ಚ್ 1, 2014ರಂದು ಮುಖ್ಯೋಪಾಧ್ಯಾಯರಾಗಿ (Head Master) ಬಡ್ತಿ ಪಡೆದರು. ಬಳಿಕ ಮಾರ್ಚ್ 3, 2023ರಂದು ಗಂಜಾಂನ ಬೆಗುನಿಯಾಪಡಾ ಬ್ಲಾಕ್‌ನಲ್ಲಿ ABEO ಆಗಿ ನೇಮಕಗೊಂಡು, ನಂತರ ನವೆಂಬರ್ 30, 2024ರಂದು ಜಾಜ್‌ಪುರ ಜಿಲ್ಲೆಯ ಧರ್ಮಶಾಲಾ ಬ್ಲಾಕ್‌ಗೆ ವರ್ಗಾವಣೆಗೊಂಡು ಇಲ್ಲಿಯವರೆಗೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದರು.

ಆದರೆ, ಈತನ ಅತಿಯಾದ ಆಸ್ತಿ ಸಂಪಾದನೆ ಹಾಗೂ ಅಕ್ರಮ ಗಳಿಕೆಯ ಖಚಿತ ಮಾಹಿತಿ ಪಡೆದ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು, ಏಕಕಾಲದಲ್ಲಿ ಜಯದೇವ್ ಜೆನಾ ಅವರಿಗೆ ಸೇರಿದ ಒಟ್ಟು ಏಳು ಪ್ರಮುಖ ಸ್ಥಳಗಳಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ.

1. ಭುವನೇಶ್ವರದ ಪಟರಾಪಡಾದಲ್ಲಿರುವ ಮೂರು ಮಹಡಿಯ ಭವ್ಯ ಕಟ್ಟಡ.

2. ಗಂಜಾಂನ ಪಿ. ನುವಾಗಾಂವ್‌ನಲ್ಲಿರುವ ಎರಡು ಮಹಡಿಯ ವಸತಿ ಕಟ್ಟಡ.

3. ಅದೇ ಗಂಜಾಂನ ಪಿ. ನುವಾಗಾಂವ್‌ನಲ್ಲಿರುವ ಮತ್ತೊಂದು ಬೃಹತ್ ಕಟ್ಟಡ.

4. ಗಂಜಾಂನ ಬುರುಝರಿಯಲ್ಲಿರುವ ಅವರ ಸಂಬಂಧಿಕರ ಮನೆ.

5. ಭುವನೇಶ್ವರದ ಖಂಡಗಿರಿ, ಜನನಿ ವಿಹಾರದಲ್ಲಿರುವ ಸಂಬಂಧಿಕರ ಮನೆ.

6. ಜಾಜ್‌ಪುರದ ಜರ್ಕಾದಲ್ಲಿರುವ ಅವರ ಬಾಡಿಗೆ ವಸತಿ ಮನೆ.

7. ಜಾಜ್‌ಪುರದ ಜರ್ಕಾದಲ್ಲಿರುವ ಅವರ ಅಧಿಕೃತ ಕಚೇರಿ ಕೊಠಡಿ.

ಈ ಸುದೀರ್ಘ ದಾಳಿಯ ವೇಳೆ ವಿಜಿಲೆನ್ಸ್ ಅಧಿಕಾರಿಗಳು ಜಯದೇವ್ ಜೆನಾ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಕೋಟ್ಯಂತರ ರೂ. ಮೌಲ್ಯದ ಅಘೋಷಿತ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

* ಭುವನೇಶ್ವರದ ಪಟರಾಪಡಾದಲ್ಲಿ ಅಂದಾಜು 4300 ಚದರ ಅಡಿ ವಿಸ್ತೀರ್ಣ1ರ ಮೂರು ಮಹಡಿಯ ಕಟ್ಟಡ.

* ಗಂಜಾಂನ ಪಿ. ನುವಾಗಾಂವ್‌ನಲ್ಲಿ ಅಂದಾಜು 3850 ಚದರ ಅಡಿ ವಿಸ್ತೀರ್ಣದ ಎರಡು ಮಹಡಿಯ ಕಟ್ಟಡ.

* ಗಂಜಾಂನ ಪಿ. ನುವಾಗಾಂವ್‌ನಲ್ಲಿಯೇ ಅಂದಾಜು 7100 ಚದರ ಅಡಿ ವಿಸ್ತೀರ್ಣದ ಮತ್ತೊಂದು ದೊಡ್ಡ ಕಟ್ಟಡ.

* ಭುವನೇಶ್ವರ, ಖಳ್ಳಿಕೋಟ್ ಹಾಗೂ ಗಂಜಾಂ ಜಿಲ್ಲೆಯ ಕೋಡಲಾ ಸೇರಿದಂತೆ ಒಟ್ಟು 19 ನಿವೇಶನಗಳು (ಪ್ಲಾಟ್‌ಗಳು).

* ಸರಿಸುಮಾರು 740 ಗ್ರಾಂ ಚಿನ್ನಾಭರಣಗಳು.

* ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ರೂ. 40 ಲಕ್ಷಕ್ಕೂ ಅಧಿಕ ನಗದು ಜಮೆ.

* 1 ಟಾಟಾ ನೆಕ್ಸಾನ್ (Tata Nexon) ಕಾರು ಹಾಗೂ 2 ದ್ವಿಚಕ್ರ ವಾಹನಗಳು.

Also Read
ಆಶ್ವಯುಜ ಮಾಸದಲ್ಲಿ ಒಂದಲ್ಲ, ಎರಡಲ್ಲ ಮೂರು ರಾಜಯೋಗ: ಕಾಲಿಟ್ಟಲೆಲ್ಲ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣದ ಸುಗ್ಗಿ! Astrology
ABEO Jayadev Jena

ಸದ್ಯ ಜಯದೇವ್ ಜೆನಾ ಅವರನ್ನು ವಶಕ್ಕೆ ಪಡೆದಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಈ ಆಸ್ತಿಗಳ ಮೂಲದ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಾಂತ್ರಿಕ ವಿಭಾಗದಿಂದ ಕಟ್ಟಡ ಹಾಗೂ ನಿವೇಶನಗಳ ಮೌಲ್ಯಮಾಪನ ಕಾರ್ಯ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಮತ್ತಷ್ಟು ಅಕ್ರಮ ಸಂಪತ್ತಿನ ವಿವರ ಹೊರಬರುವ ಸಾಧ್ಯತೆಯಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net