ಮಂಗಳನ ಅಂಗಳದಲ್ಲಿ ಕೆಲವೇ ಕ್ಷಣದಲ್ಲಿ ನಾಪತ್ತೆಯಾಗುವ ಮೋಡದ ರಹಸ್ಯವೇನು? ಪತ್ತೆಹಚ್ಚಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲವೇ? Mars

ಇದು ಸಾಮಾನ್ಯ ಮೋಡದಂತೆ ಕಂಡರೂ, ಇದರ ಗಾತ್ರ ಮತ್ತು ರೂಪುಗೊಳ್ಳುವ ರೀತಿ ಅಚ್ಚರಿ ಮೂಡಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಸುಮಾರು 1,800 ಕಿಲೋಮೀಟರ್ ಉದ್ದಕ್ಕೆ ಹರಡುವ ಈ ಮೋಡ, ಮಂಗಳ ಗ್ರಹದ ಆರ್ಸಿಯಾ ಮಾನ್ಸ್ ಎಂಬ ಬೃಹತ್ ಜ್ವಾಲಾಮುಖಿಯ ಸಮೀಪದಲ್ಲಿ ಕಾಣಿಸಿಕೊಳ್ಳುತ್ತದೆ.
Mars
ಸಾಂದರ್ಭಿಕ ಚಿತ್ರ
Published on: 

Mars : ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡಾಗ ನಮಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ನಾವು ಭೂಮಿಯ ಮೇಲೆ ನಿಂತು ಸಾಮಾನ್ಯವಾಗಿ ದಿನಾಲೂ ಮೋಡವನ್ನು ನೋಡುತ್ತೇವೆ. ಆದರೆ, ಮತ್ತೊಂದು ಗ್ರಹದಲ್ಲಿ ಸಾವಿರಾರು ಕಿಲೋಮೀಟರ್ ಉದ್ದಕ್ಕೆ ಹರಡುವ ಮೋಡವೊಂದು ಪ್ರತಿದಿನ ಬೆಳಗಿನ ಜಾವ ಕಾಣಿಸಿಕೊಂಡು, ಕೆಲವೇ ಗಂಟೆಗಳಲ್ಲಿ ಕಣ್ಮರೆಯಾಗುತ್ತದೆ ಎಂದರೆ ನಂಬಲು ಸಾಧ್ಯವೇ? ಮಂಗಳ ಗ್ರಹದಲ್ಲಿ ಇಂತಹದ್ದೊಂದು ವಿಸ್ಮಯಕಾರಿ ವಿದ್ಯಮಾನ ನಡೆಯುತ್ತದೆ. ಅದರ ಚಿತ್ರಗಳನ್ನು ಬಾಹ್ಯಾಕಾಶ ನೌಕೆಗಳು ಸೆರೆಹಿಡಿದಿದ್ದು, ಈ ಮೋಡದ ವಿಶೇಷತೆ ವಿಜ್ಞಾನಿಗಳ ಗಮನ ಸೆಳೆದಿದೆ.

ಇದು ಸಾಮಾನ್ಯ ಮೋಡದಂತೆ ಕಂಡರೂ, ಇದರ ಗಾತ್ರ ಮತ್ತು ರೂಪುಗೊಳ್ಳುವ ರೀತಿ ಅಚ್ಚರಿ ಮೂಡಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಸುಮಾರು 1,800 ಕಿಲೋಮೀಟರ್ ಉದ್ದಕ್ಕೆ ಹರಡುವ ಈ ಮೋಡ, ಮಂಗಳ ಗ್ರಹದ ಆರ್ಸಿಯಾ ಮಾನ್ಸ್ ಎಂಬ ಬೃಹತ್ ಜ್ವಾಲಾಮುಖಿಯ ಸಮೀಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮೋಡವು ಜ್ವಾಲಾಮುಖಿಯಿಂದ ಹೊರಬರುವ ಹೊಗೆಯಲ್ಲ. ಹಾಗಾದರೆ, ಜ್ವಾಲಾಮುಖಿಯ ಬಳಿ ಇಷ್ಟು ದೊಡ್ಡ ಮೋಡ ಸೃಷ್ಟಿಯಾಗುವುದಾದರೂ ಹೇಗೆ?

Also Read
ಭೂಮಿ ಒಳಗೆ ಬ್ರಹ್ಮಾಂಡದ ಒಲೆ ಉರಿಯುತ್ತಿದ್ದರೂ ಮೇಲ್ಮೈ ಮಾತ್ರ ತಣ್ಣಗಿರುವುದೇಕೆ? ಇಲ್ಲಿದೆ ಭೂಗರ್ಭದ ಅತಿ ದೊಡ್ಡ ವಿಸ್ಮಯ! Earth
Mars

ಜ್ವಾಲಾಮುಖಿಯೇ ಈ ಮೋಡದ ರಹಸ್ಯದ ಸುಳಿವು

ಮಂಗಳ ಗ್ರಹದ ಆರ್ಸಿಯಾ ಮಾನ್ಸ್ ಸಾಮಾನ್ಯ ಪರ್ವತವಲ್ಲ. ಇದು ಬೃಹತ್ ಗುರಾಣಿ ಆಕಾರದ ಜ್ವಾಲಾಮುಖಿ. ಇದರ ಸುತ್ತಲಿನ ವಾತಾವರಣದಲ್ಲಿ ಗಾಳಿ ಚಲಿಸುವ ರೀತಿ, ಈ ವಿಚಿತ್ರ ಮೋಡದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಾಳಿ ಜ್ವಾಲಾಮುಖಿಯ ಇಳಿಜಾರಿನ ಮೇಲೆ ಹರಿಯುವಾಗ ಮೇಲಕ್ಕೆ ಏರುತ್ತದೆ. ಎತ್ತರಕ್ಕೆ ಹೋದಂತೆ ಗಾಳಿಯ ಉಷ್ಣತೆ ಕಡಿಮೆಯಾಗುತ್ತದೆ. ಆಗ ವಾತಾವರಣದಲ್ಲಿರುವ ನೀರಾವಿ ಸಣ್ಣ ಹಿಮದ ಕಣಗಳಾಗಿ ರೂಪುಗೊಳ್ಳುತ್ತದೆ. ಈ ಕಣಗಳು ಒಟ್ಟುಗೂಡಿ ಬಿಳಿ ಮೋಡದಂತೆ ಕಾಣಿಸುತ್ತವೆ. ಆದರೆ, ಈ ಮೋಡದ ವಿಶೇಷತೆ ಇಲ್ಲಿಗೇ ಮುಗಿಯುವುದಿಲ್ಲ. ಇದು ಬೆಳಗಿನ ಜಾವ ರೂಪುಗೊಂಡು, ಜ್ವಾಲಾಮುಖಿಯ ಪಶ್ಚಿಮ ಭಾಗದತ್ತ ಉದ್ದವಾಗಿ ಹರಡುತ್ತದೆ. ನಂತರ ಕೆಲವೇ ಗಂಟೆಗಳಲ್ಲಿ ಕಣ್ಮರೆಯಾಗುತ್ತದೆ. ಅಂದರೆ, ಆಕಾಶದಲ್ಲಿ ಬೃಹತ್ ಬಿಳಿ ಪಟ್ಟಿಯೊಂದು ಮೂಡಿದಂತೆ ಕಾಣಿಸಿ, ಸ್ವಲ್ಪ ಸಮಯದ ಬಳಿಕ ಸಂಪೂರ್ಣವಾಗಿ ಮಾಯವಾಗುತ್ತದೆ.

ಇಷ್ಟು ದೊಡ್ಡ ಮೋಡ ಕೆಲವೇ ಗಂಟೆಗಳಲ್ಲಿ ಮಾಯವಾಗುವುದೇಕೆ?

ಇದೇ ಈ ವಿದ್ಯಮಾನದ ಅತ್ಯಂತ ಕುತೂಹಲಕಾರಿಯಾಗಿದ್ದು, ಮೋಡವು ರೂಪುಗೊಳ್ಳಲು ಅನುಕೂಲವಾಗುವ ತಂಪಾದ ಪರಿಸ್ಥಿತಿಗಳು ಬದಲಾದಾಗ, ಅದರಲ್ಲಿರುವ ಹಿಮದ ಕಣಗಳು ನೇರವಾಗಿ ನೀರಾವಿಯಾಗಿ ಬದಲಾಗಬಹುದು. ಜೊತೆಗೆ, ಗಾಳಿಯ ಚಲನೆಯಿಂದ ಮೋಡವು ತನ್ನ ಮೂಲ ಸ್ಥಳದಿಂದ ದೂರ ಸರಿಯುತ್ತದೆ. ಹೀಗಾಗಿ ಅದು ಅಲ್ಪಾವಧಿಯಲ್ಲೇ ಕಣ್ಮರೆಯಾದಂತೆ ಕಾಣುತ್ತದೆ. ಈ ಮೋಡವನ್ನು ಮಾರ್ಸ್ ಎಕ್ಸ್‌ಪ್ರೆಸ್ ಎಂಬ ಬಾಹ್ಯಾಕಾಶ ನೌಕೆ ಹಲವು ಬಾರಿ ಗಮನಿಸಿದೆ. ವಿಜ್ಞಾನಿಗಳು ಇದನ್ನು ಆರ್ಸಿಯಾ ಮಾನ್ಸ್ ಎಲಾಂಗೇಟೆಡ್ ಕ್ಲೌಡ್ ಎಂದು ಕರೆಯುತ್ತಾರೆ. ಇದು ಮಂಗಳ ಗ್ರಹದ ವಾತಾವರಣದಲ್ಲಿ ನಡೆಯುವ ಋತುಮಾನಕ್ಕೆ ಸಂಬಂಧಿಸಿದ ವಿದ್ಯಮಾನವಾಗಿದ್ದು, ಅನುಕೂಲಕರ ಪರಿಸ್ಥಿತಿಗಳಲ್ಲಿ ಹಲವು ತಿಂಗಳುಗಳ ಕಾಲ ಮರುಕಳಿಸಬಹುದು.

ಈ ಮೋಡದಿಂದ ವಿಜ್ಞಾನಿಗಳಿಗೆ ಏನು ತಿಳಿಯುತ್ತದೆ?

ಬೇರೆ ಗ್ರಹಗಳಲ್ಲಿ ಮೋಡಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭದ ಕೆಲಸವಲ್ಲ. ಭೂಮಿಯ ವಾತಾವರಣದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಇದ್ದರೂ, ಮಂಗಳ ಗ್ರಹದ ಗಾಳಿ, ತಾಪಮಾನ ಮತ್ತು ನೀರಾವಿಯ ವರ್ತನೆ ವಿಭಿನ್ನವಾಗಿದೆ. ಈ ಮೋಡವನ್ನು ಅಧ್ಯಯನ ಮಾಡುವ ಮೂಲಕ ಮಂಗಳ ಗ್ರಹದ ವಾತಾವರಣದಲ್ಲಿ ಗಾಳಿ ಹೇಗೆ ಚಲಿಸುತ್ತದೆ? ನೀರಾವಿ ಹೇಗೆ ಹಿಮದ ಕಣಗಳಾಗಿ ಬದಲಾಗುತ್ತದೆ ಮತ್ತು ಪರ್ವತಗಳ ರಚನೆ ವಾತಾವರಣದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ಅರ್ಥಮಾಡಿಕೊಳ್ಳಲು ಇನ್ನೂ ಪ್ರಯತ್ನವನ್ನು ನಡೆಸುತ್ತಿದ್ದಾರೆ.

Also Read
ಒಂದೊಂದೇ ಗಡಿ ದಾಟುತ್ತಿದೆ ನಮ್ಮ ಭೂಮಿ! 9ರಲ್ಲಿ 7 ಮಿತಿ ಮೀರಿದ್ದೇಕೆ? ವಿಜ್ಞಾನಿಗಳ ಹೊಸ ಎಚ್ಚರಿಕೆ ಏನು..? Earth
Mars

ಇಲ್ಲಿ ಇನ್ನೊಂದು ಕುತೂಹಲಕಾರಿ ಅಂಶವೂ ಇದೆ. ಭೂಮಿಯ ಮೇಲೆ ಮೋಡಗಳು ಮಳೆ ಸುರಿಸುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಮಂಗಳ ಗ್ರಹದ ಈ ಮೋಡವು ನೀರ್ಗಲ್ಲಿನ ಕಣಗಳಿಂದ ಕೂಡಿದ್ದು, ಅದರ ರಚನೆ ಮತ್ತು ಅಲ್ಪಾವಧಿಯ ಜೀವನವೇ ಅಧ್ಯಯನಕ್ಕೆ ವಿಶೇಷವಾಗಿದೆ.

ಕೆಂಪು ಗ್ರಹದ ಆಕಾಶದಲ್ಲಿ ಪ್ರತಿದಿನ ಕಾಣಿಸಿಕೊಂಡು ಮಾಯವಾಗುವ ಈ ಬೃಹತ್ ಮೋಡ ನಮಗೆ ಒಂದು ಸಂಗತಿಯನ್ನು ನೆನಪಿಸುತ್ತದೆ. ಬಾಹ್ಯಾಕಾಶದಲ್ಲಿ ಅಚ್ಚರಿಯ ಸಂಗತಿಗಳು ದೂರದ ನಕ್ಷತ್ರಗಳಲ್ಲಷ್ಟೇ ಇಲ್ಲ; ಒಂದು ಗ್ರಹದ ಆಕಾಶದಲ್ಲಿಯೇ ಇನ್ನೂ ಅನೇಕ ರಹಸ್ಯಗಳು ಅಡಗಿವೆ. ವಿಜ್ಞಾನಿಗಳು ಅವುಗಳನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net