

Earth : ಭೂಮಿಯೂ ಸಕಲಜೀವರಾಶಿಗೂ ಆಶ್ರಯ ನೀಡಿದೆ. ತನ್ನ ಒಡಲಲ್ಲಿ ಎಲ್ಲರಿಗೂ ಹಾಗೂ ಎಲ್ಲದಕ್ಕೂ ಜಾಗ ನೀಡಿರುವ ಈ ಭೂಮಿ ಇನ್ನೆಷ್ಟು ಒತ್ತಡವನ್ನು ತಡೆದುಕೊಳ್ಳಬಲ್ಲದು? ಮನುಷ್ಯನ ಚಟುವಟಿಕೆಗಳು ಹೆಚ್ಚಾದಂತೆ ಪ್ರಕೃತಿಯ ಸಹನೆಯ ಮಿತಿಯೂ ಮುಗಿಯುತ್ತಾ ಬರುತ್ತಿದೆಯೇ? ಎಂಬ ಪ್ರಶ್ನೆಗಳು ಮೂಡುವುದು ಸಹಜವಾಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ನಾವಿಂದು ಮಾಡೋಣ.
ಭೂಮಿಯ ಮೇಲಿರುವ ಕಾಡು, ನೀರು, ಸಾಗರ, ವಾತಾವರಣ ಮತ್ತು ಜೀವವೈವಿಧ್ಯ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ವ್ಯವಸ್ಥೆಯ ಮೇಲೆ ಅತಿಯಾದ ಒತ್ತಡ ಬಿದ್ದರೂ ಅದರ ಪರಿಣಾಮ ಮತ್ತೊಂದರ ಮೇಲೂ ಬೀಳಬಹುದು. ಇದೇ ಕಾರಣಕ್ಕೆ ವಿಜ್ಞಾನಿಗಳು ಭೂಮಿಯ ಪರಿಸರ ವ್ಯವಸ್ಥೆಗಳಿಗೆ ಕೆಲವು ಸುರಕ್ಷಿತ ಗಡಿಗಳನ್ನು ಗುರುತಿಸಿದ್ದಾರೆ. ಆದರೆ, ಹೊಸ ಮೌಲ್ಯಮಾಪನದ ಪ್ರಕಾರ, ಭೂಮಿಯ 9 ಪ್ರಮುಖ ಪರಿಸರ ಗಡಿಗಳಲ್ಲಿ 7 ಈಗಾಗಲೇ ಸುರಕ್ಷಿತ ಮಿತಿಯನ್ನು ದಾಟಿವೆ.
ಈ ಗಡಿಗಳನ್ನು ಪ್ಲಾನೆಟರಿ ಬೌಂಡರೀಸ್ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಭೂಮಿಯ ನೈಸರ್ಗಿಕ ವ್ಯವಸ್ಥೆಗಳು ಮಾನವ ಚಟುವಟಿಕೆಗಳಿಂದ ಉಂಟಾಗುವ ಬದಲಾವಣೆಗಳನ್ನು ಎಷ್ಟು ಮಟ್ಟಿಗೆ ತಡೆದುಕೊಳ್ಳಬಲ್ಲವು ಎಂಬುದನ್ನು ಅರ್ಥಮಾಡಿಕೊಳ್ಳಲು ಇವುಗಳನ್ನು ಬಳಸಲಾಗುತ್ತದೆ. 2026ರ ಪ್ಲಾನೆಟರಿ ಹೆಲ್ತ್ ಚೆಕ್ ಪ್ರಕಾರ, ಮಿತಿಮೀರಿರುವ ಏಳು ಗಡಿಗಳೆಂದರೆ ಹವಾಮಾನ ಬದಲಾವಣೆ, ಜೀವವೈವಿಧ್ಯದ ಹಾನಿ, ಭೂ ಬಳಕೆಯ ಬದಲಾವಣೆ, ಸಿಹಿನೀರಿನ ಬದಲಾವಣೆ, ನೈಸರ್ಗಿಕ ಪೋಷಕಾಂಶಗಳ ಚಕ್ರದಲ್ಲಿನ ಅಸಮತೋಲನ, ಕೃತಕ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್‌ನಂತಹ ಹೊಸ ಮಾಲಿನ್ಯಕಾರಕಗಳು ಹಾಗೂ ಸಾಗರಗಳ ಆಮ್ಲೀಯತೆ. ಅಂದಹಾಗೆ, ಈ ಮೌಲ್ಯಮಾಪನದಲ್ಲಿ 60ಕ್ಕೂ ಹೆಚ್ಚು ವಿಜ್ಞಾನಿಗಳು ಭಾಗವಹಿಸಿದ್ದಾರೆ.
ಈ ವರದಿಯ ಪ್ರಮುಖ ಅಂಶಗಳಲ್ಲಿ ಸಾಗರಗಳ ಆಮ್ಲೀಯತೆಯೂ ಒಂದು. ವಾತಾವರಣದಲ್ಲಿನ ಹೆಚ್ಚುವರಿ ಇಂಗಾಲದ ಡೈಆಕ್ಸೈಡ್‌ನ ಒಂದು ಭಾಗವನ್ನು ಸಾಗರಗಳು ಹೀರಿಕೊಳ್ಳುವುದರಿಂದ ಸಮುದ್ರದ ರಾಸಾಯನಿಕ ಸಮತೋಲನ ಬದಲಾಗುತ್ತದೆ. ಹಿಂದಿನ ಮೌಲ್ಯಮಾಪನದಲ್ಲಿ ಸುರಕ್ಷಿತ ಮಿತಿಯೊಳಗಿದ್ದ ಸಾಗರಗಳ ಆಮ್ಲೀಯತೆ ಇದೀಗ ಮೊದಲ ಬಾರಿಗೆ ಆ ಗಡಿಯನ್ನೂ ದಾಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಒಂಬತ್ತು ಗಡಿಗಳಲ್ಲಿ ಓಜೋನ್ ಪದರದ ಹಾನಿ ಇನ್ನೂ ಸುರಕ್ಷಿತ ಮಿತಿಯೊಳಗಿದೆ ಮತ್ತು ಅದರ ಪರಿಸ್ಥಿತಿ ಸುಧಾರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮತ್ತೊಂದು ವಾತಾವರಣದಲ್ಲಿನ ಏರೋಸಾಲ್‌ಗಳ ಪ್ರಮಾಣ. ಆದರೆ ಕೆಲವು ಪ್ರದೇಶಗಳಲ್ಲಿ ಏರೋಸಾಲ್ ಮಾಲಿನ್ಯ ಇನ್ನೂ ಗಂಭೀರವಾಗಿದೆ. ಏಳು ಗಡಿಗಳನ್ನು ದಾಟಿದರೆ ತಕ್ಷಣವೇ ಅಪಾಯವೇ? ಅಲ್ಲ. ಏಳು ಗಡಿಗಳು ಮೀರಿವೆ ಎಂದರೆ ತಕ್ಷಣವೇ ದೊಡ್ಡ ವಿಪತ್ತು ಸಂಭವಿಸುತ್ತದೆ ಎಂದಲ್ಲ. ಆದರೆ, ಮಿತಿಯನ್ನು ದಾಟಿದಂತೆ ಪರಿಸರ ವ್ಯವಸ್ಥೆಗಳ ಮೇಲಿನ ಒತ್ತಡ ಹೆಚ್ಚುತ್ತದೆ. ಹಲವು ಗಡಿಗಳು ಒಂದೇ ಸಮಯದಲ್ಲಿ ಮೀರಿದಾಗ ಅವುಗಳ ಪರಿಣಾಮಗಳು ಪರಸ್ಪರ ಸೇರಿಕೊಂಡು ನೈಸರ್ಗಿಕ ವ್ಯವಸ್ಥೆಗಳಿಗೆ ಇನ್ನಷ್ಟು ಅಪಾಯ ಉಂಟುಮಾಡಬಹುದು.
ಅಮೆಜಾನ್ ಮಳೆಕಾಡು ಅಪಾರ ಪ್ರಮಾಣದ ಇಂಗಾಲವನ್ನು ಸಂಗ್ರಹಿಸುವುದರ ಜತೆಗೆ ಜಾಗತಿಕ ಹವಾಮಾನ ವ್ಯವಸ್ಥೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅರಣ್ಯ ನಾಶ, ಹೆಚ್ಚುತ್ತಿರುವ ಉಷ್ಣತೆ ಮತ್ತು ಮಳೆಯಲ್ಲಿನ ಬದಲಾವಣೆಗಳಿಂದ ಅದರ ಮೇಲಿನ ಒತ್ತಡ ಹೆಚ್ಚುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಕಾಡಿನ ಕೆಲವು ಭಾಗಗಳು ನಶಿಸುವತ್ತ ಸಾಗಬಹುದು ಎಂಬ ಆತಂಕ ವಿಜ್ಞಾನಿಗಳಲ್ಲಿದೆ. ವಿಜ್ಞಾನಿಗಳ ಸಂದೇಶ ಕೇವಲ ಆತಂಕದದ್ದಲ್ಲ. ಭೂಮಿಯನ್ನು ಮತ್ತೆ ಸುರಕ್ಷಿತ ಸ್ಥಿತಿಯತ್ತ ಕೊಂಡೊಯ್ಯುವ ಅವಕಾಶ ಇನ್ನೂ ಇದೆ ಎಂದು ವರದಿ ಸೂಚಿಸುತ್ತದೆ.
ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿಮೆ ಮಾಡುವುದು, ಕಾಡು ಮತ್ತು ನೀರಿನ ಮೂಲಗಳನ್ನು ರಕ್ಷಿಸುವುದು ಹಾಗೂ ಮಾಲಿನ್ಯ ನಿಯಂತ್ರಿಸುವುದು ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಒಂಬತ್ತು ಗಡಿಗಳಲ್ಲಿ ಏಳು ಮೀರಿರುವುದು ಒಂದೇ ಸಮಸ್ಯೆಯ ಕಥೆಯಲ್ಲ. ಭೂಮಿಯ ಹಲವು ನೈಸರ್ಗಿಕ ವ್ಯವಸ್ಥೆಗಳ ಮೇಲೆ ಒಂದೇ ಸಮಯದಲ್ಲಿ ಒತ್ತಡ ಹೆಚ್ಚುತ್ತಿದೆ ಎಂಬ ಎಚ್ಚರಿಕೆ. ಭೂಮಿಗೆ ಮಾತನಾಡಲು ಧ್ವನಿ ಇಲ್ಲ. ಆದರೆ, ಅದರ ಬದಲಾಗುತ್ತಿರುವ ಪರಿಸರ ನಮಗೆ ಹಲವು ಸೂಚನೆಗಳನ್ನು ನೀಡುತ್ತಿದೆ. ಈಗ ಪ್ರಶ್ನೆ ಭೂಮಿ ಉಳಿಯುತ್ತದೆಯೇ ಎಂಬುದಲ್ಲ. ಭೂಮಿಯ ಸುರಕ್ಷಿತ ಮಿತಿಗಳೊಳಗೆ ಮತ್ತೆ ಬದುಕಲು ಮನುಷ್ಯ ಎಷ್ಟು ಬೇಗ ಬದಲಾಗುತ್ತಾನೆ ಎಂಬುದಾಗಿದೆ, (ಏಜೆನ್ಸೀಸ್).