

Snakes : ಹಾವಿನ ಹೆಸರು ಕೇಳಿದರೇ ಸಾಕು ಎಷ್ಟೋ ಜನರು ಮೈಲಿಗಳಷ್ಟು ದೂರ ಓಡುತ್ತಾರೆ. ಆದರೆ, ನಮಗೆ ಹಾವುಗಳೆಂದರೆ ಎಷ್ಟು ಭಯವೋ, ಹಾಗೆಯೇ ಹಾವುಗಳಿಗೂ ಮನುಷ್ಯರು ಹಾಗೂ ಇತರೆ ಪ್ರಾಣಿಗಳನ್ನು ಕಂಡರೆ ಜೀವ ಭಯವಿರುತ್ತದೆ. ಹೀಗಿರುವಾಗ, ಒಂದೇ ಸ್ಥಳದಲ್ಲಿ ಬೇರೆ ಬೇರೆ ಜಾತಿಯ ಎರಡು ಹಾವುಗಳು ಮುಖಾಮುಖಿಯಾದರೆ ಏನಾಗುತ್ತದೆ? ಅವು ನೋಡುತ್ತಿದ್ದ ಹಾಗೆಯೇ ಪರಸ್ಪರ ಕಚ್ಚಾಡಿಕೊಳ್ಳುತ್ತವೆಯೇ? ಅಥವಾ ತಮ್ಮ ತಮ್ಮ ದಾರಿಯನ್ನು ನೋಡಿಕೊಂಡು ತಮ್ಮ ಪಾಡಿಗೆ ಹೊರಟುಹೋಗುತ್ತವೆಯೇ? ಈ ಕುತೂಹಲಕಾರಿ ಪ್ರಶ್ನೆಗಳಿಗೆ ಅಚ್ಚರಿಯ ಉತ್ತರ ಇಲ್ಲಿದೆ.
ಅಪರೂಪಕ್ಕೆ ಎರಡು ವಿಭಿನ್ನ ಹಾವುಗಳು ಎದುರಾದಾಗ, ಹೆಚ್ಚಿನ ಹಾವುಗಳು ಯಾವುದೇ ಕಾರಣವಿಲ್ಲದೆ ಅನಾವಶ್ಯಕವಾಗಿ ಪರಸ್ಪರ ಕಾದಾಡುವುದಿಲ್ಲ. ತಮ್ಮ ಎದುರಿಗಿರುವ ಮತ್ತೊಂದು ಹಾವನ್ನು ಅಪಾಯವೆಂದು ಭಾವಿಸಿದರೆ, ಜಗಳವಾಡುವ ಬದಲು ಅಲ್ಲಿಂದ ತಪ್ಪಿಸಿಕೊಳ್ಳಲು ಅಥವಾ ಕಾಲ್ಕಿಳಲು ಹೆಚ್ಚು ಪ್ರಾಮುಖ್ಯತೆ ನೀಡುತ್ತವೆ. ಏಕೆಂದರೆ, ಪ್ರಕೃತಿಯಲ್ಲಿ ಹೋರಾಟದ ಸಂದರ್ಭದಲ್ಲಿ ಗಾಯಗೊಳ್ಳುವುದು ಅವುಗಳ ಬದುಕುಳಿಯುವಿಕೆಗೆ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ಹೀಗಾಗಿ, ಸಾಧ್ಯವಾದಷ್ಟು ಸಂಘರ್ಷವನ್ನು ತಪ್ಪಿಸಿ ದೂರ ಸರಿಯಲು ಬಯಸುತ್ತವೆ.
ಹಾಗಂದ ಮಾತ್ರಕ್ಕೆ ಎಲ್ಲಾ ಸಂದರ್ಭಗಳಲ್ಲೂ ಹಾವುಗಳು ಸುಮ್ಮನಿರುತ್ತವೆ ಎಂದೇನಿಲ್ಲ, ಕೆಲವು ಜಾತಿಯ ಹಾವುಗಳು ಇತರ ಹಾವುಗಳನ್ನೇ ಆಹಾರವಾಗಿ ಸೇವಿಸುತ್ತವೆ. ಈ ವಿಶೇಷ ವರ್ತನೆಗೆ 'ಒಫಿಯೊಫಗಿ' (Ophiophagy) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಕಾಳಿಂಗ ಸರ್ಪಗಳ ಪ್ರಮುಖ ಆಹಾರಗಳಲ್ಲಿ ಇತರ ಹಾವುಗಳು ದೊಡ್ಡ ಪಾತ್ರವಹಿಸುತ್ತವೆ. ಹಾಗೆಯೇ ಕೆಲವು ವಿಧದ ಕಿಂಗ್‌ಸ್ನೇಕ್‌ಗಳು ಕೂಡ ಇತರೆ ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಇಂತಹ ಪರಭಕ್ಷಕ ಜಾತಿಯ ಹಾವುಗಳು ತಮ್ಮ ಎದುರು ಸಣ್ಣ ಹಾವನ್ನು ಕಂಡರೆ, ಅದನ್ನು ಖಂಡಿತವಾಗಿಯೂ ಆಹಾರದ ರೂಪದಲ್ಲೇ ನೋಡುತ್ತವೆ.
ಇನ್ನು ಎರಡು ಪ್ರಬಲ ಅಥವಾ ವಿಷಪೂರಿತ ಹಾವುಗಳು ಎದುರಾದ ಮಾತ್ರಕ್ಕೆ ತಕ್ಷಣವೇ ಕಾದಾಟಕ್ಕೆ ಇಳಿಯುತ್ತವೆ ಎಂದೇನೂ ಇಲ್ಲ, ಅವು ಕೂಡ ಶಾಂತವಾಗಿ ಪರಸ್ಪರ ದಾರಿಬಿಟ್ಟು ದೂರ ಸರಿಯಬಹುದು. ಆದರೆ ಆಹಾರಕ್ಕಾಗಿ, ಸಂಗಾತಿಯ ಹುಡುಕಾಟದಲ್ಲಿ ಅಥವಾ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ಅವುಗಳ ನಡುವೆ ಘರ್ಷಣೆಗಳು ಏರ್ಪಡುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಕೆಲವು ಜಾತಿಯ ಹಾವುಗಳಲ್ಲಿ, ಸಂತಾನೋತ್ಪತ್ತಿಯ ಕಾಲದಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆಯಲು ಗಂಡು ಹಾವುಗಳು ಪರಸ್ಪರ ಕಾದಾಡುವುದನ್ನು ಸಹ ಕಾಣಬಹುದಾಗಿದೆ.
ಅಂತಿಮವಾಗಿ, ಬೇರೆ ಬೇರೆ ಜಾತಿಯ ಹಾವುಗಳು ಒಂದೇ ಪ್ರದೇಶದಲ್ಲಿ ವಾಸಿಸುವುದು ಅತ್ಯಂತ ಸಹಜವಾದ ಸಂಗತಿಯಾಗಿದೆ. ಆ ಪ್ರದೇಶದಲ್ಲಿ ನೀರು, ಆಹಾರ ಹಾಗೂ ಸೂಕ್ತವಾದ ಆಶ್ರಯ ತಾಣಗಳು ಲಭ್ಯವಿದ್ದಾಗ ಅವುಗಳ ಆವಾಸಸ್ಥಾನಗಳು ಒಂದಕ್ಕೊಂದು ಅತಿ ಹತ್ತಿರದಲ್ಲಿರಬಹುದು. ಆದ್ದರಿಂದ ಎರಡು ಹಾವುಗಳು ಮುಖಾಮುಖಿಯಾದ ಕೂಡಲೇ ಕಡ್ಡಾಯವಾಗಿ ಜಗಳವಾಡುತ್ತವೆ ಎಂದು ಹೇಳಲಾಗುವುದಿಲ್ಲ, ಬದಲಾಗಿ ಹಾವಿನ ಪ್ರಭೇದ, ಹಸಿವು, ಗಾತ್ರ ಮತ್ತು ಎದುರಾದ ಆಪತ್ತಿನ ತೀವ್ರತೆಯಂತಹ ಹತ್ತು ಹಲವು ಅಂಶಗಳು ಮುಂದೇನಾಗುತ್ತದೆ ಎಂಬುದನ್ನು ನಿರ್ಧರಿಸುತ್ತವೆ, (ಏಜೆನ್ಸೀಸ್).