ನಿಮ್ಮ ಮಗುವನ್ನು ಬೆಳೆಸಲು ಬೇಕು 6.75 ಕೋಟಿ: ನಗರದ ಪೋಷಕರಿಗೆ ಶಾಕ್ ಕೊಟ್ಟ ಹಣಕಾಸು ತಜ್ಞನ ಸ್ಫೋಟಕ ಲೆಕ್ಕಾಚಾರ! Child Raising Cost
ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಮತ್ತು ಹಣಕಾಸು ತಜ್ಞ ಉದಯನ್ ಅಧ್ಯೆ
Published on:
Copied
Follow Us
ನವದೆಹಲಿ: ಭಾರತದಂತಹ ದೇಶದಲ್ಲಿ ಮಗುವನ್ನು ಬೆಳೆಸುವುದು ಎಂಬುದು ಕೇವಲ ಭಾವನಾತ್ಮಕ ವಿಷಯವಲ್ಲ, ಅದೊಂದು ಗಂಭೀರವಾದ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ.
ಹೌದು, ಹಣಕಾಸು ಸಲಹೆಗಾರರೊಬ್ಬರು ಇತ್ತೀಚೆಗೆ ಹಂಚಿಕೊಂಡಿರುವ ಒಂದು ವಿಡಿಯೋ ಈಗ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಭಾರತದ ಮೆಟ್ರೋ ನಗರದಲ್ಲಿ ಒಂದು ಮಗುವನ್ನು ಹುಟ್ಟಿನಿಂದ 21 ವರ್ಷದವರೆಗೆ ಬೆಳೆಸಲು (Child Raising Cost) ಬರೋಬ್ಬರಿ 6.75 ಕೋಟಿ ರೂಪಾಯಿ ಬೇಕಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ.
ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಮತ್ತು ಹಣಕಾಸು ತಜ್ಞ ಉದಯನ್ ಅಧ್ಯೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಭಾರತದ ಮೆಟ್ರೋ ನಗರದಲ್ಲಿ ಮಗು ಬೆಳೆಸಲು ನಿಮಗೆ 6.75 ಕೋಟಿ ಬೇಕು, ನಂಬಲು ಸಾಧ್ಯವಾಗದಿದ್ದರೆ ಈ ಗಣಿತ ನೋಡಿ ಎಂದು ಅವರು ಸವಾಲು ಹಾಕಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
6.75 ಕೋಟಿ ರೂ. ಹೇಗೆ ಖರ್ಚಾಗುತ್ತೆ?
ಬಹಳಷ್ಟು ಪೋಷಕರು ಕೇವಲ ಶಾಲಾ ಫೀಸ್ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಉದಯನ್ ಅವರ ಲೆಕ್ಕಾಚಾರ ಬೇರೆಯೇ ಇದೆ.
ಶಿಕ್ಷಣದ ಹಣದುಬ್ಬರ: ಶಾಲಾ ಶುಲ್ಕಗಳು ಪ್ರತಿ ವರ್ಷ ಶೇ. 10-12 ರಷ್ಟು ಹೆಚ್ಚುತ್ತಿವೆ. ಅಂದರೆ ಪ್ರತಿ 6 ವರ್ಷಕ್ಕೊಮ್ಮೆ ನಿಮ್ಮ ಮಗುವಿನ ಸ್ಕೂಲ್ ಫೀಸ್ ಡಬಲ್ ಆಗುತ್ತದೆ.
ಕಾಲೇಜು ಶಿಕ್ಷಣ: ಇಂದು 20 ಲಕ್ಷ ರೂಪಾಯಿ ಇರುವ ಪದವಿ ಶಿಕ್ಷಣ, ನಿಮ್ಮ ನವಜಾತ ಶಿಶು 18 ವರ್ಷಕ್ಕೆ ಬರುವಷ್ಟರಲ್ಲಿ ಕನಿಷ್ಠ 1.6 ರಿಂದ 2 ಕೋಟಿ ರೂಪಾಯಿ ತಲುಪುತ್ತದೆ.
ಜೀವನಶೈಲಿ ವೆಚ್ಚ: ಕೇವಲ ಓದುವಿಕೆ ಮಾತ್ರವಲ್ಲದೆ, ಕ್ರೀಡೆ, ಸಂಗೀತ ತರಗತಿಗಳು, ಗ್ಯಾಜೆಟ್‌ಗಳು (ಮೊಬೈಲ್, ಲ್ಯಾಪ್‌ಟಾಪ್), ಫ್ಯಾಮಿಲಿ ಹಾಲಿಡೇಸ್, ಆರೋಗ್ಯ ರಕ್ಷಣೆ ಮತ್ತು ಬಾಲ್ಯದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ನೇಮಿಸುವ ದಾದಿಯರ ಸಂಬಳವೂ ಈ ಪಟ್ಟಿಯಲ್ಲಿದೆ.
ಬಹಳಷ್ಟು ಪೋಷಕರು ಹಳೆಯ ಕಾಲದ ಇನ್ಶೂರೆನ್ಸ್ ಪಾಲಿಸಿಗಳು ಅಥವಾ ಸಣ್ಣಪುಟ್ಟ ಮಕ್ಕಳ ಉಳಿತಾಯ ಯೋಜನೆಗಳಲ್ಲಿ ಹಣ ಹೂಡುತ್ತಾರೆ. ಆದರೆ ಉದಯನ್ ಅವರ ಪ್ರಕಾರ, ಇಂತಹ ಸಾಂಪ್ರದಾಯಿಕ ಯೋಜನೆಗಳು ಶಿಕ್ಷಣದ ಈ ಭೀಕರ ಹಣದುಬ್ಬರವನ್ನು ಎದುರಿಸಲು ಸಾಧ್ಯವೇ ಇಲ್ಲ. ಮೂಲಭೂತ ಮಕ್ಕಳ ಯೋಜನೆಯು ನಿಮ್ಮ ಗುರಿ ತಲುಪಲು ಎಂದಿಗೂ ಸಹಾಯ ಮಾಡದು ಎಂದು ಅವರು ಎಚ್ಚರಿಸಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಬ್ಬ ಬಳಕೆದಾರರು, ಪ್ರಕೃತಿ ಎಲ್ಲಾ ಜೀವಿಗಳನ್ನು ಸಾಕಿ ಸಲಹುವಂತೆ ಮನುಷ್ಯನನ್ನೂ ಸಾಕುತ್ತದೆ, ಇದೊಂದು ಅನಗತ್ಯ ಭಯವಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ಈಗಾಗಲೇ ಖಾಸಗಿ ಕಾಲೇಜುಗಳ ಫೀಸ್ 40 ಲಕ್ಷ ದಾಟಿದೆ, ಇನ್ನು 20 ವರ್ಷದ ನಂತರ ನಿಮ್ಮ ಲೆಕ್ಕಾಚಾರ ಸರಿಯಿರಬಹುದು ಎಂದು ಒಪ್ಪಿಕೊಂಡಿದ್ದಾರೆ,(ಏಜನ್ಸೀಸ್).