ಕೌಶಲವೃದ್ಧಿಗೆ ಯುವ ಸಮೂಹ ಒತ್ತುಕೊಡಬೇಕು ಎಂದ ಡಾ.ಪ್ರಣಬ್​ ಮೊಹಂತಿ

Srideviclg_Hackathan
Published on

ತುಮಕೂರು: ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಯುವ ಸಮೂಹ ಎಲ್ಲಾ ವಲಯದಲ್ಲಿ ಕೌಶಲವೃದ್ಧಿಸಿಕೊಳ್ಳುವಂತೆ ಬೆಂಗಳೂರಿನ ಸೈಬರ್​ ಅಪರಾಧ ಹಾಗೂ ಮಾದಕ ದ್ರವ್ಯದ ಹೆಚ್ಚುವರಿ ಮಹಾನಿರ್ದೇಶಕ ಡಾ.ಪ್ರಣಬ್​ ಮೊಹಂತಿ ಹೇಳಿದರು.

ನಗರದ ಶ್ರೀದೇವಿ ಇನ್ಟಿಟ್ಯೂಟ್​ ಆಫ್​ ಇಂಜಿನಿಯರಿಂಗ್​ ಅಂಡ್​ ಟೆಕ್ನಾಲಜಿ ಮತ್ತು ಶ್ರೀಟೆಕ್​ ಇನೋವೆಷನ್​ ಸಹಯೋಗದಲ್ಲಿ ಪ್ರತಿಭಾನ್ವೇಷಣೆ ಮತ್ತು ರಾಷ್ಟಮಟ್ಟದ ಹ್ಯಾಕಥಾನ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ವೈದ್ಯಕಿಯ ಕ್ಷೇತ್ರ, ಪರಿಸರ ಮತ್ತು ಕೃಷಿ ವಲಯದಲ್ಲಿ ಸಂಶೋಧನೆಗೆ ವಿುಲ ಅವಕಾಶಗಳಿವೆ. ಅಳವಾದ ಕಲಿಕೆ, ಜ್ಞಾನ ಸಂಪಾದನೆ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದೆ ಎಂದರು.

ಮುಂದಿನ ದಿನಗಳಲ್ಲಿ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ ಕ್ಷೇತ್ರ ಬಲಗೊಂಡು ಜನ ಜೀವನದ ಬದಲಾವಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ. ಸರ್ಕಾರದ ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳ ಬುದ್ಧಿಶಕ್ತಿ ವಿಕಸನಕ್ಕೆ ದಾರಿಮಾಡಿಕೊಟ್ಟಿದೆ. ಹಾಗಾಗಿ, ತಂತ್ರಜ್ಞಾನದ ಲಾಭ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿ ಎಂದರು.

ಮುಂಬರುವ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳು ಹೆಚ್ಚಾಗಲಿರುವುದರಿಂದ ಯುವಕರು ಬೇಡಿಕೆಗೆ ತಕ್ಕಂತೆ ಕೌಶಲ ರೂಢಿಸಿಕೊಳ್ಳಬೇಕು. ಪ್ರತಿವರ್ಷ ದೇಶದಲ್ಲಿ 15 ಲಕ್ಷಕ್ಕು ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಪದವಿ ಮುಗಿಸಿ ಹೊರಬರುತ್ತಿದ್ದರೂ ಇವರ ಪೈಕಿ ಬಹಳಷ್ಟು ಜನರಿಗೆ ಉದ್ಯೋಗ ದೊರೆಯದೇ ಇರುವುದು ಕೌಶಲ್ಯದ ಕೊರತೆಯೇ ಕಾರಣ ಎಂಬುದನ್ನು ಮನಗಾಣಬೇಕು ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಜಗತ್ತು ಭಾರತದ ಕಡೆ ನೋಡುತ್ತಿದೆ. ಮುಂದಿನ 20-25 ವರ್ಷಗಳಲ್ಲಿ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಹೆಚ್ಚು ಭಾಗ ಯುವಕರೇ ಇರುವುದರಿಂದ ಯುವ ಸಂಪನ್ಮೂಲ ದೇಶಕ್ಕೆ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ತಿಳಿಸಿದರು.

ಹ್ಯಾಕಥಾನ್​ನಲ್ಲಿ 181 ತಂಡಗಳು ಭಾಗವಹಿಸುತ್ತಿದ್ದು 79 ವೈದ್ಯಕಿಯ ಕ್ಷೇತ್ರದಲ್ಲಿ 37 ಪರಿಸರ ಕ್ಷೇತ್ರದಲ್ಲಿ ಹಾಗೂ 65 ತಂಡಗಳು ಕೃಷಿ ಕ್ಷೇತ್ರದಲ್ಲಿ ಅವಿಷ್ಕಾರ ಪ್ರದರ್ಶನ ಮಾಡಲಿವೆ. ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ದೊಡ್ಡ ವೇದಿಕೆಯಾಗಿದೆ. ಈ ಹ್ಯಾಕಥಾನ್​ನಲ್ಲಿ ತೆಲಂಗಾಣ, ಆಂಧ್ರ್ರಪ್ರದೇಶ ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ 800ಕ್ಕು ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳ ಪ್ರತಿನಿಧಿಗಳ ಮುಂದೆ ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಟೆಟ್ರಿಸ್​ ಇನೋವೇಷನ್​ ಮತ್ತು ಅಡ್ವಾನ್ಸ್​ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿತೇಶ್​ ಬಜಾಜ್​, ತುಮಕೂರಿನ ಮುಖ್ಯ ತಾಂತ್ರಿಕ ಅಧಿಕಾರಿ ರಾಜೇಂದ್ರ ಸಾರಂಗಿ, ಶ್ರೀದೇವಿ ವೈದ್ಯಕಿಯ ನಿರ್ದೇಶಕ ಡಾ.ರಮಣ್​ ಎಂ ಹುಲಿನಾಯ್ಕರ್​, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​.ಪಾಟೀಲ್​, ಡಾ.ಲಾವಣ್ಯ, ಅಂಬಿಕಾ ಎಂ ಹುಲಿನಾಯ್ಕರ್​, ಡಾ.ನರೇಂದ್ರವಿಶ್ವನಾಥ್​, ಡಾ.ಎಲ್​.ಗಿರೀಶ್​, ಡಾ.ಎನ್​.ಚಂದ್ರಶೇಖರ್​ ಮತ್ತಿತರರು ಉಪಸ್ಥಿತರಿದ್ದರು.

ಯುವ ಸಮೂಹ ನಮ್ಮ ದೇಶದ ದೊಡ್ಡ ಆಸ್ತಿ. ಇಂಜಿನಿಯರಿಂಗ್​ ವೃತ್ತಿಪರರು ಸಮಾಜದ ಸಮಸ್ಯೆಗಳಿಗೆ ಪರಿಹಾರದ ಭಾಗವಾಗಬೇಕು. ದೇಶ ವಿದೇಶಗಳಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಪರಿಣಿತಿ ಹೊಂದಬೇಕು ಜತೆಗೆ ಕೌಶಲ ವೃದ್ಧಿಸಿಕೊಳ್ಳಬೇಕು. ಡಾ.ಎಂ.ಆರ್​.ಹುಲಿನಾಯ್ಕರ್​ ಅಧ್ಯಕ್ಷ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net